ಸುಪ್ರಿಂ ಕೋರ್ಟ್ ವಿರುದ್ಧ ಉಪರಾಷ್ಟ್ರಪತಿಗಳ ವಾಗ್ಬಾಣಗಳು – ʻಹಿಂದುತ್ವ’ ರಾಷ್ಟ್ರದ ಪ್ರಾಜೆಕ್ಟಿನ ಭಾಗ?

ಕಳೆದ ಕೆಲವು ವಾರಗಳಲ್ಲಿ ಕೇಂದ್ರ ಕಾನೂನು ಮಂತ್ರಿಗಳು ದೇಶದ ಸರ್ವೋಚ್ಚ ನ್ಯಾಯಾಲಯದ ಟೀಕೆಯಲ್ಲಿ ತೊಡಗಿದ್ದರು. ಈಗ ನಮ್ಮ ಹೊಸ ಉಪರಾಷ್ಟ್ರಪತಿಗಳು ಆ ಕೆಲಸವನ್ನು ವಹಿಸಿಕೊಂಡಂತಿದೆ. ಅವರು ಪದಗ್ರಹಣ ಮಾಡಿದಂದಿನಿಂದಲೇ ವಾಗ್ಬಾಣಗಳನ್ನು ಬಿಡುತ್ತಿದ್ದಾರೆ. ಸುಪ್ರಿಂ ಕೋರ್ಟ್ ತಾನೇ ಸರ್ವೋಚ್ಚ ಎಂಬಂತೆ ವರ್ತಿಸುತ್ತಿದೆ, ಸಂಸತ್ತಿನ ಸಾರ್ವಭೌಮತೆಗೆ ಸವಾಲು ಹಾಕಿದೆ ಎಂದು ಜನವರಿ 11ರಂದು ಶಾಸನ ಸಭೆಗಳ ಅಧ್ಯಕ್ಷರುಗಳ ಸಮ್ಮೇಳನವನ್ನು ಉದ್ಘಾಟಿಸುತ್ತ ಅವರು ಹೇಳಿರುವುದಾಗಿ ವರದಿಯಾಗಿದೆ.

ವಾಗ್ಬಾಣಗಳನ್ನು ಎಸೆಯುವ ಈ ಪ್ರಕ್ರಿಯೆಯಲ್ಲಿ ಅವರು ಸಂವಿಧಾನಕ್ಕೆ ತಿದ್ದುಪಡಿ ತರಬಹುದು, ಆದರೆ ಸಂವಿಧಾನದ ‘ಮೂಲಸಂರಚನೆ’ಯನ್ನು ಬದಲಿಸುವುದು ಸಾಧ್ಯವಿಲ್ಲ, ಅಂತಹ ಯಾವುದೇ ತಿದ್ದುಪಡಿ ಅಸಿಂಧುವಾಗುತ್ತದೆ ಎಂಬ ಸುಪ್ರಿಂ ಕೋರ್ಟಿನ 1973ರ ಕೇಶವಾನಂದ ಭಾರತಿ ಪ್ರಕರಣದ ತೀರ್ಪನ್ನೇ ತಾವು ಒಪ್ಪಿಕೊಳ್ಳುವದಿಲ್ಲ ಎಂದಿದ್ದಾರೆ.

ಈ ತೀರ್ಪು ದೇಶದ ಎಲ್ಲ ರಾಜಕೀಯ ಪಕ್ಷಗಳು, ಬಿಜೆಪಿಯ ಮತ್ತು ಅದರ ಹಿಂದಿನ ಅವತಾರವಾದ ಜನಸಂಘದ ಹಿರಿಯ ಮುಖಂಡರು ಕೂಡ ಒಪ್ಪಿಕೊಂಡಿರುವ ತೀರ್ಪು, ವಿಶೇಷವಾಗಿ 1975ರ ತುರ್ತುಪರಿಸ್ಥಿತಿಯ ಕರಾಳ ಅನುಭವಗಳ ನಂತರ.

ಸಂಸತ್ತನ್ನು ಸ್ಥಾಪಿಸಿರುವುದು ಭಾರತದ ಸಂವಿಧಾನ. ಪ್ರಭುತ್ವದ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ತಮ್ಮ ಅಧಿಕಾರಗಳನ್ನು ಪಡೆದಿರುವುದು ಈ ಸಂವಿಧಾನದಿಂದಲೇ ಹೊರತು ಪ್ರಭುತ್ವದ ಈ ಅಂಗಗಳಿಂದ ಸಂವಿಧಾನ ಅಧಿಕಾರ ಪಡೆದಿರುವುದು ಅಲ್ಲ. ಸಂವಿಧಾನವೇ ಸರ್ವೋಚ್ಚ, ಉಪರಾಷ್ಟ್ರಪತಿಗಳು ವಾದಿಸುವಂತೆ ಸಂಸತ್ತು ಅಥವ ಸರಕಾರ ಅಲ್ಲ. ತನಗೆ ಭಾರೀ ಬಹುಮತ ಇದೆ ಎಂಬ ಕಾರಣವೊಡ್ಡಿ ಯಾವುದೇ ಸರಕಾರ ನಮ್ಮ ಗಣತಂತ್ರದ ‘ಮೂಲ ಸಂರಚನೆ’ಯನ್ನು ದುರ್ಬಲಗೊಳಿಸಲು ತನ್ನ ಬಹುಮತದ ದಬ್ಬಾಳಿಕೆಯನ್ನು ಚಲಾಯಿಸಲು ಅವಕಾಶವಿರಬಾರದು ಎಂದೇ ಮೂಲಸಂರಚನೆಯ ತತ್ವ ವಿಕಾಸಗೊಂಡಿದೆ ಎಂದು ಈ ಬಗ್ಗೆ ಟಿಪ್ಪಣಿ ಮಾಡುತ್ತ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ನೆನಪಿಸಿದ್ದಾರೆ.

ಆದರೆ ಈಗ ಜಿ-20 ಅಧ್ಯಕ್ಷಗಿರಿಯನ್ನು ಸಂಭ್ರಮಿಸಲು ಭಾರತ “ಪ್ರಜಾಪ್ರಭುತ್ವಗಳ ಮಾತೆ” ಎಂದು ಬಿಂಬಿಸಬೇಕು ಎಂದು ಪ್ರಧಾನ ಮಂತ್ರಿಗಳೇ ಹೇಳುತ್ತಿರುವಾಗಲೇ, ಅದೇ ಸಂವಿಧಾನದ ಅಡಿಯಲ್ಲಿ ಪ್ರತಿಜ್ಞೆ ಕೈಗೊಂಡಿರುವ ದೇಶದ ಉಪರಾಷ್ಟ್ರಪತಿಗಳು ಆ ಮೂಲಸಂರಚನೆಯ ತತ್ವವನ್ನೇ ಪ್ರಶ್ನಿಸಿರುವುದು ಬಹಳಷ್ಟು ಮಂದಿಗೆ ಆಘಾತವುಂಟು ಮಾಡಿದೆ.

ಮೇಲೆ ಹೇಳಿದಂತೆ, ಅಡ್ವಾಣಿ, ವಾಜಪೇಯಿ, ಅರುಣ್ ಜೇಟ್ಲಿಯಂತಹ ಬಿಜೆಪಿಯ ಮತ್ತು ಅದರ ಹಿಂದಿನ ಜನಸಂಘದ ಮುಖಂಡರುಗಳು, ಮಾತ್ರವಲ್ಲ, ಸ್ವತಃ ಸುಪ್ರಿಂ ಕೋರ್ಟಿನ ವಕೀಲರಾಗಿದ್ದ ಇದೇ ಉಪರಾಷ್ಟ್ರಪತಿಗಳೂ ಹಿಂದೆಂದೂ ಇದರ ವಿರುದ್ಧ ಮಾತಾಡಿರಲಿಲ್ಲ ಎಂದು ಅವರ ಹಳೆಯ ಸಹಯೋಗಿ ಹಾಗೂ ರಾಜ್ಯಸಭಾ ಸದಸ್ಯ ವಿವೇಕ್ ಥಂಕಾ ಹೇಳಿರುವುದಾಗಿ ಹಿರಿಯ ಪತ್ರಕರ್ತ ಎಂ ಕೆ ವೇಣು ಹೇಳುತ್ತಾರೆ (ದಿ ಇಂಡಿಯಾ ಕೇಬಲ್, ಜನವರಿ 13). ಹೀಗಿರುವಾಗ ಉಪರಾಷ್ಟ್ರಪತಿಗಳು ಈಗ ಈ ರೀತಿ ಕೆಂಡಕಾರುತ್ತಿರಲು ಕಾರಣವೇನಿರಬಹುದು ಎಂಬುದು ಹಲವು ರಾಜಕೀಯ ವೀಕ್ಷಕರಲ್ಲಿ ಎದ್ದಿರುವ ಪ್ರಶ್ನೆ.

ಪ್ರಧಾನ ಮಂತ್ರಿಗಳು ಸೇರಿದಂತೆ ಆಳುವ ಪಕ್ಷದ ಯಾವ ಹಿರಿಯ ಮುಖಂಡರೂ ಈ ಬಗ್ಗೆ ಮಾತನಾಡದಿರುವುದು ನೋಡಿದರೆ, ಇದು ಸುಪ್ರಿಂ ಕೋರ್ಟಿಗೆ ಬಾಯಿ ಮುಚ್ಚಿಕೊಂಡಿರಿ ಎಂಬ ಸಂದೇಶ ರವಾನಿಸುವ ಒಟ್ಟು ಯೋಜನೆಯ ಭಾಗವಾಗಿರಬಹುದೇ ಎಂದು ಎಂ ಕೆ ವೇಣು ತಮ್ಮ ಲೇಖನದಲ್ಲಿ ಹೇಳುತ್ತಾರೆ.

ನಮ್ಮ ಸಂವಿಧಾನ ಭಾರತದ ಸಾರ್ವಭೌಮತೆಯನ್ನು ಜನತೆಗೆ ನೀಡಿರುವುದು ಅದರ ಕೇಂದ್ರ ಬಿಂದು. ಪ್ರಭುತ್ವದ ಯಾವುದೇ ಅಂಗ ಅಧಿಕಾರವನ್ನು ತನ್ನ ಕೈಗೆ ತಗೊಳ್ಳಲು ಸಾಧ್ಯವಿಲ್ಲ. ಜನತೆ ತಾತ್ಕಾಲಿಕವಾಗಿ 5 ವರ್ಷಕ್ಕೆ ತಮ್ಮ ಪ್ರತಿನಿಧಿಗಳನ್ನು ಚುನಾಯಿಸುವಲ್ಲಿ ತಮ್ಮ ಸಾರ್ವಭೌಮತೆಯನ್ನು ಚಲಾಯಿಸುತ್ತಾರೆ. ಈ ಪ್ರತಿನಿಧಿಗಳು ತಮ್ಮ ನಡುವಿನಿಂದ ಸರಕಾರವನ್ನು ರಚಿಸುತ್ತಾರೆ. ಆ ಸರಕಾರ (ಕಾರ್ಯಾಂಗ) ಸಂಸತ್ತಿಗೆ(ಶಾಸಕಾಂಗಕ್ಕೆ)ಜವಾಬುದಾರಿಯಾಗಿರುತ್ತದೆ , ಮತ್ತು ಸಂಸದ್ ಸದಸ್ಯರು ಜನತೆಗೆ ಉತ್ತರದಾಯಿಯಾಗಿರುತ್ತಾರೆ. ಈ ಸಂವಿಧಾನಿಕ ಯೋಜನೆಯ ಎಳೆಯನ್ನು ಯಾರೂ ಎಲ್ಲಿಯೂ ಬದಲಿಸಲು ಸಾಧ್ಯವಿಲ್ಲ ಎನ್ನುತ್ತ ಯೆಚುರಿಯವರು, ಭಾರತದ ಗಣತಂತ್ರದ ಜಾತ್ಯತೀತ ಪ್ರಜಾಸತ್ತಾತ್ಮಕ ಸ್ವರೂಪವನ್ನು ಬದಲಿಸಿ ಒಂದು ಉನ್ಮತ್ತ ಅಸಹಿಷ್ಣು ಫ್ಯಾಸಿಸ್ಟ್ ತೆರನ ಹಿಂದುತ್ವ ರಾಷ್ಟ್ರವನ್ನು ಸ್ಥಾಪಿಸುವ ಸನ್ನಾಹದ ಅಪಾಯದ ಸೂಚನೆ ಉಪರಾಷ್ಟ್ರಪತಿಗಳ ಈ ಟಿಪ್ಪಣಿಗಳಲ್ಲಿ ಕಾಣುತ್ತದೆ, ಇದನ್ನು ಪ್ರತಿರೋಧಿಸಬೇಕು ಮತ್ತು ತಿರಸ್ಕರಿಸಬೇಕು ಎಂದು ಹೇಳುತ್ತಾರೆ.

‘ಪ್ರಜಾಪ್ರಭುತ್ವದ ಪರಂಪರೆ’ಯ ಪುಕ್ಕಟೆ ಸಲಹೆ!

ಹೀಗೆ ಉಪರಾಷ್ಟ್ರಪತಿಗಳು ಭಾರತದ ಪ್ರಜಾಪ್ರಭುತ್ವದ ಸ್ವರೂಪವನ್ನೇ ಬದಲಿಸುವ ಅಭಿಯಾನಕ್ಕೆಇಳಿದಿರುವಂತೆ ಕಾಣುವಾಗ,  ಪ್ರಧಾನಿಗಳು ಬ್ರೆಝಿಲ್‌ನಲ್ಲಿ ಚುನಾವಣೆಯಲ್ಲಿ ಸೋತ ಜಗತ್ತಿನ ರಾಜಕಾರಣದಲ್ಲಿ ತಮ್ಮ ನಿಕಟ ಗೆಳೆಯರಲ್ಲಿ ಒಬ್ಬರಾದ ಬೊಲ್ಸೆನಾರೋರವರ ಬಲಪಂಥೀಯ ಹಿಂಬಾಲಕರು ದೇಶದ ರಾಜಧಾನಿಯಲ್ಲಿ ನಡೆಸಿದ ಧಾಂಧಲೆಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತ ಟ್ವೀಟ್ ಮಾಡಿರುವ ಸುದ್ದಿ ವರದಿಯಾಗಿದೆ-ಪ್ರತಿಯೊಬ್ಬರೂ ಪ್ರಜಾಪ್ರಭುತ್ವ ಪರಂಪರೆಗಳನ್ನು ಗೌರವಿಸಬೇಕು ಎಂದು ಅವರು ಈ ಟ್ವೀಟ್‌ನಲ್ಲಿ ಹೇಳಿದ್ದಾರಂತೆ.

ಇದಕ್ಕೆ ಪ್ರತಿಕ್ರಿಯೆಯಾಗಿ ಮಾಧ್ಯಮಗಳಲ್ಲಿ ಕೆಲವರು ಕಳೆದ 5 ವರ್ಷಗಳಲ್ಲಿ ಭಾರತದಲ್ಲಿ ಪ್ರಜಾಪ್ರಭುತ್ವದ ಪರಂಪರೆಗೆ ಎಂತಹ ಗೌರವ ಸಲ್ಲಿಸಲಾಗಿದೆ ಎಂದು ನೆನಪಿಸಿದ್ದಾರೆ. ಸಿಬಿಐ, ಇಡಿ, ಐಟಿಗಳನ್ನು ಆಯುಧಗಳಾಗಿ ಬಳಸಿ ಈ 5 ವರ್ಷಗಳಲ್ಲಿ ಕರ್ನಾಟಕ ಸೇರಿದಂತೆ 7 ರಾಜ್ಯಗಳಲ್ಲಿ ಅವರ ಪಕ್ಷ ಚುನಾವಣೆಗಳಲ್ಲಿ ಬಹುಮತ ಗಳಿಸುವಲ್ಲಿ ಸೋತರೂ ಅಧಿಕಾರ ನಡೆಸುತ್ತಿದೆ ಎಂಬುದನ್ನು ನೆನಪಿಸಲಾಗುತ್ತಿದೆ. ಆ ಪಟ್ಟಿ ಹೀಗಿದೆ:

2017 -ಗೋವ : ಒಟ್ಟು ಸೀಟುಗಳು-40 ಕಾಂಗ್ರೆಸ್-17, ಬಿಜೆಪಿ-13, ಇತರರು-10

2017- ಮಣಿಪುರ : ಒಟ್ಟು ಸೀಟುಗಳು-60 ಕಾಂಗ್ರೆಸ್-28 ಬಿಜೆಪಿ-21 ಇತರರು-11

2018 -ಮೇಘಾಲಯ : ಒಟ್ಟು ಸೀಟುಗಳು-60 ಕಾಂಗ್ರೆಸ್-11 ಎನ್‌ಪಿಪಿ-19, ಬಿಜೆಪಿ-2

2019- ಹರ‍್ಯಾಣ : ಒಟ್ಟು ಸೀಟುಗಳು-90 ಬಿಜೆಪಿ-40 ಕಾಂಗ್ರೆಸ್-31 ಜೆಜೆಪಿ-10

2018-19- ಕರ್ನಾಟಕ : ಒಟ್ಟು ಸೀಟುಗಳು-224 ಬಿಜೆಪಿ- 103, ಕಾಂಗ್ರೆಸ್-78, ಜೆಡಿ(ಎಸ್)34 ಬಹುಮತವಿಲ್ಲದೆ ಸರಕಾರ ರಚನೆ-14 ತಿಂಗಳ ನಂತರ’ಆಪರೇಷನ್ ಕಮಲ’ದ ಮೂಲಕ ಕೊನೆಗೂ ಅಧಿಕಾರ

2019-20- ಮಧ್ಯಪ್ರದೇಶ :  ಕಾಂಗ್ರೆಸ್-114, ಬಿಜೆಪಿ-109, ಇತರರು -7; 2020ರಲ್ಲಿ ಈಗಿರುವ ಸರಕಾರ ರಚನೆಗೆ ನೆರವಾದ ಆಗಿನ ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯಾ ಈಗ ಕೇಂದ್ರ ಸಚಿವರಾಗಿದ್ದಾರೆ.

2019-22-ಮಹಾರಾಷ್ಟ್ರ : ಶಿವಸೇನೆಯೊಂದಿಗೆ ಬಹುಮತ-ವಚನಭಂಗದ ಆಪಾದನೆಯ ನಂತರ ಎನ್‌ಸಿಪಿ ಬೆಂಬಲವಿದೆಯೆಂದು ರಚಿಸಿದ ಸರಕಾರ ಕೆಲವೇ ಗಂಟೆಗಳೊಳಗೆ ಕುಸಿತ- ಮೂರು ವರ್ಷಗಳ ನಂತರ ಶಿವಸೇನೆಯನ್ನು ಒಡೆದು ಕೊನೆಗೂ ಅಧಿಕಾರ.

ಮೊದಲು ಹಣಕಾಸು ಮತ್ತು ಇತರ ಆಮಿಷಗಳನ್ನು ಒಡ್ಡಿ ಪಕ್ಷಾಂತರ ನಡೆಯುವಂತೆ ಮಾಡುವುದು, ಅದಾಗದಿದ್ದರೆ, ಇಡಿ, ಸಿಬಿಐ, ಆದಾಯ ತೆರಿಗೆ ಇಲಾಖೆಯನ್ನು ಹರಿಯಬಿಡುವುದು, ಅದೂ ವಿಫಲವಾದರೆ, ಕಾನೂನು ಕೇಸುಗಳನ್ನು ಹಾಕಿ ಬಂಧಿಸುವುದು! ಈ ಆಳ್ವಿಕೆ ಸ್ಥಾಪಿಸಿರುವ ಇಂತಹ ಭಾರತೀಯ ಪ್ರಜಾಪ್ರಭುತ್ವ ‘ಪರಂಪರೆಗಳಿಗೆ’ ಸ್ವಾಗತ! -ಇದು ನಮ್ಮ ಪ್ರಧಾನಿಗಳು ತಮ್ಮ ಬ್ರೆಝಿಲ್ ಬಲಪಂಥೀಯ ಗೆಳೆಯರಿಗೆ ನೀಡಿರುವ ಪುಕ್ಕಟೆ ಸಲಹೆ ಎಂದು ಯೆಚುರಿ ಈ ಬಗ್ಗೆ ಟಿಪ್ಪಣಿ ಮಾಡಿದ್ದಾರೆ.

ಉಪರಾಷ್ಟ್ರಪತಿಗಳ ವಾಗ್ಬಾಣಗಳು ಈ ಪರಂಪರೆಗೇ ಸೇರಿದವುಗಳು ಎನ್ನಬಹುದೇನೋ.

ಅಮೃತಕಾಲ’ದ ಈ ‘ಪರಂಪರೆ’ಯ ಎರಡು ಮಾದರಿಗಳು
-ನೋಟುರದ್ದತಿ ಮತ್ತು ಚುನಾವಣಾ ಬಾಂಡುಗಳು

2016ರಲ್ಲಿ ನೊಟುರದ್ಧತಿ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ರಿಜರ್ವ್ ಬ್ಯಾಂಕನ್ನು ಹೇಗೆ ರಬ್ಬರ್ ಸ್ಟಾಂಪ್ ಮಾಡಲಾಯಿತು ಎಂಬುದು ಈಗ ಸುಪ್ರಿಂ ಕೋರ್ಟಿನ ತೀರ್ಪಿನ ನಂತರ ಜಗಜ್ಜಾಹೀರಾಗಿದೆ.

2016ರಲ್ಲಿ ಚುನಾವಣಾ ಆಯೋಗದ ಬಲವಾದ ಆಕ್ಷೇಪವಿದ್ದರೂ ‘ಹಣಕಾಸು ಮಸೂದೆ’ಯ ವೇಷ ತೊಡಿಸಿ ತಂದ ಚುನಾವಣಾ ಬಾಂಡು ಯೋಜನೆಯನ್ನು ಇತ್ತೀಚೆಗೆ ನವಂಬರ್ 2022ರಲ್ಲಿ, ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದಾಗಲೇ ತಿದ್ದುಪಡಿ ಮಾಡಿದಾಗಲೂ ಚುನಾವಣಾ ಆಯೋಗಕ್ಕೆ ಅದನ್ನು ಕೊನೆಯ ಗಳಿಗೆಯಲ್ಲಿ ತಿಳಿಸಲಾಯಿತಷ್ಟೇ, ಅದರ ಸಮ್ಮತಿಯನ್ನು ಪಡೆದಿರಲಿಲ್ಲ ಎಂಬುದು ಈಗ ಮಾಹಿತಿ ಹಕ್ಕಿನ ಅಡಿಯಲ್ಲಿ ಪಡೆದ ಮಾಹಿತಿಯಿಂದ ಬಯಲಿಗೆ ಬಂದಿದೆ.

ಚುನಾವಣಾ ಬಾಂಡಿಗೆ ಸವಾಲೊಡ್ಡಿದ ಅರ್ಜಿಗಳ ವಿಚಾರಣೆಯೂ ಈಗ ಸುಪ್ರಿಂ ಕೋರ್ಟಿನ ಮುಂದಿದೆ ಎಂಬುದನ್ನು ಇಲ್ಲಿ ಗಮನಿಸಬಹುದು.

ಈ ನಡುವೆ ಸುಪ್ರಿಂ ಕೋರ್ಟಿನಲ್ಲಿ ನಡೆಯುತ್ತಿರುವ ವಿಚಾರಣೆಯ ಮತ್ತೊಂದು ಪ್ರಕರಣದಲ್ಲಿ ಚುನಾವಣಾ ಆಯೋಗ ಸಲ್ಲಿಸಿದ ಅಫಿಡವಿಟ್‌ನಲ್ಲಿ ಚುನಾವಣೆಗಳಲ್ಲಿ ಹಣಬಲದ ಪಾತ್ರ ಹೆಚ್ಚುತ್ತಿರುವುದನ್ನು ತಾನು ಗಂಭೀರವಾಗಿ ಪರಿಗಣಿಸುತ್ತಿದ್ದು, ವಿಪರೀತ ಚುನಾವಣಾ ವೆಚ್ಚಕ್ಕೆ ತಡೆ ಹಾಕಲು ಸತತ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದೆ!

Donate Janashakthi Media

Leave a Reply

Your email address will not be published. Required fields are marked *