ದೆಹಲಿ: ಲೈಂಗಿಕ ಕಿರುಕುಳದ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ, ಕುಸ್ತಿಪಟುಗಳ ಪ್ರತಿಭಟನೆ ಬೆಂಬಲಿಸಿ ಹಾಗೂ ಲೈಂಗಿಕ ಕಿರುಕುಳದ ಆರೋಪಿ ಬಿಜೆಪಿ ಸಂಸದ, ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಹಾಸನದಲ್ಲಿ ಸಿಐಟಿಯು, ಎಸ್ಎಫ್ಐ, ಡಿವೈಎಫ್ಐ, ಪ್ರಾಂತ ರೈತ ಸಂಘ, ದಲಿತ ಹಕ್ಕುಗಳ ಸಮಿತಿ, ಮಹಿಳಾ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಒಲಂಪಿಕ್ ಪದಕ ವಿಜೇತರು, ವಿಶ್ವ ಚಾಂಪಿಯನ್ ಕುಸ್ತಿ ಪಟುಗಳು ಸೇರಿದಂತೆ ದೇಶದ ಹೆಮ್ಮೆಯ ಕುಸ್ತಿ ಕ್ರೀಡಾಪಟುಗಳು 2023 ಏಪ್ರಿಲ್ 24 ರಿಂದ ನವದೆಹಲಿಯ ಜಂತರ್ ಮಂಥರ್ ನಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸ್ ದೂರು ನೀಡಿದ್ದರೂ ಎಪ್ ಐ ಆರ್ ದಾಖಲಾಗಿರಲಿಲ್ಲ. ಸುಪ್ರೀಂ ಕೋರ್ಟ್ ನ ಮಧ್ಯಪ್ರವೇಶದ ನಂತರವಷ್ಟೇ ಎಫ್ ಐ ಆರ್ ದಾಖಲಾಗಿದೆ. ಈ ಪ್ರತಿಭಟನಾ ಕುಸ್ತಿಪಟುಗಳು ತಮ್ಮ ಮೇಲಾಗಿರುವ ಲೈಂಗಿಕ ಕಿರುಕುಳ ಹಾಗೂ ಹಿಂಸೆ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಮಾತ್ರ ಕೇಳುತ್ತಿದ್ದಾರೆ ಹಾಗೂ ಕುಸ್ತಿ ಪಟುಗಳ ಆರೋಪದ ಹಿನ್ನೆಲೆಯಲ್ಲಿ ರಚಿಸಲಾದ ವಿಚಾರಣಾ ಸಮಿತಿಯ ವರದಿಯನ್ನು ಸಾರ್ವಜನಿಕರ ಅವಗಾಹನೆಗೆ ತರಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.
ಭಾರತ ಕುಸ್ತಿ ಫೆಡರೇಶನ್ ಮುಖ್ಯಸ್ಥ ಹಾಗೂ ಇನ್ನಿತರ ಸಿಬ್ಬಂದಿಗಳು, ಅಪ್ರಾಪ್ತ ಹೆಣ್ಣು ಮಕ್ಕಳು ಸೇರಿದಂತೆ ಪ್ರಖ್ಯಾತ ಮಹಿಳಾ ಕುಸ್ತಿ ಪಟುಗಳನ್ನು ಲೈಂಗಿಕ ಕಿರುಕುಳ ಹಾಗೂ ಹಿಂಸೆಗೆ ಒಳಪಡಿಸಿರುವುದು ಅತ್ಯಂತ ಅಘಾತಕಾರಿ ಮತ್ತು ದೇಶವೇ ತಲೆತಗ್ಗಿಸುವಂತಹ ಘಟನೆಯಾಗಿದೆ. ಭೇಟಿ ಬಚಾವೋ, ಭೇಟಿ ಪಡಾವೋ” ಎಂದು ಪ್ರಚಾರ ಮಾಡುವ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ, ಹೀನ ಅಪರಾಧದ ಆರೋಪಿ ಬಿಜೆಪಿ ಸಂಸದನನ್ನು ರಕ್ಷಿಸುತ್ತಿರುವುದು ನಾಚೀಕೆಗೇಡಿನ ಸಂಗತಿಯಾಗಿದೆ. ದೂರಿನ ಆಧಾರದಲ್ಲಿ ಕಾನೂನು ಕ್ರಮ ಜರುಗಿಸಿ ನೊಂದ ಮಹಿಳಾ ಕ್ರೀಡಾಪಟುಗಳಿಗೆ ರಕ್ಷಣೆ ಒದಗಿಸಬೇಕಾಗಿದ್ದ ಬಿಜೆಪಿ ನೇತೃತ್ವದ ಸರ್ಕಾರ ತನ್ನ ಪೊಲೀಸ್ ಪಡೆಗಳನ್ನು ಬಳಸಿ, ನ್ಯಾಯಕ್ಕಾಗಿ ಪ್ರತಿಭಟಿಸುತ್ತಿರುವ ಕ್ರೀಡಾಪಟುಗಳ ಮೇಲೆ ದಮನಕಾರಿ ಕ್ರಮಗಳನ್ನು ಅನುಸರಿಸುತ್ತಿದೆ. ಒಂದು ವಾರದ ಹಿಂದೆ ದೆಹಲಿ ಪೊಲೀಸರು ಕುಡಿದು ಬಂದು ಪ್ರತಿಭಟನಾ ಕಾರರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಇಷ್ಟೆಲ್ಲಾ ಕಿರುಕುಳಗಳ ಮಧ್ಯೆಯೂ ನ್ಯಾಯ ಸಿಗುವ ತನಕ ಹೋರಾಟ ನಿಲ್ಲಿಸುವುದಿಲ್ಲ ಎಂದು ಪ್ರತಿಭಟಿಸುತ್ತಿರುವುದು ಅತ್ಯಂತ ಪ್ರಶಂಸನೀಯ ಹಾಗೂ ಅಭಿನಂದನಾರ್ಹವಾಗಿದೆ ಎಂದು ಕುಸ್ತಿಪಟುಗಳ ಹೋರಟವನ್ನು ಶ್ಲಾಘಿಸಿದರು.
ಸಂಸತ್ ನ ನೂತನ ಕಟ್ಟಡದ ಒಳಗಡೆ ಆರೋಪಿ ಬಿಜೆಪಿ ಸಂಸದ ಅತಿ ಗಣ್ಯ ಆತಿಥ್ಯ ಪಡೆಯುತ್ತಿರುವಾಗಲೇ, ಪ್ರತಿಭಟನಾ ನಿರತ ಕುಸ್ತಿಪಟುಗಳ ಮೇಲೆ ಹೀನಾಯ ದೌರ್ಜನ್ಯ ನಡೆಸಲಾಗಿದೆ.ಪ್ರಜಾಪ್ರಭುತ್ವದ ಹೆಮ್ಮೆಯ ಸಂಸ್ಥೆಯಾದ ಸಂಸತ್ತಿನಲ್ಲಿ ಸಂವಿಧಾನದ ನೀತಿ -ನಡಾವಳಿಗೆ ವಿರುದ್ದವಾಗಿ, ಪುರುಷ ಅಹಂಕಾರವನ್ನು ಸಮರ್ಥಿಸುವ ಪುರೋಹಿತಶಾಹಿ ಯಜಮಾನಿಕೆಯನ್ನು ಸಂಕೇತಿಸುವ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾ, ರಾಜಶಾಹಿ ಸಂಕೇತದ, ಮ್ಯೂಸಿಯಂ ನಲ್ಲಿದ್ದ ರಾಜದಂಡವನ್ನು ಸಂಸತ್ತಿನ ಸ್ಪೀಕರ್ ಪೀಠ ದ ಬಳಿ ಪ್ರತಿಷ್ಠಾಪನೆ ಮಾಡಲಾಗಿದೆ. ಅದೇ ಸಂದರ್ಭದಲ್ಲಿ ನ್ಯಾಯ ಹಾಗೂ ಕಾನೂನು ಜಾರಿಗೆ ಆಗ್ರಹಿಸುತ್ತಾ ಸುಮಾರು ಕಳೆದ ಒಂದೂವರೆ ತಿಂಗಳಿಂದ ಪ್ರತಿಭಟಿಸುತ್ತಿರುವ ದೇಶದ ಹೆಮ್ಮೆಯ ಪ್ರತಿಭಾವಂತ ಮಹಿಳಾ ಕ್ರೀಡಾಪಟುಗಳನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳಲಾಗಿದೆ. ಇದು ಹೊಸ ಸಂಸತ್ತಿನ ಮುಂದಿನ ಕಾರ್ಯವಿಧಾನದ ಸಂಕೇತದಂತೆ ಗೋಚರಿಸುತ್ತಿದೆ. ಇದು ನಮ್ಮ ಸಂವಿಧಾನ ಪರಂಪರೆ ಗೆ ಆಗಿರುವ ಗಂಭೀರ ಧಕ್ಕೆಯಾಗಿದೆ ಎಂದು ಪ್ರತಿಭಟನೆಕಾರರು ಆರೋಪಿಸಿದರು.
ಲೈಂಗಿಕ ಕಿರುಕುಳ ಹಾಗೂ ಹಿಂಸೆ ಕೊನೆಗಾಣಬೇಕು ಇದಕ್ಕಾಗಿ ದೇಶದ ಎಲ್ಲಾ ನಾಗರಿಕರು ಈ ಪ್ರತಿಭಟನೆಯನ್ನು ಬೆಂಬಲಿಸಬೇಕು. ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದು ನಮ್ಮ ದೇಶಕ್ಕೆ ಕೀರ್ತಿ ತಂದವರ ಮೇಲೆ ಇಷ್ಟು ಕಿರುಕುಳ ಆದರೆ ಇನ್ನು ಸಾಮಾನ್ಯ ಮಹಿಳೆಯರ ಹಾಗೂ ಹೆಣ್ಣು ಮಕ್ಕಳ ಸುರಕ್ಷತೆ ಕೇಳುವುದು ಹೇಗೆ ಎಂಬ ಪ್ರಶ್ನೆ ಯನ್ನು ನಾವೆಲ್ಲರೂ ಹಾಕಿಕೊಳ್ಳಬೇಕಾಗುತ್ತದೆ. ದೇಶದ ಕೀರ್ತಿ ಪತಾಕೆಯನ್ನು ಹಾರಿಸಿ ಹೆಮ್ಮೆಯ ಪದಕಗಳನ್ನು ದೇಶಕ್ಕಾಗಿ ಗೆದ್ದವರು ಲೈಂಗಿಕ ಕಿರುಕುಳ ಕ್ಕೆ ಒಳಗಾಗಿರುವುದು ಅತ್ಯಂತ ನಾಚೀಕೇಗೇಡಿನ ಸಂಗತಿಯಾಗಿದೆ. ನ್ಯಾಯಕ್ಕಾಗಿ ಆಗ್ರಹಿಸುತ್ತಿರುವ ನೊಂದ ಕ್ರೀಡಾಪಟುಗಳ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಬೇಜಾವಾಬ್ದರಿ ಹಾಗೂ ಕ್ರಿಮಿನಲ್ ದೌರ್ಜನ್ಯ ದಿಂದ ಮತ್ತಷ್ಟು ನೊಂದು ಕಣ್ಣೀರು ಹಾಕುತ್ತಿದ್ದಾರೆ. ಪ್ರಪಂಚದಲ್ಲಿ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ ಎಂದು ಕರೆದುಕೊಳ್ಳುವ ನಮ್ಮ ದೇಶಕ್ಕೆ ಇದು ಶೋಭೆ ತರುವುದಿಲ್ಲ ಎಂದು ಪ್ರತಿಭಟನೆಕಾರರು ಆಕ್ರೋಶ ಹೊರಹಾಕಿದರು.
ದೇಶಕ್ಕೆ ಕೀರ್ತಿ ತರುವ ಸಾಮಾರ್ಥ್ಯ ದ ಕ್ರೀಡಾಪಟುಗಳ ಆತ್ಮ ಸ್ಥೈರ್ಯ ಕುಂದಿಸುವ ಕೆಲಸವನ್ನು ಈ ಕೂಡಲೇ ಬಿಜೆಪಿ ಸರ್ಕಾರ ನಿಲ್ಲಿಸಬೇಕು . ಈ ಕೂಡಲೇ ಪೋಸ್ಕೋ ಸೇರಿದಂತೆ ಮಹಿಳಾ ಕ್ರೀಡಾಪಟುಗಳ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಿಂಸೆ ನಡೆಸಿರುವ ಆರೋಪಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ರನ್ನು ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿ ಬಂಧಿಸಬೇಕು. ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ದೇಶದಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಪತ್ರಿಭಟನೆಕಾರರು ತಿಳಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷರಾದ ಧರ್ಮೇಶ್, ಪ್ರಧಾನ ಕಾರ್ಯದರ್ಶಿ ಪುಷ್ಪ, ಸಾಹಿತಿಗಳಾದ ರೂಪ ಹಾಸನ, ಪ್ರಾಂತರೈತ ಸಂಘದ ಜಿಲ್ಲಾಧ್ಯಕ್ಷರಾದ ಎಚ್.ಆರ್.ನವೀನ್ ಕುಮಾರ್, ಹಿರಿಯ ದಲಿತ ಮುಖಂಡರಾದ ರಾಜಶೇಖರ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಪೃಥ್ವಿ ಮುಖಂಡರುಗಳಾದ ಸತ್ಯನಾರಾಣ, ಅರವಿಂದ, ಸೌಮ್ಯ ಬಿಎಂ ಮತ್ತಿತರರು ಭಾಗವಹಿಸಿದ್ದರು.