ಚೆನ್ನೈ: ತಮಿಳುನಾಡಿನ ಕಲ್ಲಾಕುರಿಚಿ ನಗರದಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆದಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ಶಾಲಾ ಬಾಲಕಿಯ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿತ್ತು. ಪ್ರತಿಭಟನೆ ಹಿಂಸಾ ರೂಪ ಪಡೆದೆ ಶಾಲಾ ವಾಹನ ಸೇರಿದಂತೆ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದು, ಲಾಠಿ ಚಾರ್ಜ್ ನಡೆಸಲಾಗಿದೆ.
ತಮಿಳುನಾಡಿನ ಕಲ್ಲಕುರಿಚಿ ಬಳಿಯ ಚಿನ್ನಸೇಲಂನಲ್ಲಿರುವ ಖಾಸಗಿ ಹೈಯರ್ ಸೆಕೆಂಡರಿ ಶಾಲೆಯ 12ನೇ ತರಗತಿ ವಿದ್ಯಾರ್ಥಿನಿ ಶಿಕ್ಷಕರ ಮೇಲೆ ಕಿರುಕುಳದ ಆರೋಪ ಮಾಡಿ ಜುಲೈ 13ರಂದು ಮರಣಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನೂರಾರು ಜನರು ಪ್ರತಿಭಟನೆಯ ಚಿತ್ರ ಮತ್ತು ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಆತ್ಮಹತ್ಯೆ ಖಂಡಿಸಿ ಪೋಷಕರು, ಸಂಬಂಧಿಕರು ಮತ್ತು ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದರು. 4ನೇ ದಿನವಾದ ಇಂದು ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಕಲ್ಲಾಕುರಿಚಿ-ಸೇಲಂ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಶಾಲೆ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಕಲ್ಲು ತೂರಾಟ ಹಾಗೂ ಲಾಠಿ ಪ್ರಹಾರ ನಡೆಸಿದ್ದಾರೆ. ಇದೇ ವೇಳೆ ವಿದ್ಯಾರ್ಥಿನಿ ಓದುತ್ತಿದ್ದ ಶಾಲೆಗೆ ನುಗ್ಗಿದ ಪ್ರತಿಭಟನಾಕಾರರು ಬಸ್ ಸೇರಿದಂತೆ ಅಲ್ಲಿದ್ದ ವಾಹನಗಳನ್ನು ಜಖಂಗೊಳಿಸಿದರು.
ಈ ಬಗ್ಗೆ ಮಾಹಿತಿ ನೀಡಿರುವ ತಮಿಳುನಾಡಿನ ಡಿಜಿಪಿ ಸಿ.ಶೈಲೇಂದ್ರ ಬಾಬು “ಸಣ್ಣ ಗುಂಪೊಂದು ಶಾಲೆಯಲ್ಲಿ ಪ್ರತಿಭಟನೆ ನಡೆಸಲು ಮುಂದಾದರು, ನಾವು ಅದಕ್ಕೆ ವ್ಯವಸ್ಥೆ ಮಾಡಿದ್ದೇವು. ಆದರೆ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದರು. ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದ ಕಾರಣ ಲಾಠಿಚಾರ್ಜ್ ಮಾಡಬೇಕಾಯಿತು. ಈಗ ಹೆಚ್ಚುವರಿಯಾಗಿ 500 ಪೊಲೀಸ್ ಸಿಬ್ಬಂದಿಯನ್ನು ಕಳುಹಿಸಲಾಗಿದೆ. ಶಾಲೆಯ ಮೇಲೆ ದಾಳಿ ಮಾಡಿದ ಎಲ್ಲಾ ಆರೋಪಿಗಳನ್ನು ಬಂಧಿಸುತ್ತೇವೆ, ಯಾರನ್ನೂ ಬಿಡುವುದಿಲ್ಲ. ನಮ್ಮ ಬಳಿ ಘಟನೆಯ ವಿಡಿಯೋಗಳೂ ಇವೆ” ಎಂದಿದ್ದಾರೆ.
ವಿದ್ಯಾರ್ಥಿ ಸಾವಿನ ಕುರಿತು ಪೊಲೀಸರು ಈ ಸಾವನ್ನು ಸಹಜ ಸಾವು ಎಂದು ವರದಿ ನೀಡಿದ್ದು, ಮತ್ತೊಂದು ಮರಣೋತ್ತರ ಪರೀಕ್ಷೆಗಾಗಿ ಪೋಷಕರು ಹೈಕೋರ್ಟ್ ಮೊರೆ ಹೋಗಿದ್ದಾರೆ.