ನವದೆಹಲಿ: ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುವ ಕೊಲಿಜಿಯಂ ವ್ಯವಸ್ಥೆ ಕುರಿತು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ನೀಡಿದ್ದ ಹೇಳಿಕೆಗೆ ಸುಪ್ರೀಂ ಕೋರ್ಟ್ ನ್ಯಾಯಪೀಠ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದೆ.
ಕೊಲಿಜಿಯಂ ಮಾಡಿದ ಶಿಫಾರಸ್ಸುಗಳನ್ನು ಜಾರಿಗೊಳಿಸುವ ಕುರಿತಂತೆ ಖಾತರಿಪಡಿಸಿಕೊಳ್ಳುವ ಸಲುವಾಗಿ ನ್ಯಾಯಿಕ ಆದೇಶಗಳನ್ನು ನೀಡಬೇಕಾಗಬಹುದು ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎ ಎಸ್ ಓಕಾ ಅವರ ನೇತೃತ್ವದ ನ್ಯಾಯಪೀಠ ಸರ್ಕಾರಕ್ಕೆ ಎಚ್ಚರಿಸಿದೆ.
ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ(ಎನ್‌ಜೆಎಸಿ)ದ ಬಗ್ಗೆ ಅಸಮಾಧಾನ ಇದೆಯೇ? ಆದ್ದರಿಂದಲೇ ಶಿಫಾರಸು ಮಾಡಿದ ಹೆಸರುಗಳನ್ನು ತಡೆಹಿಡಿಯಲಾಗಿದೆಯೇ? ಎಂದು ಪ್ರಶ್ನಿಸಿರುವ ನ್ಯಾಯಪೀಠ, ಉನ್ನತ ಸ್ಥಾನದಲ್ಲಿರುವ ಯಾರಾದರೂ ಹಾಗೆ ಹೇಳಿದಾಗ… ಅದು ಆಗಬಾರದಿತ್ತು…” ಎಂದು ಒಂದು ಸಲ ಶಿಫಾರಸು ಮಾಡಿದ ಹೆಸರುಗಳನ್ನು ವಿಳಂಬವಿಲ್ಲದೆ ಪೂರ್ಣಗೊಳಿಸಬೇಕು. ಕೊಲಿಜಿಯಂ ಶಿಫಾರಸುಗಳಿಗೆ ಸರ್ಕಾರ ಆಕ್ಷೇಪಿಸಬಹುದಾದರೂ ತನ್ನ ಅತೃಪ್ತಿ ಏನೆಂದು ತಿಳಿಸದೆ ಕೇವಲ ಹೆಸರುಗಳನ್ನು ತಡೆಹಿಡಿಯುವಂತಿಲ್ಲ ಎಂದು ನ್ಯಾಯಪೀಠ ಒತ್ತಿ ಹೇಳಿದೆ.
ಕಾನೂನು ಸಚಿವ ಕಿರಣ್ ರಿಜಿಜು ಟಿವಿ ಚಾನೆಲ್ ಸಂದರ್ಶನವೊಂದರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ನೇಮಕ ಮಾಡುವಲ್ಲಿ ಸರ್ಕಾರ ಹೆಚ್ಚಿನ ಅಧಿಕಾರವನ್ನು ಹೊಂದಿಲ್ಲವೆಂದು ಅಸಮಾಧಾನವನ್ನು ವ್ಯಕ್ತಪಡಿಸಿ ಕೊಲಿಜಿಯಂ ವ್ಯವಸ್ಥೆಯು ಸಂವಿಧಾನಕ್ಕೆ “ಅನ್ಯ” ಎಂದು ನ್ಯಾಯಮೂರ್ತಿಗಳ ನೇಮಕಾತಿ ಕಾರ್ಯವಿಧಾನವನ್ನು ಟೀಕಿಸಿದ್ದರು.
“ದಯವಿಟ್ಟು ಇದನ್ನು ಪರಿಹರಿಸಿ ಮತ್ತು ಈ ವಿಷಯದಲ್ಲಿ ನ್ಯಾಯಾಂಗ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಬೇಡಿ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೇಂದ್ರದ ಪರವಾಗಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ‘ಕೆಲವೊಮ್ಮೆ ಮಾಧ್ಯಮ ವರದಿಗಳು ತಪ್ಪಾಗಿರುತ್ತವೆ’ ಎಂದು ಹೇಳಿದರು.
ಅಟಾರ್ನಿ ಜನರಲ್ ಅವರೇ, ನಾನು ಎಲ್ಲಾ ಪತ್ರಿಕಾ ವರದಿಗಳನ್ನು ನಿರ್ಲಕ್ಷಿಸಿದ್ದೇನೆ. ಆದರೆ ಇದು ಸಂದರ್ಶನವೊಂದರಲ್ಲಿ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಹೇಳಿದ್ದು. ನಾನು ಬೇರೆ ಏನನ್ನೂ ಹೇಳುತ್ತಿಲ್ಲ. ನಾವು ಮಾಡಬೇಕಾದರೆ, ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ನ್ಯಾಯಮೂರ್ತಿ ಕೌಲ್ ಅವರು ಆರ್ ವೆಂಕಟರಮಣಿ ಅವರಿಗೆ ಹೇಳಿದರು.
ಬೆಂಗಳೂರಿನ ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ನೇಮಕಾತಿಗೆ ಶಿಫಾರಸು ಮಾಡಲಾದ ಹೆಸರುಗಳನ್ನು ಅಂಗೀಕರಿಸುವಲ್ಲಿನ ಕೇಂದ್ರದ ವೈಫಲ್ಯ ಎರಡನೇ ನ್ಯಾಯಮೂರ್ತಿಗಳ ಪ್ರಕರಣದಲ್ಲಿ ನೀಡಿದ ತೀರ್ಪಿಗೆ ನೇರ ವ್ಯತಿರಿಕ್ತವಾಗಿದೆ ಎಂದು ಅದು ಹೇಳಿದೆ.
ಪ್ರಕರಣವನ್ನು ಪರಿಶೀಲಿಸುವುದಾಗಿ ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್ ಅವರು ಭರವಸೆ ನೀಡಿದ ನಂತರ ನ್ಯಾಯಾಲಯ ವಿಚಾರಣೆಯನ್ನು ಡಿಸೆಂಬರ್ 8ಕ್ಕೆ ಮುಂದೂಡಿತು.