ನವದೆಹಲಿ : ಕೇಂದ್ರ ಅಂಗೀಕರಿಸಲಾದ ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಗಡಿಗಳಲ್ಲಿ ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಇಡೀ ನಗರವನ್ನು ಕತ್ತು ಹಿಸುಕಿ ಕೊಂದಿದ್ದಾರೆ ಮತ್ತು ಈಗ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದ ಒಳಗೆ ಬರಲು ಬಯಸುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ದೆಹಲಿಯ ಜಂತರ್‌ಮಂತರ್‌ನಲ್ಲಿ ಸತ್ಯಾಗ್ರಹ ನಡೆಸಲು ಅನುಮತಿಸುವಂತೆ ಕೋರಿ ಕಿಸಾನ್ ಮಹಾಪಂಚಾಯತ್ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ನೇತೃತ್ವದ ಪೀಠವು ನ್ಯಾಯಾಲಯದಲ್ಲಿ ಕೃಷಿ ಕಾಯಿದೆಗಳ ಸಿಂಧುತ್ವವನ್ನು ಪ್ರಶ್ನಿಸಿರುವಾಗ ಪ್ರತಿಭಟನೆಯನ್ನು ಮುಂದುವರೆಸುವ ಬದಲು ರೈತರು ವ್ಯವಸ್ಥೆ ಮತ್ತು ನ್ಯಾಯಾಲಯದ ಮೇಲೆ ನಂಬಿಕೆ ಇಡಬೇಕು ಎಂದಿದೆ.
“ಕಾನೂನನ್ನು ಪ್ರಶ್ನಿಸಿ ನ್ಯಾಯಾಲಯದ ಮೇಟ್ಟಿಲೇರಿದ ಮೇಲೆ ಪ್ರತಿಭಟನೆ ನಡೆಸುವ ಅಗತ್ಯವೇನಿದೆ. ನ್ಯಾಯಾಲಯಗಳ ಮೇಲೆ ನಿಮಗೆ ನಂಬಿಕೆ ಇದ್ದರೆ ಪ್ರತಿಭಟನೆ ಮಾಡುವ ಬದಲು ತುರ್ತಾಗಿ ಅವುಗಳ ವಿಚಾರಣೆಗೆ ಮುತುವರ್ಜಿ ವಹಿಸಿ” ಎಂದು ಪೀಠ ಹೇಳಿದೆ. ಪ್ರತಿಭಟನೆಯಿಂದ ಸಾಮಾನ್ಯ ಜನರಿಗೆ ಅಡಚಣೆಯಾಗುತ್ತಿರುವುದರ ಬಗ್ಗೆಯೂ ನ್ಯಾಯಾಲಯವು ವಿಚಾರಣೆಯ ವೇಳೆ ಆಕ್ಷೇಪಿಸಿತು.
ನಿಮ್ಮ ಪ್ರತಿಭಟನೆಯಿಂದ ನಮಗೆ ಯಾವುದೇ ತೊಂದರೆ ಇಲ್ಲ. ನಾವು “ಸಂತೋಷವಾಗಿದ್ದೇವೆ” ಎಂದು ಈ ಪ್ರದೇಶದ ನಿವಾಸಿಗಳಿಂದ ಅನುಮತಿ ಪಡೆಯುತ್ತಾರೆಯೇ? ಎಂದು ಕೋರ್ಟ್ ರೈತ ಸಂಘಟನೆಯ ಪರ ವಕೀಲರನ್ನು ಪ್ರಶ್ನಿಸಿತು ಮತ್ತು ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿದೆ.
ರೈತರು ಮತ್ತು ಕೃಷಿಕರ ಸಂಘಟನೆಯಾದ ‘ಕಿಸಾನ್ ಮಹಾಪಂಚಾಯತ್’ ಮತ್ತು ಅದರ ಅಧ್ಯಕ್ಷರು ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟಿಸಲು ಕನಿಷ್ಠ 200 ರೈತರು ಅಥವಾ ಪ್ರತಿಭಟನಾಕಾರರಿಗೆ ಸ್ಥಳಾವಕಾಶ ನೀಡುವಂತೆ ನಿರ್ದೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ.
ರಸ್ತೆ ತಡೆದಿರುವದು ರೈತರಲ್ಲ, ಪೊಲೀಸರು : ಕೃಷಿ ಕಾಯ್ದೆ ರದ್ದು ಮಾಡುವಂತೆ ಆಗ್ರಹಿಸಿ ರೈತರು ಕಳೆದ ಹತ್ತು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಗೆ ರೈತರು ಬಂದಾಗ ಸಂಸತ್ ಬಳಿ ಪ್ರತಿಭಟನೆ ನಡೆಸಿ, ಸರಕಾರವನ್ನು ಪ್ರಶ್ನಿಸಿ ಕೃಷಿ ಕಾಯ್ದೆ ರದ್ದು ಮಾಡಿ ಎಂದು ಆಗ್ರಹಿಸುವುದಾಗಿತ್ತು, ಆದರೆ ರೈತರು ದೆಹಲಿ ಪ್ರವೇಶಿಸದಂತೆ ತಡೆದದ್ದು ಕೇಂದ್ರ ಸರಕಾರ. ಪೊಲೀಸರ ಮೂಲಕ ಜಲಫಿರಂಗಿ, ಲಾಠೀ ಚಾರ್ಜ್, ತಡೆಗೋಡೆ ನಿರ್ಮಿಸಿ ರೈತರನ್ನು ತಡೆ ಹಿಡಿದಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹಳ್ಳ ತೋಡಿ , ರಸ್ತೆಗೆ ಮೊನಚಾದ ಮೊಳೆಗಳನ್ನು ಹೊಡೆದಿದ್ದು ಸರಕಾರ ಮತ್ತು ಪೊಲೀಸರು. ಇದರ ಪರಿಣಾಮ ರೈತರು ರಸ್ತೆಯಲ್ಲಿರುವಂತಾಗಿದೆ.
ಕೃಷಿಕಾಯ್ದೆಯನ್ನು ಎಲ್ಲಿಯೂ ಚರ್ಚೆ ನಡೆಸದೆ ಜಾರಿ ಮಾಡಲಾಗಿದೆ. ರಾಜ್ಯಗಳ ಜೊತೆಯಲ್ಲಿ ಕೇಂದ್ರ ಸರಕಾರ ಚರ್ಚೆ ನಡೆಸಿಲ್ಲ. ಕೃಷಿ ಕಾಯ್ದೆ ಅನೇಕ ಅಪಅಯಗಳನ್ನು ತಂದೊಡ್ಡಿದೆ. ರೈತರು ಇನ್ನಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗಿ ಬರಬಹುದು ಹಾಗಾಗಿ ಕೃಷಿ ಕಾಯ್ದೆ ರದ್ದು ಮಾಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಇನ್ನೂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಅರ್ಜಿದಾರರು ಸಂಯುಕ್ತ ಕಿಸಾನ್ ಮೋರ್ಚಾದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಈಗಾಗಲೇ 600 ಕ್ಕೂ ಹೆಚ್ಚುಜನ ರೈತರು ಹುತಾತ್ಮರಾಗಿದ್ದಾರೆ ಇನ್ನಾದರೂ ಕೃಷಿ ಕಾಯ್ದೆಗಳು ರದ್ದಾಗಬೇಕಿದೆ, ಅಲ್ಲಿಯವರೆಗೆ ರೈತರ ಪ್ರತಿಭಟನೆ ಮುಂದುವರೆಯಲಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಜಂಟಿ ಕಾರ್ಯದರ್ಶಿ ವಿಜೂ ಕೃಷ್ಣನ್ ಪ್ರತಿಕ್ರಿಯೆ ನೀಡಿದ್ದಾರೆ.