ನವದೆಹಲಿ: ಕುರಾನ್‌ನಲ್ಲಿ ಆಯ್ದ ಪಂಕ್ತಿಗಳು ಉಗ್ರವಾದ ಪ್ರಚಾರ ಮಾಡುವುದಲ್ಲದೇ ನೆಲದ ಕಾನೂನಿಗೆ ವಿರುದ್ಧವಾಗಿವಾಗಿದೆ ಎಂದು ಅದರಲ್ಲಿ ಕೆಲವು ಪಂಕ್ತಿಗಳನ್ನು ತೆಗೆದು ಹಾಕಬೇಕೆಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು (ಪಿಐಎಲ್) ಇಂದು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸೀಮ್ ರಿಜ್ವಿ ಈ ಅರ್ಜಿ ಸಲ್ಲಿಸಿದ್ದರು. ‘ಈ ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ. ಇದೊಂದು ಕ್ಷುಲ್ಲಕ ವಿಷಯ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದನ್ನು ಓದಿ : 6ನೇ ದಿನಕ್ಕೆ ಕಾಲಿಟ್ಟ ಸಾರಿಗೆ ಮುಷ್ಕರ , ಇಂದು ತಟ್ಟೆ ಲೋಟ ಬಾರಿಸಿ ಚಳುವಳಿ
ಸಯದ್ ವಸೀಮ್ ರಿಜ್ವಿ ವರ್ಸಸ್ ಭಾರತ ಸರ್ಕಾರ ಎಂಬುದರ ನಡುವಿನ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್, ಬಿ.ಆರ್. ಗವಾಯಿ ಮತ್ತು ಹೃಷಿಕೇಶ್ ರಾಯ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಅರ್ಜಿಯನ್ನು ತಿರಸ್ಕರಿಸಿದೆ ಮತ್ತು ಅರ್ಜಿದಾರರಿಗೆ 50,000 ರೂಪಾಯಿ ದಂಡವನ್ನೂ ವಿಧಿಸಿದೆ.
ಕುರಾನ್‌ನಲ್ಲಿ ಇರುವ ಕೆಲವು ಪಂಕ್ತಿಗಳು ದೇಶದ ಸಾರ್ವಭೌಮತೆ, ಸಮಗ್ರತೆ ಮತ್ತು ಏಕತೆಗೆ ಧಕ್ಕೆ ಉಂಟು ಮಾಡುವಂತಿವೆ ಎಂದು ರಿಜ್ವಿ ಮನವಿಯಲ್ಲಿ ತಿಳಿಸಿದ್ದರು. ಅಲ್ಲದೇ, ಆಕ್ಷೇಪಾರ್ಹವಾದ ಪಂಕ್ತಿಗಳು ಅಸಾಂವಿಧಾನಿಕ, ಪರಿಣಾಮರಹಿತ ಮತ್ತು ಕ್ರಿಯಾರಹಿತ ಎಂದು ಘೋಷಿಸುವಂತೆ ಕೋರಿದ್ದರು.
ಇದನ್ನು ಓದಿ: 10 ವರ್ಷದ ಸೇವೆ ಮಣ್ಣುಮಾಡಿದ ದುಷ್ಕರ್ಮಿಗಳು: 11 ಸಾವಿರ ಪುಸ್ತಕಗಳು ಬೆಂಕಿಗೆ ಆಹುತಿ
ಅರ್ಜಿಗೆ ಸಂಬಂಧಿಸಿದಂತೆ ವಿಷಯ ತಜ್ಞರಿಂದ ಅಭಿಪ್ರಾಯ ಸಂಗ್ರಹಿಸಲು ಧಾರ್ಮಿಕ ತಜ್ಞರ ಸಮಿತಿ ರಚಿಸುವ ಕುರಿತು ನಿರ್ದೇಶನ ನೀಡುವಂತೆಯೂ ಮನವಿಯಲ್ಲಿ ಕೋರಲಾಗಿತ್ತು. ಅಖಿಲ ಭಾರತ ಶಿಯಾ ಯತೀಮ್ ಖಾನಾ ಅಧ್ಯಕ್ಷರೂ ಆದ ರಿಜ್ವಿ ಅವರು ಕುರಾನ್‌ನಲ್ಲಿ ಬರೆಯಲಾಗಿರುವ ದೈವ ಅಲ್ಲಾನ ಕೆಲವು ಸಂದೇಶಗಳು ನಕಾರಾತ್ಮಕವಾಗಿದ್ದು, ದೌರ್ಜನ್ಯ ಮತ್ತು ದ್ವೇಷಕ್ಕೆ ಇಂಬು ನೀಡುವಂತಿವೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದರು.
ಕುರಾನ್‌ನ ಪಂಕ್ತಿಯನ್ನು ವ್ಯಾಖ್ಯಾನಿಸುವ ಮೂಲಕ ಇಡೀ ಪ್ರಪಂಚಾದ್ಯಂತ ಮುಸ್ಲಿಮ್ ಸಮುದಾಯವನ್ನು ದೂಷಿಸಲಾಗುತ್ತಿದೆ. ಪವಿತ್ರ ಗ್ರಂಥವಾದ ಕುರಾನ್ ಸಾಧಿಸಲು ಉದ್ದೇಶಿಸಿರುವುದಕ್ಕೂ ಇದಕ್ಕೂ ಯಾವುದೇ ಆಧಾರ ಅಥವಾ ಸಂಬಂಧ ಇಲ್ಲ ಎಂದು ಮನವಿ ಮಾಡಿಕೊಂಡಿದ್ದರು.
ರಿಜ್ವಿ ಸಲ್ಲಿಸಿದ್ದ ಅರ್ಜಿಯನ್ನು ಹಲವು ಮುಸ್ಲಿಂ ಸಂಘಟನೆಗಳ ಪದಾಧಿಕಾರಿಗಳು ಮತ್ತು ಮೌಲ್ವಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಭಟನೆಗಳು ಸಹ ನಡೆಸಿದ್ದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ರಿಜ್ವಿ ಅವರ ವಿರುದ್ಧ ಕಳೆದ ತಿಂಗಳು ಬರೇಲಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.