ನವದೆಹಲಿ: ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ವಾಹನಗಳು ಹರಿದು, ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಸುಪ್ರಿಂಕೋರ್ಟ್ ಅಷ್ಟು ದೊಡ್ಡ ಮಟ್ಟದ ಹಿಂಸಾಚಾರ ನಡೆದಿದೆ. ಆದರೆ ಈ ಬಗ್ಗೆ ಉತ್ತರ ಪ್ರದೇಶ ಸರ್ಕಾರ ತೆಗೆದುಕೊಂಡಿರುವ ಕ್ರಮ ತೃಪ್ತಿದಾಯಕವಾಗಿಲ್ಲ ಎಂದು ಹೇಳಿದೆ.
ಉತ್ತರಪ್ರದೇಶ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಲ್ವೆ ಘಟನೆಯ ಸ್ಥಿತಿಗತಿಗಳ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾಗೆ ನೋಟಿಸ್ ನೀಡಲಾಗಿದೆ. ಅವರು ನಾಳೆ ಬೆಳಗ್ಗೆ 11 ಗಂಟೆ ಹೊತ್ತಿಗೆ ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಹಾಗೊಮ್ಮೆ ಅವರು ನಾಳೆ ಬೆಳಗ್ಗೆ ಹಾಜರಾಗದಿದ್ದಲ್ಲಿ ಅವರ ಮೇಲೆ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ಪರಿಹಾರ ಹಣ ಕೊಟ್ಟರೆ ನನ್ನ ಮಗ ವಾಪಸ್ ಬರುವನೇ?: ಅಜಯ್ ಮಿಶ್ರಾ ರಾಜಿನಾಮೆ ನೀಡಲೇಬೇಕು
ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಒಟ್ಟು 8 ಮಂದಿ ಮೃತಪಟ್ಟಿದ್ದು, ಅದರಲ್ಲಿ ನಾಲ್ವರು ರೈತರಾಗಿದ್ದಾರೆ. ಈ ಪ್ರಕರಣವನ್ನು ಸುಮೊಟೊ ವಿಚಾರಣೆಗೆ ಸುಪ್ರೀಂಕೋರ್ಟ್ ಕೈಗೆತ್ತಿಕೊಂಡಿದೆ.
ನೆನ್ನೆ ನಡೆದ ವಿಚಾರಣೆ ವೇಳೆಯಲ್ಲಿ ನಾಳೆಯೊಳಗೆ (ಅಕ್ಟೋಬರ್ 8) ಘಟನೆಯ ಸಂಪೂರ್ಣ ವರದಿ ಸಲ್ಲಿಸುವಂತೆ ತಿಳಿಸಿತ್ತು. ಅದರಲ್ಲಿ ಆರೋಪಿಗಳ ಬಗ್ಗೆ ಉಲ್ಲೇಖವಿರಬೇಕು ಎಂದೂ ತಿಳಿಸಿದರು. ಇಂದು ವಿಚಾರಣೆ ಪ್ರಾರಂಭಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠ, ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಯುಪಿ ಸರ್ಕಾರ ತೆಗೆದುಕೊಂಡ ಕ್ರಮ ಸರಿಯಾಗಿಲ್ಲ. ಆರೋಪಿಗಳನ್ನು ನೀವು ನಡೆಸಿಕೊಳ್ಳುವ ರೀತಿ ಇದೇನಾ? ಇನ್ನೂ ಬಂಧನವಾಗಿಲ್ಲ ಯಾಕೆ? ಎಂದು ಪ್ರಶ್ನಿಸಿದೆ.
ಆಶೀಶ್ ಮಿಶ್ರಾರಿಗೆ ಸಮನ್ಸ್ ನೀಡಲಾಗಿದೆ ಎಂಬ ವಿಚಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ “ನೀವು ಯಾವ ರೀತಿಯ ಸಂದೇಶವನ್ನು ನೀಡುತ್ತಿದ್ದೀರಿ? ಸಾಮಾನ್ಯ ಪ್ರಕರಣಗಳಲ್ಲೂ ಪೊಲೀಸರು ಕೂಡಲೇ ತೆರಳಿ ಆರೋಪಿಗಳನ್ನು ಬಂಧಿಸುವುದಿಲ್ಲವೇ? ಯಾವ ರೀತಿ ಕ್ರಮ ಕೈಗೊಳ್ಳಬೇಕಾಗಿತ್ತೋ, ಅದು ನಡೆದಿಲ್ಲ. ಕೇವಲ ಮಾತಿನಲ್ಲಿ ಮಾತ್ರ ನಿರತರಾಗಿ ಯಾವುದೇ ಕ್ರಿಯೆಗಳನ್ನು ಕೈಗೊಳ್ಳುತ್ತಿಲ್ಲ ಎಂದೆನಿಸುತ್ತಿದೆ” ಎಂದು ಅವರು ಆಕ್ರೋಶಭರಿತರಾಗಿ ಹೇಳಿದ್ದಾರೆ.
ಇದನ್ನು ಓದಿ: ಹಿಂಸಾಚಾರ ಪ್ರಕರಣ: ಸಂಪೂರ್ಣ ಸ್ಥಿತಿಗತಿಯ ವರದಿ ಸಲ್ಲಿಸುವಂತೆ ಯುಪಿ ಸರ್ಕಾರಕ್ಕೆ ಸುಪ್ರೀಂ ಸೂಚನೆ
ಹಿರಿಯ ವಕೀಲ ಹರೀಶ್ ಸಾಲ್ವೆ ಪ್ರಕರಣಕ್ಕೆ ಸಂಬಂಧಪಟ್ಟ ಆಶೀಶ್ ಮಿಶ್ರಾ ಹಾಜರಾಗದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಾನು ಈ ಬಗ್ಗೆ ರಾಜ್ಯ ಸರ್ಕಾರದ ಪೊಲೀಸ್ ಉನ್ನತ ಅಧಿಕಾರಿಗಳೊಟ್ಟಿಗೆ ಮಾತನಾಡುತ್ತೇನೆ. ಆರೋಪಿ ವಿರುದ್ಧದ ಸಾಕ್ಷಿ ಸಂರಕ್ಷಿಸುವ ಕೆಲಸವನ್ನೂ ಮಾಡಲಾಗುವುದು. ಹಿಂಸಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಪರ್ಯಾಯ ತನಿಖಾ ಏಜೆನ್ಸಿ ಮೂಲಕ ತನಿಖೆ ನಡೆಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಕೋರ್ಟ್ಗೆ ತಿಳಿಸಿದರು.
ಎಸ್‌ಐಟಿ ಬಗ್ಗೆ ಕೋರ್ಟ್ ಅಸಮಾಧಾನ
ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೋ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮೌಖಿಕವಾಗಿ ಸೂಚಿಸಿದೆ. ಘಟನೆಯ ತನಿಖೆ ನಡೆಸಲು ವಿಶೇಷ ತನಿಖಾತಂಡ (ಎಸ್‌ಐಟಿ) ರಚಿಸಿದ್ದರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದೆ. ಈ ಎಸ್ಐಟಿಯಲ್ಲಿ ಇರುವವರೆಲ್ಲ ಸ್ಥಳೀಯ ಅಧಿಕಾರಿಗಳೇ ಆಗಿದ್ದಾರೆ ಎಂಬುದನ್ನು ಒತ್ತಿ ಹೇಳಿದೆ. ಹಾಗೇ, ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ರಾಜ್ಯಸರ್ಕಾರ ಯೋಚನೆ ನಡೆಸಿದೆಯಾ ಎಂಬ ಪ್ರಶ್ನೆಯನ್ನೂ ಕೇಳಿದೆ. ಇನ್ನು ಮುಂದಿನ ವಿಚಾರಣೆಯನ್ನು ಅಕ್ಟೋಬರ್ 20ರಂದು ನಡೆಸುವುದಾಗಿ ಹೇಳಿದೆ.