ಹೈಕೋರ್ಟ್‌ನ ಲಾಕ್‌ಡೌನ್ ಆದೇಶಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಏರುಗತಿಯಲ್ಲಿರುವ ಕೋವಿಡ್‌ ದಾಖಲು ಪ್ರಕರಣಗಳ ನಿಯಂತ್ರಿಸಲು ಉತ್ತರ ಪ್ರದೇಶದ ಐದು ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಬೇಕೆಂದು ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅಧ್ಯಕ್ಷತೆ ವಹಿಸಿದ್ದ ಪೀಠವು ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್‌ ಅವರಿದ್ದ ತ್ರಿಸದಸ್ಯ ಪೀಠವು ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಎರಡು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಸೂಚಿಸಿದೆ.

ಇದನ್ನು ಓದಿ: ಆರೋಗ್ಯ ತುರ್ತು ಪರಿಸ್ಥಿತಿ – ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು: ಸಿಪಿಐ(ಎಂ) ಪೊಲಿಟ್ ಬ್ಯುರೋ

ಏಪ್ರಿಲ್‌ 19ರಂದು (ನೆನ್ನೆ ಸಂಜೆ) ಅಲಹಾಬಾದ್ ಹೈಕೋರ್ಟ್ ಲಾಕ್‌ಡೌನ್‌ ಸಂಬಂಧಿಸಿದಂತೆ ಐದು ನಗರಗಳಲ್ಲಿ ಸರ್ಕಾರವು ಸಂಪೂರ್ಣ ಲಾಕ್‌ಡೌನ್ ಗೆ ಕ್ರಮವಹಿಸಬೇಕೆಂದು ಆದೇ ನೀಡಿತ್ತು.  ಆದರೆ ಉತ್ತರ ಪ್ರದೇಶ(ಯುಪಿ) ಸರ್ಕಾರ ಅದನ್ನು ನಿರಾಕರಿಸಿ ಹೈಕೋರ್ಟ್ ಆದೇಶ ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಇಂದು ಅರ್ಜಿ ಸಲ್ಲಿಸಿತ್ತು.

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಹೈಕೋರ್ಟ್‌ಗೆ ಉತ್ತರ ಪ್ರದೇಶ ಸರ್ಕಾರವು ವರದಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಇದೇ ವೇಳೆ ಹೇಳಿದೆ.

ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ಸಲಹೆ ನೀಡುವುದಕ್ಕಾಗಿ ಹಿರಿಯ ವಕೀಲ ಪಿ ಎಸ್‌ ನರಸಿಂಹ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಿಸಲಾಗಿದೆ.

ಅಲಹಾಬಾದ್ ಹೈಕೋರ್ಟ್‌ನ ಆದೇಶ ಹೀಗಿತ್ತು:

ಕೋವಿಡ್‌ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕಠಿಣ ನಿಲುವು ತಳೆದ ಅಲಾಹಾಬಾದ್‌ ಹೈಕೋರ್ಟ್‌ ರಾಜ್ಯದ ಐದು ನಗರಗಳಲ್ಲಿ ಏಪ್ರಿಲ್ 26 ರವರೆಗೆ ಲಾಕ್‌ಡೌನ್‌ ಘೋಷಿಸುವಂತೆ ಸೂಚಿಸಿತ್ತು. ಪ್ರಯಾಗ್‌ರಾಜ್‌, ಲಖನೌ, ವಾರಾಣಸಿ, ಕಾನ್ಪುರ, ಗೋರಖ್‌ಪುರಗಳಲ್ಲಿ ಲಾಕ್‌ಡೌನ್‌ ಜೊತೆಗೆ ಕಠಿಣ ನಿಯಮಗಳನ್ನು ಜಾರಿಗೆ ತರುವಂತೆ ಅದು ಆದೇಶಿಸಿತ್ತು.

ಇದನ್ನು ಓದಿ: ಮೇ 1 ರಿಂದ ಎಲ್ಲ ವಯಸ್ಕರಿಗೆ ಲಸಿಕೆಯ ಕಾರ್ಯಕ್ರಮ ಎಂದರೆ ಲಸಿಕೆಗಳ ಬೆಲೆ ಹೆಚ್ಚಿಸುವ, ರಾಜ್ಯಗಳ ಹೊರೆ ಹೆಚ್ಚಿಸುವ ಕ್ರಮವಷ್ಟೇ?

“ಸ್ಪಂದನೆಯ ಕೊರತೆಯಿಂದಾಗಿ ಸರ್ಕಾರ ತುರ್ತುಕ್ರಮಗಳನ್ನು ಕೈಗೊಳ್ಳದಿದ್ದರೆ ವೈದ್ಯಕೀಯ ವ್ಯವಸ್ಥೆ ಕುಸಿಯಬಹುದು” ಎಂದು ನ್ಯಾಯಮೂರ್ತಿಗಳಾದ ಅಜಿತ್ ಕುಮಾರ್ ಮತ್ತು ಸಿದ್ಧಾರ್ಥ ವರ್ಮಾ ಅವರಿದ್ದ ಪೀಠ ಹೇಳಿತು. ರಾಜ್ಯದ ಮುಖ್ಯಮಂತ್ರಿ ಕೂಡ ಪ್ರತ್ಯೇಕವಾಸದಲ್ಲಿದ್ದಾರೆ. ಇದೇ ವೇಳೆ ಗಣ್ಯರು ಮಾತ್ರ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

“ವಿಐಪಿಗಳ ಶಿಫಾರಸಿನ ಮೇರೆಗೆ ರೋಗಿಗಳಿಗೆ ಐಸಿಯು ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂಬುದು ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿಯಿಂದ ತಿಳಿದುಬರುತ್ತಿದೆ. ಜೀವ ಉಳಿಸುವ ಔಷಧಿ ರೆಮ್‌ಡೆಸಿವಿರ್‌ ಅನ್ನು ವಿಐಪಿ ಶಿಫಾರಸಿನ ಮೇರೆಗೆ ಮಾತ್ರ ಒದಗಿಸಲಾಗುತ್ತಿದೆ…” ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.

ಇದನ್ನು ಓದಿ: ಅಕ್ರಮವಾಗಿ ರೆಮ್‍ಡಿಸಿವಿರ್ ಮಾರಾಟ ಮಾಡುತ್ತಿದ್ದವರ ಬಂಧನ

ಲಸಿಕೆ ಕಾರ್ಯಕ್ರಮದ ಅನುಷ್ಠಾನಕ್ಕೆ ನಿರ್ದಿಷ್ಟವಾದ ಕ್ರಮಗಳನ್ನು ಕೈಗೊಳ್ಳಬೇಕು. ಸಾಧ್ಯವಾದಲ್ಲಿ ಎರಡು ವಾರಗಳ ಕಾಲ ರಾಜ್ಯಾದ್ಯಂತ ಲಾಕ್‌ಡೌನ್‌ ವಿಧಿಸುವ ಬಗ್ಗೆಯೂ ಆಲೋಚಿಸುವಂತೆ ಸರ್ಕಾರಕ್ಕೆ ಅದು ಸೂಚನೆಗಳನ್ನು ನೀಡಿತ್ತು.

ಉತ್ತರ ಪ್ರದೇಶ ಸರಕಾರದ ವಾದ:

ಉತ್ತರ ಪ್ರದೇಶ ಸರಕಾರವು ಸುಪ್ರೀಂ ಕೋರ್ಟ್‌ ನಲ್ಲಿ ಇಂದು ಸಲ್ಲಿಸಿದ ಮನವಿ “ಗೌರವಾನ್ವಿತ ವಿಭಾಗೀಯ ಪೀಠದ ಆಕ್ಷೇಪಾರ್ಹವಾದ ಆದೇಶದ ಹಿಂದಿನ ಉದ್ದೇಶವು ಶ್ಲಾಘನೀಯ ಮತ್ತು ವಂದನಾರ್ಹವಾಗಿದೆ. ಆದರೆ, ಹೈಕೋರ್ಟ್ ಈ ರೀತಿಯ ಆದೇಶ ಹೊರಡಿಸುವ ಮೂಲಕ ಕಾರ್ಯಾಂಗದ ವ್ಯಾಪ್ತಿಯನ್ನು ಅತಿಕ್ರಮಿಸಿದೆ. ಪ್ರಸ್ತುತ ಹಂತದಲ್ಲಿ ಹೈಕೋರ್ಟ್‌ ಆದೇಶವನ್ನು ಕಾರ್ಯಗತಗೊಳಿಸಿದರೆ, ರಾಜ್ಯದಲ್ಲಿ ಭೀತಿ, ಭಯ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸುವ ಸಾಧ್ಯತೆ ಇದೆ” ಎಂದು ಹೇಳಿದೆ.

ರಾಜ್ಯ ಸರಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸುಪ್ರೀಂನಲ್ಲಿ ವಾದ ಮಂಡಿಸಿದರು. ಜೊತೆಗೆ ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಯುಪಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *