ಗಂಗಾವತಿ : ಎನ್‌ಇಪಿ ಬ್ಯಾಚಿನ ಪ್ರಥಮ ಸೆಮಿಸ್ಟರ್ ಓದುತ್ತಿರುವ ಬಿಎ, ಬಿ.ಕಾಂ, ಬಿ.ಎಸ್ಸಿ ಸುಮಾರು 150 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಫಲಿತಾಂಶ ಬಿಡುಗಡೆ ಮಾಡಲಾರದ ಕಾರಣ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿರುವ ಘಟನೆ ಜಿಲ್ಲೆಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ವ್ಯಾಪ್ತಿಗೆ ಒಳಪಟ್ಟ ಗಂಗಾವತಿ ನಗರದ ಶ್ರೀ ಕೊಲ್ಲಿ ನಾಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
ಈ ಸಂಬಂಧ ವಿದ್ಯಾರ್ಥಿಗಳು ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್‌ಎಫ್‌ಐ ಸಂಘಟನೆಯ ರಾಜ್ಯಾಧ್ಯಕ್ಷ ಅಮರೇಶ ಕಡಗದ ನೇತೃತ್ವದಲ್ಲಿ ಕೂಡಲೇ ಸಮಸ್ಯೆಯನ್ನು ಬಗೆಹರಿಸುವಂತೆ ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ್ದಾರೆ.
ಏನಿದು ಸಮಸ್ಯೆ :
ಕಳೆದ ತಿಂಗಳು ಮಾರ್ಚ್ 16 ರಂದು NEP ಬ್ಯಾಚಿನ್ ಪದವಿ ಎಲ್ಲಾ ವಿಭಾಗದ ವಿದ್ಯಾರ್ಥಿಗಳ ಫಲಿತಾಂಶ ಬಿಡುಗಡೆ ಮಾಡಿದ್ದು ಅದರಲ್ಲಿ ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರಾವ್ ಪದವಿ ಕಾಲೇಜ್ ನ ಸುಮಾರು 150 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್ ಫಲಿತಾಂಶ ಬಿಡುಗಡೆ ಮಾಡಿರುವುದಿಲ್ಲ ಜೊತೆಗೆ ಇದೆ ತಿಂಗಳು 10/4/2023 ರಂದು ತೃತೀಯ ಸೆಮಿಸ್ಟರ್ ಪರೀಕ್ಷೆಗಳು ಪ್ರಾರಂಭವಾಗುತ್ತಿವೆ, ಕಳೆದ ವರ್ಷ ಪ್ರಥಮ ಸೆಮಿಸ್ಟರ್ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಜಾತಕ ಪಕ್ಷಿಗಳಂತೆ ಹಲವಾರು ವಿದ್ಯಾರ್ಥಿಗಳು ಕಾಯುತ್ತಿದ್ದಾರೆ ಎಂಬುದನ್ನು ಅರಿಯದ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿರುವುದನ್ನು ಎಸ್‌ಎಫ್‌ಐ ಸಂಘಟನೆಯು ತೀವ್ರವಾಗಿ ಖಂಡಿಸಿದೆ.
ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಜೀವನ ಜೊತೆ ಚೆಲ್ಲಾಟ ಆಡುವುದನ್ನು ಬಿಟ್ಟು ಕೂಡಲೇ ಎಲ್ಲಾ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಫಲಿತಾಂಶ ಬಿಡುಗಡೆ ಮಾಡಬೇಕು ಹಾಗೂ ವಿದ್ಯಾರ್ಥಿಗಳ ಮರು ಮೌಲ್ಯಮಾಪನ, ಅಂಕಗಳ ರಿಕೌಂಟ್, ಉತ್ತರ ಪತ್ರಿಕೆಗಳ ಛಾಯೆ ಪ್ರತಿ ತೆಗೆದುಕೊಳ್ಳುವುದಕ್ಕಾಗಿ ವಿದ್ಯಾರ್ಥಿಗಳಿಂದ 300 ದಿಂದ 1200 ರೂಪಾಯಿ ವರಿಗೆ ನಿಗಿದಿ ಪಡಿಸಿದ ಶುಲ್ಕವನ್ನು ಕಡಿತ ಮಾಡಬೇಕು ಎಂದು ಸಂಘಟನೆಯು ಮನವಿ ಪತ್ರದಲ್ಲಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಸಂಘಟನೆ ರಾಜ್ಯಾಧ್ಯಕ್ಷರಾದ ಅಮರೇಶ ಕಡಗದ, ರಾಜಾಭಕ್ಷಿ, ಶಿವುಕುಮಾರ,ಅಶೋಕ, ರಾಮಣ್ಣ, ಸುರೇಶ, ನಾಗರಾಜ, ಮಂಜುನಾಥ, ಉದಯ,ಅಭಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.