ಮುಂಬೈ : ಆಸ್ಪತ್ರೆಗಳಲ್ಲಿ ಕೋವಿಡ್ ವಾರ್ಡ್‌ ದಿಢೀರ್ ಪುನಾರಂಭ!

ಮುಂಬೈ (ಮಹಾರಾಷ್ಟ್ರ) :  ಒಂದು ವರ್ಷಗಳ ಸುದೀರ್ಘ ವಿರಾಮದ ಬಳಿಕ ಮಹಾರಾಷ್ಟ್ರದಲ್ಲಿ ಕೋವಿಡ್ ಮತ್ತೆ ಆರ್ಭಟಿಸುತ್ತಿದೆ. ಅದರಲ್ಲೂ ದೇಶದ ವಾಣಿಜ್ಯ ರಾಜಧಾನಿ ಎಂದೇ ಖ್ಯಾತವಾಗಿರುವ ಮಹಾರಾಷ್ಟ್ರ ರಾಜ್ಯದ ರಾಜಧಾನಿ ಮುಂಬೈ ನಗರದಲ್ಲಿ ಆಸ್ಪತ್ರೆಗಳ ಕೋವಿಡ್ ವಾರ್ಡ್‌ಗಳು ಪುನಾರಂಭವಾಗುತ್ತಿವೆ.

ಖಾಸಗಿ ಆಸ್ಪತ್ರೆಗಳೂ ಕೂಡಾ ಕೋವಿಡ್ ವಾರ್ಡ್‌ಗಳನ್ನು ಮತ್ತೆ ಆರಂಭಿಸುತ್ತಿವೆ. ಮುಂಬೈ ನಗರದ ಹಲವೆಡೆ ಇರುವ ಖಾಸಗಿ ಆಸ್ಪತ್ರೆಗಳ ಪೈಕಿ ಒಟ್ಟು 19 ವಾರ್ಡ್‌ಗಳು ಪುನಾರಂಭವಾಗಿವೆ. ಈ ವಾರ್ಡ್‌ಗಳಿಗೆ ದಾಖಲಾಗುತ್ತಿರುವ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆ ಆಗುತ್ತಿದೆ. ಇದರ ಬೆನ್ನಲ್ಲೇ ಮುಂಬೈನಲ್ಲಿ ಕೋವಿಡ್ ಪರೀಕ್ಷಾ ಪ್ರಮಾಣ ಕೂಡಾ ಹೆಚ್ಚಾಗುತ್ತಿದ್ದು, ಸೋಂಕಿತರ ಸಂಖ್ಯೆ ಗಣನೀಯ ಏರಿಕೆ ಕಾಣುತ್ತಿದೆ.

ಕಳೆದ ಶನಿವಾರ ಒಂದೇ ದಿನ ಮಹಾರಾಷ್ಟ್ರ ರಾಜ್ಯದಲ್ಲಿ ಒಟ್ಟು 437 ಹೊಸ ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದ್ದವು. ಭಾನುವಾರ 397 ಸೋಂಕು ಪ್ರಕರಣಗಳು ವರದಿಯಾಗಿದ್ದವು. ಕಳೆದ ಅಕ್ಟೋಬರ್ ನಂತರ ಇದೇ ಮೊದಲ ಬಾರಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 2 ಸಾವಿರದ ಗಡಿ ದಾಟಿದೆ. ಈ ಪೈಕಿ ಮುಂಬೈ ನಗರ ಒಂದರಲ್ಲೇ ಭಾನುವಾರ 123 ಹೊಸ ಪ್ರಕರಣಗಳು ವರದಿಯಾಗಿವೆ. ಮುಂಬೈ ನಗರದಾದ್ಯಂತ ಕೋವಿಡ್ ಸೋಂಕಿನ ಗಂಭೀರ ಲಕ್ಷಣ ಉಳ್ಳ 17 ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಹಲವು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಈ ಬೆಳವಣಿಗೆ ಕಂಡು ಬಂದಿದೆ.

ಇದನ್ನೂ ಓದಿ : ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಹೊಸದಾಗಿ 1.590 ಪ್ರಕರಣಗಳು ದೃಢ

ಮುಂಬೈ ನಗರದಾದ್ಯಂತ ಕೋವಿಡ್ ಸೋಂಕಿನ ಗಂಭೀರ ಲಕ್ಷಣ ಉಳ್ಳ 43 ರೋಗಿಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 21 ಮಂದಿ ಕೃತಕ ಆಮ್ಲಜನಕ ವ್ಯವಸ್ಥೆಯಲ್ಲಿ ಉಸಿರಾಟ ನಡೆಸುತ್ತಿದ್ದಾರೆ.  ಮುಂಬೈನ ಪ್ರತಿಷ್ಠಿತ ಲೀಲಾವತಿ ಆಸ್ಪತ್ರೆಯಲ್ಲಿ 15 ಬೆಡ್‌ಗಳ ಟ್ರಿಯೇಜ್ ವಾರ್ಡ್‌ ಹಾಗೂ ಐಸಿಯು ವಾರ್ಡ್‌ಗಳನ್ನು ಕೋವಿಡ್ ಸೋಂಕಿತರಿಗಾಗಿ ಕಾಯ್ದಿರಿಸಲಾಗಿದೆ ಎಂದು ಆಸ್ಪತ್ರೆಯ ಸಿಇಒ ಡಾ. ವಿ. ರವಿಶಂಕರ್ ಹೇಳಿದ್ದಾರೆ. ಕೋವಿಡ್ ಪ್ರಕರಣಗಳು ತೀವ್ರ ಗತಿಯಲ್ಲಿ ಏರುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಮಾಸ್ಕ್ ಸೇರಿದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.

ಇದನ್ನೂ ಓದಿ : ಕೋವಿಡ್ -19 : ಹೊಸದಾಗಿ 1,805 ಪ್ರಕರಣ ಪತ್ತೆ, ಆರು ಮಂದಿ ಸಾವು

ಅದರಲ್ಲೂ ರೋಗಿಗಳ ಜೊತೆ ನೇರ ಸಂಪರ್ಕ ಹೊಂದಿರುವ ಸಿಬ್ಬಂದಿ ಹೆಚ್ಚಿನ ನಿಗಾ ವಹಿಸಬೇಕೆಂದು ಹೇಳಲಾಗಿದೆ. ಇನ್ನು ಮುಂಬೈನ ಮತ್ತೊಂದು ಜನಪ್ರಿಯ ಆಸ್ಪತ್ರೆಯಾದ ಬಾಂಬೆ ಹಾಸ್ಪಿಟಲ್‌ನಲ್ಲೂ 10 ಬೆಡ್‌ಗಳ ವಾರ್ಡ್‌ ಅನ್ನು ಕೋವಿಡ್ ಸೋಂಕಿತರಿಗಾಗಿ ಮೀಸಲಿಡಲಾಗಿದೆ. ಆಸ್ಪತ್ರೆಗೆ ಬರುವ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರೂ ಕೂಡಾ, ಸೋಂಕಿನ ಗಂಭೀರ ಲಕ್ಷಣ ಇದ್ದವರನ್ನು ಮಾತ್ರ ವಾರ್ಡ್‌ಗಳಿಗೆ ದಾಖಲು ಮಾಡಿಕೊಳ್ಳಲಾಗುತ್ತಿದೆ. ಅದರಲ್ಲೂ ವಯೋ ವೃದ್ಧರನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಬೇಕಾದ ಸನ್ನಿವೇಶ ಬಂದರೂ ಕೂಡಾ ಅವರ ಮನೆಗೇ ಹೋಗಿ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನೂ ಆಸ್ಪತ್ರೆ ಕಲ್ಪಿಸಿದೆ. ಒಂದು ವೇಳೆ ಕೋವಿಡ್ ಪ್ರಕರಣಗಳು ದಿಢೀರ್ ಹೆಚ್ಚಾದರೆ ಆಸ್ಪತ್ರೆಯಲ್ಲಿ ಬೆಡ್‌ಗಳ ಕೊರತೆ ಆಗದಂತೆ ನೋಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ.

Donate Janashakthi Media

Leave a Reply

Your email address will not be published. Required fields are marked *