ಸುಪ್ರೀಂ ಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಬಿ.ಆರ್. ಗವಾಯಿ ಆಯ್ಕೆ

ನವದೆಹಳಿ: ಮೇ 14ರಂದು ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಬಿ.ಆರ್. ಗವಾಯಿ ಪ್ರಮಾಣ ವಚನ ಸ್ವೀಕರಿಸಲಿದ್ದೂ, ಈಗಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮೇ 13ರಂದು ನಿವೃತ್ತರಾಗಲಿದ್ದಾರೆ. ಹೀಗಾಗಿ ಅವರು ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹೆಸರನ್ನು ಶಿಫಾರಸು ಮಾಡಿದ್ದರು.

ನ್ಯಾ. ಭೂಷಣ್‌ ರಾಮಕೃಷ್ಣ ಗವಾಯಿ ಗವಾಯಿ (ಬಿ.ಆರ್‌.ಗವಾಯಿ) ಮೇ 14ರಂದು ಸರ್ವೋಚ್ಚ ನ್ಯಾಯಾಲಯದ 52ನೇ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮೇ 14ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ. ಗವಾಯಿ ಅವರು 6 ತಿಂಗಳ ಕಾಲ ಸಿಜೆಐ ಆಗಿರಲಿದ್ದಾರೆ. ನವೆಂಬರ್‌ನಲ್ಲಿ ಇವರು ನಿವೃತ್ತರಾಗಲಿದ್ದಾರೆ. ಸಂಜೀವ್ ಖನ್ನಾ ಅವರು 2024ರಲ್ಲಿ ನೇಮಕಗೊಂಡಿದ್ದರು. ಇವರ ಕಾರ್ಯಾವಧಿಯೂ 6 ತಿಂಗಳು.

ವಿಶೇಷ ಎಂದರೆ ಗವಾಯಿ ಈ ಹುದ್ದೆಗೆ ಏರಿದ 2ನೇ ದಲಿತ ಸಮುದಾಯದವರು ಎನಿಸಿಕೊಂಡಿದ್ದಾರೆ. 2007ರ ಜ. 14ರಿಂದ 2010ರ ತನಕ ಮುಖ್ಯ ನ್ಯಾಯಮೂರ್ತಿಯಾಗಿದ್ದ ಕೆ.ಜಿ.ಬಾಲಕೃಷ್ಣನ್‌ ಈ ಹುದ್ದೆಗೇರಿದ ಮೊದಲ ದಲಿತ ಸಮುದಾಯದವರು.

ಇದನ್ನೂ ಓದಿ: ಅಕ್ರಮ ಗಣಿಗಾರಿಕೆ: ಉರುಳಿ ಬಿದ್ದ ಬಂಡೆಗಳು; ಕಾರ್ಮಿಕರು ಸಿಲುಕಿರುವ ಶಂಕೆ

ಬಿ.ಆರ್.ಗವಾಯಿ ಅವರ ಹಿನ್ನೆಲೆ

ಬಿ.ಆರ್‌.ಗವಾಯಿ ಅವರು 1960ರ ನ. 24ರಂದು ಮಹಾರಾಷ್ಟ್ರದ ಅಮರಾವತಿಯಲ್ಲಿ ಜನಿಸಿದರು. 1985ರಲ್ಲಿ ಅವರು ವಕೀಲರಾಗಿ ತಮ್ಮ ಕಾನೂನು ಸೇವೆ ಆರಂಭಿಸಿದರು. ಮಾಜಿ ಅಡ್ವೊಕೇಟ್ ಜನರಲ್ ಮತ್ತು ಮಹಾರಾಷ್ಟ್ರ ಹೈಕೋರ್ಟ್ ನ್ಯಾಯಾಧೀಶ ಬ್ಯಾರಿಸ್ಟರ್ ರಾಜಾ ಭೋಂಸ್ಲೆ ಅವರೊಂದಿಗೆ ವೃತ್ತಿ ಜೀವನ ಶುರು ಮಾಡಿದರು. 1987ರಿಂದ 1990ರವರೆಗೆ ಬಾಂಬೆ ಹೈಕೋರ್ಟ್‌ನಲ್ಲಿ ಸ್ವತಂತ್ರವಾಗಿ ಅಭ್ಯಾಸ ನಡೆಸಿದರು.

2005ರ ನ. 12ರಂದು ಇವರನ್ನು ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಯಿತು. ನಂತರ ಅವರು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದರು. ಅಂದಿನಿಂದ, ಸುಪ್ರೀಂ ಕೋರ್ಟ್‌ನ ಹಲವಾರು ಸಾಂವಿಧಾನಿಕ ಪೀಠಗಳ ಭಾಗವಾಗಿ ಹಲವು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ.

ಗವಾಯಿ 2003ರಲ್ಲಿ ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು. ಜತೆಗೆ ನಾಗಪುರ, ಔರಂಗಾಬಾದ್‌, ಪಣಜಿ ಹೈಕೋರ್ಟ್‌ಗಳಲ್ಲಿಯೂ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದರು. ಅವರು 2005ರಲ್ಲಿ ಖಾಯಂ ನ್ಯಾಯಾಧೀಶರಾಗಿ ಮತ್ತು 2019ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ಪಡೆದರು.

ಹಲವು ಮಹತ್ವದ ಪ್ರಕರಣಗಳಲ್ಲಿ ತೀರ್ಪು

ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ಅನ್ನು ರದ್ದುಗೊಳಿಸುವ ಕೇಂದ್ರದ 2019ರ ನಿರ್ಧಾರವನ್ನು ಎತ್ತಿಹಿಡಿದ ಐವರು ನ್ಯಾಯಾಧೀಶರ ಪೀಠದಲ್ಲಿ ಇವರೂ ಇದ್ದರು ಎನ್ನುವುದು ವಿಶೇಷ.

ಅಲ್ಲದೆ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದ್ದ ಐವರು ನ್ಯಾಯಮೂರ್ತಿಗಳ ಪೀಠದಲ್ಲಿಯೂ ಇದ್ದರು. ಕೇಂದ್ರ ಸರ್ಕಾರ 2016ರಲ್ಲಿ ತೆರೆದುಕೊಂಡಿದ್ದ ನೋಟು ಅಮಾನ್ಯೀಕರಣ ತೀರ್ಮಾನವನ್ನು ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್‌ನ ಪೀಠದ ಭಾಗವೂ ಆಗಿದ್ದರು.

ಇದನ್ನೂ ನೋಡಿ: ಅತ್ಯಾಚಾರ- ಕೊಲೆ ಹೇಯ ಕೃತ್ಯ ಆದರೆ ಎನ್ಕೌಂಟರ್ ಪರಿಹಾರವೇ???

Donate Janashakthi Media

Leave a Reply

Your email address will not be published. Required fields are marked *