ಸತ್ಯಾಗ್ರಹದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಸತ್ಯದ ಘರ್ಜನೆ ಮೊಳಗಲಿ’ ಎಂದು ಬರಹವನ್ನು ಪ್ರದರ್ಶಿಸಿದರು
ಬೆಂಗಳೂರು: ತಮ್ಮ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ನಗರದ ಫ್ರೀಡಂ ಪಾರ್ಕ್‌ನಲ್ಲಿ ಮೌನ ಸತ್ಯಾಗ್ರಹ ಬುಧವಾರ ನಡೆಸಿತು. ರಾಹುಲ್ ವಿರುದ್ಧದ ಕ್ರಮವನ್ನು ಪಕ್ಷವೂ ‘ದ್ವೇಷ ರಾಜಕಾರಣ’ ಎಂದು ಬಣ್ಣಿಸಿದೆ. ಪಕ್ಷವೂ ದೇಶದ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಮೌನ ಸತ್ಯಾಗ್ರಹ ನಡೆಸುತ್ತಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಮೌನ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಸತ್ಯದ ಘರ್ಜನೆ ಮೊಳಗಲಿ’ ಎಂದು ಬರೆದಿರುವ ಘೋಷಣೆ ಬೋರ್ಡ್ ಅನ್ನು ಪ್ರದರ್ಶಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ, ಸಚಿವ ಡಿ.ಕೆ. ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣಧೀಪ್ ಸುರ್ಜೇವಾಲ, ಸಚಿವ ಕೆ.ಎಚ್. ಮುನಿಯಪ್ಪ, ಐವನ್ ಡಿಸೋಜ, ಎನ್.ಎ. ಹಾರಿಸ್ ಸೇರಿದಂತೆ ಹಲವಾರು ಕಾಂಗ್ರೆಸ್ ಶಾಸಕರು, ನಾಯಕರು ಭಾಗವಹಿಸಿದ್ದರು.
ಈ ನಡುವೆ ಪ್ರವಾಹ ಪೀಡಿತ ರಾಜ್ಯಗಳಾದ ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ದೆಹಲಿಯಲ್ಲಿ ಮೌನ ಸತ್ಯಾಗ್ರಹವನ್ನು ಜುಲೈ 16ರಂದು ಮುಂದೂಡಲಾಗಿದೆ. ಉಳಿದ ಎಲ್ಲ ರಾಜ್ಯಗಳಲ್ಲೂ ಮೌನ ಸತ್ಯಾಗ್ರಹ ನಡೆಸಲಾಗುವುದು ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ನಿರಂತರ ಮಳೆಯಿಂದಾಗಿ ಉತ್ತರ ಭಾರತ ಜರ್ಜರಿತಗೊಂಡಿದ್ದು, ಹಿಮಾಚಲ ಪ್ರದೇಶದಲ್ಲಿ ಕನಿಷ್ಠ 80 ಜನರು ಸಾವನ್ನಪ್ಪಿದ್ದಾರೆ. ಪಂಜಾಬ್ ಮತ್ತು ಹರಿಯಾಣದಲ್ಲೂ ಪರಿಸ್ಥಿತಿ ಭೀಕರವಾಗಿದೆ.
“ನರೇಂದ್ರ ಮೋದಿ ಸರ್ಕಾರವು ನಮ್ಮ ವಿರುದ್ಧ ತಮ್ಮ ಶಸ್ತ್ರಾಸ್ತ್ರದಲ್ಲಿನ ಎಲ್ಲಾ ತಂತ್ರಗಳನ್ನು ಪ್ರಯತ್ನಿಸಬಹುದು. ಆದರೆ ಜನರ ಪರವಾಗಿ ದನಿ ಎತ್ತುವ ನಮ್ಮ ಬದ್ಧತೆಯಲ್ಲಿ ನಾವು ದೃಢವಾಗಿರುತ್ತೇವೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ವೇಣುಗೋಪಾಲ್ ಹೇಳಿದ್ದಾರೆ.
‘ಮೋದಿ’ ಟೀಕೆಗೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರಿಗೆ ನೀಡಿದ್ದ ಶಿಕ್ಷೆಯನ್ನು ಗುಜರಾತ್ ಹೈಕೋರ್ಟ್ ಇತ್ತೀಚೆಗೆ ಎತ್ತಿಹಿಡಿದಿತ್ತು. ಇದನ್ನು ವಿರೋಧಿಸಿ ಪಕ್ಷವೂ ರಾಹುಲ್ ಗಾಂಧಿಯನ್ನು ಬೆಂಬಲಿಸಿ ಪ್ರತಿಭಟನೆ ನಡೆಸುತ್ತಿದೆ.
ಗುಜರಾತ್ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸುವುದಾಗಿ ಕಾಂಗ್ರೆಸ್ ಈಗಾಗಲೇ ಹೇಳಿದೆ. “ನಾವು ರಾಜಕೀಯ ಮತ್ತು ಕಾನೂನು ಹೋರಾಟವೆರಡನ್ನೂ ನಡೆಸಲಿದ್ದೇವೆ” ಎಂದು ಗುಜರಾತ್ ಹೈಕೋರ್ಟ್ ತೀರ್ಪಿನ ನಂತರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇದನ್ನೂ ಓದಿ: ತೀವ್ರಗೊಳ್ಳುತ್ತಿದೆ ರೈತರ ಪ್ರತಿಭಟನೆ: ಅ.28ರಂದು ಮಧ್ಯಪ್ರದೇಶದಲ್ಲಿ ಮಹಾಪಂಚಾಯತ್