ಸುಳ್ಯ : ಬೆಳ್ಳಾರೆ ಪೊಲೀಸರು ಯುವಕನೊಬ್ಬನಿಗೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹಲ್ಲೆಗೊಳಗಾದ ಯುವಕ ವಿಡಿಯೋ ಮೂಲಕ ಆರೋಪ ಮಾಡಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆ ಯುವಕನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
ಸುಳ್ಯ ತಾಲೂಕಿನ ಪಾಲ್ತಾಡಿ ಸಮೀಪದ ಮಣಿಕ್ಕರ ಕೊಡ್ಯಕ್ಕ ನಿವಾಸಿ ಅಜಿತ್.ಎಸ್ ಎಂಬ ಯುವಕನನ್ನು ಬೆಳ್ಳಾರೆ ಪೊಲೀಸ್ ಠಾಣೆಯ ಸಿಬ್ಬಂದಿ ಬಾಲು ಮತ್ತು ಇನ್ನೋರ್ವ ಸುಳ್ಳು ಪ್ರಕರಣವೊಂದರ ವಿಚಾರಣೆಗೆ ಕರೆದುಕೊಂಡು ಹೋಗಿದ್ದು, ನಂತರ ಠಾಣೆಯಲ್ಲಿ ವಿಚಾರಣೆ ನೆಪದಲ್ಲಿ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಠಾಣೆಯಲ್ಲಿ ಆ ದಿನದ ಸಿಸಿ ಕ್ಯಾಮರಾ ಪರಿಶೀಲಿಸಿದರೆ ಉನ್ನತ ಮಟ್ಟದ ಅಧಿಕಾರಿಗಳಿಗೆ ತಿಳಿಯಬಹುದು ಎಂದು ಅಜಿತ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.
ಪೊಲೀಸ್‌ರು ಹೇಳುವುದೇನು ? ಅಜಿತ್ ಎಂಬ ಯುವಕನ ಮೇಲೆ ಮಹಿಳೆಗೆ ಬೆದರಿಕೆ ಒಡ್ಡಿದ ಆಪಾದನೆ ಇದೆ. ಪೊಲೀಸರು ಯಾರು ಹಲ್ಲೆ ನಡೆಸಿಲ್ಲ. ಅಜಿತ್ ಸಾರ್ವಜನಿಕರಿಗೆ ಪದೆ ಪದೆ ಕಿರಿ ಕಿರಿ ಮಾಡುವ ವ್ಯಕ್ತಿಯಾಗಿದ್ದಾನೆ. ಹಾಗಾಗಿ ಒಂದೆರಡು ಏಟುಗಳನ್ನು ಆತನನ್ನು ಹೆದರಿಸಲು ಹೊಡದಿರಬಹುದು ಆದರೆ ಹಿಂಸೆ ಮಾಡಿಲ್ಲ. ಆತನನ್ನು ಮಾನಸಿಕ ತಜ್ಞರ ಬಳಿ ನಾವೇ ಚಿಕಿತ್ಸೆಗೆ ಕಳುಹಿಸಿದ್ದೇವೆ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ಕಳ್ಳತನ ಪ್ರಕರಣ ಒಪ್ಪಿಕೊಳ್ಳುವಂತೆ ದಲಿತ ಮಹಿಳಿಗೆ ಪೊಲೀಸರಿಂದ ಚಿತ್ರಹಿಂಸೆ
ಪೊಲೀಸರ ಈ ನಡೆಗೆ ಸಾರ್ವಜನಿಕ ವಲಯದಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ನ್ಯಾಯ ಕೊಡಬೇಕಿದ್ದ ಪೊಲೀಸರು ಈ ರೀತಿ ದೌರ್ಜನ್ಯ ನಡೆಸಿದ್ದು ಎಷ್ಟು ಸರಿ? ಪೊಲೀಸರಿಗೆ ಮಾನವೀಯತೆ ಇಲ್ಲವೆ. ಈ ರೀತಿ ಹಿಗ್ಗಾ ಮುಗ್ಗಾ ಥಳಿಸಲು ಅವಕಾಶ ನೀಡಿದ್ದು ಯಾರು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಕಥೆ ಕಟ್ಟಿ ಸುಳ್ಳು ದೂರು ದಾಖಲಿಸುವುದು. ಮುಗ್ದ ಯುವಕರನ್ನು ಥಳಿಸುವ ಕೆಲಸ ಹೆಚ್ಚಾಗುತ್ತಿದೆ. ಹಾಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಈ ಕುರಿತು ತಕ್ಷಣವೇ ತನಿಖೆ ನಡೆಸಬೇಕೆಂಬ ಮಾತುಗಳು ಕೇಳಿ ಬಂದಿವೆ.