ಸುನಿಲ್ ಕುಮಾರ್ ಬಜಾಲ್
ಮತ್ತೆ ಕರ್ಫ್ಯೂ ಹೇರಿಕೆ,ಜನರಲ್ಲಿ ಭೀತಿಯ ಛಾಯೆ.ಇದಕ್ಕೆ ಯಾರು ಹೊಣೆ ?ಈಗಲಾದರೂ ವಾಸ್ತವವನ್ನು ಸರಿಯಾಗಿ ತಿಳಿದುಕೊಳ್ಳದಿದ್ದರೆ ಮತ್ತೆ ಪಾತಾಳಕ್ಕೆ ಬೀಳುವುದು ಗ್ಯಾರಂಟಿ.ಪ್ರತಿಯೊಂದು ಸಮಸ್ಯೆಗಳಿಗೂ ಅಲ್ಪಸಂಖ್ಯಾತರೇ ಕಾರಣವೆಂದು ಹಸಿಹಸಿ ಸುಳ್ಳನ್ನೇ ಹೇಳಿ,ಅದನ್ನೇ ನಂಬುವಂತೆ ಮಾಡಿ, ಮನಸ್ಸಿನಲ್ಲಿ ದ್ವೇಷದ ವಿಷಬೀಜವನ್ನು ಬಿತ್ತಿದ ಕಾರಣ ಕಳೆದ 30 ವರ್ಷಗಳಿಂದ ಧರ್ಮ ರಾಜಕಾರಣ ಕರಾವಳಿ ಜಿಲ್ಲೆಯನ್ನು ಆಳುತ್ತಿದೆ. ಜನಸಾಮಾನ್ಯರ ಬದುಕಿನ ಪ್ರಶ್ನೆಗಳು, ಜಿಲ್ಲೆಯ ಅಭಿವೃದ್ಧಿಯ ವಿಚಾರಗಳು ನೇಪಥ್ಯಕ್ಕೆ ಸರಿಯುತ್ತಿದೆ.ಇದನ್ನೇ ದಾಳವನ್ನಾಗಿಸಿದ ಆಳುವ ಸರಕಾರಗಳು ಹೆಜ್ಜೆ ಹೆಜ್ಜೆಗೂ ಜನವಿರೋಧಿ ನೀತಿಗಳನ್ನು ಜಾರಿಗೆ ತರುವ ಮೂಲಕ ಜನಸಾಮಾನ್ಯರ ಬದುಕನ್ನೇ ನಾಶಗೊಳಿಸುತ್ತಿದೆ.ಅದೆಷ್ಟೋ ಬ್ಯಾಂಕ್ ಗಳಿಗೆ ಜನ್ಮ ನೀಡಿದ ಕರಾವಳಿಯಲ್ಲಿ ಅಂತಹ ಬ್ಯಾಂಕುಗಳೇ ಇನ್ನಿಲ್ಲವಾದಾಗ ಯಾವುದೇ ಆಕ್ರೋಶ ವ್ಯಕ್ತವಾಗಿಲ್ಲ. NMPT ,MRPL, ಅಂತರಾಷ್ಟ್ರೀಯ ವಿಮಾನ ನಿಲ್ದಾಣ,ಕೊಂಕಣ ರೈಲ್ವೇ ಖಾಸಗೀಕರಣದ ನೆಪದಲ್ಲಿ ಮಾರಾಟವಾದಾಗಲೂ ಯಾರಿಗೂ ಕೋಪ ಬೇಸರ ಆಗಿಲ್ಲ.ವಿವಿಧ ವಿಭಾಗದ ಕಾರ್ಮಿಕರ ಬದುಕು ಹೇಳತೀರದಾಗಿದೆ.ಆದರೂ ಯಾರ ಹ್ರದಯವನ್ನೂ ತಟ್ಟಿಲ್ಲ.ಬೆಲೆಯೇರಿಕೆಯ ಬಿಸಿ ಪ್ರತಿಯೊಬ್ಬರನ್ನೂ ಕಾಡಿದರೂ ಯಾರೂ ಬಾಯಿ ಬಿಡುತ್ತಿಲ್ಲ.
ಇವೆಲ್ಲದರ ಆಕ್ರೋಶ ಕ್ರೋಡೀಕರಣಗೊಳ್ಳಲು ಧರ್ಮ ರಾಜಕಾರಣ ಬಿಡುತ್ತಿಲ್ಲ.ಧರ್ಮ ರಾಜಕಾರಣದ ಅಪಾಯ ಇಂದು ಪ್ರತಿಯೊಬ್ಬರ ಮನೆ ಬಾಗಿಲಿಗೆ ಬಂದು ನಿಂತಿದೆ. ಆಳುವ ವರ್ಗದ ಆರ್ಥಿಕ ನೀತಿಗಳು ಜನಸಾಮಾನ್ಯರ ಬದುಕನ್ನು ಸರ್ವನಾಶಗೊಳಿಸಿದರೆ,ಧರ್ಮ ರಾಜಕಾರಣ ಪ್ರತಿಯೊಬ್ಬರ ಪ್ರಾಣದಲ್ಲಿ ಚೆಲ್ಲಾಟವಾಡುತ್ತಿದೆ. ಅತ್ತ ಬದುಕಲೂ ಸಾಧ್ಯವಾಗದೆ, ಇತ್ತ ಮನೆಯ ಆಧಾರಸ್ತಂಭಗಳಾದ ಯುವಕರ ಪ್ರಾಣಗಳನ್ನೇ ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟುತ್ತಿದೆ.ಧರ್ಮ ರಾಜಕಾರಣದ ಹೆಸರಿನಲ್ಲಿ ಅಧಿಕಾರದ ಗದ್ದುಗೆಯೇರಿದವರು ಕೋಟ್ಯಾಂತರ ಹಣ ಸಂಪಾದಿಸಿ ಐಶಾರಾಮಿ ಜೀವನ ನಡೆಸುತ್ತಿದ್ದರೆ,ಕೆಳವರ್ಗದ ಅಮಾಯಕ ಜನತೆ ಮಾತ್ರ ನಮ್ಮಿಂದಲೇ ಹಿಂದೂ ಧರ್ಮ ಉಳಿಯುವುದು ಎಂಬ ಭ್ರಮೆಯಿಂದ ಅದೆಷ್ಟೋ ಪ್ರಾಣಗಳನ್ನು ಕಳೆದುಕೊಂಡು ಹತಾಶೆಯತ್ತ ಹೋಗುತ್ತಿದೆ. ಧರ್ಮ ರಕ್ಷಣೆ,ಹಿಂದುತ್ವ ಎನ್ನುವುದು ಕೇವಲ ಕೆಳವರ್ಗಕ್ಕೆ ಮಾತ್ರ ಸೀಮಿತವೇ…? ಮೇಲ್ವರ್ಗದವರು,ಅವರ ಮಕ್ಕಳು ಆ ದಾರಿಯಲ್ಲಿ ಯಾಕೆ ಹೋಗುತ್ತಿಲ್ಲ ಎಂಬ ಪ್ರಜ್ಞೆ ಕೆಳವರ್ಗದಲ್ಲೂ ಕ್ರಮೇಣ ಮೂಡುತ್ತಿದೆ.
ಇನ್ನಾದರೂ ಕರಾವಳಿಯ ಜನತೆ ಎಚ್ಚೆತ್ತು ಧರ್ಮ ರಾಜಕಾರಣಕ್ಕೆ ಕೊಡಲಿ ಪೆಟ್ಟು ಕೊಡಬೇಕಾಗಿದೆ. ಬದುಕಿನ ಪ್ರಶ್ನೆಗಳು ಅಭಿವೃದ್ಧಿಯ ವಿಚಾರಗಳು ಮುಖ್ಯವಾಹಿನಿಗೆ ಬರಬೇಕಾಗಿದೆ.