ಪ್ರೊ. ಪ್ರಭಾತ್ ಪಟ್ನಾಯಕ್
ಅನು:ಕೆ.ಎಂ.ನಾಗರಾಜ್
18ನೇ ಶತಮಾನದ ಹಿರಿಯ ಅರ್ಥಶಾಸ್ತ್ರಜ್ಞ ಆಡಂ ಸ್ಮಿತ್ ತಮ್ಮ ಕಾಲದ ಉತ್ತರ ಅಮೆರಿಕಾವು ಪ್ರಗತಿಶೀಲ ಪ್ರಭುತ್ವಕ್ಕೂ, ಬಂಗಾಳವು ಅವನತಿಯಲ್ಲಿರುವ ಪ್ರಭುತ್ವಕ್ಕೂ ಉದಾಹರಣೆ ಎಂದಿದ್ದರು. ಅವರು ಗಮನಿಸಿದ ಆ ವ್ಯತ್ಯಾಸಗಳು ಆಗ ಸಂಪೂರ್ಣವಾಗಿ ಸಮಂಜಸವಾಗಿದ್ದವು. ಆದರೆ ಅದಕ್ಕೆ ಗುರುತಿಸಿದ ಕಾರಣವು ತಪ್ಪಾಗಿತ್ತು. ನಿಜವ್ಯತ್ಯಾಸವಿರುವುದು ಯುರೋಪಿಯನ್ನರ ವಲಸೆಯಿಂದ ರೂಪುಗೊಂಡ “ನೆಲಸಿಗ ವಸಾಹತು” ಮತ್ತು ಯುರೋಪಿನ ದೇಶಗಳು ವಶಪಡಿಸಿಕೊಂಡ “ಅಧೀನ ವಸಾಹತು”ಗಳ ನಡುವೆ. ಇವುಗಳ ಅಭಿವೃದ್ಧಿಯ ದಿಕ್ಪಥಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ. ಆಡಮ್ ಸ್ಮಿತ್ 1776ರಲ್ಲಿ ಈ ಅಂಶಗಳನ್ನು ಮನಗಂಡಿರಲಿಲ್ಲ. ಇದಕ್ಕೆ ವಿನಾಯ್ತಿ ಇದೆ. ಆದರೆ, ಅಮೆರಿಕಾ ಮತ್ತು ಕೆನಡಾ ದೇಶಗಳು ಹಿಂದೆ ಅಭಿವೃದ್ಧಿ ಹೊಂದಿದ ರೀತಿಯಲ್ಲಿ ಈಗ ನವ-ಉದಾರವಾದಿ ಆಳ್ವಿಕೆಯ ಅಡಿಯಲ್ಲಿ ಭಾರತ ಮತ್ತು ಇಂಡೋನೇಷ್ಯಾದಂತಹ ದೇಶಗಳು ಅಭಿವೃದ್ಧಿ ಹೊಂದುತ್ತವೆ ಎಂದು ನಂಬುವವರ ತಪ್ಪುಗ್ರಹಿಕೆಗೆ ವಿನಾಯ್ತಿ ಇಲ್ಲ .
ಆಡಮ್ ಸ್ಮಿತ್, 1776 ರಲ್ಲಿ ಪ್ರಕಟವಾದ ʼದ ವೆಲ್ತ್ ಆಫ್ ನೇಷನ್ಸ್ʼ ಎಂಬ ತಮ್ಮ ಮೇರು ಕೃತಿಯಲ್ಲಿ, ಒಂದು ಪ್ರಗತಿಶೀಲ ಪ್ರಭುತ್ವ, ಒಂದು ಸ್ಥಗಿತ ಪ್ರಭುತ್ವ ಮತ್ತು ಒಂದು ಅವನತಿಯಲ್ಲಿರುವ ಪ್ರಭುತ್ವ ಇವುಗಳ ಪ್ರತ್ಯೇಕ ಗುಣಲಕ್ಷಣಗಳನ್ನು ಗುರುತಿಸಿದ್ದರು. ಪ್ರಗತಿಶೀಲ ಪ್ರಭುತ್ವದಲ್ಲಿ ಬಂಡವಾಳದ ಶೇಖರಣೆಯು ಜನಸಂಖ್ಯೆಯ ಬೆಳವಣಿಗೆಗಿಂತ ವೇಗವಾಗಿರುತ್ತದೆ. ಆದ್ದರಿಂದ, ಅಲ್ಲಿ ವೇತನಗಳ ಏರಿಕೆಯಾಗುತ್ತದೆ ಮತ್ತು ಜನಸಂಖ್ಯೆಯೂ ಬೆಳೆಯುತ್ತದೆ. ಅವನತಿಯ ಪ್ರಭುತ್ವದಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿರುತ್ತದೆ ಮತ್ತು ಸ್ಥಗಿತ ಪ್ರಭುತ್ವದಲ್ಲಿ ಬಂಡವಾಳದ ಶೇಖರಣೆ ಮತ್ತು ಜನಸಂಖ್ಯೆಯ ಬೆಳವಣಿಗೆ ನಿಂತಲ್ಲೇ ಉಳಿಯುವ ಕಾರಣದಿಂದ ಕಾರ್ಮಿಕರ ಸಂಖ್ಯಾ ಬಲ ಮತ್ತು ಅವರ ವೇತನ ಮಟ್ಟ ಇದ್ದಲ್ಲೇ ಇರುತ್ತವೆ ಹಾಗೂ ಅವು ಒಂದು ಪ್ರಗತಿಶೀಲ ಪ್ರಭುತ್ವದಲ್ಲಿ ಇರುವ ಮಟ್ಟದ ಕೆಳಗಿರುತ್ತವೆ. ಈ ಎಲ್ಲ ಅಂಶಗಳನ್ನು ಗಮನಿಸಿದ ಅವರು ಹೀಗೆ ವ್ಯಾಖ್ಯಾನಿಸಿದರು: “ಕಾರ್ಮಿಕರ ವೇತನಗಳಲ್ಲಿ ಹೆಚ್ಚಳ ಉಂಟಾಗುವುದು ರಾಷ್ಟ್ರದ ಸಂಪತ್ತಿನ ನಿರಂತರ ವೃದ್ಧಿಯ ಕಾರಣದಿಂದ; ಅದರ ಉದಾತ್ತತೆಯ ಕಾರಣದಿಂದಲ್ಲ.” ಮುಂದುವರೆದು “ಪ್ರಗತಿಶೀಲ ಪ್ರಭುತ್ವ ಸಮಾಜದಲ್ಲಿ ಎಲ್ಲ ವರ್ಗದವರೂ ಸಂತಸದಿಂದ ಮತ್ತು ಸೌಹಾರ್ಧದಿಂದ ಇರುತ್ತಾರೆ. ಸ್ಥಗಿತ ಪ್ರಭುತ್ವ ಮಂಕು ಬಡಿದವರಂತೆ ಮತ್ತು ಅವನತಿಯ ಪ್ರಭುತ್ವ ವ್ಯಾಕುಲಗೊಂಡಿರುತ್ತದೆ” ಎಂದೂ ಹೇಳಿದ್ದರು. ಅವರ ಪ್ರಕಾರ, ಅವರ ಕಾಲದ ಉತ್ತರ ಅಮೆರಿಕಾದ ಪ್ರಭುತ್ವವು ಪ್ರಗತಿಶೀಲತೆಗೂ, ಬಂಗಾಳವು ಅವನತಿಯಲ್ಲಿರುವ ಪ್ರಭುತ್ವಕ್ಕೂಮತ್ತು ಚೀನಾ ಸ್ಥಿರತೆಯ ಪ್ರಭುತ್ವಕ್ಕೂ ಉದಾಹರಣೆಯಾಗಿದ್ದವು.
ಉತ್ತರ ಅಮೇರಿಕಾ ಮತ್ತು ಬಂಗಾಳ ಇವುಗಳ ಸ್ಥಿತಿ-ಗತಿಗಳನ್ನು ಸ್ಮಿತ್ ಹೋಲಿಕೆ ಮಾಡಿ ನೋಡಿದರು. ಅವರು ಗಮನಿಸಿದ ವ್ಯತ್ಯಾಸಗಳು ಆ ಸಮಯದಲ್ಲಿ ಸಂಪೂರ್ಣವಾಗಿ ಸಮಂಜಸವಾಗಿದ್ದವು ಮಾತ್ರವಲ್ಲ, ಸೂಕ್ಷ್ಮಒಳನೋಟಗಳಿಂದ ಕೂಡಿದ್ದವು. ಹಾಗೆ ನೋಡಿದರೆ ಆಡಮ್ ಸ್ಮಿತ್ ಈ ಬಗ್ಗೆ ಬರೆದ ಸಮಯದಲ್ಲಿ ಬಂಗಾಳದಲ್ಲಿದ್ದ ನೈಜ ಪರಿಸ್ಥಿತಿಯು ಅವರು ಊಹಿಸಿದುದಕ್ಕಿಂತಲೂ ಕೆಟ್ಟದಾಗಿತ್ತು: ಮೊಘಲ್ ಚಕ್ರವರ್ತಿ ಶಾ ಆಲಂನಿಂದ ಬಂಗಾಳದ ಮೇಲಿನ ದಿವಾನಿಯನ್ನು ಈಸ್ಟ್ ಇಂಡಿಯಾ ಕಂಪನಿಯು ಸ್ವಾಧೀನಪಡಿಸಿಕೊಂಡ ನಂತರ, ಭೂ ಕಂದಾಯವನ್ನು ಎಷ್ಟು ತೀವ್ರವಾಗಿ ಏರಿಸಲಾಯಿತು ಎಂದರೆ, ಈ ಕ್ರಮವು 1770-72ರ ಅವಧಿಯಲ್ಲಿ ಬಂಗಾಳದಲ್ಲಿ ಒಂದು ಭೀಕರ ಕ್ಷಾಮವನ್ನು ಉಂಟುಮಾಡಿತು. ಅದರಲ್ಲಿ ಬಂಗಾಳದ ಜನಸಂಖ್ಯೆಯ ಸರಿಸುಮಾರು ಮೂರನೇ ಒಂದು ಭಾಗದಷ್ಟು ಜನರು (ಅಂದರೆ, 10 ಮಿಲಿಯನ್ ಜನರು) ಸತ್ತರು ಎಂದು ಅಂದಾಜು ಮಾಡಲಾಗಿದೆ.
ಆಡಂ ಸ್ಮಿತ್‌ರ ತಪ್ಪು ವಿವರಣೆ
ಬಂಡವಾಳದ ಶೇಖರಣೆ ಮತ್ತು ಜನಸಂಖ್ಯೆ ಈ ಎರಡೂ ಅಂಶಗಳು ಬಂಗಾಳದಲ್ಲಿ ಇಳಿಕೆಯಾಗುತ್ತಿದ್ದ ಅವಧಿಯಲ್ಲಿ ಉತ್ತರ ಅಮೇರಿಕಾದಲ್ಲಿ ಬಂಡವಾಳದ ಶೇಖರಣೆಯು ಏಕೆ ವೇಗವಾಗಿ ಸಂಭವಿಸಿತು ಎಂಬುದರ ಬಗ್ಗೆ ಆಡಮ್ ಸ್ಮಿತ್ ಕೊಟ್ಟ ವಿವರಣೆ ಏನೆಂದರೆ, ಉತ್ತರ ಅಮೇರಿಕಾವನ್ನು ಬ್ರಿಟಿಷ್ ಸರ್ಕಾರ ಆಳುತ್ತಿತ್ತು (ಇದನ್ನು 1775-76ರ ಅಮೆರಿಕಾದ ಸ್ವಾತಂತ್ರ‍್ಯದ ಯುದ್ಧ ನಡೆಯುವ ಮೊದಲೇ ಸ್ಮಿತ್ ಬರೆದಿದ್ದರು) ಮತ್ತು ಬಂಗಾಳವನ್ನು ಒಂದು ವ್ಯಾಪಾರಿ ಕಂಪನಿ, ಅಂದರೆ ಈಸ್ಟ್ ಇಂಡಿಯಾ ಕಂಪನಿಯು ಆಳುತ್ತಿತ್ತು ಎಂಬುದು. laissez-faire (ಅಂದರೆ ‘ಏನಾದರೂ ಮಾಡಿಕೊಳ್ಳಲಿ, ಅರ್ಥಶಾಸ್ತ್ರದಲ್ಲಿ, ವ್ಯಾಪಾರ ಮತ್ತು ಕೈಗಾರಿಕಾ ಚಟುವಟಿಕೆಗಳಲ್ಲಿ ಸರ್ಕಾರ ಭಾಗವಹಿಸದಿರುವ ನಿಲುವು) ನ ಬಂಡವಾಳಶಾಹಿಯ ಕಟ್ಟಾ ಸಮರ್ಥಕರಾಗಿದ್ದ ಮತ್ತು ವಾಣಿಜ್ಯವಾದಿ ಏಕಸ್ವಾಮ್ಯವನ್ನು ವಿರೋಧಿಸುತ್ತಿದ್ದ ಕಾರಣದಿಂದಾಗಿ ಈಸ್ಟ್ ಇಂಡಿಯಾ ಕಂಪನಿಯನ್ನು ದ್ವೇಷಿಸುತ್ತಿದ್ದ ಸ್ಮಿತ್ ಅವರ ಈ ವಿವರಣೆಯು ಆಶ್ಚರ್ಯಕರವಲ್ಲದಿದ್ದರೂ, ಅದು ಸಂಪೂರ್ಣವಾಗಿ ತಪ್ಪು.
ಆ ವೇಳೆಗಾಗಲೇ ಕಂಪನಿಯ ಆಳ್ವಿಕೆಗೆ ಒಳಪಟ್ಟಿದ್ದ ಬಂಗಾಳ ಮತ್ತು ಭಾರತದ ಉಳಿದ ಭಾಗಗಳನ್ನು. 1858ರಲ್ಲಿ ಬ್ರಿಟಿಷ್ ಸರ್ಕಾರವು ಭಾರತದ ಆಳ್ವಿಕೆಯನ್ನು 1857ರ ಬಂಡಾಯದ ನಂತರ ತನ್ನ ಕೈಗೆ ತೆಗೆದುಕೊಂಡಾಗ ಬಂಗಾಳದ ಅವನತಿ ನಿಲ್ಲಲಿಲ್ಲ; ಸ್ವಾತಂತ್ರ‍್ಯ ಬರುವವರೆಗೂ ಕ್ಷಾಮಗಳು ನಿಲ್ಲಲಿಲ್ಲ ಮತ್ತು ವಸಾಹತುಶಾಹಿ ಆಡಳಿತದ ಸುಲಿಗೆಕೋರತನ ಸ್ವಲ್ಪವೂ ಕಡಿಮೆಯಾಗಲಿಲ್ಲ. ಉತ್ತರ ಅಮೇರಿಕಾ ಮತ್ತು ಬಂಗಾಳದ ನಡುವೆ ಕಂಡುಬಂದ ಈ ವ್ಯತಿರಿಕ್ತ ಪರಿಸ್ಥಿತಿಗೆ ಸ್ಮಿತ್ ಗುರುತಿಸಿದ ಕಾರಣವು ತಪ್ಪಾಗಿತ್ತು. ನಿಜಸಂಗತಿಯೆಂದರೆ, ಉತ್ತರ ಅಮೇರಿಕಾ ಒಂದು “ನೆಲಸಿಗ ವಸಾಹತು”ವಾಗಿತ್ತು ಮತ್ತು ಬಂಗಾಳವು ಒಂದು “ಅಧೀನ ವಸಾಹತು” ಆಗಿತ್ತು.
ಸಮಶೀತೋಷ್ಣ ಪ್ರದೇಶಗಳಿಗೆ ವಲಸೆ ಹೋದ ಯುರೋಪಿಯನ್ನರು ಅಲ್ಲಿನ ಮೂಲ ನಿವಾಸಿಗಳನ್ನು ಅವರ ಭೂಮಿಯಿಂದಲೇ ಓಡಿಸಿದರು ಮತ್ತು ಯುರೋಪಿಯನ್ನರೊಂದಿಗೆ ಸಂಪರ್ಕಕ್ಕೆ ಬಂದೂ ಬದುಕುಳಿದವರನ್ನು “ಮೀಸಲು ಪ್ರದೇಶ” ಗಳನ್ನು ನಿರ್ಮಿಸಿ ಅವುಗಳಲ್ಲಿ ಕೂಡಹಾಕಿದರು. ಸ್ಥಳೀಯ ನಿವಾಸಿಗಳ ಭೂಮಿ-ಕಾಣಿ, ಮನೆ-ಮಠ, ಆಸ್ತಿ-ಪಾಸ್ತಿಗಳನ್ನು ಕಿತ್ತುಕೊಂಡರು. ಇಂತಹ ಕ್ರೌರ್ಯದ ಕ್ರಮಗಳ ಮೂಲಕ ಯೂರೋಪಿನ ವಲಸಿಗರು ವಸಾಹತುಗಳಲ್ಲಿ ಸ್ಥಿತಿವಂತ ರೈತರಾದರು ಅಥವ ಕೃಷಿಯ ಗುಣಕ ಪರಿಣಾಮಗಳ ಫಲವಾಗಿ ಉದ್ಭವಿಸಿದ ಹತ್ತು ಹಲವು ವೃತ್ತಿಗಳಲ್ಲಿ ತೊಡಗಿದರು. 1815 ಮತ್ತು 1914ರ ನಡುವೆ, ಸುಮಾರು 50 ಮಿಲಿಯನ್ ಯುರೋಪಿಯನ್ನರು, ಕೆನಡಾ, ಉತ್ತರ ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ಬಿಳಿಯ ವಸಾಹತುಗಳ ಈ ಸಮಶೀತೋಷ್ಣ ಪ್ರದೇಶಗಳಿಗೆ ಯುರೋಪಿನಿಂದ ವಲಸೆ ಹೋದರು ಎಂದು ವಿದ್ವಾಂಸರು ಅಂದಾಜು ಮಾಡಿದ್ದಾರೆ (ಅದಕ್ಕೂ ಮೊದಲು ವಲಸೆ ನಡೆಯುತ್ತಿತ್ತು, ಆದರೆ ಪ್ರಮಾಣ ಸಣ್ಣದಿತ್ತು). ಇದೇ ಅವಧಿಯಲ್ಲಿ ಉಷ್ಣವಲಯ ವಲಸೆ ಭಾರತದಿಂದ ಮತ್ತು ಚೀನಾದಿಂದ ಕರಾರು ಅಥವ ಕೂಲಿ ಶ್ರಮದ ರೂಪದ ಮತ್ತು ಅದೇ ಪ್ರಮಾಣದ ಮತ್ತೊಂದು ವಲಸೆಯೂ ನಡೆಯಿತು. ಈ ಸನ್ನಿವೇಶದಲ್ಲಿ ಕಂಡು ಬಂದ ಒಂದು ಗಮನಾರ್ಹವಾದ ಸಂಗತಿಯೆಂದರೆ, ಯುರೋಪಿಯನ್ ವಲಸಿಗರು ನೆಲೆಸಿದ ಈ ಸಮಶೀತೋಷ್ಣ ವಲಯದ ದೇಶಗಳಲ್ಲಿ ಉಷ್ಣವಲಯದ ವಲಸಿಗರಿಗೆ ಅನಿರ್ಬಂಧಿತ ಪ್ರವೇಶಾವಕಾಶ ಇರಲಿಲ್ಲ ಎಂಬುದು. ವಾಸ್ತವವಾಗಿ, ಸಮಶೀತೋಷ್ಣ ವಲಯದ ಈ ದೇಶಗಳಿಗೆ ಇಂದಿಗೂ ಉಷ್ಣವಲಯದ ವಲಸಿಗರಿಗೆ ಅನಿರ್ಬಂಧಿತ ಪ್ರವೇಶಾವಕಾಶದ ಅನುಮತಿ ಇಲ್ಲ.
ಇದನ್ನು ಓದಿ : ಮಾರ್ಕ್ಸಿಸ್ಟ್ ಆಗುವುದೆಂದರೆ…. | ಕಿರಂ ನೋಟ
ಸಮಶೀತೋಷ್ಣ ಪ್ರದೇಶಗಳಿಗೆ ಯುರೋಪಿನಿಂದ ಜನರ ವಲಸೆಯ ಜೊತೆಗೆ ಮತ್ತು ಅದಕ್ಕೆ ಸಮಾನಾಂತರವಾಗಿ ಬಂಡವಾಳವೂ ವಲಸೆ ಹೋಯಿತು. ಪರಿಣಾಮವಾಗಿ ಈ “ಹೊಸ ಪ್ರಪಂಚ”ದಲ್ಲಿ ಕೈಗಾರಿಕಾ ಚಟುವಟಿಗಳು ಪ್ರಸರಿಸಿದವು. ಈ ವಿದ್ಯಮಾನಕ್ಕೆ ವ್ಯತಿರಿಕ್ತವಾಗಿ, ಕೊನೆಯ ಪಕ್ಷ ಇತ್ತೀಚಿನವರೆಗೆ, ಯುರೋಪಿನಿಂದಾಗಲಿ ಅಥವಾ ಹೊಸದಾಗಿ ಕೈಗಾರಿಕೀಕರಣವನ್ನು ಕಂಡ ಯುರೋಪಿಯನ್ ವಲಸಿಗರ ದೇಶಗಳಿಂದಾಗಲಿ (“ಹೊಸ ಪ್ರಪಂಚ”), ಉಷ್ಣವಲಯ ಅಥವಾ ಅರೆ-ಉಷ್ಣವಲಯ ಪ್ರದೇಶಗಳಲ್ಲಿ ನೆಲೆಗೊಂಡ “ಅಧೀನ ವಸಾಹತು”ಗಳಿಗೆ ಕೈಗಾರಿಕಾ ಚಟುವಟಿಕೆಗಳ ಪ್ರಸರಣವು ಬಹಳ ಕಡಿಮೆಯೇ ಇತ್ತು. ಈ “ಅಧೀನ ವಸಾಹತು”ಗಳಲ್ಲಿ ಯೂರೋಪಿನ ದೇಶಗಳು(ಮೆಟ್ರೊಪೊಲಿಸ್- metropolis) ಒಂದಿಷ್ಟು ಬಂಡವಾಳ ಹೂಡಿಕೆ ಮಾಡಿವೆ, ನಿಜ. ಆದರೆ, ಈ ಹೂಡಿಕೆಯು ಕಾರ್ಮಿಕರನ್ನು ಅಂತಾರಾಷ್ಟ್ರೀಯವಾಗಿ ವಿಭಜಿಸುವ ವಸಾಹತುಶಾಹಿ ಮಾದರಿಗೆ ಅನುಗುಣವಾಗಿತ್ತು ಮತ್ತು ವಸಾಹತುಗಳಿಂದ ತಮಗೆ ಬೇಕಾಗುವ ಪ್ರಾಥಮಿಕ ಸರಕುಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿತ್ತು. ಉದಾಹರಣೆಗೆ, ಮೊದಲ ವಿಶ್ವಯುದ್ಧದ ಆರಂಭದ ಸಮಯದಲ್ಲಿ ಬ್ರಿಟನ್ ಕೈಗೊಂಡ ನೇರ ವಿದೇಶಿ ಹೂಡಿಕೆಯ ಕೇವಲ ಶೇ. 10ರಷ್ಟು ಅದರ ಅತಿ ದೊಡ್ಡ ವಸಾಹತು ಎನಿಸಿದ್ದ ಭಾರತ ಉಪ-ಖಂಡದಲ್ಲಿ ಆಗಿತ್ತು ಮತ್ತು ಅದೂ ಸಹ, ಚಹಾ, ಸೆಣಬು ಮತ್ತು ಅವುಗಳ ರಫ್ತಿಗೆ ಸಂಬಂಧಿಸಿದ ವಲಯದ ಚಟುವಟಿಕೆಗಳಲ್ಲಿ ಮಾತ್ರ ಆಗಿತ್ತು.
“ಇನ್ನೊಂದು ಮುಖ”
ಅಧೀನಪಡಿಸಿಕೊಂಡ ವಸಾಹತುಗಳಲ್ಲಿ ನಡೆಸಿದ ‘ಮಿಗುತಾಯವನ್ನು ಬರಿದಾಗಿಸುವ’(drain of surplus) ಪ್ರಕ್ರಿಯೆ ಕಾರಣದಿಂದಷ್ಟೇ ಅವುಗಳ ಅವನತಿ ಸಂಭವಿಸಿದ್ದಲ್ಲ. ತೆರಿಗೆ ಆದಾಯದಿಂದ ಬಂದ ಹಣದಿಂದ ನಡೆದ ಈ ಪ್ರಕ್ರಿಯೆ ವಸಾಹತುಗಳ ಸಮಸ್ತ ರಫ್ತು ಮಿಗುತಾಯದ ರೂಪ ಪಡೆದು ಯುರೋಪಿನ ವಸಾಹತುಶಾಹಿ ದೇಶಗಳಿಗೆ ಬಿಟ್ಟಿಯಾಗಿ ಹರಿದು ಹೋಗುವಂತೆ ಮಾಡಿತು. ಈ ಅಗಾಧ ಬಿಟ್ಟಿ ಹರಿವು ಒಂದು ವೇಳೆ ಸಂಭವಿಸದೇ ಇದ್ದಿದ್ದರೆ ಈ ವಸಾಹತುಶಾಹಿ ದೇಶಗಳಲ್ಲಿ ಕೈಗಾರಿಕಾ ಕ್ರಾಂತಿ ನಡೆಯುತ್ತಿತ್ತೇ ಎಂಬ ಅನುಮಾನವಿದೆ. ವಸಾಹತುಶಾಹಿ ದೇಶಗಳು ತಯಾರಿಸಿದ ಸರಕು ಸಾಮಗ್ರಿಗಳನ್ನು ಆಮದು ಮಾಡಿಕೊಂಡ ಕಾರಣದಿಂದಾಗಿ ಅಧೀನಪಡಿಸಿಕೊಂಡ ವಸಾಹತು ದೇಶಗಳ ಬಂಡವಾಳಶಾಹಿ-ಪೂರ್ವದ ಕಿರು ಉತ್ಪಾದನಾ ಕೈಗಾರಿಕಾ ಚಟುವಟಿಕೆಗಳು ನಾಶವಾದವು. ಈ ವಿನಾಶದ ಪ್ರಕ್ರಿಯೆಯನ್ನು “ಅಪ-ಕೈಗಾರಿಕೀಕರಣ” ಎಂದು ಹೇಳಲಾಗುತ್ತದೆ. ಈ ವಿನಾಶದಿಂದಾಗಿ ಕುಶಲಕರ್ಮಿಗಳು ಮತ್ತು ಕಸುಬುದಾರರು ಉದ್ಯೋಗಹೀನರಾದರು. ಬೃಹತ್ ಪ್ರಮಾಣದ ನಿರುದ್ಯೋಗ ಉಂಟಾಯಿತು. ಇದು ಕೃಷಿಯ ಮೇಲಿನ ಒತ್ತಡವನ್ನು ಹೆಚ್ಚಿಸಿತು, ಬಾಡಿಗೆಗಳನ್ನು ಹೆಚ್ಚಿಸಿತು, ವೇತನವನ್ನು ಕಡಿಮೆ ಮಾಡಿತು ಮತ್ತು ಸಾಮೂಹಿಕ ಬಡತನವನ್ನು ಹುಟ್ಟುಹಾಕಿತು. ಆದ್ದರಿಂದ, ಆಡಮ್ ಸ್ಮಿತ್ ಭಾವಿಸಿದ ರೀತಿಯಲ್ಲಿ ಬಂಗಾಳವು ಕೇವಲ ಬಂಡವಾಳದ ನಕಾರಾತ್ಮಕ ಶೇಖರಣೆಯ ಕಾರಣದಿಂದ ಹಾನಿಗೊಳಗಾಗಲಿಲ್ಲ. ಮತ್ತು ಅದರ “ಅವನತಿಯ ಸ್ಥಿತಿ”ಯು ಕೇವಲ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯ ಫಲಿತಾಂಶವಲ್ಲ. ಬದಲಾಗಿ, ಬ್ರಿಟನ್‌ನಲ್ಲಿ ಸಂಭವಿಸಿದ ಬಂಡವಾಳದ ಶೇಖರಣೆಯ “ಇನ್ನೊಂದು ಮುಖ”ವೇ ಆಗಿತ್ತು. ಅದರ ಅವನತಿಯು ಈಸ್ಟ್ ಇಂಡಿಯ ಕಂಪನಿಯ ಆಳ್ವಿಕೆ ಮಾತ್ರವಲ್ಲ, ಬ್ರಿಟನ್‌ನಲ್ಲಿ ಸಂಭವಿಸಿದ ಕೈಗಾರಿಕಾ ಬಂಡವಾಳಶಾಹಿಯ ಬೆಳವಣಿಗೆಯ ಫಲಿತಾಂಶವೂ ಆಗಿದೆ. ಬ್ರಿಟನ್ನಿನ ಕೈಗಾರಿಕಾ ಬಂಡವಾಳಶಾಹಿಯು, ಅಂತಿಮವಾಗಿ, ತನ್ನ ಉತ್ಪನ್ನಗಳನ್ನು ಭಾರತದಲ್ಲಿ ಸುಲಭವಾಗಿ ಮಾರಾಟ ಮಾಡಲು ಈಸ್ಟ್ ಇಂಡಿಯಾ ಕಂಪನಿಯ ವ್ಯಾಪಾರ ಏಕಸ್ವಾಮ್ಯವನ್ನು ಮುರಿಯುವುದು ಅಗತ್ಯವಿತ್ತು.
ಇದೆಲ್ಲವೂ ಸಾಕಷ್ಟು ಚೆನ್ನಾಗಿ ತಿಳಿದ ವಿಷಯವೇ. ಆದರೂ ಅದನ್ನು ಇಲ್ಲಿ ಪ್ರಸ್ತಾಪಿಸುವ ಕಾರಣವೆಂದರೆ, ನೆಲಸಿಗ ವಸಾಹತುಗಳು ಮತ್ತು ಅಧೀನ ವಸಾಹತುಗಳ ನಡುವಿನ ವ್ಯತ್ಯಾಸಗಳನ್ನು ಅರ್ಥಶಾಸ್ತ್ರಜ್ಞರು ಮತ್ತು ಆರ್ಥಿಕ ಇತಿಹಾಸಕಾರರು ಇಂದಿಗೂ ನಿರೂಪಿಸಿಲ್ಲ. ಐತಿಹಾಸಿಕ ಅಂಶಗಳನ್ನು ಪ್ರಸ್ತುತಪಡಿಸುವಾಗ “ಸಾಮ್ರಾಜ್ಯ” ಎಂಬ ಪದ ಬಳಕೆಯ ಮೂಲಕ ಈ ಎರಡು ರೀತಿಯ ವಸಾಹತುಗಳೂ ಒಂದೇ ಎಂಬಂತೆ ಬಿಂಬಿಸುವ ಕ್ರಮವು ನಿಜಕ್ಕೂ ನಡೆದಿರುವುದು ಏನು ಎಂಬುದನ್ನು ಅಸ್ಪಷ್ಟಗೊಳಿಸಲು ಸಹಾಯ ಮಾಡುತ್ತದೆ.
ಅಷ್ಟೇ ಅಲ್ಲ. ಸಮಶೀತೋಷ್ಣ ಪ್ರದೇಶಗಳ ಬಿಳಿಯರ ವಸಾಹತುಗಳಿಗೆ ವಸಾಹತುಶಾಹಿ ದೇಶಗಳಿಂದ ಕೈಗಾರಿಕಾ ಚಟುವಟಿಕೆಗಳು ಈ ಹಿಂದೆ ಪಸರಿಸಿದ ರೀತಿಯಲ್ಲಿ ಮತ್ತು ಅದರಿಂದಾಗಿ ಅಮೆರಿಕಾ ಮತ್ತು ಕೆನಡಾ ದೇಶಗಳು ಹಿಂದೆ ಅಭಿವೃದ್ಧಿ ಹೊಂದಿದ ರೀತಿಯಲ್ಲಿ ಈಗ ನವ-ಉದಾರವಾದಿ ಆಳ್ವಿಕೆಯ ಅಡಿಯಲ್ಲಿ ಅಧೀನ ವಸಾಹತುಗಳಲ್ಲಿ ಕೈಗಾರಿಕಾ ಚಟುವಟಿಕೆಗಳ ಪ್ರಸರಣ ನಡೆಯುತ್ತಿರುವುದರಿಂದ ಭಾರತ ಮತ್ತು ಇಂಡೋನೇಷ್ಯಾದಂತಹ ದೇಶಗಳು ಪ್ರಸ್ತುತದಲ್ಲಿ ಅಭಿವೃದ್ಧಿ ಹೊಂದುತ್ತವೆ ಎಂದು ನಂಬಲಾಗಿದೆ.
ಈಗಿನ ತಪ್ಪು ಗ್ರಹಿಕೆ
ಈ ವಾದವು ಮೂರು ಸ್ಪಷ್ಟವಾದ ಅಂಶಗಳನ್ನು ಅರ್ಥಮಾಡಿಕೊಳ್ಳದೆ ಹೋಗುತ್ತದೆ. ಮೊದಲನೆಯದಾಗಿ, ಭಾರತ ಮತ್ತು ಇಂಡೋನೇಷ್ಯಾದಂತಹ ದೇಶಗಳು, ಅವು ಅಧೀನ ವಸಾಹತುಗಳಾಗಿದ್ದುದರಿಂದ, ಬಹಳ ಹಿಂದಿನಿಂದಲೇ ಅಲ್ಲಿ ನೆಲೆಸಿದ್ದ ಬಡತನ ಮತ್ತು ನಿರುದ್ಯೋಗದ ಹೊರೆಯನ್ನು ಬಳುವಳಿಯಾಗಿ ಪಡೆದಿವೆ. ಆದ್ದರಿಂದ ಈ ಸಮಸ್ಯೆಗಳನ್ನು ಸಮಶೀತೋಷ್ಣ ಪ್ರದೇಶಗಳ ಬಿಳಿಯರ ವಸಾಹತುಗಳಿಗೆ ವಸಾಹತುಶಾಹಿ ದೇಶಗಳಿಂದ ಬಂಡವಾಳವು ಒಳಹರಿದ ಸಂದರ್ಭದ ಅನುಭವವನ್ನು ನಕಲು ಮಾಡುವ ಮೂಲಕ ಪರಿಹರಿಸಿಕೊಳ್ಳಲಾಗದು. ಎರಡನೆಯದಾಗಿ, ಈ ದೇಶಗಳು ಇನ್ನೂ ಗಣನೀಯ ಪ್ರಮಾಣದ ಪುಟ್ಟ ಮತ್ತು ಸಣ್ಣ-ಪ್ರಮಾಣದ ಉತ್ಪಾದನೆಯನ್ನು ಹೊಂದಿವೆ. ಆದ್ದರಿಂದ, ಈ ದೇಶಗಳು ಬಂಡವಾಳದ ಒಳಹರಿವಿಗೆ ತೆರೆದುಕೊಂಡಾಗ ಅಲ್ಲಿನ ಮತ್ತಷ್ಟು ಸಣ್ಣ ಪುಟ್ಟ ಉದ್ದಿಮೆಗಳು ನಾಶವಾಗುತ್ತವೆ.
ವಸಾಹತುಶಾಹಿಯಿಂದ ಸೃಷ್ಟಿಸಲ್ಪಟ್ಟ ಶ್ರಮ ಮೀಸಲುಗಳನ್ನು ಈ ದೇಶಗಳ ಅಭಿವೃದ್ಧಿಗೆ ಬಳಸಿಕೊಳ್ಳುವ ಬದಲು, ಬಂಡವಾಳದ ಒಳಹರಿವು ಅಲ್ಲಿನ ಶ್ರಮಿಕ ಮೀಸಲು ಪಡೆಯ ಗಾತ್ರವನ್ನು ಮತ್ತಷ್ಟು ಹೆಚ್ಚಿಸಲು ಕಾರಣವಾಗುತ್ತದೆ. ಮೂರನೆಯದಾಗಿ, ಹತ್ತೊಂಬತ್ತನೇ ಶತಮಾನದಲ್ಲಿ ಸಮಶೀತೋಷ್ಣ ಪ್ರದೇಶಗಳ ಯುರೋಪಿಯನ್ ವಸಾಹತುಗಳಿಗೆ ಕೈಗಾರಿಕಾ ಚಟುವಟಿಕೆಗಳು ಪಸರಿಸಿದ ಸಮಯದಲ್ಲಿ, ಈ ವಸಾಹತು ದೇಶಗಳು ತಮ್ಮನ್ನು ತಾವು ಆಮದುಗಳಿಂದ ಬಲವಾಗಿ ರಕ್ಷಿಸಿಕೊಂಡವು. ಅಂತಹ ಪ್ರಸರಣವನ್ನು ಸ್ವೀಕರಿಸುವ ದೇಶಗಳ ಇಂದಿನ ಸಂದರ್ಭದಲ್ಲಿ, ನವ-ಉದಾರವಾದಿ ಆಳ್ವಿಕೆಯು ಆಮದುಗಳ ಮೇಲೆ ವಿಧಿಸುವ ಯಾವುದೇ ರಕ್ಷಣಾತ್ಮಕ ಕ್ರಮಗಳನ್ನು ತಡೆಯುವುದರಿಂದ ಈ ಪ್ರಸರಣವು ಸ್ಥಳೀಯವಾಗಿ ಉಂಟುಮಾಡಬಹುದಾದ ಗುಣಕ ಪರಿಣಾಮಗಳೂ ಮೊಟಕುಗೊಳ್ಳುತ್ತವೆ.
ಈ ಎಲ್ಲ ಅಂಶಗಳ ಜೊತೆಗೆ, ಈ ಹಿಂದಿನ ವಸಾಹತು ದೇಶಗಳ ಉತ್ಪನ್ನಗಳು, ಅವು ಯುರೋಪಿನ ಮೆಟ್ರೊಪಾಲಿಟನ್ ಬಂಡವಾಳದ ಸ್ಥಳಾಂತರದ ಮೂಲಕ ಉತ್ಪಾದಿಸಲ್ಪಟ್ಟಿದ್ದರೂ ಸಹ, ಮೆಟ್ರೊಪಾಲಿಟನ್ ದೇಶಗಳು ಆಂತರಿಕವಾಗಿ ಉತ್ಪಾದಿಸಿದ ಉತ್ಪನ್ನಗಳೊಂದಿಗೆ ಪೈಪೋಟಿಯಲ್ಲಿ ಮೇಲುಗೈ ಪಡೆದು ತಮ್ಮ ದೇಶೀಯ ನಿರುದ್ಯೋಗದ ಹೆಚ್ಚಳಕ್ಕೆ ಕಾರಣವಾದಾಗ ಮೆಟ್ರೊಪಾಲಿಟನ್ ದೇಶಗಳು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಪ್ರಸ್ತುತದಲ್ಲಿ ಚೀನಾದ ಆಮದುಗಳಿಂದ ರಕ್ಷಿಸಿಕೊಳ್ಳಲು ಅಮೆರಿಕಾ ಕೈಗೊಳ್ಳುತ್ತಿರುವ ಕ್ರಮಗಳು ಉಂಟುಮಾಡುತ್ತಿರುವ ಪರಿಣಾಮಗಳು ಈ ಸಂದರ್ಭದಲ್ಲಿ ಬಹಳ ಬೋಧಪ್ರದವಾಗಿವೆ.
ವಲಸಿಗ ವಸಾಹತುಗಳು ಮತ್ತು ಅಧೀನ ವಸಾಹತುಗಳ ಅಭಿವೃದ್ಧಿಯ ದಿಕ್ಪಥಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ. ಆಡಮ್ ಸ್ಮಿತ್ ಈ ಅಂಶಗಳನ್ನು ಮನಗಂಡಿರಲಿಲ್ಲ. ಅವರು ಈ ಎಲ್ಲವನ್ನೂ ಬಹಳ ಮುಂಚೆಯೇ ಬರೆದ ಒಬ್ಬ ಪ್ರವರ್ತಕರಾಗಿರುವುದರಿಂದ ಅವರಿಗೆ ಇದು ಕಾಣದುದಕ್ಕೆ ವಿನಾಯ್ತಿ ಇದೆ. ಆದರೆ, ವಲಸಿಗ ವಸಾಹತುಗಳು ಹಿಂದೆ ಅನುಸರಿಸಿದ ಅಭಿವೃದ್ಧಿಯ ದಿಕ್ಪಥವನ್ನು ಅಧೀನ ವಸಾಹತು ದೇಶಗಳು ಇಂದಿನ ದಿನಗಳಲ್ಲೂ ಅನುಸರಿಸಬಹುದು ಎಂದು ನಂಬುವವರ ಅಭಿಪ್ರಾಯವು ಸಂಪೂರ್ಣವಾಗಿ ತಪ್ಪುಗ್ರಹಿಕೆಯಾಗಿದೆ.
ಇದನ್ನು ನೋಡಿ : ಹಿರೋಷಿಮಾ, ನಾಗಸಾಕಿ ನಗರಗಳ ಮೇಲೆ ಅಮೇರಿಕಾ ಹಾಕಿದ ಅಣುಬಾಂಬಿನ ಭೀಕರತೆ ಬಿಚ್ಚಿಟ್ಟ ಯಮುನಾ ಗಾಂವ್ಕರ್