ಬೆಂಗಳೂರು: ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿವಾರು ಸಮೀಕ್ಷೆ) ಗೆ ಕನ್ನಡ ಚಲನಚಿತ್ರೋದ್ಯಮವು ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ. ಇದು ಸದುದ್ದೇಶದ ಸಮೀಕ್ಷೆಯಾಗಿದ್ದು, ಪ್ರತಿಯೊಬ್ಬರೂ ಪಾಲ್ಗೊಂಡು ಸರಿಯಾದ ಮಾಹಿತಿ ಹಂಚಿಕೊಳ್ಳಬೇಕು ಎಂದು ಹಿರಿಯ ನಟಿಯರು ಮನವಿ ಮಾಡಿದ್ದಾರೆ. ಬೆಂಗಳೂರು
ಇದನ್ನೂ ಓದಿ : ಟ್ರಂಪ್-ಮಚಾದೊ ಗ್ಯಾಂಗಿನ ‘ಶಾಂತಿ ಕೆಲಸ”ಗಳು ಮತ್ತು ‘ನೊಬೆಲ್ ಶಾಂತಿ ಪ್ರಶಸ್ತಿ’ ಎಂಬ ಜೋಕ್
ಗುರುವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟಿಯರಾದ ಜಯಮಾಲಾ ಮತ್ತು ತಾರಾ ಅವರು ಈ ಸಮೀಕ್ಷೆಯ ಮಹತ್ವವನ್ನು ಒತ್ತಿ ಹೇಳಿದರು. ಬೆಂಗಳೂರು
“ಸದುದ್ದೇಶದಿಂದ ನಡೆಯುತ್ತಿರುವ ಸಮೀಕ್ಷೆ ಇದಾಗಿದೆ. ಯಾರೂ ತಪ್ಪು ಮಾಹಿತಿ ನೀಡಿ ಇದರ ಹಾದಿ ತಪ್ಪಿಸಬೇಡಿ. ಸರ್ಕಾರ ನಡೆಸುತ್ತಿರುವ ಈ ಸಮೀಕ್ಷೆಯಿಂದ ಸಮಾಜದ ದುರ್ಬಲ ವರ್ಗ, ಹಿಂದುಳಿದ ವರ್ಗದವರು ಹಾಗೂ ಹೆಣ್ಣುಮಕ್ಕಳು ಸೇರಿದಂತೆ ಹಲವರಿಗೆ ಅನುಕೂಲವಾಗಲಿದೆ. ಚಿತ್ರರಂಗದವರು ಈ ಸಮೀಕ್ಷೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ರಾಜ್ಯ ಸರ್ಕಾರ ನಮ್ಮಲ್ಲಿ ಕೇಳಿಕೊಂಡಿದೆ. ಯಾವುದೇ ಸರ್ಕಾರವಿದ್ದರೂ ಚಿತ್ರರಂಗದ ಜೊತೆ ನಿಂತಿದೆ. ಸರ್ಕಾರ ನಮಗೆ ತವರುಮನೆಯಿದ್ದಂತೆ. ಅದರ ಕಾರ್ಯಕ್ರಮವನ್ನು ಬೆಂಬಲಿಸುವುದು ನಮ್ಮ ಕರ್ತವ್ಯ” ಎಂದು ಜಯಮಾಲಾ ಹೇಳಿದರು.
“ಯಾವುದೇ ಪಕ್ಷ ಆಡಳಿತದಲ್ಲಿ ಇರಲಿ, ಅದರ ಸಾರ್ವಜನಿಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದು ವಾಣಿಜ್ಯ ಮಂಡಳಿಯ ಜವಾಬ್ದಾರಿಯಾಗಿದೆ. ಈ ಸಮೀಕ್ಷೆಯು ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದ್ದು, ಎಲ್ಲರೂ ಭಾಗಿಯಾಗಿ ಸಂಬಂಧಿಸಿದ ಮಾಹಿತಿಗಳನ್ನು ಸಮೀಕ್ಷಕರಿಗೆ ಒದಗಿಸಿ” ಎಂದು ನಟಿ ತಾರಾ ಮನವಿ ಮಾಡಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ. ನರಸಿಂಹಲು ಅವರ ನೇತೃತ್ವದಲ್ಲಿ ನಡೆದ ಈ ಸುದ್ದಿಗೋಷ್ಠಿಯಲ್ಲಿ, ಚಿತ್ರೋದ್ಯಮದ ಹಲವು ಪ್ರತಿನಿಧಿಗಳು ಉಪಸ್ಥಿತರಿದ್ದು, ಸಮೀಕ್ಷೆಗೆ ಬೆಂಬಲ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಆರಂಭಿಸಲಾಗಿರುವ ಈ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಕೆಲವು ಪ್ರಬಲ ಸಮುದಾಯಗಳು ಮತ್ತು ರಾಜಕೀಯ ನಾಯಕರಿಂದ ವಿರೋಧ ವ್ಯಕ್ತವಾಗಿದ್ದರೂ, ಪ್ರಗತಿಪರ ಚಿಂತಕರು ಮತ್ತು ಹಿಂದುಳಿದ ವರ್ಗಗಳ ನಾಯಕರು ಸರ್ಕಾರ ಮತ್ತು ಆಯೋಗದ ನಿಲುವಿಗೆ ಬೆಂಬಲ ಸೂಚಿಸಿದ್ದಾರೆ. ಈ ನಡುವೆ ಕನ್ನಡ ಚಿತ್ರೋದ್ಯಮದ ಗಣ್ಯರು ಜಾಗೃತಿ ಮೂಡಿಸಲು ಮುಂದಾಗಿರುವುದು ಗಮನಾರ್ಹವಾಗಿದೆ.
ಇದನ್ನೂ ನೋಡಿ : ಉತ್ತರ ಕನ್ನಡ | ಎಮರ್ಜೆನ್ಸಿಯಲ್ಲಿ ಜೀವ ಉಳಿಸಿಕೊಳ್ಳಲು ಸುಸಜ್ಜಿತ ಆಸ್ಪತ್ರೆ ಇಲ್ಲ | ಯಮುನಾ ಗಾಂವ್ಕರ್
