ನವದೆಹಲಿ: ವ್ಯಕ್ತಿಯೊಬ್ಬ ಪ್ರಕರಣವೊಂದರಲ್ಲಿ ಕಳೆದ ಏಳು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಇನ್ನೊಂದೆಡೆ, ಪ್ರಾಸಿಕ್ಯೂಷನ್ ಸಾಕ್ಷಿಗಳಿಂದ ಹೇಳಿಕೆ ಪಡೆಯುವ ಪ್ರಕ್ರಿಯೆಯೇ ಆರಂಭವಾಗಿಲ್ಲ. ಏಳು ವರ್ಷಗಳು ಗತಿಸಿದ್ದರೂ ವಿಚಾರಣೆಯೇ ಆರಂಭವಾಗಿಲ್ಲ ಎಂಬುದನ್ನು ಅಚ್ಚರಿಯ ಸಂಗತಿ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಹಾಗೂ ಎಂ.ಎಂ.ಸುಂದ್ರೇಶ್ ಅವರಿದ್ದ ನ್ಯಾಯಪೀಠ ಪ್ರಕರಣಗಳ ವಿಚಾರಣೆಯ ಪ್ರಕ್ರಿಯೆಗಳು ದೀರ್ಘಕಾಲಕ್ಕೆ ಮುಂದಾಗದಂತೆ ಖಾತ್ರಿಪಡಿಸುವುದು ವಿಚಾರಣಾ ನ್ಯಾಯಾಲಯಗಳ ಪ್ರಮುಖ ಕರ್ತವ್ಯ ಎಂದು ವಿವರಿಸಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮೇಯರ್ ಒಬ್ಬರ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ತಪ್ಪಿಸಿಕೊಳ್ಳಲು ನೆರವಾದ ಆರೋಪಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಮೇಲಿನಂತೆ ಉಲ್ಲೇಖಿಸಿದೆ.
ಸಾಕ್ಷಿಗಳ ವಿಚಾರಣೆಯಲ್ಲಾಗುತ್ತಿರುವ ಧೀರ್ಘವಾದ ವಿಳಂಬಕ್ಕೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಪೀಠ, ಸಮಯ ಕಳೆದಂತೆ ಸಾಕ್ಷಿಗಳಿಂದ ಹೇಳಿಕೆ ಪಡೆಯುವ ಪ್ರಕ್ರಿಯೆಯಲ್ಲಿ ಸಾಕಷ್ಟು ಸಮಸ್ಯೆಗಳುಂಟಾಗುತ್ತವೆ ಎಂದು ಹೇಳಿತು.
ಅರ್ಜಿದಾರಗೆ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, ‘ಈ ಆದೇಶ ಕೈಸೇರಿದ ದಿನದಿಂದ ಒಂದು ವರ್ಷದ ಒಳಗಾಗಿ ವಿಚಾರಣಾ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿ ತೀರ್ಪು ನೀಡಬೇಕು’ ಎಂದು ನಿರ್ದೇಶನ ನೀಡಿದೆ.