ಬೆಂಗಳೂರು| ಮೈಕ್ರೋ ಪೈನಾನ್ಸ್ ನಿಯಂತ್ರಣ ಕಾನೂನು ಜಾರಿ: ಸಿಎಂಗೆ ಹಕ್ಕೋತ್ತಾಯ ಪತ್ರ ಸಲ್ಲಿಕೆ

ಬೆಂಗಳೂರು:  ಕರ್ನಾಟಕ ಮೈಕ್ರೋ ಪೈನಾನ್ಸ್ ಲೇವಾದೇವಿ ನಿಯಂತ್ರಣ ಕಾನೂನು ಜಾರಿಗೆ ತರಲು ಹಾಗೂ ಕಾನೂನು ಒಳಗೊಳ್ಳಬೇಕಾದ ಅಂಶಗಳ ಕುರಿತು ಗಮನ ಸೆಳೆಯುವ ಹಕ್ಕೋತ್ತಾಯಗಳ ಪತ್ರವನ್ನು ರೈತ, ಮಹಿಳೆ ಮತ್ತು ಕೂಲಿಕಾರ ಸಂಘಟನೆಯ ನಾಯಕರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿದೆ.   

ಸಿಎಂ ಭೇಟಿ ಮಾಡಿದ ನಿಯೋಗದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ, ಪ್ರಾಂತ ಕೃಷಿ ಕೂಲಿಕಾರರ ಸಂಘ (AIAWU) ರಾಜ್ಯ ಅಧ್ಯಕ್ಷ ಎಂ ಪುಟ್ಟಮಾದು, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (AIDWA) ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಇದ್ದರು. ಮನವಿ ಸ್ವೀಕರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉತ್ತಮ ಸಲಹೆಗಳಿವೆ, ಅಧಿಕಾರಿಗಳು ಹಾಗೂ  ಸಂಪುಟ ಸಹುದ್ಯೋಗಿಗಳ ಜೊತೆ ಚರ್ಚಿಸಿ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.

 

ಸಂಘಟನೆಯ ನಾಯಕರು ಸಲ್ಲಿಸಿದ ಮನವಿ ಪತ್ರದ ಸಾರಾಂಶ ಈ ಕೆಳಗಿನಂತಿದೆ

ಮೈಕ್ರೋ ಪೈನಾನ್ಸ್ ಸಂಸ್ಥೆಗಳ ಒಟ್ಟು ಸಾಲದ ವ್ಯವಹಾರವನ್ನು ನಿಯಂತ್ರಿಸುವ, ಸಾಲ ನೀಡಿಕೆಯಲ್ಲಿ ಅನಾರೋಗ್ಯಕರ ಪೈಪೋಟಿ, ದುರ್ಲಾಭದ ಕ್ರಮಗಳು, ಬಲವಂತದ ಸಾಲ ವಸೂಲಾತಿ -ಕಿರುಕುಳ-ದೌರ್ಜನ್ಯಗಳನ್ನು ನಿಷೇಧಿಸುವ, ಜಂಟಿ ಬಾಧ್ಯತೆ ಮತ್ತು ವಾರದ ಕಂತು ಪಾವತಿಯಿಂದ ಮುಕ್ತಿಗೊಳಿಸುವ, ಆರ್.ಬಿ.ಐ ಮತ್ತು ನಬಾರ್ಡ್ ನ ನಿಯಂತ್ರಣವನ್ನು ಖಾತರಿ ಪಡಿಸುವ, ಅಹವಾಲು ಸಲ್ಲಿಸಿ ಪರಿಹಾರ ಪಡೆಯುವ ಅವಕಾಶ ಕಲ್ಪಿಸುವ ಹಾಗೂ ಮೈಕ್ರೋ ಪೈನಾನ್ಸ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ರೀತಿಯ ಪೈನಾನ್ಸ್ ಸಂಸ್ಥೆಗಳನ್ನು ನೊಂದಾಯಿಸಿ ಒಂದೇ ರೀತಿಯ ಸಾಲ ವಿತರಣೆ, ಬಡ್ಡಿ ದರ, ಸಾಲ ವಸೂಲಾತಿ ಕ್ರಮಗಳನ್ನು ಅನುಸರಿಸುವಂತೆ ನಿರ್ಭಂದಿಸುವ ಕರ್ನಾಟಕ ಮೈಕ್ರೋ ಪೈನಾನ್ಸ್ ಲೇವಾದೇವಿ ನಿಯಂತ್ರಣ ಕಾಯ್ದೆಯನ್ನು ತಕ್ಷಣದಲ್ಲಿ ಅಂಗೀಕರಿಸಲು ಹಾಗೂ ಅನಿವಾರ್ಯ ಕಾರಣಗಳಿಗಾಗಿ ಸಾಲದ ಸುಳಿಗೆ ಸಿಲುಕಿ ನರಳುವ ರೈತರು, ಕೃಷಿ ಕೂಲಿಕಾರರು, ಮಹಿಳೆಯರು, ದೈಹಿಕ ದುಡಿಮೆಗಾರರು ಸೇರಿದಂತೆ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಋಣ ಮುಕ್ತಿಗೊಳ್ಳಲು ಅವಕಾಶ ಕಲ್ಪಿಸುವ ಋಣಮುಕ್ತಿ ಆಯೋಗವನ್ನು ರಾಜ್ಯ ಹಾಗೂ ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಅಸ್ತಿತ್ವಕ್ಕೆ ತರಲು ಆಗ್ರಹ.

ಖಾಸಗಿ ಮೈಕ್ರೋ ಪೈನಾನ್ಸ್ ಸಂಸ್ಥೆಗಳಿAದ ಸಹಸ್ರಾರು ಜನರು ವಿವಿಧ ರೀತಿಯ ಕಿರುಕುಳ, ಹಿಂಸೆ, ದೌರ್ಜನ್ಯ ಕ್ಕೆ ಒಳಗಾಗುತ್ತಿರುವ ಸುದ್ದಿಗಳು ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿವೆ. ಈ ಸಂಸ್ಥೆಗಳು ಅನುಸರಿಸುತ್ತಿರುವ ಬಲವಂತದ ಸಾಲ ವಸೂಲಾತಿ ಕ್ರಮಗಳು ನೂರಾರು ಜನರನ್ನು ಆತ್ಮಹತ್ಯೆಗೆ ದೂಡಿದೆ ಮತ್ತು ಸಹಸ್ರಾರು ಜನರು ಕುಟುಂಬ, ಮನೆ, ಗ್ರಾಮಗಳನ್ನೇ ತೊರೆಯುವಂತೆ ಮಾಡಿವೆ ಎಂಬುದು ಈ ಮೈಕ್ರೋ ಪೈನಾನ್ಸ್ ಸಂಸ್ಥೆಗಳ ಕರಾಳ ಸ್ವರೂಪಕ್ಕೆ ಹಿಡಿದ ಕನ್ನಡಿಯಾಗಿದೆ.

ಈ ಹಿನ್ನೆಲೆಯಲ್ಲಿ ತಾವು ಉನ್ನತ ಮಟ್ಟದ ಸಭೆ ನಡೆಸಿ ಮೈಕ್ರೋ ಪೈನಾನ್ಸ್ ನ ಸಾಲ ವಸೂಲಾತಿ ಕಿರುಕುಳದ ವಿರುದ್ಧ ರಕ್ಷಣೆ ನೀಡುವ ಕ್ರಮಗಳನ್ನು ಪರಿಶೀಲನೆ ಮಾಡಿರುವುದು ಸ್ವಾಗತಾರ್ಹವಾಗಿದೆ. ಆದರೆ ಕೇವಲ ಸಾಲ ವಸೂಲಾತಿ ಸಂದರ್ಭದ ಕಿರುಕುಳದ ಬಗ್ಗೆ ಮಾತ್ರ ಗಮನಹರಿಸುವುದು ಮತ್ತು ಕಿರುಕುಳಕ್ಕೆ ಒಳಗಾಗುವ ಜನರು ಪೊಲೀಸ್ ದೂರು ಸಲ್ಲಿಸಿದ ನಂತರವಷ್ಟೇ ಕ್ರಮ ಕೈಗೊಳ್ಳುವ ಪ್ರಯತ್ನಗಳು ಸಾಕಾಗುವುದಿಲ್ಲ ಎಂಬುದನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇವೆ.

ಕರ್ನಾಟಕ ರಾಜ್ಯದ ಗ್ರಾಮೀಣ ಹಾಗೂ ನಗರ, ಪಟ್ಟಣ ಪ್ರದೇಶಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಮೈಕ್ರೋ ಪೈನಾನ್ಸ್ ಕಂಪನಿಗಳು ಒಂದೇ ಸ್ವರೂಪದಲ್ಲಿ ಇಲ್ಲ. ಕೆಲವು ಗ್ರಾಮಾಭಿವೃದ್ದಿ ಸಂಸ್ಥೆ ಹೆಸರಿನಲ್ಲಿ, ಕೆಲವು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಹೆಸರಿನಲ್ಲಿ, ಕೆಲವು ಕಿರು ಹಣಕಾಸು ಸಂಸ್ಥೆಗಳ ಹೆಸರಿನಲ್ಲಿ ಹೀಗೆ ಪ್ರತಿ ಜಿಲ್ಲೆಯಲ್ಲೂ ನೂರಾರು ಕಂಪನಿಗಳು ಈ ಮೈಕ್ರೋ ಪೈನಾನ್ಸ್ ವ್ಯವಹಾರದಲ್ಲಿ ತೊಡಗಿಕೊಂಡಿವೆ. ಪ್ರತಿಯೊಂದು ಸಂಸ್ಥೆಗಳು ತಮ್ಮದೇ ಆದ ಜಂಟಿ ಬಾಧ್ಯತಾ ಗುಂಪುಗಳನ್ನು ರೂಪಿಸಿಕೊಂಡು ಕಾರ್ಯಾಚರಿಸುತ್ತಿವೆ. ಇಂತಹ ಅನಾರೋಗ್ಯಕರ ಪೈಪೋಟಿ, ವಾರದ ಕಂತಿನ ರೂಪದಲ್ಲಿ ದುಬಾರಿ ಬಡ್ಡಿ ಸೇರಿಸಿದ ಸಮಾನ ಕಂತುಗಳಲ್ಲಿ ಮರು ಪಾವತಿಸುವ ಮತ್ತು ಹಣ ಬಹಳ ವೇಗವಾಗಿ ಅಂದರೆ ಒಂದು ಜಂಟಿ ಬಾಧ್ಯತಾ ಗುಂಪು ಮರುಪಾವತಿಸಿದ ಹಣ ಇನ್ನೊಂದು ಗುಂಪಿಗೆ ಸಾಲವಾಗಿಸುವ ಮತ್ತು ಈ ಸರಣಿ ವಾರದ ಆಧಾರದಲ್ಲಿ ನಡೆಸುವ ವಿಶಿಷ್ಟ ಕಾರಣದಿಂದಾಗಿ ವಾರ್ಷಿಕ ಕನಿಷ್ಠ ಶೇಕಡಾ 120 ರಿಂದ ಶೇಕಡಾ 600 ರವರೆಗೆ ಲಾಭದ ಬೆಳವಣಿಗೆಗಳನ್ನು ದಾಖಲಿಸುತ್ತಿವೆ. ವ್ಯವಹಾರ ದೊಡ್ಡದಾದಷ್ಟು ವಾರ್ಷಿಕ ಲಾಭದ ಪ್ರಮಾಣವು ಗುಣಾತ್ಮಕ ಶ್ರೇಣಿರೂಪದಲ್ಲಿ ಬೆಳೆಯುತ್ತಿದೆ. ಈ ಕಾರಣಕ್ಕಾಗಿ ಪ್ರತಿಯೊಂದು ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಎಲ್ಲಾ ರೀತಿಯ ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಗ್ರಾಮಾಭಿವೃದ್ದಿ ಹೆಸರಿನ ಧರ್ಮಸ್ಥಳದಂತಹ ಸಂಸ್ಥೆಗಳು ಈ ವ್ಯವಹಾರದಲ್ಲಿ ಬಹಳ ಆಸಕ್ತಿಯಿಂದ ತೊಡಗಿಸಿಕೊಂಡು ಅಪಾರ ಲಾಭವನ್ನು ಗಳಿಸುತ್ತಿವೆ.

ಈ ವ್ಯವಹಾರದ ಮೇಲೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ನಿಯಂತ್ರಣ ಇಲ್ಲದೇ ಇರುವುದರಿಂದ ಇಷ್ಟು ಬೃಹತ್ ಪ್ರಮಾಣದಲ್ಲಿ ನಡೆಯುತ್ತಿರುವ ಸಾಲದ ವ್ಯವಹಾರದ ಲೆಕ್ಕ ಸರ್ಕಾರದ ಬಳಿ ಇಲ್ಲದಂತೆ ಆಗಿದೆ. ಸ್ವ ಸಹಾಯ ಸಂಘಗಳ ಹೆಸರು ಹೇಳಿಕೊಂಡು ಜಂಟಿ ಬಾಧ್ಯತಾ ಗುಂಪುಗಳನ್ನು ರಚಿಸಿಕೊಂಡು ಒಂದು ಕಡೆ ಜನರನ್ನು, ಇನ್ನೊಂದು ಕಡೆ ರಾಷ್ಟ್ರೀಕೃತ ಬ್ಯಾಂಕುಗಳು-ನಬಾರ್ಡ್-ಆರ್.ಬಿ.ಐ. ಗಳನ್ನು ವಂಚಿಸುತ್ತಿವೆ. ಅದ್ದರಿಂದ ಈ ವ್ಯವಹಾರವನ್ನು ಸಮಗ್ರವಾಗಿ ನಿಯಂತ್ರಿಸಬೇಕಾದ ಅಗತ್ಯ ಇದ್ದು ಇದಕ್ಕಾಗಿ ಸಾಲ ನೀಡಿಕೆಯಲ್ಲಿ ಅನಾರೋಗ್ಯಕರ ಪೈಪೋಟಿ, ದುರ್ಲಾಭದ ಕ್ರಮಗಳು, ಬಲವಂತದ ಸಾಲ ವಸೂಲಾತಿ -ಕಿರುಕುಳ-ದೌರ್ಜನ್ಯಗಳನ್ನು ನಿಷೇಧಿಸುವ, ಜಂಟಿ ಬಾಧ್ಯತೆ ಮತ್ತು ವಾರದ ಕಂತು ಪಾವತಿಯಿಂದ ಮುಕ್ತಿಗೊಳಿಸುವ, ಆರ್.ಬಿ.ಐ. ಮತ್ತು ನಬಾರ್ಡ್ ನ ನಿಯಂತ್ರಣವನ್ನು ಖಾತರಿ ಪಡಿಸುವ, ಅಹವಾಲು ಸಲ್ಲಿಸಿ ಪರಿಹಾರ ಪಡೆಯುವ ಅವಕಾಶ ಕಲ್ಪಿಸುವ ಹಾಗೂ ಮೈಕ್ರೋ ಪೈನಾನ್ಸ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ರೀತಿಯ ಪೈನಾನ್ಸ್ ಸಂಸ್ಥೆಗಳನ್ನು ನೊಂದಾಯಿಸಿ ಒಂದೇ ರೀತಿಯ ಸಾಲ ವಿತರಣೆ, ಬಡ್ಡಿದರ, ಸಾಲ ವಸೂಲಾತಿ ಕ್ರಮಗಳನ್ನು ಅನುಸರಿಸುವಂತೆ ನಿರ್ಭಂದಿಸುವ ಕರ್ನಾಟಕ ಮೈಕ್ರೋ ಪೈನಾನ್ಸ್ ಲೇವಾದೇವಿ ನಿಯಂತ್ರಣ ಕಾಯ್ದೆಯನ್ನು ತಕ್ಷಣದಲ್ಲಿ ಅಂಗೀಕರಿಸಲು ತಮ್ಮನ್ನು ಹಾಗೂ ತಮ್ಮ ಸರ್ಕಾರವನ್ನು ಈ ಮೂಲಕ ಆಗ್ರಹಿಸುತ್ತಿದ್ದೇವೆ.

ಇದನ್ನೂ ಓದಿ: ದೆಹಲಿ ವಿಧಾನಸಭಾ ಚುನಾವಣೆ: ಸ್ಫರ್ಧಿಸುತ್ತಿರುವ 132 ಮಂದಿಗೆ ಕ್ರಿಮಿನಲ್‌ ಹಿನ್ನಲೆ

ಮೈಕ್ರೋ ಪೈನಾನ್ಸ್ ಸಂಸ್ಥೆಗಳ ಅನಿಯಂತ್ರಿತ ಚಟುವಟಿಕೆಗಳಿಂದಾಗಿ ಅರ್ಥಿಕವಾಗಿ ಒಳಗೊಳ್ಳುವಿಕೆ ಸಾಧಿಸಲು ರಚಿಸಿದ್ದ ಸ್ವ ಸಹಾಯ ಗುಂಪುಗಳು ವಿರೂಪಗೊಂಡಿವೆ. ಒಬ್ಬರೇ ಹಾಗೂ ಒಂದೇ ಕುಟುಂಬದ ಸದಸ್ಯರು ಹತ್ತಾರು ಮೈಕ್ರೋ ಪೈನಾನ್ಸ್ ಸಂಸ್ಥೆಗಳ ಜಂಟಿ ಭಾಧ್ಯತಾ ಗುಂಪುಗಳಲ್ಲಿ ಸೇರ್ಪಡೆ ಗೊಂಡಿದ್ದಾರೆ. ಈ ಎಲ್ಲಾ ಜಂಟಿ ಭಾಧ್ಯತಾ ಗುಂಪುಗಳಿAದ ಗ್ರಾಮೀಣ ಜನತೆಯನ್ನು ಮುಕ್ತಿಗೊಳಿಸಿ ಸ್ವ ಸಹಾಯ ಸಂಘದ ಸ್ವರೂಪವನ್ನು ರಕ್ಷಿಸುವುದು ಅಗತ್ಯವಾಗಿದೆ. ಇದಕ್ಕಾಗಿ ಜಿಲ್ಲಾ ಸಹಕಾರ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಬಲವರ್ಧನೆ ಗೊಳಿಸಬೇಕು, ಎಲ್ಲಾ ಮೈಕ್ರೋ ಪೈನಾನ್ಸ್ ಸಂಸ್ಥೆಗಳನ್ನು ನಿಯಂತ್ರಿಸಲು ಒಂದೇ ಪ್ರಾಧಿಕಾರ ಅಸ್ತಿತ್ವಕ್ಕೆ ತರಬೇಕು, ಎಲ್ಲಾ ಸ್ವರೂಪದ ಮೈಕ್ರೋ ಪೈನಾನ್ಸ್ ಸಂಸ್ಥೆಗಳು ತಮ್ಮ ವ್ಯವಹಾರ ನಡೆಸಲು ಜಿಲ್ಲಾ ಮಟ್ಟದಲ್ಲಿ ನೊಂದಣಿ ಕಡ್ಡಾಯ ಮಾಡಬೇಕು, ಸ್ವ ಸಹಾಯ ಗುಂಪು ರಚನೆ ಮತ್ತು ನಿರ್ವಹಣೆಯಲ್ಲಿ ಮೈಕ್ರೋ ಪೈನಾನ್ಸ್ ಸಂಸ್ಥೆಗಳಿಗೆ ಯಾವುದೇ ಪಾತ್ರ ಇರಬಾರದು, ವಾರ್ಷಿಕವಾಗಿ ವಿತರಿಸುವ ಸಾಲದ ಮೊತ್ತ ನಿರ್ಧರಿಸಲು, ವಾರ್ಷಿಕ ಆದಾಯದ ಮೇಲೆ ಸಾಲ ಪಡೆದುಕೊಳ್ಳಬಹುದಾದ ಮೊತ್ತ ನಿರ್ಧರಿಸಲು, ಸಾಲದ ಉದ್ದೇಶ ಮತ್ತು ಮೊತ್ತದ ಬಗ್ಗೆ ಮಾರ್ಗಸೂಚಿಗಳನ್ನು ಸೂಚಿಸಲು ಹಾಗೂ ಅಹವಾಲು ಸಲ್ಲಿಸಿ ಪರಿಹಾರ ಪಡೆಯಲು ಅವಕಾಶ ಕಲ್ಪಿಸಲು ರಾಜ್ಯ ಮಟ್ಟದ ಪ್ರಾಧಿಕಾರಕ್ಕೆ ಅವಕಾಶ ಇರಬೇಕು, ಅನೀತಿ ಹಾಗೂ ದುರ್ಮಾರ್ಗಗಳಿಗೆ ಮೈಕ್ರೋ ಪೈನಾನ್ಸ್ ಸಂಸ್ಥೆಗಳ ಮೇಲೆ ಅದರ ವ್ಯವಹಾರ ನಿರ್ಭಂದಿಸುವುದು ಸೇರಿದಂತೆ ಕ್ರಮ ಕೈಗೊಳ್ಳುವಂತಾಗಬೇಕು. ದುಬಾರಿ ಬಡ್ಡಿ ದರ ಹಾಗೂ ಬಲವಂತದ ಸಾಲ ವಸೂಲಾತಿ ಕ್ರಮಗಳಿಗೆ ಕನಿಷ್ಠ 6 ತಿಂಗಳ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ರೂ ನಿಂದ ಹತ್ತು ಲಕ್ಷದವರೆವಗೆ ದಂಡ ವಿಧಿಸಬೇಕು.
ಅನಿವಾರ್ಯ ಕಾರಣಗಳಿಂದಾಗಿ ಸಾಲ ತೀರುವಳಿ ಕಷ್ಟ ಎಂಬ ಪರಿಸ್ಥಿತಿ ಅನುಭವಿಸುತ್ತಿರುವ ಕುಟುಂಬಗಳನ್ನು ರಕ್ಷಿಸಲು, ಸಾಲದ ಸುಳಿಗೆ ಸಿಲುಕಿ ನರಳುವ ರೈತರು, ಕೃಷಿ ಕೂಲಿಕಾರರು, ಮಹಿಳೆಯರು, ದೈಹಿಕ ದುಡಿಮೆಗಾರರು ಸೇರಿದಂತೆ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಋಣ ಮುಕ್ತಿಗೊಳ್ಳಲು ಅವಕಾಶ ಕಲ್ಪಿಸುವ ಋಣಮುಕ್ತಿ ಆಯೋಗವನ್ನು ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಅಸ್ತಿತ್ವಕ್ಕೆ ತಂದು ಮೈಕ್ರೋ ಪೈನಾನ್ಸ್ ಸಂಸ್ಥೆಗಳ ಸಾಲವನ್ನು ಈ ವ್ಯಾಪ್ತಿಯಲ್ಲಿ ಒಳಗೊಳ್ಳಬೇಕು.

 

ಹಕ್ಕೋತ್ತಾಯಗಳು

1. ಮೈಕ್ರೋ ಪೈನಾನ್ಸ್ ಸಂಸ್ಥೆಗಳ ಒಟ್ಟು ವ್ಯವಹಾರವನ್ನು ಸಮಗ್ರವಾಗಿ ನಿಯಂತ್ರಿಸುವ, ಸಾಲ ನೀಡಿಕೆಯಲ್ಲಿ ಅನಾರೋಗ್ಯಕರ ಪೈಪೋಟಿ, ದುರ್ಲಾಭದ ಕ್ರಮಗಳು, ಬಲವಂತದ ಸಾಲ ವಸೂಲಾತಿ-ಕಿರುಕುಳ-ದೌರ್ಜನ್ಯಗಳನ್ನು ನಿಷೇಧಿಸುವ, ಜಂಟಿ ಭಾಧ್ಯತೆ ಮತ್ತು ವಾರದ ಕಂತು ಪಾವತಿಯಿಂದ ಮುಕ್ತಿಗೊಳಿಸುವ, ಆರ್.ಬಿ.ಐ. ಮತ್ತು ನಬಾರ್ಡ್ ನ ನಿಯಂತ್ರಣವನ್ನು ಖಾತರಿಪಡಿಸುವ, ಅಹವಾಲು ಸಲ್ಲಿಸಿ ಪರಿಹಾರ ಪಡೆಯುವ ಅವಕಾಶ ಕಲ್ಪಿಸುವ ಹಾಗೂ ಮೈಕ್ರೋ ಪೈನಾನ್ಸ್ ಸಂಸ್ಥೆಗಳನ್ನು ನೊಂದಾಯಿಸಿ ಒಂದೇ ರೀತಿಯ ಸಾಲ ವಿತರಣೆ, ಬಡ್ಡಿದರ, ಸಾಲ ವಸೂಲಾತಿ ಕ್ರಮಗಳನ್ನು ಅನುಸರಿಸುವಂತೆ ನಿರ್ಭಂದಿಸುವ ಕರ್ನಾಟಕ ಮೈಕ್ರೋ ಪೈನಾನ್ಸ್ ಲೇವಾದೇವಿ ನಿಯಂತ್ರಣ ಕಾಯ್ದೆಯನ್ನು ತಕ್ಷಣವೇ ಅಂಗೀಕರಿಸಬೇಕು.

2. ಅನಿವಾರ್ಯ ಕಾರಣಗಳಿಗಾಗಿ ಸಾಲದ ಸುಳಿಗೆ ಸಿಲುಕಿ ನರಳುವ ರೈತರು, ಕೃಷಿ ಕೂಲಿಕಾರರು, ಮಹಿಳೆಯರು, ದೈಹಿಕ ದುಡಿಮೆಗಾರರು ಸೇರಿದಂತೆ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಋಣ ಮುಕ್ತಿಗೊಳ್ಳಲು ಅವಕಾಶ ಕಲ್ಪಿಸುವ ಋಣಮುಕ್ತಿ ಆಯೋಗವನ್ನು ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಅಸ್ತಿತ್ವಕ್ಕೆ ತರಬೇಕು ಮತ್ತು ಮೈಕ್ರೋ ಪೈನಾನ್ಸ್ ಸಂಸ್ಥೆಗಳ ಸಾಲವನ್ನು ಈ ವ್ಯಾಪ್ತಿಗೆ ಒಳಪಡಿಸಬೇಕು.

3. ಸ್ವ ಸಹಾಯ ಗುಂಪುಗಳ ಸ್ವರೂಪವನ್ನು ರಕ್ಷಿಸಿಕೊಳ್ಳಬೇಕು. ಸ್ವ ಸಹಾಯ ಗುಂಪು ರಚನೆ ಮತ್ತು ನಿರ್ವಹಣೆಯಲ್ಲಿ ಮೈಕ್ರೋ ಪೈನಾನ್ಸ್ ಸಂಸ್ಥೆಗಳಿಗೆ ಯಾವುದೇ ಪಾತ್ರ ಇರಬಾರದು; ಮೈಕ್ರೋ ಪೈನಾನ್ಸ್ ಸಂಸ್ಥೆಗಳ ಜಂಟಿ ಭಾಧ್ಯತಾ ಗುಂಪುಗಳಿAದ ಗ್ರಾಮೀಣ ಜನತೆಯನ್ನು ಮುಕ್ತಿಗೊಳಿಸಬೇಕು. ಸ್ವ ಸಹಾಯ ಗುಂಪುಗಳ ಸ್ವರೂಪ ಮತ್ತು ಉದ್ದೇಶ ರಕ್ಷಿಸಲು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಹಾಗೂ ಜಿಲ್ಲಾ ಸಹಕಾರಿ ಬ್ಯಾಂಕುಗಳನ್ನು ಬಲವರ್ಧನೆ ಮಾಡಬೇಕು.

4. ಎಲ್ಲಾ ರೀತಿಯ ಮೈಕ್ರೋ ಪೈನಾನ್ಸ್ ಸಂಸ್ಥೆಗಳನ್ನು ನಬಾರ್ಡ್-ಆರ್.ಬಿ.ಐ. ನಿಯಂತ್ರಣಕ್ಕೆ ಒಳಪಡಿಸಬೇಕು. ಎಲ್ಲಾ ಮೈಕ್ರೋ ಪೈನಾನ್ಸ್ ಸಂಸ್ಥೆಗಳನ್ನು ನಿಯಂತ್ರಿಸಲು ಒಂದೇ ಪ್ರಾಧಿಕಾರ ಅಸ್ತಿತ್ವಕ್ಕೆ ತರಬೇಕು. ಎಲ್ಲಾ ಸ್ವರೂಪದ ಮೈಕ್ರೋ ಪೈನಾನ್ಸ್ ಸಂಸ್ಥೆಗಳು ತಮ್ಮ ವ್ಯವಹಾರ ನಡೆಸಲು ಜಿಲ್ಲಾ ಮಟ್ಟದಲ್ಲಿ ನೊಂದಣಿ ಕಡ್ಡಾಯ ಮಾಡಬೇಕು. ಸ್ವ ಸಹಾಯ ಗುಂಪು ರಚನೆ ಮತ್ತು ನಿರ್ವಹಣೆಯಲ್ಲಿ ಮೈಕ್ರೋ ಪೈನಾನ್ಸ್ ಸಂಸ್ಥೆಗಳಿಗೆ ಯಾವುದೇ ಪಾತ್ರ ಇರಬಾರದು. ವಾರ್ಷಿಕವಾಗಿ ವಿತರಿಸುವ ಸಾಲದ ಮೊತ್ತ ನಿರ್ಧರಿಸಲು, ವಾರ್ಷಿಕ ಆದಾಯದ ಮೇಲೆ ಸಾಲ ಪಡೆದುಕೊಳ್ಳಬಹುದಾದ ಮೊತ್ತ ನಿರ್ಧರಿಸಲು, ಸಾಲದ ಉದ್ದೇಶ ಮತ್ತು ಮೊತ್ತದ ಬಗ್ಗೆ ಮಾರ್ಗಸೂಚಿಗಳನ್ನು ಸೂಚಿಸಲು ಹಾಗೂ ಅಹವಾಲು ಸಲ್ಲಿಸಿ ಪರಿಹಾರ ಪಡೆಯಲು ಅವಕಾಶ ಕಲ್ಪಿಸಲು ರಾಜ್ಯ ಮಟ್ಟದ ಪ್ರಾಧಿಕಾರಕ್ಕೆ ಅವಕಾಶ ಇರಬೇಕು. ಸರ್ಪೇಶಿ ಕಾಯ್ದೆಯಿಂದ ಮೈಕ್ರೋ ಪೈನಾನ್ಸ್ ಸಂಸ್ಥೆಗಳ ಸಾಲವನ್ನು ಹೊರಗಿಡಬೇಕು.

5. ಅನೀತಿ ಹಾಗೂ ದುರ್ಮಾರ್ಗಗಳಿಗೆ ಮೈಕ್ರೋ ಪೈನಾನ್ಸ್ ಸಂಸ್ಥೆಗಳ ಮೇಲೆ ಅದರ ವ್ಯವಹಾರ ನಿರ್ಭಂದಿಸುವ ಕ್ರಮ ಕೈಗೊಳ್ಳುವಂತಾಗಬೇಕು. ದುಬಾರಿ ಬಡ್ಡಿ ದರ ಹಾಗೂ ಬಲವಂತದ ಸಾಲ ವಸೂಲಾತಿ ಕ್ರಮಗಳಿಗೆ ಕನಿಷ್ಠ 6 ತಿಂಗಳಿಗೆ ಕಡಿಮೆ ಇಲ್ಲದಂತಹ ಶಿಕ್ಷೆ ಮತ್ತು ಕನಿಷ್ಠ ಹತ್ತು ಸಾವಿರ ರೂ. ನಿಂದ ಹತ್ತು ಲಕ್ಷ ರೂ. ವರೆಗಿನ ದಂಢ ವಿಧಿಸಬೇಕು.

 

ಇದನ್ನೂ ನೋಡಿ: ಹಾಸ್ಟೆಲ್, ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *