ನವದೆಹಲಿ: ಭಾರತದ ಸುಪ್ರೀಂ ಕೋರ್ಟ್‌ನ ಅಧಿಕೃತ ಯೂಟ್ಯೂಬ್ ಚಾನೆಲ್ ಅನ್ನೇ ಹ್ಯಾಕ್ ಮಾಡಲಾಗಿದ್ದು, ಹ್ಯಾಕ್ ಮಾಡುವುದರ ಜೊತೆಗೆ ಯುಎಸ್ ಮೂಲದ ರಿಪ್ಪಲ್ ಲ್ಯಾಬ್ಸ್ ಎಂಬ ಕಂಪನಿಯು ಕ್ರಿಪ್ಟೋ ಕರೆನ್ಸಿ ಪ್ರೋಮೋಷನ್ ಮಾಡುತ್ತಿರುವ ವಿಡಿಯೋಗಳನ್ನು ಪೋಸ್ಟ್ ಮಾಡಿದೆ. ಇದೀಗ ಆ ಯೂಟ್ಯೂಬ್ ಚಾನೆಲ್ ಅನ್ನು ನಿಷ್ಕ್ರಿಯಗೊಳಿಸಿರುವುದಾಗಿ ಸುಪ್ರೀಂ ಕೋರ್ಟ್ ಸ್ಪಷ್ಟನೆ ನೀಡಿದೆ. ಆದರೆ, ನ್ಯಾಯ ದೊರಕಿಸಿಕೊಡುವ ಸುಪ್ರೀಂ ಕೋರ್ಟ್‌ನ ಖಾತೆಯನ್ನೇ ಹ್ಯಾಕ್ ಮಾಡಿದ್ದಾರೆ ಎಂದರೆ ಸಾಮಾನ್ಯ ಜನರ ಪರಿಸ್ಥಿತಿ ಏನು ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಯೂಟ್ಯೂಬ್ ವಾಹಿನಿಯಲ್ಲಿ ಕಲಾಪದ ಲೈವ್ ವಿಡಿಯೋಗಳ ಬದಲಿಗೆ ಎಕ್ಸ್ಆರ್ಪಿ ವಿಡಿಯೋಗಳನ್ನು ಪ್ರಸಾರ ಮಾಡಲಾಗಿದೆ. ಯೂಟ್ಯೂಬ್ನ ಬ್ರಾಡ್ ಗಾರ್ಲಿಂಗ್ ಹೌಸ್ ಹೆಸರಿನಲ್ಲಿ ಖಾಲಿ ವಿಡಿಯೋವನ್ನು ಪ್ರದರ್ಶಿಸಿ Ripple Responds To The SEC’s $2 Billion Fine! XRP PRICE PREDICTION ಎಂದು ಬರೆದಿದೆ. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗಳನ್ನು ನೇರ ಪ್ರಸಾರ ಮಾಡಲು 2018 ರಿಂದ ಸುಪ್ರೀಂ ಕೋರ್ಟ್ ಈ ಚಾನೆಲ್ ಬಳಸುತ್ತಿದೆ. ಹ್ಯಾಕ್ ಆಗಿರುವ ಚಾನೆಲ್ ಅನ್ನು ಡಿಲೀಟ್ ಮಾಡಿರುವ ಸುಪ್ರೀಂ ಕೋರ್ಟ್, ನೂತನ ಚಾನೆಲ್ ಆರಂಭಿಸುವ ಬಗ್ಗೆ ತಿಳಿಸಿದೆ.
ಸುಪ್ರೀಂ ಕೋರ್ಟ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಭಾರತದ ಸುಪ್ರೀಂ ಕೋರ್ಟ್‌ನ ಯೂಟ್ಯೂಬ್ ಚಾನೆಲ್ ಅನ್ನು ತೆಗೆದುಹಾಕಲಾಗಿದೆ ಎಂದು ಸಂಬಂಧಪಟ್ಟ ಎಲ್ಲರಿಗೂ ಈ ಮೂಲಕ ತಿಳಿಸಲಾಗುತ್ತಿದೆ. ಭಾರತದ ಸುಪ್ರೀಂ ಕೋರ್ಟ್ ಯೂಟ್ಯೂಬ್ ಚಾನೆಲ್‌ನಲ್ಲಿನ ಸೇವೆಗಳನ್ನು ಶೀಘ್ರದಲ್ಲೇ ಪುನರಾರಂಭಿಸಲಾಗುವುದು ಎಂದು ಹೇಳಿಕೆ ಮೂಲಕ ಸ್ಪಷ್ಟಪಡಿಸಿದೆ. ಹ್ಯಾಕ್ ಮಾಡಿದವರ ಪತ್ತೆ ಕಾರ್ಯ ಮುಂದುವರೆದಿದೆ.