ಭಾರತದ ರಾಜಕಾರಣ ಹೊಸ ತಿರುವುಗಳನ್ನು ಕಾಣಲಿದೆ – ಸುಧೀಂದ್ರ ಕುಲಕರ್ಣಿ

ಬೆಂಗಳೂರು: ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೌಲ್ಯಗಳ ರಕ್ಷಣೆ ಹಿನ್ನಲೆಯಲ್ಲಿ  ರಾಜ್ಯ ಮತ್ತು ಕೇಂದ್ರದಲ್ಲಿ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯೇತರ ಪಕ್ಷಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು. ಭಾರತದ ರಾಜಕಾರಣ ಈ ಎರಡು ವರ್ಷಗಳಲ್ಲಿ ಹೊಸ ತಿರುವುಗಳನ್ನು ಕಾಣಲಿದೆ ಎಂದು ಹಿರಿಯ ಪತ್ರಕರ್ತ, ರಾಜಕೀಯ ವಿಶ್ಲೇಷಕ ಸುಧೀಂದ್ರ ಕುಲಕರ್ಣಿ ಅಭಿಪ್ರಯಾಪಟ್ಟರು.

ಜನಶಕ್ತಿ ಮೀಡಿಯಾ ಹಾಗೂ ಸಮನ್ವಯ ತಂಡದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ:ಮುಂದೇನು?’ ಕುರಿತ ವಿಶ್ಲೇಷಣೆ ಕಾರ್ಯಕ್ರಮದಲ್ಲಿ ಸೋಮವಾರ ಅವರು ಮಾತನಾಡಿದರು.

‘ಬಿಜೆಪಿಯು 2024ರ ಲೋಕಸಭಾ ಚುನಾವಣೆಯಲ್ಲೂ ಗೆಲುವು ದಾಖಲಿಸಿ ಮತ್ತೊಂದು ಅವಧಿಗೆ ಅಧಿಕಾರಕ್ಕೇರುವ ಕನಸು ಕಾಣುತ್ತಿದೆ. ಆ ಪಕ್ಷವನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್‌, ಡಿಎಂಕೆ, ಸಮಾಜವಾದಿ ಪಕ್ಷ, ಆಮ್‌ ಆದ್ಮಿ, ಎಡಪಕ್ಷಗಳು ಒಗ್ಗೂಡಿ ಕೆಲಸ ಮಾಡಬೇಕು’ ಆಗ ಮಾತ್ರ ಬಿಜೆಪಿ ಸೋಲಿಸಲು ಸಾಧ್ಯ . ಹಾಗಾಗಿ ಪರ್ಯಾಯ ಯಾಕೆ ಬೇಕು? ಯಾಕೆ ಅಗತ್ಯ ಎನ್ನುವುದನ್ನು ಅರ್ಥ ಮಾಡಿಸಲು ಜನರ ಬಳಿ ಹೋಗಬೇಕು ಎಂದು ಅವರು ಕರೆ ನೀಡಿದರು.

ಹಿಂದುತ್ವ ಕಾರ್ಯಸೂಚಿಯನ್ನು ಬಲಗೊಳಿಸುತ್ತಿದೆ : ‘ಬಿಜೆಪಿಯು ಹಿಂದುತ್ವದ ಕಾರ್ಯಸೂಚಿಯನ್ನು ಮುನ್ನೆಲೆಗೆ ತಂದು ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದೆ. 2024ರಲ್ಲೂ ಅವರು ಇದೇ ಮಾದರಿ ಇಟ್ಟುಕೊಂಡು ಲೋಕಸಭಾ ಚುನಾವಣೆ ಎದುರಿಸುವ ಸಾಧ್ಯತೆ ಇದೆ.  ಆರ್‌. ಎಸ್‌.ಎಸ್‌ ಕಾರ್ಯಯೋಜನೆಯನ್ನು ರೂಪಿಸಿ ಬಲಗೊಳಿಸುವ ಪ್ರಯತ್ನ ಮಾಡುತ್ತಿದೆ. ಹಿದನ್ನು ಹಿಮ್ಮೆಟ್ಟಿಸಲು, ಸಂವಿಧಾನವನ್ನು ರಕ್ಷಿಸುವ ಮತ್ತು ಮಾನವಪರ ಕೆಲಸ ಮಾಡುವ ಯೋಜನೆಗಳನ್ನು, ರಣತಂತ್ರಗಳನ್ನು ಬಿಜೆಪಿಯೇತರ ಪಕ್ಷಗಳು ರೂಪಿಸಬೇಕು.

ಅಸಾದುದ್ದೀನ್‌ ಓವೈಸಿ ಹಾಗೂ ಬಹುಜನ ಸಮಾಜ ಪಕ್ಷದವರು (ಬಿಎಸ್‌ಪಿ) ಬಿಜೆಪಿ ಪರ ಕೆಲಸ ಮಾಡಿದ್ದಾರೆ. ಹೀಗಾಗಿ ಹೆಚ್ಚುವರಿಯಾಗಿ 65 ಸ್ಥಾನ ಗೆಲ್ಲಲು ಬಿಜೆಪಿಗೆ ಸಾಧ್ಯವಾಗಿದೆ’ ಎಂದು ವಿಶ್ಲೇಷಿಸಿದರು. ‘ಉತ್ತರ ಪ್ರದೇಶ ಚುನಾವಣೆಗೆ ಸಮಾಜವಾದಿ ಪಕ್ಷ (ಎಸ್‌ಪಿ) ಸೂಕ್ತ ಸಿದ್ಧತೆ ಮಾಡಿಕೊಂಡಿರಲಿಲ್ಲ. ಇದು ಕೂಡ ಬಿಜೆಪಿಗೆ ವರವಾಯಿತು’ ಎಂದರು.

ಮೋದಿ ವರ್ಚಸ್ಸು ಕಮ್ಮಿಯಾಗುತ್ತಿದೆ : ಪ್ರಧಾನಿ ಮೋದಿಯವರ ವರ್ಚಸ್ಸು ಕಮ್ಮಿಯಾಗುತ್ತಿದೆ. ಮೋದಿಯನ್ನು ಮಾತುಗಾರ ಎಂದು ಕರೆಯಲಾಗುತ್ತಿದೆ. ಆತನನ್ನು ಬೆಂಬಲಿಸಿದವರೆ ಈಗ ಆತ ಸುಳ್ಳು ಹೇಳುತ್ತಿದ್ದಾನೆ ಎಂಬುದು ಅವರಿಗೆ ಅರ್ಥವಾಗಿದೆ. ದೇಶದಲ್ಲೂ ವಿದೇಶದಲ್ಲೂ ಮೋದಿಯವರ ವರ್ಚಸ್ಸು ಕಮ್ಮಿಯಾಗಿದೆ. ಕೋವಿಡ್‌ ನಿರ್ವಹಣೆಯಲ್ಲಿ ಅವರ ಕಾರ್ಯನಿರ್ವಹಣೆಯ ಬಗ್ಗೆ ದೇಶದ ಜನರಿಗೆ ಅಸಮಾಧಾನ ಇದೆ. ನಿರುದ್ಯೋಗ, ಆರ್ಥಿಕ ಕುಸಿತ, ಹಸಿವು, ಬಡತನ ಎಲ್ಲವೂ ಮೋದಿ ಕಾಲದಲ್ಲಿ ಹೆಚ್ಚಾಗಿದೆ ಹಾಗಾಗಿ ಇವರ ವರ್ಚಸ್ಸು ಕುಸಿಯುತ್ತಿದೆ ಎಂದರು.

ಸಂವಾದದಲ್ಲಿ ಬಂದ ಪ್ರಶ್ನೆಗಳಿಗೆ ಸುಧೀಂದ್ರ ಕುಲಕರ್ಣಿಯವರು ಉತ್ತರಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪಿಜಿಆರ್‌ ಸಿಂಧ್ಯಾ, ಮಹಿಮಾ ಪಾಟೀಲ್‌, ಸಿದ್ಧನಗೌಡ ಪಾಟೀಲ್‌, ವಸಂತ್‌ ರಾಜ್‌, ಕೆ.ಎಸ್‌ ವಿಮಲಾ, ಮೀನಾಕ್ಷಿ ಬಾಳಿ, ಈ. ಬಸವರಾಜ್‌, ಸುಭಾಶ್ಚಂದ್ರ್‌, ಎಸ್‌.ಆರ್‌ ಆರಾಧ್ಯ, ಕೆ.ಶರೀಫಾ, ನವೀನ್‌ ಕುಮಾರ್‌, ದಿಲಿಪ್‌ಶೆಟ್ಟಿ ಸೇರಿದಂತೆ ಅನೇಕರಿದ್ದರು.  ಸಮನ್ವಯದ ಪ್ರೇಮಚಂದ್‌ ಸ್ವಾಗತಿಸಿದರು. ಜನಶಕ್ತಿ ಮೀಡಿಯಾದ ಗುರುರಾಜ್‌ ದೇಸಾಯಿ ಕಾರ್ಯಕ್ರಮವನ್ನು ನಿರ್ವಹಿಸಿದರು.

Donate Janashakthi Media

Leave a Reply

Your email address will not be published. Required fields are marked *