ಸುಪ್ರೀಂಕೋರ್ಟ್‌ ಮನವಿಯ ನಂತರ 11 ದಿನಗಳ ಮುಷ್ಕರ ಮುಕ್ತಾಯಗೊಳಿಸಿದ ಏಮ್ಸ್ ವೈದ್ಯರು

ನವದೆಹಲಿ: ಕೋಲ್ಕತ್ತದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದನ್ನು ಖಂಡಿಸಿ 11 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ದೆಹಲಿ ಏಮ್ಸ್‌ ವೈದ್ಯರು ಕರ್ತವ್ಯಕ್ಕೆ ಮರಳುವುದಾಗಿ ಘೋಷಿಸಿದ್ದಾರೆ.

ಪ್ರತಿಭಟನೆಯನ್ನು ಕೈಬಿಟ್ಟು ಕೆಲಸಕ್ಕೆ ಮರಳುವಂತೆ ಇಂದು (ಗುರುವಾರ) ಸೂಚನೆ ನೀಡಿದ್ದ ಸುಪ್ರೀಂ ಕೋರ್ಟ್‌, ಕೆಲಸಕ್ಕೆ ಮರಳಿದ ಬಳಿಕ ಯಾವುದೇ ಪ್ರತಿಕೂಲ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂಬ ಭರವಸೆಯನ್ನೂ ನೀಡಿದೆ.

‘ಆರ್‌.ಜಿ.ಕರ್ ಆಸ್ಪತ್ರೆ ಪ್ರಕರಣದ ತನಿಖೆ, ವೈದ್ಯರ ಸುರಕ್ಷತೆ ಕುರಿತು ಸುಪ್ರೀಂ ಕೋರ್ಟ್‌ ಭರವಸೆ ನೀಡಿದ ಹಿನ್ನೆಲೆಯಲ್ಲಿ ನಾವು ಕರ್ತವ್ಯಕ್ಕೆ ಮರಳುತ್ತಿದ್ದೇವೆ. ಸುಪ್ರೀಂ ಕೋರ್ಟ್‌ ಕೈಗೊಂಡ ಕ್ರಮವನ್ನು ಒಪ್ಪಿದ್ದು, ಅದರ ನಿರ್ದೇಶನಗಳಿಗೆ ಬದ್ಧರಾಗಿರುತ್ತೇವೆ’ ಎಂದು ಏಮ್ಸ್‌ ವೈದ್ಯರ ಒಕ್ಕೂಟ ಎಕ್ಸ್‌/ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದೆ.

ವೈದ್ಯ ಸಂಘಟನೆಗಳು, ಎಲ್ಲ ಆಸ್ಪತ್ರೆಗಳಲ್ಲಿನ ಹೊರರೋಗಿಗಳ ವಿಭಾಗದ ಸೇವೆಯನ್ನು ಸ್ಥಗಿತಗೊಳಿಸಿ ಆಗಸ್ಟ್‌ 12ರಂದು ರಾಷ್ಟ್ರದಾದ್ಯಂತ ಹೋರಾಟಕ್ಕೆ ಕರೆ ನೀಡಿದ್ದವು. ಅಂದಿನಿಂದ ತುರ್ತು ಸೇವೆಗಳಷ್ಟೇ ಮುಂದುವರಿದಿದ್ದವು.

ಆರ್‌.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸೆಮಿನಾರ್ ಸಭಾಂಗಣದಲ್ಲಿ ವಿದ್ಯಾರ್ಥಿನಿಯ ಶವ ಆಗಸ್ಟ್ 9 ರಂದು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ರಾಷ್ಟ್ರದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ.

Donate Janashakthi Media

Leave a Reply

Your email address will not be published. Required fields are marked *