ಐಪಿಸಿಯಿಂದ ರಾಷ್ಟ್ರದ್ರೋಹದ ಸೆಕ್ಷನ್‌ 124ಎ ವಜಾ ಅರ್ಜಿ : ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ

ನವದೆಹಲಿ: ರಾಷ್ಟ್ರದ್ರೋಹವನ್ನು ಅಪರಾಧೀಕರಿಸುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ಎ ಅನ್ನು ವಜಾ ಮಾಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಲು ಸುಪ್ರೀಂ ಕೋರ್ಟ್‌ ಸಮ್ಮತಿಸಿದೆ. ನಿವೃತ್ತ ಸೇನಾ ಅಧಿಕಾರಿ ಎಸ್‌ ಜಿ ವಾಂಬಟ್ಕೆರೆ  ಅವರು ಸಲ್ಲಿಸಿರುವ ಈ ಅರ್ಜಿಯ ಪ್ರತಿಯೊಂದನ್ನು ಅಟಾರ್ನಿ ಜನರಲ್‌ ಅವರಿಗೆ ಸಲ್ಲಿಸಬೇಕೆಂದು ಸೂಚಿಸಿದೆ.

ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ ಈ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ಹೃಷಿಕೇಶ್‌ ರಾಯ್‌ ಅವರಿದ್ದ ಪೀಠವು ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಮೂಲಕ ಸರಕಾರದ ಗಮನಕ್ಕೆ ತರಬೇಕೆಂದು ತಿಳಿಸಿದೆ.

ಇದನ್ನು ಓದಿ: ರಾಷ್ಟ್ರದ್ರೋಹ ಕಾನೂನು ವಜಾಗೊಳಿಸುವ ಸುವರ್ಣಾವಕಾಶ ಕಳೆದುಕೊಂಡ ಸುಪ್ರೀಂ ಕೋರ್ಟ್‌: ನ್ಯಾ. ನಾಗಮೋಹನ್‌ ದಾಸ್‌

‘ಭಾರತೀಯ ದಂಡ ಸಂಹಿತೆಯ 124ಎ ಸೆಕ್ಷನ್‌ ಅಡಿಯಲ್ಲಿ ರಾಷ್ಟ್ರದ್ರೋಹ ಪ್ರಕರಣವನ್ನು ನಿಭಾಯಿಸಲಾಗುತ್ತಿದ್ದು, ಇದೊಂದು ಸಂವಿಧಾನಬಾಹಿರ ಕಾನೂನು ಆಗಿದೆ, ಇದನ್ನು ಸಾರಾಸಗಟಾಗಿ ರದ್ದುಪಡಿಸಬೇಕು. ರಾಷ್ಟ್ರದ್ರೋಹ ಕಾನೂನಿನಿಂದ ವಾಕ್‌ ಸ್ವಾತಂತ್ರ್ಯಕ್ಕೆ ಭಾರಿ ದುಷ್ಪರಿಣಾಮ ಉಂಟಾಗಿದ್ದು, ಸಂವಿಧಾನ ಒದಗಿಸಿರುವ ಮೂಲಭೂತ ಹಕ್ಕಾಗಿರುವ ಮುಕ್ತವಾಗಿ ಭಾವನೆ ವ್ಯಕ್ತಪಡಿಸುವುದಕ್ಕೆ ವಿನಾಕಾರಣ ನಿರ್ಬಂಧ ವಿಧಿಸಿದಂತಾಗಿದೆ’ ಎಂದು ನ್ಯಾಯಾಲಯಕ್ಕೆ ಅರ್ಜಿಯಲ್ಲಿ ತಿಳಿಸಲಾಗಿದೆ.

ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವುದೇ ಅಪರಾಧ ಎಂಬಂತೆ ಬಿಂಬಿಸುವ ಮೂಲಕ ಸಂವಿಧಾನದ 19 (1) (ಎ) ವಿಧಿಯ ಮೂಲಕ ಒದಗಿಸಲಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ 124ಎ ದಕ್ಕೆಯಾಗಲಿದೆ ಎಂಬ ಅಂಶ ಇರುವುದರಿಂದ ಸುಪ್ರೀಂ ಕೋರ್ಟ್‌ ವಿಚಾರಣೆ ಎತ್ತುಕೊಂಡಿದೆ ಹಾಗೂ ನಾಳೆಗೆ ವಿಚಾರಣೆ ಮುಂದೂಡಿದೆ.

ಕಳೆದ ವರ್ಷ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘಿಸುವ ಸೆಕ್ಷನ್‌ 124ಎ ನಿಬಂಧನೆಯ ಸಿಂಧುತ್ವವನ್ನು ಪ್ರಶ್ನಿಸಿ ಮಣಿಪುರದ ಪತ್ರಕರ್ತ ಕಿಶೋರ್‌ಚಂದ್ರ ವಾಂಗ್‌ಕೆಮ್ಚಾ ಮತ್ತು ಛತ್ತೀಸ್‌ಗಢದ ಪತ್ರಕರ್ತ ಕನ್ಹಯ್ಯಾ ಲಾಲ್‌ ಶುಕ್ಲಾ ಅವರು ನ್ಯಾಯಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಆಗಲೂ ನ್ಯಾಯಪೀಠವು ಕೇಂದ್ರ ಸರಕಾರಕ್ಕೆ ನೋಟೀಸ್‌ ನೀಡಿತ್ತು.

Donate Janashakthi Media

Leave a Reply

Your email address will not be published. Required fields are marked *