ದಕ್ಷಿಣ ಪಿನಾಕಿನಿ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ನ್ಯಾಯಮಂಡಳಿ ರಚಿಸಿ – ಸುಪ್ರೀಂ ಕೋರ್ಟ್

ನವದೆಹಲಿ: ದಕ್ಷಿಣ ಪಿನಾಕಿನಿ (ಪೆನ್ನೈಯಾರ್) ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಕರ್ನಾಟಕದ ನಡುವಿನ ವಿವಾದಗಳನ್ನು ಬಗೆಹರಿಸಲು ಅಂತರ್​ರಾಜ್ಯ ಜಲ ವಿವಾದ ನ್ಯಾಯಮಂಡಳಿಯನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಫೆಬ್ರವರಿ 2ರಂದು ನಿರ್ದೇಶಿಸಿದೆ.

ತಮಿಳುನಾಡು ಹಾಗೂ ಕರ್ನಾಟಕ ರಾಜ್ಯದ ಮಧ್ಯ ಈ ನದಿ ಹಾಗೂ ಇದರ ಉಪನದಿಗಳ ವಿಚಾರವಾಗಿ ವಿವಾದ ಉಂಟಾಗಿತ್ತು. ಇದು ಕೇಂದ್ರ ಸರ್ಕಾರದ ನಂತರ ಸುಪ್ರೀಂ ಕೋರ್ಟ್‌ ಅಂಗಳ ತಲುಪಿತು. ಈ ನದಿ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ‘ಜಲ ವಿವಾದ ನ್ಯಾಯಮಂಡಳಿ’ ಸ್ಥಾಪಿಸುವಂತೆ ಕೋರಿ ಅರ್ಜಿ ಸಲ್ಲಿಸಿತ್ತು.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಎನ್‌ವಿ ಅಂಜಾರಿಯಾ ಅವರಿದ್ದ ವಿಭಾಗೀಯ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ಒಂದು ತಿಂಗಳೊಳಗೆ ಜಲ ವಿವಾದ ನ್ಯಾಯಮಂಡಳಿ ರಚಿಸಲು ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಇದನ್ನೂ ಓದಿ: ಫೋನ್ ಕದ್ದಾಲಿಕೆ ಪ್ರಕರಣ: ತೆಲಂಗಾಣ ಮಾಜಿ ಸಿಎಂ ವಿಚಾರಣೆ ನಡೆಸಿದ ಎಸ್‌ಐಟಿ

ಇಂದಿನಿಂದ ಒಂದು ತಿಂಗಳ ಅವಧಿಯಲ್ಲಿ ಎರಡು ರಾಜ್ಯಗಳ ಮಧ್ಯ ಇರುವ ಅಂತಾರಾಜ್ಯ ಜಲ ವಿವಾದದ ಕುರಿತು ಅಧಿಕೃತ ಗೆಜೆಟ್‌ನಲ್ಲಿ ಸೂಕ್ತ ಅಧಿಸೂಚನೆಯನ್ನು ಹೊರಡಿಸಲು ಮತ್ತು ಜಲ ವಿವಾದ ನ್ಯಾಯಮಂಡಳಿಯನ್ನು ರಚಿಸಲು ಕೇಂದ್ರ ಸರ್ಕಾರ ಕೋರ್ಟ್ ಸೂಚನೆ ನೀಡಿದೆ.

ಸುಪ್ರೀಂ ಕೋರ್ಟ್‌ನ ಇಂದಿನ ಈ ತೀರ್ಪು, ಸಂವಿಧಾನದ 131 ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್ ಅಂತಾರಾಜ್ಯ ವಿವಾದಗಳಲ್ಲಿ ನೇರ ಪಾಲ್ಗೊಳ್ಳುವಿಕೆಯನ್ನು ಕೊನೆಗಾಣಿಸಿದೆ. ದಕ್ಷಿಣ ಪಿನಾಕಿನಿ ನದಿ ಸಂಘರ್ಷದ ಪರಿಹಾರವನ್ನು ಅಂತಾರಾರಾಜ್ಯ ನದಿ ನೀರು ವಿವಾದ ಕಾಯ್ದೆ (ISRWDA) ಅಡಿಯಲ್ಲಿ ವಿಶೇಷ ನ್ಯಾಯಮಂಡಳಿ ವೇದಿಕೆಗೆ ವಹಿಸಿದ್ದು, ಅಲ್ಲಿಂದ ಪರಿಹಾರ ಕಂಡುಕೊಳ್ಳುವುದು ಸೂಕ್ತವೆಂದು ಅಭಿಪ್ರಾಯಪಟ್ಟಿದೆ. ಈ ಪ್ರಕರಣದಲ್ಲಿ ಒಂದಷ್ಟು ಬೆಳವಣಿಗೆ ಬಳಿಕ ನ್ಯಾಯಮಂಡಳಿ ಸಂವಿಧಾನವು ಏಕೈಕ ಶಾಸನಬದ್ಧ ಆಯ್ಕೆಯಾಗಿದೆ.

ತಮಿಳುನಾಡು ‘ಜಲ ವಿವಾದ ನ್ಯಾಯಮಂಡಳಿ’ ಸ್ಥಾಪಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರದಿಂದ ಒಂದಷ್ಟು ಮಾಹಿತಿಯನ್ನು ಕೇಳಿತ್ತು. ಆದರೆ ಕೇಂದ್ರ ಸರ್ಕಾರ ನದಿ ತೀರದ ರಾಜ್ಯಗಳ ಮಧ್ಯದಲ್ಲಿರುವ ಈ ದಕ್ಷಿಣ ಪಿನಾಕಿನಿ ನದಿ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಒಮ್ಮತಕ್ಕೆ ಬರಲು ಆಗಿಲ್ಲ ಎಂದು ಮಾಹಿತಿ ನೀಡಿತು.

ಇದರ ಬೆನ್ನಲ್ಲೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಎನ್‌.ವಿ.ಅಂಜಾರಿಯಾ ಅವರಿದ್ದ ವಿಭಾಗೀಯ ನ್ಯಾಯಪೀಠವು ಕಳೆದ ವರ್ಷ ಡಿಸೆಂಬರ್ 19ರಂದು ವಿಚಾರಣೆಯನ್ನು ಮುಕ್ತಾಯಗೊಳಿಸಿತ್ತು. ಫೆಬ್ರವರಿ 2ರಂದು ಅಂತಿಮ ತೀರ್ಪು ಪ್ರಕಟಿಸಲು ದಿನಾಂಕ ನಿಗದಿ ಮಾಡಿತ್ತು. ಅದರಂತೆ ಅರ್ಜಿ ಪುರಸ್ಕರಿಸಿ, ನ್ಯಾಯಮಂಡಳಿ ರಚಿಸಿ ತಿಂಗಳೊಳಗೆ ಮಾಹಿತಿ ನೀಡುವಂತೆ ಆದೇಶಿಸಿದೆ.

ನೀರು ಬಳಕೆಗೆ ಆಕ್ಷೇಪಿಸಿ ಗೆದ್ದ ತಮಿಳುನಾಡು

ದಕ್ಷಿಣ ಪಿನಾಕಿನಿ ನೀರು ಕರ್ನಾಟಕದಿಂದ ತಮಿಳುನಾಡಿನತ್ತ ಹರಿದು ಕೊನೆಗೆ ಬಂಗಾಳಕೊಲ್ಲಿ ಸೇರುತ್ತದೆ. ಕರ್ನಾಟಕವು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಚೆಕ್ ಡ್ಯಾಮ್‌ಗಳನ್ನು ಕಟ್ಟಿ, ಈ ನದಿ ನೀರನ್ನು ಬಳಸಿಕೊಳ್ಳುತ್ತಿದೆ. ಇದಕ್ಕೆ ನೆರೆಯ ತಮಿಳುನಾಡು ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಯೋಜನೆಗಳಿಂದ ತಮಗೆ ಸೇರಬೇಕಾದ ನೀರು ಕಡಿಮೆ ಆಗುತ್ತದೆ ಎಂದು ವಾದ ಮುಂದಿಟ್ಟಿತ್ತು. ಕರ್ನಾಟಕ ಅದನ್ನು ಒಪ್ಪದಿದ್ದಾಗ ತಮಿಳುನಾಡು 2018ರಲ್ಲಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿ ‘ಜಲ ವಿವಾದ ನ್ಯಾಯಾಧಿಕರಣ ರಚನೆಗೆ ಪಟ್ಟು ಹಿಡಿದಿತ್ತು. ಅಂದಿನಿಂದ ವಿಚಾರಣೆ ನಡೆಯುತ್ತಲೇ ಬಂದಿತ್ತು. ಇದರಲ್ಲಿ ಕೇಂದ್ರ ಸರ್ಕಾರ ತನ್ನಿಂದ ಎರಡು ರಾಜ್ಯಗಳನ್ನು ಒಮ್ಮತಕ್ಕೆ ತರುವ ಯತ್ನ ವಿಫಲವಾಯಿತು ಎಂದು ತಿಳಿಸಿತು. ಬಳಿಕ ಅರ್ಜಿಗಳ ಸುದೀರ್ಘ ವಿಚಾರಣೆ ನಡೆಸಿ ಮುಕ್ತಾಯಗೊಳಿಸಿದ್ದ ಸುಪ್ರೀಂ ಕೋರ್ಟ್‌ ಇದೀಗ ನ್ಯಾಯಾಧಿಕರಣ ರಚನೆಗೆ ಸೂಚಿಸಿದೆ.

ದಕ್ಷಿಣ ಪಿನಾಕಿನಿ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ

ದಕ್ಷಿಣ ಪಿನಾಕಿನಿ (ಪೆನ್ನೈಯಾರ್) ಕರ್ನಾಟಕದ ನಂದಿ ಬೆಟ್ಟದಲ್ಲಿ ಹುಟ್ಟಿ, ತಮಿಳುನಾಡಿನ ಮೂಲಕ 497 ಕಿ.ಮೀ ಹರಿದು ಬಂಗಾಳಕೊಲ್ಲಿ ಸಮುದ್ರ ಸೇರುತ್ತದೆ. ಇದು ಕಾವೇರಿ ನಂತರದ ಪ್ರಮುಖ ಉದ್ದದ ನದಿಯಾಗಿದೆ. ತಮಿಳುನಾಡಿಗೆ ಪ್ರಮುಖ ನದಿಯಾಗಿದ್ದು, ಒಟ್ಟು 3,690 ಚ.ಕಿ.ಮೀ ಜಲಾನಯನ ಪ್ರದೇಶ ಹೊಂದಿದೆ. ಕರ್ನಾಟಕದ ಚಂದಾಪುರ, ಆನೇಕಲ್ ಮೂಲಕ ಹರಿಯುತ್ತದೆ. ತಮಿಳುನಾಡಿನಲ್ಲಿ ಹೊಸೂರು, ಬಾಗಲೂರು ಮತ್ತು ಚೆಂಗಮ್ ಮೂಲಕ ಹರಿದು ಸಾಗರ ಸೇರುತ್ತದೆ.

ಕೃಷ್ಣಗಿರಿ ಮತ್ತು ಸಾತನೂರ್ (7.3 ಟಿಎಂಸಿ) ಪ್ರಮುಖ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಮಳೆಗಾಲದಲ್ಲಿ ಹರಿಯುವ ಈ ನದಿ ಅಂತರ್ಜಲ ಹೆಚ್ಚಿಸುತ್ತದೆ. ಆದರೆ, ಬೆಂಗಳೂರು ಮತ್ತು ಹೊಸೂರಿನ ಕೈಗಾರಿಕಾ ಪ್ರದೇಶಗಳ ಮೂಲಕ ಹರಿಯುವಾಗ ತ್ಯಾಜ್ಯದಿಂದ ನದಿ ತೀವ್ರವಾಗಿ ಕಲುಷಿತಗೊಳ್ಳುತ್ತಿದೆ.

ಇದನ್ನೂ ನೋಡಿ: Karnataka Legislative Assembly Day 07 Live | 16 ನೇ ವಿಧಾನ ಸಭೆಯ 9ನೇ ಅಧಿವೇಶನದ ನೇರಪ್ರಸಾರ

Donate Janashakthi Media

Leave a Reply

Your email address will not be published. Required fields are marked *