ಬೆಂಗಳೂರು: ಜಲಸಂಪನ್ಮೂಲ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಹುದ್ದೆ ಗಿಟ್ಟಿಸಿಕೊಳ್ಳಲು ನಕಲಿ ದಾಖಲೆ ಸಲ್ಲಿಸಿದ್ದ 37 ಮಂದಿ ಅಭ್ಯರ್ಥಿಗಳು ಸೇರಿ 48 ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿಯ ಮೊರಾರ್ಜಿ ದೇಸಾಯಿ ವಸತಿಯುತ ಪಿಯು ಕಾಲೇಜಿನ ಪ್ರಾಂಶುಪಾಲ ಆನಂದ್, ಜೋಗದ ಕೆಪಿಸಿಎಲ್ನ ದ್ವಿತೀಯ ದರ್ಜೆ ಸಹಾಯಕ ಕೃಷ್ಣ ಗುರುನಾಥ್ ರಾಥೋಡ್, ಹಾಸನದ ಜಲಸಂಪನ್ಮೂಲ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಪ್ರದೀಪ್, ಮಧ್ಯವರ್ತಿಗಳಾದ ಹಾಸನದ ಟಿ. ರವಿ, ಮಂಡ್ಯ ಜಿಲ್ಲೆ ಮಳವಳ್ಳಿಯ ಪ್ರದೀಪ್, ಜೇವರ್ಗಿಯ ನಿಂಗಪ್ಪ ನಡುವಿನಮನಿ, ವಿಜಯಪುರ ಜಿಲ್ಲೆ ಸಿಂಧಗಿಯ ಮಲ್ಲಿಕಾರ್ಜುನ್ ಸೋಪುರ, ಕಲಬುರಗಿಯ ಮುಸ್ತಾಫಾ, ಕೆಜಿಎಫ್ನ ಸುರೇಶ್ ಕುಮಾರ್, ಬೆಂಗಳೂರಿನ ಶರತ್, ತುಮಕೂರಿನ ಮುತ್ತುರಾಜ್ ಸೇರಿ 48 ಮಂದಿ ಸಿಸಿಬಿಯಿಂದ ಬಂಧನಕ್ಕೊಳಗಾಗಿದ್ದಾರೆ.
ಆರೋಪಿತರ ವಶದಿಂದ 40 ಲಕ್ಷ ರೂ ಬೆಲೆಯ 2 ಕಾರುಗಳು, 17 ಮೊಬೈಲ್ಗಳು, ಹಾರ್ಡ್ ಡಿಸ್ಕ್ ವಶ ಪಡಿಸಿ ಕೊಳ್ಳಲಾಗಿದೆ. ಬಂಧಿತರೆಲ್ಲರೂ ಮಧ್ಯಮ ವರ್ಗದವರಾಗಿದ್ದು, ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಅನುತ್ತೀರ್ಣ ಗೊಂಡವರಾಗಿದ್ದಾರೆ.
ಕೆಲವು ಅಭ್ಯರ್ಥಿಗಳು ಕಡಿಮೆ ಅಂಕ ಪಡೆದುಕೊಂಡಿದ್ದ ಕಾರಣ ಸರಕಾರಿ ಕೆಲಸ ಗಿಟ್ಟಿಸಿಕೊಳ್ಳಲು ನಕಲಿ ಅಂಕಪಟ್ಟಿ ಸೃಷ್ಟಿಸುವ ಜಾಲವನ್ನು ಸಂಪರ್ಕಿಸಿದ್ದಾರೆ.
ಇದನ್ನು ಓದಿ : ಮೂರು ತಿಂಗಳಿಂದ ಗೌರವಧನ ನೀಡುತ್ತಿಲ್ಲ; ಅಂಗನವಾಡಿ ನೌಕರರ ಆಕ್ರೋಶ
ಮಧ್ಯವರ್ತಿಗಳ ಮೂಲಕ ಲಕ್ಷಾಂತರ ರೂ. ದುಡ್ಡು ಕೊಟ್ಟು ಹೆಚ್ಚು ಅಂಕ ಹೊಂದಿರುವ ಮಾದರಿಯಲ್ಲಿ ಅಂಕಪಟ್ಟಿ ಪಡೆದಿದ್ದರು. ಬರೋಬ್ಬರಿ ಶೇ.90ರಿಂದ 98 ಅಂಕ ಪಡೆದಿರುವಂತೆ ನಕಲಿ ಅಂಕಪಟ್ಟಿ ಪಡೆದುಕೊಂಡಿದ್ದರು. ಬಳಿಕ ದ್ವಿತೀಯ ದರ್ಜೆ ಸಹಾಯಕ ಬ್ಯಾಕ್ಲಾಗ್ 182 ಹುದ್ದೆಗಳಿಗೆ ನೇರ ನೇಮಕಾತಿಯಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಪ್ರಕರಣದಲ್ಲಿ 25 ಮಂದಿ ಅಭ್ಯರ್ಥಿಗಳು ನಾಪತ್ತೆಯಾಗಿದ್ದು, ಬಂಧನಕ್ಕಾಗಿ ಶೋಧ ನಡೆಸಲಾಗುತ್ತಿದೆ.
ಜಲಸಂಪನ್ಮೂಲ ಇಲಾಖೆಯು 2022ರ ಅಕ್ಟೋಬರ್ನಲ್ಲಿ ದ್ವಿತೀಯ ದರ್ಜೆ ಸಹಾಯಕ ಬ್ಯಾಕ್ಲಾಗ್ 182 ಹು¨ªೆಗಳಿಗೆ ನೇರ ನೇಮಕಾತಿಯಡಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿತ್ತು. ನೇಮಕಾತಿಗಾಗಿ 62 ಮಂದಿ ಅಭ್ಯರ್ಥಿಗಳು ಸಲ್ಲಿಸಿದ್ದ ಅಂಕಪಟ್ಟಿ ಹಾಗೂ ಇತರ ದಾಖಲೆಗಳ ಪರಿಶೀಲನೆ ನಡೆಸಿದ ವೇಳೆ ಇದು ನಕಲಿ ಎಂಬುದು ಕಂಡುಬಂದಿತ್ತು.
ಸಂಬಂಧಿಸಿದ ಅಧಿಕಾರಿಗಳು ಶೇಷಾದ್ರಿಪುರ ಠಾಣೆಗೆ ದೂರು ನೀಡಿದ್ದರು. ಪೊಲೀಸ್ ಇಲಾಖೆಯು ಹೆಚ್ಚಿನ ತನಿಖೆಗಾಗಿ ಇದನ್ನು ಸಿಸಿಬಿ ವರ್ಗಾಯಿಸಲಾಗಿತ್ತು. ಸಿಸಿಬಿ ಪೊಲೀಸರು ತನಿಖೆ ನಡೆಸಿ ಕಲಬುರಗಿಯಲ್ಲಿ 25, ಹಾಸನ 12, ಬೆಳಗಾವಿ 3, ಕೋಲಾರ, ಕೊಪ್ಪಳ, ವಿಜಯನಗರ, ರಾಯಚೂರು ಸೇರಿದಂತೆ ಒಟ್ಟು 12 ಜಿಲ್ಲೆಗಳಿಂದ ಅನಧಿಕೃತವಾಗಿ ಅರ್ಜಿ ಸಲ್ಲಿಸಿದ್ದ 62 ಜನರ ಪೈಕಿ 37 ಅಭ್ಯರ್ಥಿಗಳನ್ನ ಬಂಧಿಸಿದೆ. ಇವರ ವಿಚಾರಣೆ ವೇಳೆ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ 11 ಮಂದಿ
ಸುಳಿವು ಸಿಕ್ಕಿತ್ತು.
ದ್ವಿತೀಯ ದರ್ಜೆ ಸಹಾಯಕ ಬ್ಯಾಕ್ಲಾಗ್ 182 ಹುದ್ದೆಗಳಿಗೆ ಈ ಹಿಂದೆ ನೇಮಕಾತಿ ಪತ್ರ ಕೊಟ್ಟು ಬಳಿಕ ದಾಖಲೆ ಪರಿಶೀಲಿಸಲಾಗುತ್ತಿತ್ತು. ಆದರೆ ಈ ಬಾರಿ ಮೊದಲೇ ದಾಖಲೆಗಳನ್ನು ಆಫ್ಲೈನ್ನಲ್ಲಿ ಪರಿ ಶೀಲಿಸಿ ನೇಮಕಾತಿಗೆ ಸಂಬಂಧಿಸಿದ ಅಧಿಕಾರಿಗಳು ಮುಂದಾ ಗಿದ್ದರು. ಆಗ ನಕಲಿ ಅಭ್ಯರ್ಥಿಗಳ ಅಸಲಿ ಆಟ ಬೆಳಕಿಗೆ ಬಂದಿದೆ. ಕೆಲಸಕ್ಕೆ ಸೇರಲು ಆರ್ಡರ್ ಕಾಪಿಗಾಗಿ ಆರೋಪಿ ಗಳು ಕಾಯುತ್ತಿದ್ದರು ಎಂದು ತನಿಖೆಯಲ್ಲಿ ಗೊತ್ತಾಗಿದೆ.
ಇದನ್ನು ನೋಡಿ : 18ನೇ ವಯಸ್ಸಿಗೆ ಸರ್ಕಾರವನ್ನು ಆರಿಸುವವಳಿಗೆ ಬಾಳ ಸಂಗಾತಿಯನ್ನು ಆರಿಸಲು ಅರ್ಹತೆ ಇರುವುದಿಲ್ಲವೆ? – ಕೆ.ಎಸ್ ವಿಮಲಾ