ಬಿಹಾರ ವಿಧಾನಸಭಾ ಚುನಾವಣೆ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ನವದೆಹಲಿ: 2025ರ ಬಿಹಾರ ವಿಧಾನಸಭೆ ಚುನಾವಣೆಯ ಪ್ರಕ್ರಿಯೆ ಮತ್ತು ಫಲಿತಾಂಶವನ್ನು ಪ್ರಶ್ನಿಸಿ ಪ್ರಶಾಂತ್ ಕಿಶೋರ್ ನೇತೃತ್ವದ ಜನಸುರಾಜ್ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಫೆಬ್ರವರಿ 6ರಂದು ವಿಚಾರಣೆಗೆ ತೆಗೆದುಕೊಳ್ಳಲು ನಿರಾಕರಿಸಿದೆ. ಒಂದು ರಾಜಕೀಯ ಪಕ್ಷದ ಮನವಿಯ ಮೇರೆಗೆ ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ರದ್ದುಪಡಿಸುವಂತಹ ಸಾಮೂಹಿಕ (omnibus) ಆದೇಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ ಎಂದು newindianexpress ವರದಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್‌ಮಾಲ್ಯ ಬಾಗ್ಚಿ ಅವರನ್ನು ಒಳಗೊಂಡ ಪೀಠ, ತಮ್ಮ ಅಸಮಾಧಾನಗಳನ್ನು ಮುಂದಿಟ್ಟು ಜನಸುರಾಜ್ ಪಕ್ಷವು ಪಟ್ನಾ ಹೈಕೋರ್ಟ್‌ಗೆ ಮೊರೆ ಹೋಗಬೇಕು ಎಂದು ಸೂಚಿಸಿದೆ. ಇಂತಹ ವಿಷಯಗಳಲ್ಲಿ ಸುಪ್ರೀಂ ಕೋರ್ಟ್ ಮೊದಲ ಹಂತದ ನ್ಯಾಯಾಂಗ ವೇದಿಕೆಯಾಗಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಚುನಾವಣಾ ಫಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕಾರಣಕ್ಕೆ ಮಾತ್ರ ಸಂಪೂರ್ಣ ಚುನಾವಣೆಯನ್ನು ರದ್ದುಪಡಿಸುವಂತ ಪರಿಹಾರ ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಇದನ್ನೂ ಓದಿ: ಸೈಬರ್ ವಂಚನೆ ಪ್ರಕರಣ: 13 ಮಾಸ್ಟರ್ ಮೈಂಡ್‌ಗಳ ಬಂಧನ

ನವೆಂಬರ್‌ 2025ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜನಸುರಾಜ್ ಪಕ್ಷವು 238 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ, ಒಂದೂ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಬಹುತೇಕ ಅಭ್ಯರ್ಥಿಗಳು ಠೇವಣಿ ಮೊತ್ತವನ್ನೂ ಕಳೆದುಕೊಂಡಿದ್ದರು.

ತಮ್ಮ ಅರ್ಜಿಯಲ್ಲಿ, ಚುನಾವಣಾ ವೇಳಾಪಟ್ಟಿ ಘೋಷಣೆಯಾದ ನಂತರ ಬಿಹಾರ ಸರ್ಕಾರವು ಮುಖ್ಯಮಂತ್ರಿ ಮಹಿಳಾ ಉದ್ಯೋಗ ಯೋಜನೆಯಡಿ ಮಹಿಳಾ ಫಲಾನುಭವಿಗಳಿಗೆ ತಲಾ ₹10,000 ವರ್ಗಾಯಿಸಿರುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಜನಸುರಾಜ್ ಪಕ್ಷ ಆರೋಪಿಸಿತ್ತು. ಈ ರೀತಿಯ ಹಣ ವರ್ಗಾವಣೆ ಮತದಾರರನ್ನು ಪ್ರಲೋಭಿಸುವ ಕ್ರಮವಾಗಿದ್ದು, ಚುನಾವಣೆಯ ಪಾವಿತ್ರ್ಯಕ್ಕೆ ಧಕ್ಕೆ ತಂದಿದೆ ಎಂದು ಪಕ್ಷ ವಾದಿಸಿತ್ತು.

ಸಂವಿಧಾನದ 324ನೇ ವಿಧಿ ಹಾಗೂ ಜನಪ್ರತಿನಿಧಿ ಕಾಯ್ದೆಯ 123ನೇ ವಿಧಿಯಡಿ ಈ ವಿಚಾರವನ್ನು ಭ್ರಷ್ಟಾಚಾರಾತ್ಮಕ ನಡೆ (corrupt practice) ಎಂದು ಪರಿಗಣಿಸಿ ಪರಿಶೀಲಿಸಬೇಕು ಎಂದು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಪಕ್ಷವು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು.

ಇದನ್ನೂ ನೋಡಿ: ಗಾಂಧೀಜಿಯವರ ವಿಚಾರಗಳೊಂದಿಗೆ ಮುಖಾಮುಖಿ ಆಗಬೇಕಿದೆ – ಬರಗೂರು ರಾಮಚಂದ್ರಪ್ಪ Janashakthi Media

Donate Janashakthi Media