ಕೋಗಿಲು ಲೇಔಟ್‌ ತೆರವು ಪ್ರಕರಣ: ಪುನರ್ವಸತಿ, ನಿರ್ಗತಿಕರ ಮಾಹಿತಿ ಕುರಿತು ವರದಿ ಸಲ್ಲಿಸಿ: ಹೈಕೋರ್ಟ್‌

ಬೆಂಗಳೂರು: ಅಮಿಕಸ್‌ ಕ್ಯೂರಿಗೆ, ನಗರದ ಕೋಗಿಲು ಬಡಾವಣೆಯಲ್ಲಿನ ಅಕ್ರಮ ಮನೆಗಳ ತೆರವು ಕಾರ್ಯಾಚರಣೆಯಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿರುವುದು ಮತ್ತು ನಿರ್ಗತಿಕರಾಗಿರುವವರ ಮಾಹಿತಿಯನ್ನು ಒಳಗೊಂಡ ವರದಿ ಸಲ್ಲಿಸಲು ಫೆಬ್ರವರಿ 6ರಂದು ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಅಕ್ರಮವಾಗಿ ತೆರವು ಕಾರ್ಯಾಚರಣೆ ನಡೆಸಿರುವುದರಿಂದ ಅದನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಕೋಗಿಲು ಬಡಾವಣೆ ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹನಾ ಮತ್ತು ಆರೀಫ್ ಬೇಗಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಾಲಯವು ಹಾಜರಿದ್ದ ಅಮಿಕಸ್‌ ಕ್ಯೂರಿ ಬಿ ವಿ ವಿದ್ಯುಲ್ಲತಾ ಅವರನ್ನು ಕುರಿತು “ತೆರವು ಕಾರ್ಯಾಚರಣೆಯಿಂದ ಎಷ್ಟು ಮಂದಿ ನಿರ್ಗತಿಕರಾಗಿದ್ದಾರೆ. ಎಷ್ಟು ಜನರ ಮನೆ ತೆರವು ಮಾಡಲಾಗಿದೆ. ಎಷ್ಟು ಗುಡಿಸಲುಗಳನ್ನು ನಾಶಪಡಿಸಲಾಗಿದೆ. ಎಷ್ಟು ಕುಟುಂಬಗಳು ನಿರ್ಗತಿಕವಾಗಿವೆ. ಪುನರ್ವಸತಿಯ ವ್ಯವಸ್ಥೆ ಹೇಗಿದೆ? ಅಂಶಗಳನ್ನು ಒಳಗೊಂಡು ವಿವರವಾದ ವರದಿ ಸಲ್ಲಿಸಬೇಕು” ಎಂದು ಸೂಚಿಸಿತು. ಇದೇ ವೇಳೇ, ಅಮಿಕಸ್‌ ಕ್ಯೂರಿ ಅವರಿಗೆ ಸಂಪೂರ್ಣ ನೆರವು ನೀಡುವಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಕೆಎಸ್‌ಎಲ್‌ಎಸ್‌ಎ) ನಿರ್ದೇಶಿಸಿತು.

ಇದನ್ನೂ ಓದಿ: ಬೆಂಗಳೂರು ಚಿತ್ರೋತ್ಸವ – ನಾನು ನೋಡಿದ ಚಿತ್ರಗಳು

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಫಕೀರ್‌ ಲೇಔಟ್‌ನಲ್ಲಿ 1990ರಿಂದ ನೆಲೆಸಿರುವ 15 ಮಂದಿಯ ನಿವಾಸಗಳನ್ನು ತೆರವು ಮಾಡಲಾಗಿದೆ ಎಂಬ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಪ್ರತ್ಯೇಕವಾಗಿ ನೋಟಿಸ್‌ ಜಾರಿಗೊಳಿಸಿದೆ.

ಕೋಗಿಲು ಬಡಾವಣೆಯ ರಬಿಯಾ, ಮೊಹಮ್ಮದ್‌ ರಫೀಕ್‌ ಸೇರಿದಂತೆ 15 ಮಂದಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಕ್ಲಿಫ್ಟನ್‌ ರೋಜಾರಿಯೊ ಅವರು “ಅರ್ಜಿದಾರರು ಫಕೀರ್‌ ಲೇಔಟ್‌ನಲ್ಲಿ 1990ರಿಂದ ನೆಲೆಸಿದ್ದಾರೆ. ಎಲ್ಲರಿಗೂ ಕರ್ನಾಟಕ ಭೂ ಕಂದಾಯ ಕಾಯಿದೆ ಸೆಕ್ಷನ್‌ 94ಸಿಸಿ ಅಡಿ ಹಕ್ಕು ಪತ್ರ ನೀಡಲಾಗಿದೆ. ಇದಕ್ಕೆ ಪೂರಕವಾಗಿ ಗೂಗಲ್‌ ಅರ್ಥ ದಾಖಲೆ ಇದೆ. ಸರ್ಕಾರದ ದಾಖಲೆಯೇ ಇದೆ. ಅದಾಗ್ಯೂ, ಮನೆಗಳನ್ನು ತೆರವು ಮಾಡಲಾಗಿದೆ” ಎಂದರು.

ಇದನ್ನು ಆಲಿಸಿದ ಪೀಠವು ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ. ಅಲ್ಲದೇ, ಈ ಪ್ರಕರಣದಲ್ಲೂ ನೆರವು ನೀಡುವಂತೆ ಅಮಿಕಸ್‌ ಕ್ಯೂರಿಗೆ ನ್ಯಾಯಾಲಯ ನಿರ್ದೇಶಿಸಿದ್ದು, ಮಾರ್ಚ್‌ 12ಕ್ಕೆ ವಿಚಾರಣೆ ಮುಂದೂಡಿದೆ.

ಇದನ್ನೂ ನೋಡಿ: 60 ವರ್ಷದ ಉಳುಮೆಗೆ ಹಕ್ಕಿಲ್ಲವೇ? ಕಾರೆಕೆರೆ ಕಾವಲು ದಲಿತರ ನ್ಯಾಯದ ಕೂಗು Janashakthi Media

Donate Janashakthi Media