ವಸಂತರಾಜ ಎನ್.ಕೆ.
ಡಿಸೆಂಬರ್ 2022 ಯು.ಕೆ ಯಲ್ಲಿ ಸರಣಿ ಕಾರ್ಮಿಕರ ಮುಷ್ಕರಗಳ ಚಾರಿತ್ರಿಕ ತಿಂಗಳಾಗಲಿದೆ. 27 ಲಕ್ಷಕ್ಕೂ ಹೆಚ್ಚು ವಿವಿಧ ಸಾರ್ವಜನಿಕ ಕ್ಷೇತ್ರದ ಕಾರ್ಮಿಕರು ಸದಸ್ಯರಾಗಿರುವ ಯೂನಿಯನುಗಳು ಸಂಯೋಜಿತ ಮುಷ್ಕರಗಳ ಸರಣಿಯನ್ನೇ ಘೋಷಿಸಿವೆ. ರೈಲು, ಬಂದರು, ಪೋಸ್ಟ್ ಸೇವಾ ಕಾರ್ಮಿಕರು, ಶಾಲಾ ಕಾಲೇಜು ವಿ.ವಿಗಳ ಅಧ್ಯಾಪಕರು, ನರ್ಸುಗಳ ಮುಷ್ಕರಗಳ ಸರಣಿ ಈ ತಿಂಗಳಲ್ಲಿ ನಡೆಯಲಿದೆ. 1980ರ ದಶಕದಲ್ಲಿ ಥ್ಯಾಚರ್ ಯೂನಿಯನುಗಳನ್ನು ಮಣಿಸಿ ಮುಷ್ಕರಗಳು ಅಪರಾಧಗಳೋ ದುರ್ವರ್ತನೆಗಳೋ ಎಂಬಂತೆ ಮಾಡಿದ್ದ ಪರಿಸ್ಥಿತಿ ತೀವ್ರ ಬದಲಾವಣೆ ಕಂಡು ಬರುತ್ತಿದೆ. ಜನಾಂಗೀಯ, ವಲಸೆಗಾರರ ಬೇದಭಾವ ತಾರತಮ್ಯ ಹುಟ್ಟು ಹಾಕಿ ಕಾರ್ಮಿಕರ ಐಕ್ಯತೆಯನ್ನು ಮುರಿದು, ನವ-ಉದಾರವಾದಿ ‘ಮಿತವ್ಯಯ’ದ ಹೆಸರಲ್ಲಿ ಕಲ್ಯಾಣ ಕ್ರಮಗಳಲ್ಲಿ ಕಡಿತ ಮಾಡುವ ಯು.ಕೆ ಸರಕಾರದ ಮತ್ತು ಪಕ್ಷಗಳ ಬಲಪಂಥೀಯ ರಾಜಕಾರಣಕ್ಕೆ ಕಾರ್ಮಿಕರ ಸಂಯೋಜಿತ ಮುಷ್ಕರಗಳ ಸರಣಿ ಸವಾಲು ಹಾಕುವ ಸಾಧ‍್ಯತೆ ಹೆಚ್ಚಿದೆ.
ಡಿಸೆಂಬರ್ 2022 ಯು,ಕೆ ಯಲ್ಲಿ ಸರಣಿ ಕಾರ್ಮಿಕರ ಮುಷ್ಕರಗಳ ಚಾರಿತ್ರಿಕ ತಿಂಗಳಾಗಲಿದೆ 27 ಲಕ್ಷಕ್ಕೂ ಹೆಚ್ಚು ವಿವಿಧ ಸಾರ್ವಜನಿಕ ಕ್ಷೇತ್ರದ ಕಾರ್ಮಿಕರು ಸದಸ್ಯರಾಗಿರುವ ಯೂನಿಯನುಗಳು ಸಂಯೋಜಿತ ಮುಷ್ಕರಗಳ ಸರಣಿಯನ್ನೇ ಘೋಷಿಸಿವೆ. ರೈಲು, ಬಂದರು, ಪೋಸ್ಟ್ ಸೇವಾ ಕಾರ್ಮಿಕರು, ಶಾಲಾ ಕಾಲೇಜು ವಿ.ವಿಗಳ ಅಧ್ಯಾಪಕರು, ನರ್ಸುಗಳ ಮುಷ್ಕರಗಳ ಸರಣಿ ಈ ತಿಂಗಳಲ್ಲಿ ನಡೆಯಲಿದೆ. ಇಂತಹ ಮುಷ್ಕರಗಳ ಆಸ್ಫೋಟ ಹಲವು ದಶಕಗಳ (ಬಹುಶಃ 1980ರ ದಶಕದ) ನಂತರ ನಡೆಯುತ್ತಿದೆ. ಇದಕ್ಕೆ ಕಾರಣವೂ ಚಾರಿತ್ರಿಕವೇ. ಆದರೆ ಕಳೆದ 200 ವರ್ಷಗಳಲ್ಲಿ ಮೊದಲ ಬಾರಿಗೆ 2008 ನಂತರದ ಈ ವರೆಗಿನ ಅವಧಿಯಲ್ಲಿ ಯಾವುದೇ ಕಾರ್ಮಿಕರ ಆದಾಯ ಏರಿಕೆ ಆಗಿಲ್ಲ. ಬೆಲೆಏರಿಕೆ ಆದಾಯವನ್ನು ತಿಂದು ಹಾಕುತ್ತಿದೆ. ಕಳೆದ ನಾಲ್ಕು ದಶಕಗಳಲ್ಲೇ ಜೀವನಾವಶ್ಯಕ ವಸ್ತುಗಳ ಗರಿಷ್ಠ (ಶೇ.11) ಬೆಲೆ ಏರಿಕೆ ಮತ್ತು ಇಂಧನ ಬೆಲೆಗಳಲ್ಲಿ ಶೇ.80ರಷ್ಟು ಭಾರೀ ಏರಿಕೆ ಇದಕ್ಕೆ ಕಾರಣ. ಈ ಬೆಲೆಏರಿಕೆ ಭರಿಸುವ ವೇತನ ಏರಿಕೆ ಕೊಡಬೇಕೆಂಬುದು ಕಾರ್ಮಿಕರ ಪ್ರಧಾನ ಹಕ್ಕೊತ್ತಾಯ.
ಕ್ರಿಸ್ಮಸ್, ಹೊಸ ವರ್ಷದ ಅವಧಿ ಎಂದು ಕರೆಯಲಾಗುವ ಮುಂದಿನ 2-3 ವಾರಗಳಲ್ಲಿ ರೈಲು ಕಾರ್ಮಿಕರು 48 ಗಂಟೆಗಳ ನಾಲ್ಕು ಸರಣಿ ಮುಷ್ಕರಗಳಿಗೆ (ಡಿಸೆಂಬರ್ 13-14, 16-17, ಜನವರಿ 3-4, 6-7) ಕರೆ ಕೊಟ್ಟಿದ್ದಾರೆ. ನೆಟ್ವರ್ಕ್ ರೈಲ್ ಮತ್ತು 14 ಇತರ ರೈಲು ಕಂಪನಿಗಳ ಕಾರ್ಮಿಕರ ಯೂನಿಯನುಗಳು ಮೊದಲ ಸುತ್ತಿನ ಮುಷ್ಕರವನ್ನು ಡಿಸೆಂಬರ್ 13-14ರಂದು ನಡೆಸಿದ್ದಾರೆ. ರೈಲು, ಜಲಸಾರಿಗೆ ಮತ್ತು ಇತರ ಸಾರಿಗೆ ಕಾರ್ಮಿಕರ (Rail, Maritime and Transport – RMT) ಯೂನಿಯನು ಈ ಮುಷ್ಕರದಲ್ಲಿ ಸೇರಿದ್ದಾರೆ. ಈಗಾಗಲೇ CWU (Communication Workers’ Union) ಗೆ ಸೇರಿದ ರಾಯಲ್ ಮೈಲ್ (ಪೋಸ್ಟ್) ಕಾರ್ಮಿಕರು ಕ್ರಿಸ್ಮಸ್ ವರೆಗೂ ಮುಷ್ಕರ ಮಾಡುತ್ತಿದ್ದಾರೆ. 10 ಸಾವಿರ ಉದ್ಯೋಗಗಳನ್ನು ಕಡಿತದ ವಿರುದ್ಧವೂ ಅವರು ಮುಷ್ಕರ ಹೂಡಿದ್ದಾರೆ. ರಾಯಲ್ ಮೈಲ್ ಪೋಸ್ಟಲ್ ವ್ಯವಹಾರದ ಅಜೆಂಡಾ ವಿಫಲವಾಗಿದ್ದು ಕಾರ್ಮಿಕರನ್ನು ಅದರ ಬಲಿಪಶು ಮಾಡಲಾಗುತ್ತಿದೆ ಎಂದು ಯೂನಿಯನ್ ಆಪಾದಿಸಿದೆ. ರಾಯಲ್ ಮೈಲ್ ನ್ನು ಸಾರ್ವಜನಿಕ ಸೇವೆಯಾಗಿ ಉಳಿಸಿಕೊಳ್ಳಲೂ ನಮ್ಮ ಹೋರಾಟ ಎಂದೂ ಯೂನಿಯನ್ ಹೇಳಿದೆ. ಕಳೆದ 40 ವರ್ಷಗಳಲ್ಲೇ ಮೊದಲ ಬಾರಿಗೆ ಸ್ಕಾಟ್ಲೆಂಡ್ ಶಾಲಾಶಿಕ್ಷಕರು ರಾಷ್ಟ್ರೀಯ ಮುಷ್ಕರಕ್ಕೆ ಮುಂದಾಗಿದ್ದಾರೆ. ಶೇ.11 ಬೆಲೆಏರಿಕೆ ಆಗುತ್ತಿರುವಾಗ ಅವರಿಗೆ ಯೋಜಿಸಲಾದ ಶೇ.5 ವೇತನ ಏರಿಕೆ ‘ಅವಮಾನಕರ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯು.ಕೆ ಯ ಅತಿ ದೊಡ್ಡ ನರ್ಸ್ ಗಳ ಯೂನಿಯನ್ ಆದ RCN (Royal College of Nursing) ಯೂನಿಯನ್ ಡಿಸೆಂಬರ್ 15ರಂದು ಮುಷ್ಕರಕ್ಕೆ ಕರೆ ಕೊಟ್ಟಿದೆ. ದೇಶದಾದ್ಯಂತ ನರ್ಸ್ ಗಳು ಪ್ರತಿಭಟಿಸುತ್ತಿದ್ದಾರೆ. ರಾಷ್ಟ್ರೀಯ ಆರೋಗ್ಯ ಸೇವೆಯ (NHS) 76 ಆಸ್ಪತ್ರೆಗಳು ಮತ್ತು ಕ್ಲಿನಿಕ್ ಗಳ 1 ಲಕ್ಷಕ್ಕೂ ಹೆಚ್ಚು ನರ್ಸ್ ಗಳು ಮುಷ್ಕರ ಹೂಡಿದ್ದಾರೆ. ಸ್ಕಾಟ್ಲೆಂಡಿನ ನರ್ಸ್ ಗಳು ಸಹ ಮುಷ್ಕರದ ಹಾದಿಯಲ್ಲಿದ್ದಾರೆ. ನರ್ಸ್ ಗಳು ಬೆಲೆಏರಿಕೆಗಿಂತ ಶೇ.5 ಹೆಚ್ಚು ವೇತನ ಏರಿಕೆ ಕೇಳಿದ್ದು ಸರಕಾರ ಅದನ್ನು ತಿರಸ್ಕರಿಸಿದೆ. ಅವರ ವೇತನ ದೀರ್ಘ ಅವಧಿಯಲ್ಲಿ ಸ್ಥಗಿತಗೊಂಡಿದೆ. ಕೊವಿದ್ ಮಹಾರೋಗದ ಅವಧಿಯಲ್ಲಿ ತಮ್ಮ ಜೀವದ ಹಂಗು ತೊರೆದು ಜೀವಗಳನ್ನು ರಕ್ಷಿಸಿದ ನರ್ಸ್ ಗಳಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ ಇದರಿಂದಾಗಿ ಹೆಚ್ಚೆಚ್ಚು ನರ್ಸ್ ಗಳು NHS ನ್ನು ಬಿಡುತ್ತಿದ್ದಾರೆ. ಬ್ರೆಕ್ಸಿಟ್ ನಿಂದಾಗಿ ಯುರೋಪಿನ ಇತರ ದೇಶಗಳ ನರ್ಸ್ ಗಳು ಕೆಲಸ ಬಿಡುತ್ತಿದ್ದಾರೆ. ಖಾಲಿಯಾದ ಹುದ್ದೆಗಳು ಭರ್ತಿಯಾಗಿಲ್ಲ. ಇದರಿಂದಾಗಿ ಈಗಿರುವ ನರ್ಸ್ ಗಳ ಕೆಲಸದ ಹೊರೆ ಅಸಹನೀಯವಾಗಿ ಹೆಚ್ಚಿದೆಯೆಂದು ನರ್ಸ್ ಗಳು ಆಕ್ರೋಶಗೊಂಡಿದ್ದಾರೆ. NHS ವ್ಯವಸ್ಥೆಯೇ ಕುಸಿದು ಬೀಳುವ ಹಂತದಲ್ಲಿದೆ. NHS ನ್ನು ಖಾಸಗೀಕರಿಸಲು ಖಾಸಗಿ ಆಸ್ಪತ್ರೆಗಳ ಲಾಬಿ ಒತ್ತಡದಿಂದಾಗಿ ನರ್ಸ್ ಗಳನ್ನು ಬೇಕೆಂತಲೇ ಕೆಟ್ದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಯೂನಿಯನುಗಳು ಆಪಾದಿಸಿವೆ. ಹಿಂದೆ ಉತ್ತಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೆಂದು ಪ್ರಸಿದ್ಧವಾಗಿದ್ದ NHS ನ್ನು ಉಳಿಸಿಕೊಳ್ಳಲು ಸಹ ಹೋರಾಟ ನಡೆಯುತ್ತಿದೆಯೆಂದು ಯೂನಿಯನುಗಳು ಹೇಳುತ್ತಿವೆ.
ಅಂಬುಲೆನ್ಸ್, ವಿಮಾನ ನಿಲ್ದಾಣ, ಗಡಿಪೋಸ್ಟ್, ರಾಷ್ಟ್ರೀಯ ಹೆದ್ದಾರಿ, ಬಸ್ ಡ್ರೈವರ್, ಅಗ್ನಿಶಾಮಕ ದಳ, ಹವಾಮಾನ ಕಚೇರಿ, ಡ್ರೈವಿಂಗ್ ನಿರೀಕ್ಷಣೆ ಮುಂತಾದ ಸಾರ್ವಜನಿಕ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು, ಸಿಬ್ಬಂದಿ ಹಾಗೂ ಸರಕಾರಿ ನೌಕರರೂ ಸಹ ಮುಷ್ಕರಕ್ಕ ಕರೆ ನೀಡುತ್ತಿದ್ದಾರೆ.
ಈ ನಡುವೆ ಯು.ಕೆ ಆರ್ಥಿಕ ಹಿಂಜರಿತವನ್ನು ಕಾಣುತ್ತಿದೆ. ಈ ವರ್ಷ ಆರ್ಥಿಕ ಶೇ.2ರಷ್ಟು ಕುಸಿಯಲಿದೆ. 2024ರ ವರೆಗೂ ಆರ್ಥಿಕವು ಕೊವಿದ್-ಪೂರ್ವ ಸ್ಥಿತಿಗೆ ಮರಳುವ ಲಕ್ಷಣಗಳು ಇಲ್ಲ. ಅಧಿಕೃತ ಅಂದಾಜುಗಳ ಪ್ರಕಾರವೇ ನಿಜಬೆಲೆಗಳಲ್ಲಿ ಕುಟುಂಬದ ಆಧಾಯ ಶೇ.7ರಷ್ಟು ಕುಸಿದು 2013-14 ರ ಮಟ್ಟಕ್ಕೆ ತಲುಪಿದೆ. 5 ಲಕ್ಷ ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ.
ಯು.ಕೆ ಕಾರ್ಮಿಕರು ರಿಷಿ ಸುನಕ್ ಸರಕಾರಕ್ಕೆ ಈ ಸರಣಿ ಮುಷ್ಕರಗಳ ಮೂಲಕ ಎಚ್ಚರಿಕೆ ನೀಡುತ್ತಿದ್ದರೂ, ಪ್ರಧಾನಿ ‘ಆರ್ಥಿಕ ಸಂಕಟ’ಗಳನ್ನು ಮುಂದೆ ಮಾಡಿ ಕಾರ್ಮಿಕರ ವೇತನ ಏರಿಕೆಯ ಹಕ್ಕೊತ್ತಾಯಗಳನ್ನು ಈಡೇರಿಸಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ. ಕೇಂದ್ರೀಯ ಬ್ಯಾಂಕ್ ಆದ ಬ್ಯಾಂಕ್ ಆಫ್ ಇಂಗ್ಲೆಂಡ್ ವೇತನೇರಿಕೆಯನ್ನು ವಿರೋಧಿಸಿದ್ದು ಇದು ‘ವೇತನ-ಬೆಲೆ ಸುರುಳಿ’ಗೆ ಕಾರಣವಾಗಲಿದೆಯೆಂದು ಎಚ್ಚರಿಸಿದೆ. ಆದರೆ ‘ಆರ್ಥಿಕ ಸಂಕಟ’ಗಳು ಇದ್ದಾಗ್ಯೂ ಹಿಂದಿನ ಲಿಝ್ ಟ್ರಸ್ ಸರಕಾರ ಭಾರೀ ಶ್ರೀಮಂತರಿಗೆ ಭಾರೀ ತೆರಿಗೆ ಕಡಿತ ಘೋಷಿಸಿತ್ತು. ಅಲ್ಲದೆ ರಕ್ಷಣಾ ವೆಚ್ಚವನ್ನು ಶೇ.2.2ರಿಂದ 3.0 ಕ್ಕೆ ಏರಿಸಿತ್ತು. ಈ ನೀತಿಯ ಪ್ರಕಾರ ವಾರ್ಷಿಕ ರಕ್ಷಣಾ ವೆಚ್ಚವು, ಈ ದಶಕದ ಆರಂಭದಲ್ಲಿದ್ದ 48 ಶತಕೋಟಿ ಪೌಂಡ್ ಗಳಿಂದ ದಶಕದ ಕೊನೆಯ ಹೊತ್ತಿಗೆ 100 ಶತಕೋಟಿ ಪೌಂಡ್ ಗಳಿಗೇರಲಿದೆ. ಇದನ್ನು ಮತ್ತು ಶ್ರೀಮಂತರಿಗೆ ತೆರಿಗೆ ವಿನಾಯಿತಿಗಳನ್ನು ಕಾರ್ಮಿಕರು, ಜನತೆ ಪ್ರಶ್ನೆ ಮಾಡಲಾರಂಭಿಸಿದ್ದಾರೆ. ಈ ಕ್ರಮಗಳನ್ನು ‘ಆರ್ಥಿಕ ಸಂಕಟ’ಗಳ ಕಾರಣಕ್ಕೆ ಪ್ರಧಾನಿ ಸುನಕ್ ಹಿಂತೆಗೆದುಕೊಳ್ಳುವ ಕ್ರಮವೇನೂ ಕೈಗೊಂಡಿಲ್ಲ.
ರಕ್ಷಣಾ ವೆಚ್ಚವನ್ನು ಇಮ್ಮಡಿಗೊಳಿಸುವಷ್ಟು ಭದ್ರತಾ ಬೆದರಿಕೆ ಯು.ಕೆ ಗೆ ಇಲ್ಲ. ಯು.ಎಸ್ ಜತೆಗೆ ಜಾಗತಿಕ ವ್ಯೂಹದ ಉದ್ದೇಶಗಳಿಗಾಗಿ ಯು.ಕೆ ಸರಕಾರ, ವಿದೇಶಗಳಲ್ಲಿ ಅನಗತ್ಯ ಮಿಲಿಟರಿ ಮಧ್ಯಪ್ರವೇಶ ಮತ್ತು ದುಸ್ಸಾಹಸಗಳನ್ನು ಮಾಡುತ್ತಿದೆ. ಯು.ಕೆಯ ಹಿತಾಸಕ್ತಿಗಳು ಇಲ್ಲದಾಗಲೂ ಇಂತಹ ಕಾರ್ಯಾಚರಣೆ ಮಾಡುತ್ತಿದೆ. ಉಕ್ರೇನ್ ಯುದ್ಧದಲ್ಲೂ ಅನಗತ್ಯವಾಗಿ ಹೆಚ್ಚಿನ ಮಧ್ಯಪ್ರವೇಶ ಮಾಡಿದೆ. ಬಾಲ್ಟಿಕ್ ಸಮುದ್ರದಲ್ಲಿ ರಶ್ಯನ್ ಗ್ಯಾಸ್ ಪೈಪ್ ಲೈನ್ ಸ್ಫೋಟ ಯು.ಕೆ ಯ ರಾಯಲ್ ನೇವಿ ಯ ಕೃತ್ಯವೆಂದು ರಶ್ಯನ್ ಅಧ್ಯಕ್ಷ ಪುಟಿನ್ ಆಪಾದಿಸಿದ್ದಾರೆ. ಉಕ್ರೇನ್ ಯುದ್ಧದ ಸಂದರ್ಭದಲ್ಲಿ ರಶ್ಯದ ಮೇಲೆ ಹೊರಿಸಿದ ಆರ್ಥಿಕ ದಿಗ್ಬಂಧನ ಕ್ರಮಗಳೂ ಭಾರೀ ಬೆಲೆ ಏರಿಕೆಗೆ ಕಾರಣವಾಗಿದ್ದು ಮಾತ್ರವಲ್ಲದೆ, ಯು.ಕೆಯ ಆರ್ಥಿಕ ಸಂಕಟಗಳಿಗೆ ಕಾರಣವಾಗಿದೆ, ಎಂಬ ಮಾತು ಕೇಳಿ ಬರುತ್ತಿದೆ. ಆರ್ಥಿಕ ಸಂಕಟಗಳು ಹೆಚ್ಚುತ್ತಿದ್ದಂತೆ ಸರಕಾರದ ವಿದೇಶ ಮತ್ತು ರಕ್ಷಣಾ ನೀತಿ ಹೆಚ್ಚೆಚ್ಚು ಪ್ರಶ್ನಾರ್ಹವಾಗುತ್ತಿವೆ.
ಕಾರ್ಪೊರೆಟ್ ಮಾಧ್ಯಮಗಳು ಸಹ ನಿರೀಕ್ಷಿಸಬಹುದಾದಂತೆ, ಕಾರ್ಮಿಕರ ಮುಷ್ಕರಗಳ ವಿರುದ್ಧ ಪ್ರಚಾರ ಆರಂಭಿಸಿವೆ. ಕಾರ್ಮಿಕರ ವೇತನ ಏರಿಕೆ ಒತ್ತಾಯ ಕಾರ್ಯಸಾಧ್ಯವಲ್ಲ. ಮುಷ್ಕರಗಳು ‘ಸಾರ್ವಜನಿಕರಿಗೆ ಅನಾನುಕೂಲ’ ಉಂಟು ಮಾಡುತ್ತವೆ. ಇವುಗಳ ವಿರುದ್ಧ ಕಟು ಕ್ರಮಗಳನ್ನು ಕೈಗೊಳ್ಳಬೇಕು ಎನ್ನುತ್ತಿವೆ.
ಆದರೆ ಕಾರ್ಮಿಕರ ಮತ್ತು ಯೂನಿಯನುಗಳ ಧೋರಣೆ ನೋಡಿದರೆ ಸರಕಾರದ, ಮಾಧ್ಯಮಗಳ ಬೆದರಿಕೆಗಾಗಲಿ, ಪ್ರಚಾರಕ್ಕಾಗಲಿ ಸೊಪ್ಪು ಹಾಕುವಂತೆ ಕಾಣುತ್ತಿಲ್ಲ. 1980ರ ದಶಕದಲ್ಲಿ ಥ್ಯಾಚರ್ ಯೂನಿಯನುಗಳನ್ನು ಮಣಿಸಿ ಮುಷ್ಕರಗಳು ಅಪರಾಧಗಳೋ ದುರ್ವರ್ತನೆಗಳೋ ಎಂಬಂತೆ ಮಾಡಿದ್ದ ಪರಿಸ್ಥಿತಿ ತೀವ್ರ ಬದಲಾವಣೆ ಕಂಡು ಬರುತ್ತಿದೆ. ಜನಾಂಗೀಯ, ವಲಸೆಗಾರರ ಬೇದಭಾವ ತಾರತಮ್ಯ ಹುಟ್ಟು ಹಾಕಿ ಕಾರ್ಮಿಕರ ಐಕ್ಯತೆಯನ್ನು ಮುರಿದು, ನವ-ಉದಾರವಾದಿ ‘ಮಿತವ್ಯಯ’ದ ಹೆಸರಲ್ಲಿ ಕಲ್ಯಾಣ ಕ್ರಮಗಳಲ್ಲಿ ಕಡಿತ ಮಾಡುವ ಯು.ಕೆ ಸರಕಾರದ ಮತ್ತು ಪಕ್ಷಗಳ ಬಲಪಂಥೀಯ ರಾಜಕಾರಣಕ್ಕೆ ಕಾರ್ಮಿಕರ ಸಂಯೋಜಿತ ಮುಷ್ಕರಗಳ ಸರಣಿ ಸವಾಲು ಹಾಕುವ ಸಾಧ‍್ಯತೆ ಹೆಚ್ಚಿದೆ.