ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಕುಮಾರ್ ಕೊಲೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬೈರತಿ ಬಸವರಾಜ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ರ ನ್ಯಾಯಪೀಠ ವಜಾಗೊಳಿಸಿದೆ. ಕೊಲೆ
ಇದಕ್ಕೂ ಮುನ್ನ, ಕರ್ನಾಟಕ ಹೈಕೋರ್ಟ್ ಕೂಡಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಬಂಧನ ಭೀತಿ ಎದುರಿಸುತ್ತಿರುವ ಕೆ.ಆರ್.ಪುರ ಶಾಸಕರಾದ ಬೈರತಿ ಬಸವರಾಜ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಬೈರತಿ ಬಸವರಾಜ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ, “ಇದೊಂದು ಸಿವಿಲ್ ಪ್ರಕರಣವಾಗಿದ್ದು, ಇದಕ್ಕೂ ನನ್ನ ಕಕ್ಷಿದಾರನಿಗೂ ಯಾವುದೇ ಸಂಬಂಧವಿಲ್ಲ. ನನ್ನ ಕಕ್ಷಿದಾರನನ್ನು ಈ ಪ್ರಕರಣದಲ್ಲಿ ಅನಗತ್ಯವಾಗಿ ಎಳೆದು ತರಲಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: ಬಿಕ್ಲು ಶಿವು ಕೊಲೆ ಪ್ರಕರಣ: ಬೈರತಿ ಬಸವರಾಜ ಗೆ ಜಾಮೀನು ನೀಡಲು ಮತ್ತೆ ನಿರಾಕರಿಸಿದ ಹೈಕೋರ್ಟ್
ಇದಕ್ಕೆ ಪ್ರತಿಯಾಗಿ, “ಭೂ ಮಾಫಿಯಾ ರಾಜಕೀಯ ಶಕ್ತಿಯ ಮೇಲೆ ನಡೆಯುತ್ತಿದೆಯಲ್ಲವೆ?” ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು.
“ನನ್ನ ಕಕ್ಷಿದಾರರು ವಿರೋಧ ಪಕ್ಷದ ಶಾಸಕರಾಗಿದ್ದು, ಅವರ ಪಕ್ಷ ಅಧಿಕಾರದಲ್ಲಿಲ್ಲ” ಎಂದು ಬೈರತಿ ಬಸವರಾಜ್ ಪರ ವಕೀಲರು ಪ್ರತಿಕ್ರಿಯಿಸಿದರು. ಬಳಿಕ, ನಿಯಮಿತ ಜಾಮೀನು ಅರ್ಜಿ ಸಲ್ಲಿಸುವಂತೆ ಬೈರತಿ ಬಸವರಾಜ್ ಪರ ವಕೀಲರಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತು.
“ಬೈರತಿ ಬಸವರಾಜ್ ಮಹಾರಾಷ್ಟ್ರದ ತಾರಾ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿರುವ ಮಾಹಿತಿ ನಮಗೆ ದೊರೆತಿದೆ. ವಿಶೇಷ ತಂಡಗಳು ಅಲ್ಲಿಗೆ ತೆರಳಿದ್ದು, ಅವರು ವಿದೇಶಕ್ಕೆ ಪರಾರಿಯಾಗದಂತೆ ತಡೆಯಲು ಲುಕ್ ಔಟ್ ನೋಟಿಸ್ ಅನ್ನೂ ಜಾರಿಗೊಳಿಸಲಾಗಿದೆ” ಎಂದು ಸಿಐಡಿ ಮೂಲಗಳು ತಿಳಿಸಿವೆ.
ಕಳೆದ ಡಿಸೆಂಬರ್ ತಿಂಗಳಲ್ಲೂ ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಕೋರಿ ಕರ್ನಾಟಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆಗಲೂ ಹೈಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಅವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲು ಸಿಐಡಿ ಪೊಲೀಸರು ಸಿದ್ಧತೆ ನಡೆಸಿದ್ದರು. ಆ ಸಂದರ್ಭದಲ್ಲಿ ಅವರು ತಲೆಮರೆಸಿಕೊಂಡಿದ್ದರು.
ಇದನ್ನೂ ನೋಡಿ: ಯುಡಿಆರ್‌ನಲ್ಲಿ ಹೂತ ಸತ್ಯಗಳು, ಎಫ್‌ಐಆರ್‌ನಲ್ಲಿ ಹೊರಬರಲಿವೆಯೇ? Janashakthi Media
