ದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸ್ಥಾನಕ್ಕೆ ಸುಪ್ರೀಂ ಕೋರ್ಟ್ನ ಹಾಲಿ ಮುಖ್ಯ ನ್ಯಾಯಾಧೀಶರಾದ ಚೀಫ್ ಜಸ್ಟೀಸ್ ಎನ್ ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ 9 ಜನರ ಹೆಸರನ್ನು ಶಿಫಾರಸ್ಸು ಮಾಡಿದೆ. 9 ಜನರಲ್ಲಿ ಕರ್ನಾಟಕದ ಹಿರಿಯ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ಹೆಸರನ್ನು ಸಹ ಶಿಫಾರಸ್ಸು ಮಾಡಲಾಗಿದೆ.
ಬಿ.ವಿ.ನಾಗರತ್ನ ಅವರು ಕರ್ನಾಟಕ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ. 1987ರಲ್ಲಿ ಬೆಂಗಳೂರಿನಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಿದ ಬಿ.ವಿ.ನಾಗರತ್ನ ಅವರು 2008ರ ಫೆಬ್ರವರಿಯಲ್ಲಿ ಕರ್ನಾಟಕ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಯಿತು. ನಂತರದ ಎರಡು ವರ್ಷಗಳು ಆದಮೇಲೆ ಅವರಿಗೆ ನ್ಯಾಯಮೂರ್ತಿ ಸ್ಥಾನ ಕಾಯಂ ಮಾಡಲಾಯಿತು.
ಇದನ್ನು ಓದಿ: ʻಸಂಸತ್ತು ಬೇಸರ ಮೂಡಿಸುವ ಪರಿಸ್ಥಿತಿಯಲ್ಲಿದೆʼ : ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ
ಇವರ ತಂದೆ ಇ ಎಸ್ ವೆಂಕಟರಾಮಯ್ಯ ಅವರು 1989ರಲ್ಲಿ ಅರು ತಿಂಗಳ ಕಾಲ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದರು. ನಾಗರತ್ನ ಅವರು ಸುಪ್ರೀಂ ಕೋರ್ಟ್ಗೆ ನೇಮಕಗೊಂಡರೆ, 2027ರಲ್ಲಿ ಒಂದು ತಿಂಗಳ ಅವಧಿಗೆ ಮಹಿಳಾ ಮುಖ್ಯ ನ್ಯಾಯಮೂರ್ತಿತಯಾಗಿ ಸೇವೆ ಸಲ್ಲಿಸುವ ಸಾಧ್ಯತೆಯಿದೆ.
ನಾಗರತ್ನ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶೆಯಾಗಿ ನೇಮಕಗೊಂಡರೆ, ಭಾರತಕ್ಕೆ ಮಹಿಳಾ ಸುಪ್ರೀಂ ನ್ಯಾಯಾಧೀಶೆ ಬೇಕೆಂಬ ಬಹುದಿನದ ಬೇಡಿಕೆ ಈಡೇರಿದಂತಾಗುತ್ತದೆ.
ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿರುವ ಇತರರ ವಿವರ ಹೀಗಿವೆ: ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಎಸ್.ಓಕಾ, ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್, ಸಿಕ್ಕಿಂ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜೆ.ಕೆ.ಮಹೇಶ್ವರಿ, ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿ ಸಿ.ಟಿ.ರವಿಕುಮಾರ್, ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ಎಂ.ಸುಂದರೇಶ್ ಹಾಗೂ ಹಿರಿಯ ಅಡ್ವೊಕೇಟ್ ಪಿ.ಸಿ.ನರಸಿಂಹ ಹೆಸರುಗಳನ್ನು ಶಿಫಾರಸ್ಸು ಮಾಡಲಾಗಿದೆ.
ಇದನ್ನು ಓದಿ: ಸುಪ್ರೀಂ ಕೋರ್ಟ್: ದೇಶದ್ರೋಹ ಕಾನೂನಿನ ವ್ಯಾಖ್ಯಾನ ಪರಿಶೀಲನೆಯ ಅಗತ್ಯವಿದೆ
ಐವರು ಸದಸ್ಯರ ಕೊಲಿಜಿಯಂನಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹಾಗೂ ಹಾಲಿ ನ್ಯಾಯಮೂರ್ತಿಗಳಾದ ಯು ಯು ಲಲಿತ್, ಎ ಎಂ ಖಾನ್ವಿಲ್ಕರ್, ಡಿವೈ ಚಂದ್ರಚೂಡ್ ಮತ್ತು ಎಲ್ ನಾಗೇಶ್ವರ ರಾವ್ ಇದ್ದಾರೆ.
ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಲ್ಲಿ ಪ್ರಸ್ತುತ ಒಂಬತ್ತು ಹುದ್ದೆಗಳು ಖಾಲಿ ಇವೆ. ಅಲ್ಲದೆ, ಇಂದು ನ್ಯಾಯಮೂರ್ತಿ ನವೀನ್ ಸಿನ್ಹಾ ಅವರು ನಿವೃತ್ತರಾಗಲಿದ್ದಾರೆ. ಅದರೊಂದಿಗೆ ನಿವೃತ್ತರಾದ ನ್ಯಾಯಮೂರ್ತಿಗಳ ಸಂಖ್ಯೆ ಹತ್ತಕ್ಕೆ ಹೆಚ್ಚಳವಾಗಲಿದೆ.