ಬೆಂಗಳೂರು: ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಹಾವೇರಿ ಕ್ಷೇತ್ರದ ಶಾಸಕ ರುದ್ರಪ್ಪ ಲಮಾಣಿ ಆಯ್ಕೆಯಾಗಿದ್ದಾರೆ. ಇವರು ಡೆಪ್ಯುಟಿ ಸ್ಪೀಕರ್ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ ಎಂಬುದು ಬಲ್ಲಮೂಲಗಳಿಂದ ತಿಳಿದು ಬಂದಿದೆ.
ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಹಿರಿಯ ಶಾಸಕ ಯು.ಟಿ.ಖಾದರ್ ಅವರನ್ನು ಕಾಂಗ್ರೆಸ್ ಪಕ್ಷವು ಅಚ್ಚರಿ ಅಭ್ಯರ್ಥಿ ಎನ್ನವಂತೆ ಆಯ್ಕೆ ಮಾಡಿತ್ತು. ಇದೇ ರೀತಿಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೂ ಆಯ್ಕೆ ನಡೆದಿದೆ. ಲಮಾಣಿ ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದರು. ಆದರೆ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವ ಸ್ಥಾನ ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ವಿಧಾನಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಮೂಲಕ ಅವರನ್ನು ಸಂತೃಪ್ತಿ ಪಡಿಸುವ ಕೆಲಸವನ್ನು ಕಾಂಗ್ರೆಸ್ ಮುಂಖಡರು ಮಾಡಿದ್ದಾರೆ.
ಇದನ್ನೂ ಓದಿ:ಸ್ಪೀಕರ್ ಹುದ್ದೆಗೆ ಕಾಂಗ್ರೆಸ್ ಪಕ್ಷದಿಂದ ಯುಟಿ ಖಾದರ್ ನಾಮಪತ್ರ ಸಲ್ಲಿಕೆ
ಸಚಿವ ಸ್ಥಾನಕ್ಕೆ ಬಹಳಷ್ಟು ಜನ ಆಕಾಂಕ್ಷಿಗಳು ಇದ್ದುದರಿಂದ ಹೆಚ್ಚಿನ ಜನರಿಗೆ ಸಂಪೂರ್ಣವಾಗಿ ಪ್ರಾತಿನಿಧ್ಯ ನೀಡಲು ಪಕ್ಷದ ವರಿಷ್ಠರಿಗೆ ಸಾಧ್ಯವಾಗಿಲ್ಲ. ಹೀಗಾಗಿ, ಮಂತ್ರಿ ಪದವಿಯಿಂದ ವಂಚಿತರಾದ ಶಾಸಕರಿಗೆ ಪರ್ಯಾಯ ಅಧಿಕಾರ ನೀಡುವ ತಂತ್ರವನ್ನು ಅನುಸರಿಸಿದ್ದಾರೆ.
ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದ ಮಾಜಿ ಸಚಿವ ಟಿ.ಬಿ ಜಯಚಂದ್ರ ಅವರನ್ನು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯನ್ನಾಗಿ, ಶಾಸಕ ಅಶೋಕ್ ಪಟ್ಟಣ ಅವರನ್ನು ವಿಧಾನಸಭೆಯ ಆಡಳಿತ ಪಕ್ಷದ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಲಾಗಿದೆ. ಅದರಂತೆ ರುದ್ರಪ್ಪ ಲಮಾಣಿ ಅವರನ್ನು ವಿಧಾನಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಆಯ್ಕೆ ಮಾಡಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಗಳವಾರ ರುದ್ರಪ್ಪ ಲಮಾಣಿ ಜೊತೆ ಚರ್ಚೆ ನಡೆಸಿ ವಿಧಾನಸಭಾ ಉಪಸಭಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವುದನ್ನು ತಿಳಿಸಿ ಶುಭ ಕೋರಿದರು. ಈ ಆಯ್ಕೆಗೆ ರುದ್ರಪ್ಪ ಅವರು ತಮ್ಮ ಸಹಮತವನ್ನು ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಚಾಮರಾಜನಗರ ಶಾಸಕ ಸಿ.ಪುಟ್ಟರಂಗ ಶೆಟ್ಟಿ ಅವರಿಗೆ ವಿಧಾನಸಭೆಯ ಉಪಸಭಾಧ್ಯಕ್ಷ ಸ್ಥಾನ ನೀಡಲು ಕಾಂಗ್ರೆಸ್ ಹೈಕಮಾಂಡ್ ಈ ಮೊದಲು ನಿರ್ಧಾರ ಮಾಡಿತ್ತು. ಆದರೆ ಆರಂಭದಲ್ಲಿ ತಮಗೆ ಸಚಿವ ಸ್ಥಾನವೇ ಬೇಕು ಡೆಪ್ಯುಟಿ ಸ್ಪೀಕರ್ ಆಗಲು ತಾವು ಸಿದ್ಧರಿಲ್ಲ ಎಂದು ಪುಟ್ಟರಂಗಶೆಟ್ಟಿ ತಿಳಿಸಿದ್ದರಿಂದ ಅವರ ಆಯ್ಕೆಯನ್ನು ಈಗ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ.
ಆ ಬಳಿಕ ಮಂತ್ರಿ ಪದವಿ ಸಿಗದೇ ಇರುವುದಕ್ಕೆ ಬೇಸರಗೊಂಡಿದ್ದ ಪುಟ್ಟರಂಗ ಶೆಟ್ಟಿಯವರು ಡೆಪ್ಯುಟಿ ಸ್ಪೀಕರ್ ಆಗಲು ನಂತರದ ಬೆಳೆವಣಿಗೆಯಲ್ಲಿ ಒಲವು ಹೊಂದಿದ್ದರು ಎನ್ನಲಾಗಿದೆ. ಆದರೆ ಕಾಂಗ್ರೆಸ್ ಪಕ್ಷ ನೀಡಿದ ಆಫರ್ ಅನ್ನು ಪ್ರಾರಂಭದಲ್ಲಿ ಒಪ್ಪಿಕೊಳ್ಳದ ಕಾರಣ ಕಾಂಗ್ರೆಸ್ ಪಕ್ಷವು ಪುಟ್ಟರಂಗಶೆಟ್ಟಿ ಬದಲಿಗೆ ರುದ್ರಪ್ಪ ಲಮಾಣಿಗೆ ಉಪಸಭಾಧ್ಯಕ್ಷ ಸ್ಥಾನ ನೀಡಲಾಗುತ್ತಿದೆ.
ವಿಧಾನಸಭೆಯ ಉಪಸಭಾಧ್ಯಕ್ಷ ಸ್ಥಾನಕ್ಕೆ ಇಂದು ಅಭ್ಯರ್ಥಿಯಾಗಿ ಶಾಸಕ ರುದ್ರಪ್ಪ ಲಮಾಣಿ ನಾಮಪತ್ರ ಸಲ್ಲಿಸಲಿದ್ದಾರೆ. ನಾಳೆ ಚುನಾವಣೆ ನಡೆಯಲಿದೆ. ಪ್ರತಿಪಕ್ಷದ ಯಾವ ಶಾಸಕರೂ ನಾಮಪತ್ರ ಸಲ್ಲಿಕೆ ಮಾಡದಿದ್ದರೆ ರುದ್ರಪ್ಪ ಲಮಾಣಿ ಉಪಸಭಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಆಗಲಿದ್ದಾರೆ.