ಬೆಂಗಳೂರು: ಸಮಾಜದಲ್ಲಿ ದ್ವೇಷ ಬಿತ್ತುವ ಮತ್ತು ಮಹಿಳೆಯರ ಕುರಿತು ಕೀಳಾಗಿ ನಾಲಗೆ ಹರಿ ಬಿಟ್ಟ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ನಾಡಿನ ಸಾಹಿತಿ ಮತ್ತು ಚಿಂತಕರ ವೇದಿಕೆಯಾದ ‘ಜಾಗೃತ ನಾಗರಿಕರು ಕರ್ನಾಟಕ’ ರಾಜ್ಯ ಸರ್ಕಾರವನ್ನು ಸೋಮವಾರ ಒತ್ತಾಯಿಸಿದೆ. ಮಂಡ್ಯದಲ್ಲಿ ನಡೆದ ಹನುಮಾನ್ ಸಂಕೀರ್ತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಕಲ್ಲಡ್ಕ ಪ್ರಭಾಕರ ಭಟ್ಟ, ಮುಸ್ಲಿಂ ಮಹಿಳೆಯರ ವಿರುದ್ಧ ವಿಕೃತ ಮತ್ತು ಅವಮಾನಕಾರಿ ಹೇಳಿಕೆ ನೀಡಿದ್ದರು.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ‘ಜಾಗೃತ ನಾಗರಿಕರು ಕರ್ನಾಟಕ’ ವೇದಿಕೆ, ಅದನ್ನು ಮಹಿಳೆಯರ ಕುರಿತ ಅತ್ಯಂತ ಕೀಳು ಮಟ್ಟದ ಅವಮಾನಕರ ಹೇಳಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. “ರಾಮನನ್ನು ಹಿಂದೂ ಧಾರ್ಮಿಕತೆಗೆ ಬಳಸಿಕೊಂಡು ವೈಭವೀಕರಿಸುವ ಇವರು ಕಾಲ ಕಾಲಕ್ಕೆ ಈ ರೀತಿಯ ಜೀವ ವಿರೋಧಿ ಹೇಳಿಕೆ ಕೊಡುತ್ತಾ ಬಂದಿದ್ದಾರೆ. ನಾಗರಿಕ ಸಮಾಜದ ವರ್ತನೆಗಳನ್ನು ತಿರಸ್ಕರಿಸುವ ಇವರ ಹೇಳಿಕೆಗಳು ಕೇವಲ ಮುಸ್ಲಿಂ ಮಹಿಳೆಯರಿಗೆ ಮಾತ್ರವಲ್ಲ, ಎಲ್ಲಾ ಸಮುದಾಯದ ಮಹಿಳೆಯರಿಗೆ ಮಾಡಿದ ಅವಮಾನ ಮತ್ತು ಹೀಗಳಿಕೆ” ಎಂದು ವೇದಿಕೆ ಹೇಳಿದೆ.
ಇದನ್ನೂ ಓದಿ: ಉತ್ತರ ಪ್ರದೇಶ | ಮಸೀದಿ ಗೋಡೆಯಲ್ಲಿ ಜೈಶ್ರೀರಾಮ್ ಎಂದು ಬರೆದ ದುಷ್ಕರ್ಮಿಗಳು
ಅದಾಗ್ಯೂ, ಕಲ್ಲಡ್ಕ ಪ್ರಭಾಕರ ಭಟ್ಟನಂತಹವರನ್ನು ಅಭಿಮಾನಿಸುವ, ಹಿಂಬಾಲಿಸುವ ಜನರಿದ್ದಾರೆ ಎನ್ನುವ ಸಂಗತಿಯೇ ಅತ್ಯಂತ ಕಳವಳಕಾರಿಯಾಗಿದೆ ಎಂದು ವೇದಿಕೆ ಆಶ್ಚರ್ಯವ್ಯಕ್ತಪಡಿದೆ.
ನ್ಯಾಷನಲ್ ಕ್ರೈಂ ರಿಪೋರ್ಟ್ ಬ್ಯೂರೋ ‘2022ರಲ್ಲಿ ದೇಶದಲ್ಲಿ ಮಹಿಳೆಯರ ವಿರುದ್ಧ 4,45,256 ದೌರ್ಜನ್ಯ ಪ್ರಕರಣಗಳು ದಾಖಲಾಗಿದೆ. 2019-21ರ ಅವಧಿಯಲ್ಲಿ 13.13 ಲಕ್ಷ ಮಹಿಳೆಯರು ಮತ್ತು ಹುಡುಗಿಯರು ಕಾಣೆಯಾಗಿದ್ದಾರೆ. ಕರ್ನಾಟಕದಲ್ಲಿ 40,000 ಮಹಿಳೆಯರು ಕಾಣೆಯಾಗಿದ್ದಾರೆ ಎಂದು ವರದಿ ನೀಡಿದೆ. ಈ ವರದಿಯನ್ನು ವೇದಿಕೆಯು ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
“ಮಹಿಳೆಯರ ಆಸ್ತಿತ್ವಕ್ಕೆ ಧಕ್ಕೆಯಾಗುತ್ತಿರುವ ಇಂತಹ ದುರಿತ ಕಾಲದಲ್ಲಿ ಅವರಿಗೆ ಒತ್ತಾಸೆಯಾಗಿ ನಿಲ್ಲಬೇಕಾಗಿರುವುದು ಮಾನವ ಧರ್ಮ. ಆದರೆ ಕಲ್ಲಡ್ಕ ಪ್ರಭಾಕರ ಭಟ್ಟನಂತಹವರು ಇದಕ್ಕೆ ಪ್ರತಿಕೂಲವಾಗಿ ವರ್ತಿಸುತ್ತಾ ಮಹಿಳೆಯರ ಘನತೆ, ಗೌರವಕ್ಕೆ ಧಕ್ಕೆ ತರುತ್ತಿರುವುದು ಇದೇ ಮೊದಲಲ್ಲ. ಇಂತಹ ಸಂದರ್ಭಗಳಲ್ಲಿ ನೆಲದ ಕಾನೂನು ತನ್ನ ಕೆಲಸ ಮಾಡಿದರೆ ಇಂತಹ ಕ್ಷುದ್ರ ಮನಸ್ಸಿನ ಜನರು ತಹಬಂದಿಯಲ್ಲಿರುತ್ತಾರೆ” ಎಂದು ವೇದಿಕೆ ಹೇಳಿದೆ.
ಇದನ್ನೂ ಓದಿ: ಭಾರತೀಯ ಕುಸ್ತಿ ಫೆಡರೇಶನ್ ಅಮಾನತು | ಮೌನ ಮುರಿದ ಬ್ರಿಜ್ ಭೂಷಣ್ ಹೇಳಿದ್ದೇನು?
ಸರ್ಕಾರವು ಈಗಲೂ ಮೌನವಾಗಿರಬಾರದೆಂದು ಆಗ್ರಹಿಸಿರುವ ಜಾಗೃತ ನಾಗರಿಕರು ಕರ್ನಾಟಕ, “ಕೂಡಲೇ ಕಲ್ಲಡ್ಕ ಪ್ರಭಾಕರ ಭಟ್ಟ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕಾನೂನು ಕ್ರಮಕ್ಕೆ ಮುಂದಾಗಬೇಕು” ಎಂದು ಒತ್ತಾಯಿಸಿದೆ.
ವೇದಿಕೆಯ ಪತ್ರಿಕಾ ಹೇಳಿಕೆಯಲ್ಲಿ ಹಿರಿಯ ಸಾಹಿತಿ ಪ್ರೊ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಡಾ.ವಿಜಯಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರೊ.ರಾಜೇಂದ್ರ ಚೆನ್ನಿ, ಡಾ.ಬಂಜಗೆರೆ ಜಯಪ್ರಕಾಶ್, ಬಿ.ಶ್ರೀಪಾದ ಭಟ್, ವಿಮಲಾ.ಕೆ.ಎಸ್., ಟಿ.ಸುರೇಂದ್ರ ರಾವ್, ಸುಷ್ಮ, ವೆಂಕಟೇಶ ಪ್ರಸಾದ್, ಡಾ.ಎನ್.ಗಾಯತ್ರಿ, ಮೂಡ್ನಾಕೂಡು ಚಿನ್ನಸ್ವಾಮಿ, ಡಾ.ಲೀಲಾ ಸಂಪಿಗೆ, ಡಾ.ಎಚ್.ಜಿ.ಜಯಲಕ್ಷ್ಮಿ, ಡಾ.ಬಿ.ಆರ್.ಮಂಜುನಾಥ್, ಜೆ.ಸಿ.ಶಶಿಧರ್, ವಾಸುದೇವ ಉಚ್ಚಿಲ, ಬಿ.ಎನ್.ಯೋಗಾನಂದ, ಡಾ.ಮೀನಾಕ್ಷಿ ಬಾಳಿ , ಡಾ.ವಸುಂಧರಾ ಭೂಪತಿ ಮತ್ತು ಜಾಣಗೆರೆ ವೆಂಕಟರಾಮಯ್ಯ ಅವರ ಸಹಿಯಿದೆ.
ವಿಡಿಯೊ ನೋಡಿ: ಅಂಗನವಾಡಿ ನೌಕರರಿಗೆ ಇಡಿಗಂಟು : ಹೈಕೋರ್ಟ್ ನಿರ್ದೇಶನ ಸರಿ ಇಲ್ಲ – ಎಸ್ ವರಲಕ್ಷ್ಮೀ ಆಕ್ರೋಶ