ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಹೋಬಳಿಯ ಕೆ.ಚೌಡೇನಹಳ್ಳಿ ಗ್ರಾಮದ ಸರ್ವೆ ನಂಬರ್ 30 ರಲ್ಲಿ 8.10 ಎಕರೆ ಭೂಮಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಗೋಮಾಳ ಭೂಮಿಯನ್ನು ವೆಂಕಟರಾಮ್ ದೀಕ್ಷಿತ್ ಬಿನ್ ಕೃಷ್ಣಪ್ಪ ರವರ ಹೆಸರಿಗೆ ಹಕ್ಕು ದಾಖಲಿಸಿರುವ ಹಾಸನ ಉಪ ವಿಭಾಗದ ಸಹಾಯಕ ಆಯುಕ್ತರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್ಎಸ್) ತಿಳಿಸಿದೆ.
ಹಾಸನ ನಗರದ ಪತ್ರಕರ್ತರ ಭವನದಲ್ಲಿ ಆಯೀಜಿಸಿದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ, ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್ಎಸ್) ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್ಕುಮಾರ್ ಮಾತನಾಡಿ, ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಹೋಬಳಿಯ ಕೆ.ಚೌಡೇನಹಳ್ಳಿ ಗ್ರಾಮದ ಸರ್ವೆ ನಂಬರ್ 30 ರಲ್ಲಿ ಒಟ್ಟು 152 ಎಕರೆ ಸರ್ಕಾರಿ ಭೂಮಿಯನ್ನು 40 ಕ್ಕೂ ಹೆಚ್ಚು ಜನ ರೈತರಿಗೆ ವಿವಿಧ ಹಂತಗಳಲ್ಲಿ ಬಗರ್ ಹುಕುಂ ಸಾಗುವಳಿ ಆಧಾರದಲ್ಲಿ ಮಂಜೂರು ಮಾಡಲಾಗಿದೆ. ಇದರಲ್ಲಿ 8 ಕುಟುಂಬಕ್ಕೆ ಅನ್ಯಾಯವಾಗಿದ್ದು, 40 ವರ್ಷದಿಂದ ಭೂಮಿ ಉಳುಮೆ ಮಾಡಿಕೊಂಡು ಬಂದಿದ್ದಾರೆ. ಎಲ್ಲಾ ದಾಖಲೆಗಳು ಈ ಕುಟುಂಬದಲ್ಲೇ ಇವೆ ಆದರೂ ಕೆಲವು ಮಂದಿ ಈ ಭೂಮಿ ನಮ್ಮದು ಎಂದು ಗಲಾಟೆ ಮಾಡುತ್ತಿದ್ದಾರೆ ಎಂದರು.
ಇದನ್ನು ಓದಿ: ದಬ್ಬಾಳಿಕೆಯ ಭೂ ಸ್ವಾಧೀನ ಕ್ರಮ-ಕುಟುಂಬದವರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ
ಈ ಗ್ರಾಮದ ವಾಸಗಳಾಗಿರುವ ತಿಮ್ಮಮ್ಮ, ರಮೇಶ, ಸಿ.ಸಿ.ಮಂಜುನಾಥ, ಅಶೋಕ, ದೊರೆಸ್ವಾಮಿ, ರಂಗೇಗೌಡ, ಸಣ್ಣಮ್ಮ, ಮಂಜೇಗೌಡ ಅವರ 8 ಕುಟುಂಬಗಳಿಗೆ 1994–95 ನೇ ಸಾಲಿನಲ್ಲಿ ಇದೇ ಸರ್ವೆ ನಂಬರ್ 30ರಲ್ಲಿ ತಲಾ ಎರಡು ಎಕರೆ ಭೂಮಿ ಬಗರ್ ಹುಕುಂ ಸಕ್ರಮೀಕರಣದ ಅಡಿಯಲ್ಲಿ ಮಂಜೂರಾಗಿದೆ. ಪಹಣಿಯೂ ಕೂಡ ಇವರುಗಳ ಹೆಸರಿನಲ್ಲಿಯೇ ಬರುತ್ತಿದೆ. ಮಾತ್ರವಲ್ಲ ಇದೇ ಭೂಮಿಯಲ್ಲಿ ಕಳೆದ 40 ವರ್ಷಗಳಿಂದ ನಿರಂತರವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು ತೆಂಗಿನ ಮರಗಳನ್ನು ಬೆಳೆಸಿ ಹಲವರು ಮನೆಯನ್ನೂ ಕಟ್ಟಿಕೊಂಡು ಬೋರ್ವೆಲ್ಗಳ ಸಂಪರ್ಕವನ್ನು ಪಡೆದು, ಇದೇ ಭೂಮಿಯ ಆಧಾರದಲ್ಲಿ ಬ್ಯಾಂಕ್ ಮೂಲಕ ಸಾಲವನ್ನೂ ಪಡೆದಿದ್ದಾರೆ ಎಂದರು.
ಚನ್ನರಾಯಪಟ್ಟಣ ಕೆಪಿಆರ್ಎಸ್ ತಾಲ್ಲೂಕು ಕಾರ್ಯದರ್ಶಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ವಾಸುದೇವ ಕಲ್ಕೆರೆ ಮಾತನಾಡಿ, ಕಳೆದ 40 ವರ್ಷಗಳಿಂದ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬಂದಿರುವ ಈ ಕುಟುಂಬಗಳಿಗೆ ಕೆ.ಚೌಡೇನಹಳ್ಳಿಯಲ್ಲಿ ವಾಸವಾಗಿಲ್ಲದ, ಈ ಭೂಮಿಗೆ ಸಂಬಂಧವಿಲ್ಲದ, ಸಾಗುವಳಿಯನ್ನೇ ಮಾಡದ, ಸ್ವಾಧೀನಾನುಭವದಲ್ಲಿಲ್ಲದ ನಾಗಮಣಿ ಎಂಬುವವರು ತಾವರೆಕೆರೆಯ ಜಯರಾಮ ಎಂಬುವವರು ಗ್ರಾಮಕ್ಕೆ ಆಗಮಿಸಿ ಈ ಭೂಮಿ ನಮಗೆ ಸೇರಬೇಕಾದದ್ದು ಎಂದು ಗಲಾಟೆ ಮಾಡುತ್ತಿದ್ದಾರೆ. ಈ ನಡುವೆ ಜಯರಾಮ ಎಂಬುವವರು ಭೂಮಿಗೆ ಸಂಬಂದಪಟ್ಟ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ದೌರ್ಜನ್ಯ ನಡೆಸಲು ಮುಂದಾದಾಗಿದ್ದು, ಅವರ ಮೇಲೆ ಕ್ರಮಕೈಗೊಳ್ಳಬೇಕೆಂದು ಸಂಘಟನೆಯು ಪೋಲೀಸರಿಗೆ ದೂರು ದಾಖಲಿಸಿದೆ ಎಂದರು.
ದೂರಿನ ಅನ್ವಯ 8 ಕುಟುಂಬಗಳು ಹಾಸನ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಸಮಸ್ಯೆಗಳನ್ನು ಇತ್ಯರ್ಥ ಪಡಿಸಬೇಕು ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅನ್ಯರಿಗೆ ಭೂಮಿಯನ್ನು ವರ್ಗಾವಾಗಲು ಸಹಕರಿಸಿ ಗಳನ್ನು ಹಾಸನ ಉಪ ವಿಭಾಗದ ಸಹಾಯಕ ಅಧಿಕಾರಿಗಳ ವಿರುದ್ಧ ಕ್ರಮಜರುಗಿಸಬೇಕು ಎಂದರು.
ಇದನ್ನು ಓದಿ: 40 ವರ್ಷದಿಂದ ಉಳುಮೆ ಮಾಡುತ್ತಿದ್ದ ಭೂಮಿ ತೆರವುಗೊಳಿಸುವ ಪ್ರಯತ್ನ: ಕುಟುಂಬಗಳ ರಕ್ಷಣೆಗೆ ರೈತ ಸಂಘ ಆಗ್ರಹ
ಸರ್ಕಾರ ಆದೇಶ ಹೊರಡಿಸುವ ಮುನ್ನ ಸರ್ವೆ ನಂಬರ್ 30 ರ ಪಹಣಿಯ ಅನುಭವದಾರರ ಪಟ್ಟಿಯಲ್ಲಿ ವೆಂಕಟರಾಮ್ ದೀಕ್ಷಿತ್ ಹೆಸರೇ ಇರಲಿಲ್ಲ. ಈಗ ಪಹಣಿಯಲ್ಲಿ ಹೆಸರು ಬರುತ್ತಿದೆ ಮತ್ತು ಇದೇ ಸರ್ವೆ ನಂಬರ್ ನ ಪಹಣಿಯಲ್ಲಿ ಈ ಹಿಂದೆ ಗೋಮಾಳದ ಹೆಸರಿನಲ್ಲಿ ಜಾಗವೇ ಇರಲಿಲ್ಲ. ಈಗ ಗೋಮಾಳದ ಹೆಸರಿನಲ್ಲಿ 0.27 ಎಕರೆ ನಮೂದಾಗಿದೆ. ಇಷ್ಟು ವರ್ಷಗಳು ಇಲ್ಲದ್ದು, ಈಗ ಬದಲಾವಣೆಗಳು ಆಗಿವೆ ಎಂದರೆ, ಇದರ ಹಿಂದೆ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟ ಎಂದು ಆರೋಪಿಸಿದರು.
ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಕೂಡಲೇ ಮಧ್ಯಪ್ರವೇಶಿ ಹಾಸನ ಉಪವಿಭಾಗದ ಸಹಾಯಕ ಆಯುಕ್ತರ ನ್ಯಾಯಾಲಯದ ಆರ್.ಎ.ನಂಬರ್.694/2022-23 ರ ಆದೇಶದ ಪ್ರಕರಣವನ್ನು ರದ್ದುಗೊಳಿಸಬೇಕು. ಸೂಕ್ತ ತನಿಖೆಗೊಳಪಡಿಸಿ ಎಲ್ಲಾ ತಪ್ಪಿತಸ್ತರಿಗೆ ಸೂಕ್ತ ಕಾನೂನು ಶಿಕ್ಷೆ ವಿಧಿಸಬೇಕು ಮತ್ತು ಹಾಲಿ 40 ವರ್ಷಗಳಿಂದ ಸ್ವಾಧೀನಾನುಭವದಲ್ಲಿದ್ದು ಭೂಮಿಯಲ್ಲಿ ಕೃಷಿ ಮಾಡುತ್ತಿರುವ ರೈತ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಕೆಪಿಆರ್ಎಸ್ ಸಂಘಟನೆ ಆಗ್ರಹಿಸಿದೆ.
ಪತ್ರಿಕಾಗೋಷ್ಟಿಯಲ್ಲಿ ಕೆಪಿಆರ್ಎಸ್ ಚನ್ನರಾಯಪಟ್ಟಣ ಜಂಟಿ ಕಾರ್ಯದರ್ಶಿ ಗಿರೀಶ್, ನೊಂದ ರೈತ ಕುಟುಂಬಗಳು, ಮತ್ತು ಕೆ.ಚೌಡೇನಹಳ್ಳಿ ಗ್ರಾಮಸ್ಥರಾದ ರಮೇಶ್, ಧರ್ಮೇಶ್, ರವಿ ಉಪಸ್ಥಿತರಿದ್ದರು.