ಬಡ ಕುಟುಂಬಕ್ಕೆ ಸಬ್ಸಿಡಿ ದರದಲ್ಲಿ ಸಕ್ಕರೆ | ಯೋಜನೆ ಮತ್ತೆ 2 ವರ್ಷ ವಿಸ್ತರಣೆ

ನವದೆಹಲಿ: ಸಾರ್ವಜನಿಕ ವಿತರಣಾ ಯೋಜನೆ (ಪಿಡಿಎಸ್) ಮೂಲಕ ವಿತರಿಸಲಾದ ಅಂತ್ಯೋದಯ ಅನ್ನ ಯೋಜನೆ (ಎಎವೈ) ಕುಟುಂಬಗಳಿಗೆ ಸಕ್ಕರೆ ಸಬ್ಸಿಡಿ ಯೋಜನೆಯನ್ನು ಇನ್ನೂ ಎರಡು ವರ್ಷಗಳವರೆಗೆ ಅಂದರೆ ಮಾರ್ಚ್ 31, 2026 ರವರೆಗೆ ವಿಸ್ತರಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ.

ಯೋಜನೆಯಡಿಯಲ್ಲಿ, ಭಾಗವಹಿಸುವ ರಾಜ್ಯಗಳ ಎಎವೈ ಕುಟುಂಬಗಳಿಗೆ ಕೇಂದ್ರ ಸರ್ಕಾರವು ತಿಂಗಳಿಗೆ ಪ್ರತಿ ಕೆಜಿ ಸಕ್ಕರೆಗೆ 18.50 ರೂ ಸಬ್ಸಿಡಿ ನೀಡುತ್ತದೆ. ಅನುಮೋದನೆಯು 15 ನೇ ಹಣಕಾಸು ಆಯೋಗದ (2020-21 ರಿಂದ 2025-26) ಅವಧಿಯಲ್ಲಿ 1,850 ಕೋಟಿ ರೂ.ಗಿಂತ ಹೆಚ್ಚಿನ ಪ್ರಯೋಜನಗಳನ್ನು ವಿಸ್ತರಿಸುವ ನಿರೀಕ್ಷೆಯಿದೆ. ಈ ಯೋಜನೆಯು ದೇಶದ ಸುಮಾರು 1.89 ಕೋಟಿ ಎವೈವೈ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

“ಈ ಯೋಜನೆಯು ಬಡವರಲ್ಲಿ ಬಡವರಿಗೆ ಸಕ್ಕರೆ ಖರೀದಿಸಲು ನೆರವಾಗಲಿದ್ದು, ಅವರ ಆಹಾರದಲ್ಲಿ ಶಕ್ತಿ ಸೇರಿಸುತ್ತದೆ. ಇದರಿಂದ ಅವರ ಆರೋಗ್ಯವು ಸುಧಾರಿಸುತ್ತದೆ” ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ: ಹೇಮಂತ್ ಸೋರೆನ್ | ಬಂಧನಕ್ಕೊಳಗಾದ ಜಾರ್ಖಂಡ್‌ನ 3ನೇ ಮುಖ್ಯಮಂತ್ರಿ

ಭಾರತ ಸರ್ಕಾರವು ಈಗಾಗಲೇ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PM-GKAY) ಅಡಿಯಲ್ಲಿ ಉಚಿತ ಪಡಿತರವನ್ನು ನೀಡುತ್ತಿದೆ. ‘ಭಾರತ್ ಆಟ್ಟಾ’, ‘ಭಾರತ್ ದಳ’ ಮತ್ತು ಟೊಮೆಟೊ ಹಾಗೂ ಈರುಳ್ಳಿಯನ್ನು ಕೈಗೆಟುಕುವ ಮತ್ತು ನ್ಯಾಯಯುತ ಬೆಲೆಯಲ್ಲಿ ಮಾರಾಟ ಮಾಡುವುದು ಪಿಎಂ-ಜಿಕೆಎವೈ ಅನ್ನು ಮೀರಿ ನಾಗರಿಕರ ಬಟ್ಟಲಿನಲ್ಲಿ ಸಾಕಷ್ಟು ಆಹಾರವನ್ನು ಖಚಿತಪಡಿಸಿಕೊಳ್ಳಲು ಕೈಗೊಂಡಿರುವ ಕ್ರಮಗಳಾಗಿವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಇದುವರೆಗೆ ಸುಮಾರು 3 ಲಕ್ಷ ಟನ್ ಕಡಳೆ ಬೇಳೆ ಮತ್ತು ಸುಮಾರು 2.4 ಲಕ್ಷ ಟನ್ ಗೋಧಿ ಹಿಟ್ಟು ಈಗಾಗಲೇ ಮಾರಾಟವಾಗಿದ್ದು, ಸಾಮಾನ್ಯ ಗ್ರಾಹಕರಿಗೆ ಅನುಕೂಲವಾಗಿದೆ. ಹೀಗಾಗಿ, ಸಬ್ಸಿಡಿ ದರದಲ್ಲಿ ಬೇಳೆ, ಹಿಟ್ಟು ಮತ್ತು ಸಕ್ಕರೆಯ ಲಭ್ಯತೆಯು ಭಾರತದ ಸಾಮಾನ್ಯ ನಾಗರಿಕರಿಗೆ ಆಹಾರವನ್ನು ಪೂರ್ಣಗೊಳಿಸಿದ್ದು, ‘ಎಲ್ಲರಿಗೂ ಆಹಾರ, ಎಲ್ಲರಿಗೂ ಪೋಷಣೆ’ ಎಂಬ ಮೋದಿ ಅವರ ಗ್ಯಾರಂಟಿಯನ್ನು ಪೂರೈಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಈ ಅನುಮೋದನೆಯೊಂದಿಗೆ, ಸರ್ಕಾರವು ಎಎವೈ ಕುಟುಂಬಗಳಿಗೆ ಪಿಡಿಎಸ್ ಮೂಲಕ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಒಂದು ಕೆಜಿಯಂತೆ ಸಕ್ಕರೆಯನ್ನು ವಿತರಿಸಲು ಬಯಸುವ ರಾಜ್ಯಗಳಿಗೆ ಸಬ್ಸಿಡಿ ನೀಡುವುದನ್ನು ಮುಂದುವರಿಸುತ್ತದೆ. ಅದಾಗ್ಯೂ, ಸಕ್ಕರೆಯನ್ನು ಸಂಗ್ರಹಿಸಿ ವಿತರಿಸುವ ಜವಾಬ್ದಾರಿ ರಾಜ್ಯಗಳ ಮೇಲಿದೆ.

ವಿಡಿಯೊ ನೋಡಿ: ಸೌಹಾರ್ದ ಮಾನವ ಸರಪಳಿ : ಮಾನವೀಯತೆ ಉಳಿಸಲು ಕೋಮುವಾದವನ್ನು ಸೋಲಿಸಬೇಕಿದೆ Janashakthi Media

Donate Janashakthi Media

Leave a Reply

Your email address will not be published. Required fields are marked *