ಯುಪಿ ರೈತರ ಹತ್ಯೆ ಕರ್ನಾಟಕದಲ್ಲಿ ವ್ಯಾಪಕಗೊಂಡ ಪ್ರತಿಭಟನೆ

ಬೆಂಗಳೂರು : ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಕೇಂದ್ರ ಸಚಿವ ಅಜಯ್‌ ಮಿಶ್ರಾರವರ ಮಗ ಆಶಿಶ್ ಮಿಶ್ರಾ ಪ್ರತಿಭಟನಾನಿರತ ರೈತರ ಮೇಲೆ ಕಾರು ಹರಿಸಿ ನಾಲ್ವರು ರೈತರನ್ನು ಕೊಂದ ಘಟನೆ ಖಂಡಿಸಿ ಕರ್ನಾಟಕದಲ್ಲಿ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದಿದೆ.

ಬೆಂಗಳೂರಿನಲ್ಲಿ ಮೈಸೂರು ಬ್ಯಾಂಕ್ ವೃತ್ತದ ಬಳಿ ಸಂಯುಕ್ತ ಕರ್ನಾಟಕ ಹೋರಾಟದ ನೇತೃತ್ವದಲ್ಲಿ ರೈತರು, ಕಾರ್ಮಿಕರು, ವಿದ್ಯಾರ್ಥಿ, ಯುವಜನ, ಮಹಿಳಾ ಹಾಗೂ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಪ್ರತಿಭಟನೆ ಉದ್ದೇಶಿಸಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಕೇಂದ್ರ ಸಚಿವ ಅಜಯ್‌‌ ಮಿಶ್ರಾ ಅವರ ಮಗನಾದ ಆಶೀಶ್‌‌ ಮಿಶ್ರಾನನ್ನು ಬಂಧಿಸಬೇಕು. ಸಚಿವ ಸ್ಥಾನದಿಂದ ಅಜಯ್‌‌ ಮಿಶ್ರಾರನ್ನು ಕಿತ್ತೊಗೆಯಬೇಕು ಎಂದು ಆಗ್ರಹಸಿದರು.

ಲಖೀಂಪುರ ಖೇರಿಯಲ್ಲಿ ನಡೆದಿರುವ ರೈತರ ಮೇಲಿನ ದಾಳಿ ಮತ್ತು ಮಾರಣಹೋಮಕ್ಕೆ ಕಾರಣರಾದ ಕೇಂದ್ರ ಸಚಿವ ಅಜಯ್ ಮಿಶ್ರಾ ತೆನಿ ಮತ್ತು ಈ ಘಟನೆಯ ವಿಚಾರದಲ್ಲಿ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪ ಎಸಗಿರುವ ಉತ್ತರಪ್ರದೇಶ ಸರ್ಕಾರದ ಮೇಲೆ ರಾಷ್ಟ್ರಪತಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕವು ರಾಷ್ಟ್ರಪತಿಗಳಿಗೆ ಹಕ್ಕೊತ್ತಾಯ ಮನವಿಯನ್ನೂ ಕಳಿಸಿದೆ ಎಂದರು.

ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷಿ ಮಾತನಾಡಿ, ಸಚಿವ ಸಚಿವ ಅಜಯ್ ಮಿಶ್ರಾ ತೆನಿ ಅವರು ರೈತರ ಪ್ರತಿಭಟನೆಯ ಕುರಿತು ಬಹಿರಂಗ ಬೆದರಿಕೆ ಹಾಕಿದ್ದರು. ಅವರ ಬೆದರಿಕೆಯನ್ನು ಖಂಡಿಸಿ, ಅವರು ಪ್ರತಿನಿಧಿಸುವ ಕ್ಷೇತ್ರವಾದ ಲಖೀಂಪುರ ಖೇರಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸಚಿವರ ಬೆಂಗಾವಲು ಪಡೆಯ ವಾಹನ ಹರಿಸುವ ಮೂಲಕ ತಮ್ಮ ಬೆದರಿಕೆಯನ್ನು ಸಚಿವ ಸತ್ಯಗೊಳಿಸಿದ್ದಾರೆ. ಈ ಕೃತ್ಯ ಭಾರತದ ಜನರಿಗೆ ಸಂವಿಧಾನ ಕೊಡಮಾಡಿರುವ ಪ್ರತಿಭಟನೆಯ ಹಕ್ಕಿನ ತೀವ್ರ ಉಲ್ಲಂಘನೆಯೂ ಆಗಿದೆ ಎಂದು ವರಲಕ್ಷ್ಮಿ ಆರೋಪಿಸಿದರು.

ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್. ವಿಮಲಾ, ಗೌರಮ್ಮ, ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್ . ಉಮೇಶ್, ಎಸ್.ಎಫ್.ಐ ನ ದಿಲಿಪ್ ಶೆಟ್ಟಿ, ಕೆ.ವಿ.ಎಸ್ ನ ಸರೋವರ್ ಸೇರಿದಂತೆ ರೈತ, ಕಾರ್ಮಿಕ, ದಲಿತ ಸಂಘಟನೆಯ ಮುಖಂಡರು ಇದ್ದರು.

ಮಂಡ್ಯ : ಉತ್ತರ ಪ್ರದೇಶ ಲಕೀಂಪುರ್ ಖೇರ್ ನಲ್ಲಿ ನಡೆದ ಪ್ರತಿಭಟನಾ ರೈತರ ಕೊಲೆ ಖಂಡಿಸಿ , ಕೇಂದ್ರ ಮಂತ್ರಿ ಅಜಯ್ ಮಿಶ್ರ ಮಗ ಆಶೀಶ್ ಮಿಶ್ರ ಮೇಲೆ ಕೊಲೆ ಮೊಕದ್ದಮೆ ದಾಖಲಿಸಿ ಬಂಧಿಸುವಂತೆ ಆಗ್ರಹಿಸಿ, ಈ ಕೂಡಲೇ ಕೊಲೆ ಪ್ರಚೋದನೆ ಮಾಡಿರುವ ಅಜಯ್ ಮಿಶ್ರ ರನ್ನು ಸಂಪುಟದಿಂದ ಉಚ್ಛಾಟಿಸುವಂತೆ ಒತ್ತಾಯಿಸಿ ಮಂಡ್ಯ ಜಿಲ್ಲೆ ಮಳವಳ್ಳಿ ಪ್ರತಿಭಟನೆ ‌ನಡೆಸಲಾಯಿತು

ಜನವಾದಿ ಮಹಿಳಾ ಸಂಘಟನೆ ರಾಜ್ಯಾದ್ಯಕ್ಷರಾದ ದೇವಿ, ಸುನೀತಾ , ಸುಶೀಲಾ KPRS ಭರತ್ ರಾಜ್, ಸ್ವಾಮಿ CITU ತಿಮ್ಮೇಗೌಡ ,ಹರೀಶ DYFI ಗುರುಸ್ವಾಮಿ ,ಶಿವಕುಮಾರ, ಹೇಮಂತ ,ಭಾಗವಹಿಸಿದರು. ಮಂಡ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ KPRS ನ‌ ಕೃಷ್ಣೇಗೌಡ, CITU ನ ಸಿ. ಕುಮಾರಿ, AIAWU ನ ಪುಟ್ಟಮಾದು ಸೇರಿದಂತೆ ಅನೇಕರಿದ್ದರು.

ಹಾಸನ : ನೆನ್ನೆ ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಕಾರು ಹರಿಸಿದ ಪ್ರಕರಣ ಖಂಡಿಸಿ ಹಾಸನದಲ್ಲಿ ರೈತ, ಕಾರ್ಮಿಕರಿಂದ ಪ್ರತಿಭಟನೆ ಮಾಡಲಾಯಿತು.

ತಮ್ಮ ಹಕ್ಕೊತ್ತಾಯಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತ ಸಮುದಾಯದ ಮೇಲೆ, ದೇಶದಾದ್ಯಂತ ಬೆಳೆಯುತ್ತಿರುವ ಚಳುವಳಿಯನ್ನು ಮುರಿಯುವ ಸಂಚಿನ ಭಾಗವಾಗಿ ಸಚಿವರ ಬೆಂಗಾವಲಿನ ವಾಹನಗಳನ್ನು ಚಲಾಯಿಸಿ, ಎಂಟು ಜನರ ಬರ್ಬರ ಹತ್ಯೆ ನಡೆಸಲಾದ ಕುಕೃತ್ಯವು ದೇಶದಾದ್ಯಂತ ತೀವ್ರ ಆತಂಕ ಮತ್ತು ತಲ್ಲಣವನ್ನುಂಟು ಮಾಡಿದೆ. ಒಕ್ಕೂಟ ಸರಕಾರದ ಗೃಹ ಖಾತೆಯ ರಾಜ್ಯ ಸಚಿವರಾದ ಅಜಯ್ ಮಿಶ್ರ ಹಾಗೂ ಆತನ ಮಗ ಮತ್ತು ಸಂಬಂಧಿ ಗುಂಡಾಗಳು ಈ ದುಷ್ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ.

ಹರ್ಯಾಣದ ಮುಖ್ಯಮಂತ್ರಿಗಳು ಬಿಜೆಪಿ ಮತ್ತು ಸಂಘ ಪರಿವಾರದ ಗುಂಡಾಗಳಿಗೆ ರೈತ ಚಳುವಳಿಯನ್ನು ಮುರಿಯಲು ಲಾಠಿ ಮುಂತಾದ ಆಯುಧಗಳ ಮೂಲಕ ದಾಳಿ ನಡೆಸಲು ಬಹಿರಂಗವಾಗಿ ಕರೆ ನೀಡುವ ಮೂಲಕ ಸಂವಿಧಾನಾತ್ಮಕ ಅಧಿಕಾರವನ್ನು ಸಂವಿಧಾನ ವಿರೋಧಿಯಾಗಿ ದುರ್ಬಳಕೆ ಮಾಡಿದ್ದಾರೆ ಎಂದು ಪ್ರತಿಭಟನೆ ಕಾರರು ಆರೋಪಿಸಿದರು.

ದೊಡ್ಡ ಬಳ್ಳಾಪುರ : ಯುಪಿ ರೈತರ ಹತ್ಯೆ ಖಂಡಿಸಿ ದೊಡ್ಡಬಳ್ಳಾಪುರದಲ್ಲಿ ಸಮಾನ ಮನಸ್ಕ ಸಂಘಟನೆಗಳು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ರವರಿಗೆ ಹಾಕ್ಕೋತ್ತಯಗಳ ಮನವಿಯನ್ನು  ಸಲ್ಲಿಸಿದರು.

Donate Janashakthi Media

Leave a Reply

Your email address will not be published. Required fields are marked *