ನವದೆಹಲಿ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆ ಕಾಯ್ದೆಯಡಿ ಬಂಧನಕ್ಕೆ ಒಳಗಾಗಿರುವ 83 ವರ್ಷದ ಕ್ರಾಂತಿಕಾರಿ ಬರಹಗಾರ, ಕವಿ ಪಿ.ವರವರ ರಾವ್ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಸಂಪೂರ್ಣವಾಗಿ ವೈದ್ಯಕೀಯ ಕಾರಣಗಳಿಂದ ಜಾಮೀನು ಮಂಜೂರು ಮಾಡಲಾಗಿದೆ. ಜಾಮೀನು ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ವರವರ ರಾವ್ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯು ಯು ಲಲಿತ್ ನೇತೃತ್ವದ ನ್ಯಾಯಪೀಠ ಜಾಮೀನು ಆದೇಶ ಹೊರಡಿಸಿದೆ.
ವರವರ ರಾವ್ ಅವರ ವಯಸ್ಸು, ಅವರ ವೈದ್ಯಕೀಯ ಸ್ಥಿತಿಗಳು ಮತ್ತು ಅವರು ಕಳೆದ ಎರಡೂವರೆ ವರ್ಷಗಳ ಜೈಲುವಾಸ ಅವಧಿಯನ್ನು ನ್ಯಾಯಪೀಠವು ಗಣನೆಗೆ ತೆಗೆದುಕೊಂಡಿತು. ಈ ಪ್ರಕರಣದಲ್ಲಿ ವಿಚಾರಣೆ ಇನ್ನೂ ಪ್ರಾರಂಭವಾಗಿಲ್ಲ ಮತ್ತು ಆರೋಪಪಟ್ಟಿ (ಚಾರ್ಜ್ಶೀಟ್) ಸಲ್ಲಿಸಲಾಗಿದ್ದರೂ ಆರೋಪಗಳನ್ನು ರೂಪಿಸಲಾಗಿಲ್ಲ ಎಂದು ನ್ಯಾಯಮೂರ್ತಿಗಳು ಗಮನದಲ್ಲಿ ಇಟ್ಟುಕೊಂಡು ಜಾಮೀನು ಮಂಜೂರು ಮಾಡಿದ್ದಾರೆ.
ಈ ಆದೇಶ ವರವರ ರಾವ್ ಅವರಿಗೆ ಮಾತ್ರ ಸಂಬಂಧಪಟ್ಟಿದ್ದು, ಈ ಪ್ರಕರಣದಲ್ಲಿನ ಇತರ ಆರೋಪಿಗಳಿಗೆ ಇದು ಅನ್ವಯಿಸಲಾಗದು ಎಂದಿರುವ ಸರ್ವೋಚ್ಚ ನ್ಯಾಯಾಲಯ, ಮುಂಬೈ ಬಿಟ್ಟು ಹೋಗದಂತೆ ವರವರ ರಾವ್ ಅವರಿಗೆ ನಿರ್ದೇಶಿಸಿದೆ.
2017ರಲ್ಲಿ ಪುಣೆಯಲ್ಲಿ ನಡೆದ ಎಲ್ಗಾರ್ ಪರಿಷತ್ ಸಮಾವೇಶದಲ್ಲಿ ವರವರ ರಾವ್ ಪ್ರಚೋದನಕಾರಿ ಭಾಷಣ ಮಾಡಿದ್ದರು. ಇದರಿಂದ ಮರುದಿನ ಪಶ್ಚಿಮ ಮಹಾರಾಷ್ಟ್ರ ನಗರದ ಹೊರವಲಯದಲ್ಲಿರುವ ಭೀಮಾ ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ಹಿಂಸಾಚಾರ ಉಂಟಾಯಿತು ಎಂದು ಪೊಲೀಸರು ಹೇಳಿದ್ದಾರೆ.
2018ರ ಆಗಸ್ಟ್ 28ರಂದು ವರವರ ರಾವ್ ಅವರನ್ನು ಹೈದರಾಬಾದ್ನಲ್ಲಿರುವ ಅವರ ನಿವಾಸದಿಂದ ಬಂಧಿಸಲಾಗಿತ್ತು.