‘ದಿ ವೈರ್’ ಮೇಲೆ ನಿರ್ಬಂಧವನ್ನು ಹಿಂತೆಗೆದುಕೊಳ್ಳುವಂತೆ ಡಿಜಿಪಬ್ ಆಗ್ರಹ
ನವದೆಹಲಿ: ದೇಶದ ಒಂದು ಪ್ರಮುಖ ಇಂಗ್ಲಿಷ್ ಡಿಜಿಟಲ್ ಮಾಧ್ಯಮವಾದ ‘ದಿ ವೈರ್’ ನ್ನು ನೋಡಲಾಗದಂತೆ ನಿರ್ಬಂಧಿಸಲಾಗಿದೆ ಎಂಬ ಸುದ್ದಿಗೆ ಪ್ರತಿಕ್ರಿಯಿಸುತ್ತ ವಿವಿಧ ಡಿಜಿಟಲ್ ಸುದ್ದಿ ಮಾಧ್ಯಮ ಸಂಸ್ಥೆಗಳು ಮತ್ತು ಸ್ವತಂತ್ರ ಪತ್ರಕರ್ತರ ವೇದಿಕೆಯಾದ ಡಿಜಿಪಬ್ (DIGIPUB) ನ್ಯೂಸ್ ಇಂಡಿಯಾ ಫೌಂಡೇಶನ್, ಅದನ್ನು ಬಲವಾಗಿ ಖಂಡಿಸಿದೆ, ಭಾರತ ಸರ್ಕಾರ ನಿಜವಾಗಿಯೂ ಹಾಗೆ ಮಾಡಿದ್ದರೆ, ಅದು “ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಸ್ಪಷ್ಟ ಪ್ರಹಾರ” ಎಂದು ಅದು ಹೇಳಿದೆ. ಮುಂದುವರೆದು “ಸ್ವತಂತ್ರ ಮಾಧ್ಯಮವನ್ನು ಮೌನಗೊಳಿಸುವುದು ಪ್ರಜಾಪ್ರಭುತ್ವವನ್ನು ರಕ್ಷಿಸುವುದಿಲ್ಲ – ಅದು ಅದನ್ನು ದುರ್ಬಲಗೊಳಿಸುತ್ತದೆ” ಎಂದು ಅದು ಹೇಳಿದೆ.
ಮೇ 9 ರಂದು ಕೆಲವು ಇಂಟರ್ನೆಟ್ ಸೇವಾ ಪೂರೈಕೆದಾರರು (ಐಎಸ್‌ಪಿಗಳು) ಸರ್ಕಾರದ ಆದೇಶದ ನಂತರ ತಮ್ಮ ವೆಬ್‌ಸೈಟ್‌ಗೆ ಪ್ರವೇಶವನ್ನು ನಿರ್ಬಂಧಿಸಿದ್ದಾರೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿರುವ ಪ್ರಕಾರ ಹಾಗೆ ಮಾಡಲಾಗಿದೆ ಎಂದು ಒಂದು ಐಎಸ್‍ಪಿ ಹೇಳಿದೆ ಎಂದು ‘ ದಿ ವೈರ್’ ಈ ಕುರಿತು ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ದಿ ನ್ಯೂಸ್ ಮಿನಿಟ್, ನ್ಯೂಸ್‌ಲಾಂಡ್ರಿ, ಆರ್ಟಿಕಲ್ 14, ಆಲ್ಟ್‌ನ್ಯೂಸ್, ದಿ ಕ್ವಿಂಟ್, ಸ್ಕ್ರೋಲ್, ನ್ಯೂಸ್‌ಕ್ಲಿಕ್, ಬೂಮ್‌ಲೈವ್, ಕೋಬ್ರಾಪೋಸ್ಟ್, ಎಚ್‌ಡಬ್ಲ್ಯೂ ನ್ಯೂಸ್ ಮತ್ತು ಇತರ ಹಲವಾರು ವೆಬ್‌ಸೈಟ್‌ಗಳು ಮತ್ತು ಸ್ವತಂತ್ರ ಪತ್ರಕರ್ತರನ್ನು, ಸುದ್ದಿ ವೆಬ್‌ಸೈಟ್‌ಗಳನ್ನು ಸದಸ್ಯರಾಗಿ ಹೊಂದಿರುವ ಡಿಜಿಪಬ್, ಇಂತಹ ಸೆನ್ಸಾರ್‌ಶಿಪ್ ಅನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.
ಇದನ್ನೂ ಓದಿ: ಸಾರ್ವಜನಿಕರ ಹಣ ವಂಚನೆ: ಅಧ್ಯಕ್ಷ ಡಿ.ಕೆ. ಸಿದ್ರಾಮ ಬಂಧನ
“ಭಾರತ ಸರ್ಕಾರವು ವಾಕ್ ಸ್ವಾತಂತ್ರ್ಯದ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಮತ್ತು ಸ್ವತಂತ್ರ ಮಾಧ್ಯಮಕ್ಕೆ ಅಡೆ-ತಡೆಗಳಿಲ್ಲದ ಅವಕಾಶವನ್ನು ಪುನಃಸ್ಥಾಪಿಸಬೇಕು – ಪ್ರಜಾಪ್ರಭುತ್ವವು ಮೌನದಲ್ಲಿ ಬದುಕುಳಿಯಲು ಸಾಧ್ಯವಿಲ್ಲ” ಎಂದು ಅದು ಹೇಳಿದೆ.
ಇದಕ್ಕೆ ಮೊದಲು, ಲ್ಯಾಪ್‌ಟಾಪ್‌ಗಳು ಮತ್ತು ಡೆಸ್ಕ್‌ಟಾಪ್‌ಗಳಲ್ಲಿ ಹಾಗೂ ಕೆಲವು ಮೊಬೈಲ್ ಫೋನ್‌ಗಳಲ್ಲಿ ‘ದಿ ವೈರ್’ನ ವೆಬ್‌ಸೈಟ್ ತೆರೆಯಲು ಸಾಧ್ಯವಾಗುತ್ತಿಲ್ಲ ಎಂದು ಹಲವರು ವರದಿ ಮಾಡಿದಾಗ, ಅದರ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ, “ವಿವೇಕಯುತ, ಸತ್ಯವಾದ, ನ್ಯಾಯಯುತ ಮತ್ತು ತರ್ಕಬದ್ಧ ಸುದ್ದಿ ಮತ್ತು ಮಾಹಿತಿಯ ಧ್ವನಿಗಳು ಮತ್ತು ಮೂಲಗಳು ಭಾರತ ಹೊಂದಿರುವ ಅತಿದೊಡ್ಡ ಆಸ್ತಿಗಳಲ್ಲಿ ಒಂದಾಗಿರುವಾಗ” ಇಂತಹ ಸೆನ್ಸಾರ್‌ಶಿಪ್ ಭಾರತಕ್ಕೆ ಬರುತ್ತಿದೆ ಎಂದು ಪ್ರತಿಭಟಿಸಿದರು.
“ಈ ಸ್ವೇಚ್ಛಾಚಾರದ ಮತ್ತು ವಿವರಿಸಲಾಗದ ನಡೆಯನ್ನು ಪ್ರಶ್ನಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದು ದಿ ವೈರ್ ಹೇಳಿದೆ.
“ಗೋದಿಮೀಡಿಯಾ” ಎಂದು ಕರೆಯಲ್ಪಡುವ ಟಿವಿ ಚಾನೆಲ್‌ಗಳು ಮಾಡುತ್ತಿರುವ ನಕಲಿ, ಪ್ರಚೋದನಕಾರಿ ಮತ್ತು ಉದ್ರೇಕಕಾರಿ ಸುದ್ದಿ ಪ್ರಸಾರದ ಪ್ರವಾಹದಿಂದಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಿ ವೈರ್ ಗೆ ತಲುಪದಂತೆ ನಿರ್ಬಂಧಿಸಲಾಗಿದೆ, 4PM ನಂತಹ ವಿವಿಧ ಸ್ವತಂತ್ರ ಯು ಟ್ಯೂಬ್ ಚಾನೆಲ್‌ಗಳು ಹಾಗೂ ಗಾಯಕಿ ನೇಹಾ ಸಿಂಗ್ ರಾಥೋಡ್ ಮತ್ತು ಉಪನ್ಯಾಸಕಿ ಮಾದ್ರಿ ಕಾಕೋಟಿ (ಡಾ. ಮೆಡುಸಾ) ಮತ್ತು ಇತರರಂತಹ ವಿಡಂಬನಕಾರರ ಮೇಲೆ ನಿರ್ಬಂಧ ಹೇರಲಾಗಿದೆ ಅಥವಾ ಪ್ರಕರಣ ದಾಖಲಿಸಲಾಗಿದೆ.
ಮೇ 9 ರಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, “ಸಾರ್ವಜನಿಕರಿಗೆ ನಿಖರ, ವಿಭಿನ್ನ ಮತ್ತು ಸ್ವತಂತ್ರ ಮಾಹಿತಿಯ ತುತಾಗಿ ಲಭಿಸಬೇಕಾದ ಸಮಯದಲ್ಲಿ – ವಿಶೇಷವಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ – ಇಂತಹ ಮನಸೋಇಚ್ಛೇ ನಿರ್ಬಂಧಗಳು ಅಪಾಯಕಾರಿ ಪೂರ್ವನಿದರ್ಶನವನ್ನು ಸ್ಥಾಪಿಸುತ್ತವೆ ಮತ್ತು ಸಾರ್ವಜನಿಕ ಹಿತಾಸಕ್ತಿ ಪತ್ರಿಕೋದ್ಯಮಕ್ಕೆ ಬದ್ಧವಾಗಿರುವ ಧ್ವನಿಗಳನ್ನು ನಿಗ್ರಹಿಸುತ್ತವೆ” ಎಂದು ಚೆನ್ನೈ ಪ್ರೆಸ್ ಕ್ಲಬ್ ಕೂಡ ಮಾಧ್ಯಮ ಸೆನ್ಸಾರ್‌ಶಿಪ್ ಅನ್ನು ಖಂಡಿಸಿದೆ. “ಸಾರ್ವಜನಿಕ ಭಾವನೆಗಳನ್ನು ಕೆರಳಿಸದಂತೆ ಮತ್ತು ರಾಷ್ಟ್ರೀಯ ಭದ್ರತೆ ಮತ್ತು ಸಾಮರಸ್ಯಕ್ಕೆ ಧಕ್ಕೆ ತರದಂತೆ” ಭಾರತ-ಪಾಕಿಸ್ತಾನದ ಉದ್ವಿಗ್ನತೆಯ ವರದಿ ಮಾಡುವಾಗ “ಅತ್ಯಂತ ಜವಾಬ್ದಾರಿ, ನಿಖರತೆ ಮತ್ತು ಸಂಯಮವನ್ನು” ಪಾಲಿಸಲು ಅದು ಎಲ್ಲಾ ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಾಧ್ಯಮ ಸಂಸ್ಥೆಗಳಿಗೆ ಕರೆ ನೀಡಿದೆ.
ದಿ ವೈರ್‌ನಂತಹ ಸ್ವತಂತ್ರ ಮಾಧ್ಯಮಗಳ ಮೇಲಿನ ದಮನವನ್ನು ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಇಂಡಿಯನ್ ವುಮೆನ್ಸ್ ಪ್ರೆಸ್ ಕೋರ್, ದಿಲ್ಲಿ ಪತ್ರಕರ್ತರ ಸಂಘ ಮತ್ತು ಪ್ರೆಸ್ ಅಸೋಸಿಯೇಷನ್ ಸಹ ಖಂಡಿಸಿವೆ. ಕೆಲವು ಮಾಧ್ಯಮ ವಿಭಾಗಗಳು ಮತ್ತು ಸ್ವತಂತ್ರ ಯೂಟ್ಯೂಬ್ ಚಾನೆಲ್‌ಗಳ ಮೇಲೆ ಸಹ “ಅನ್ಯಾಯವಾಗಿ ಗುರಿಯಿಡಲಾಗಿದೆ” ಎಂದು ಅವು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. ಪ್ರಸಿದ್ಧ ಪತ್ರಕರ್ತರಾದ ಅನುರಾಧಾ ಭಸಿನ್ ಮತ್ತು ಮುಜಮಿಲ್ ಜಲೀಲ್ ಹಾಗೂ ಸ್ವತಂತ್ರ ಮಾಧ್ಯಮ ಸಂಸ್ಥೆ ಮಕ್ತೂಬ್ ಮೀಡಿಯಾ ಅವರ ಎಕ್ಸ್ ಖಾತೆಗಳನ್ನು ಸರ್ಕಾರವು “ಕಾನೂನು ಆಗ್ರಹ”ದ ಮೇಲೆ ತಡೆಹಿಡಿದಿದೆ ಎಂದೂ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
“ಇಡೀ ಮಾಧ್ಯಮವು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲವಾದರೂ, ಮಾಧ್ಯಮ ವ್ಯಕ್ತಿಗಳು ಮತ್ತು ಸುದ್ದಿ ಸಂಸ್ಥೆಗಳ ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಮನಬಂದಂತೆ ನಿರ್ಬಂಧಿಸುವುದನ್ನು, ಸಾರ್ವಜನಿಕಗೊಳಿಸದ ಆದೇಶಗಳನ್ನು ತೆಗೆದುಹಾಕಬೇಕು,” ಎಂದು ಡಿಜಿಪಬ್ ಆಗ್ರಹಿಸಿದೆ.
ಇದನ್ನೂ ನೋಡಿ: ಒಳ ಮೀಸಲಾತಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪತ್ರಿಕಾಗೋಷ್ಠಿ Janashakthi Media