ಕರ್ನಾಟಕ ಡ್ರಗ್ ಅಂಡ್ ಲಾಜಿಸ್ಟಿಕ್, ವೇರ್‌ಹೌಸಿಂಗ್ ಸೊಸೈಟಿಯಲ್ಲಿ 80 ಕೋಟಿ ಭ್ರಷ್ಟಾಚಾರ!
ಬೆಂಗಳೂರು: ಆರೋಗ್ಯ ಸಚಿವ ಡಾ. ಸುಧಾಕರ್ ಅವರಿಗೆ ಆಪ್ತವಾಗಿರುವ ಎರಡು ಕಂಪೆನಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಉಪಕರಣ ಖರೀದಿಯಲ್ಲಿ ಸರ್ಕಾರದ ಬೊಕ್ಕಸದಿಂದ 80 ಕೋಟಿಯಷ್ಟು ಹಣ ವಂಚಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಆರೋಪಿಸಿದರು.
ನಗರದ ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದ ಸೆಪ್ಟೆಂಬರ್ ತಿಂಗಳ 23 ರಂದು ರಾಜ್ಯದ ಆಯ್ದ ಸರ್ಕಾರಿ ಪ್ರಯೋಗಾಲಯಗಳಿಗೆ ಎರಡು ಬಗೆಯ ಬಯೋಕೆಮಿಸ್ಟ್ರಿ ಮತ್ತು ಎರಡು ಬಗೆಯ ಹೆಮಟಾಲಜಿ ಒಟ್ಟು ನಾಲ್ಕು ಬಗೆಯ ಸಾಧನಗಳನ್ನು ವಿತರಿಸಲು ಅಲ್ಪಾವಧಿ ಟೆಂಡರ್ ಕರೆಯಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಸಚಿವರ ಒತ್ತಡಕ್ಕೆ ಮಣಿದು “ಅಗಪೆ ಮತ್ತು ಸಿಸ್ ಮ್ಯಾಕ್ಸ್” ಎನ್ನುವ ಎರಡು ಕಂಪೆನಿಗಳಿಗೆ ಟೆಂಡರ್ ನೀಡಲಾಗಿದೆ.ಇಲಾಖೆಯ ಅಧಿಕಾರಿಗಳು ಸಹ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದರು.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಕೇರಳ ಮೂಲದ ಅಗಪೆ ಎನ್ನುವ ಕಂಪೆನಿ 2018-19 ರಲ್ಲಿ ರದ್ದುಗೊಂಡ ಟೆಂಡರ್ ಪ್ರಕ್ರಿಯೆಯಲ್ಲೂ ಭಾಗವಹಿಸಿತ್ತು. ಇದೇ ಕಂಪೆನಿ ಪ್ರಸ್ತುತ ಪೂರೈಸಿರುವ 1201 “ಸೆಮಿ ಆಟೋ ಬಯೋ ಕೆಮಿಸ್ಟ್ರಿ ಅನಲೈಜರ್” ಸಾಧನಕ್ಕೆ 59,900 ರೂ. ರೂಪಾಯಿ ನಮೂದಿಸಿತ್ತು, ಇದೇ ಸಾಧನವನ್ನು ಕೇರಳ ಆರೋಗ್ಯ ಇಲಾಖೆಗೆ ₹ 55,460 ರೂಪಾಯಿಗೆ ಪೂರೈಸಿದೆ. ಪ್ರಸ್ತುತ ಅಗಪೆ ಕಂಪನಿಯಿಂದ ಹೆಚ್ಚುವರಿ ಹಣ ಕೊಟ್ಟು 86 ಸಾವಿರ ರೂ.ಗಳಿಗೆ ಖರೀದಿಸಲಾಗಿದೆ ಎಂದು ಆರೋಪಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮುಕುಂದ್ ಗೌಡ ಇದ್ದರು.