ಪರೀಕ್ಷಾ ಸಮಯದಲ್ಲಿ ಹಿಜಾಬ್‌ ಬೇಕು-ಬೇಡಗಳ ನಡುವೆ ವಿದ್ಯಾರ್ಥಿನಿಯರು ಅತಂತ್ರ

ಬೆಂಗಳೂರು :  ಇದೇ ತಿಂಗಳ ಮಾರ್ಚ್‌ 9 ನೇ ತಾರೀಖಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದೆ. ಆದರೆ ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷಾ ಸಮಯದಲ್ಲಿ ಹಿಜಾಬ್ ಧರಿಸಲು ಅನುಮತಿ  ನೀಡಬೇಕೆಂದು ವಿವಿಧ ಕಾಲೇಜುಗಳ ಪ್ರಾಂಶುಪಾಲರ ಬಳಿ ವಿನಂತಿಸಿಕೊಂಡಿದ್ದಾರೆಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪಿಯು ಕಾಲೇಜು ಪ್ರಾಂಶುಪಾಲರು ಮತ್ತು ಅಧಿಕಾರಿಗಳಿಗೆ ಇಂತಹ ಮನವಿಗಳನ್ನು ಪರಿಗಣಿಸದಂತೆ ಸೂಚನೆಗಳನ್ನು ನೀಡಿದೆ. ಇಲಾಖೆಯಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಉಡುಪಿ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕಾಲೇಜುಗಳಲ್ಲಿ ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ಕೋರಿದ್ದಾರೆ.

ಇದನ್ನು ಓದಿ : ಪಿಯುಸಿ ಪರೀಕ್ಷೆ: ಹಿಜಾಬ್‌ಗಾಗಿ ನ್ಯಾಯಾಲಯದ ಮೇಟ್ಟಿಲೇರಿದ ವಿದ್ಯಾರ್ಥಿನಿಯರು ಗೈರು!

ಕಳೆದ ವರ್ಷ ಮಾರ್ಚ್‌ನಲ್ಲಿ ಕರ್ನಾಟಕ ಹೈಕೋರ್ಟ್ ಹಿಜಾಬ್ ಧರಿಸುವುದು ಇಸ್ಲಾಮಿಕ್ ನಂಬಿಕೆಯ ಅಗತ್ಯ ಧಾರ್ಮಿಕ ಆಚರಣೆಯ ಭಾಗವಾಗಿಲ್ಲ ಎಂದು ಹೇಳಿತ್ತು. ಶಾಲಾ ಸಮವಸ್ತ್ರದ ಪ್ರಿಸ್ಕ್ರಿಪ್ಷನ್ ಸಾಂವಿಧಾನಿಕವಾಗಿ ಅನುಮತಿಸುವ ಸಮಂಜಸವಾದ ನಿರ್ಬಂಧವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಇದನ್ನು ವಿದ್ಯಾರ್ಥಿಗಳು ವಿರೋಧಿಸಲು ಸಾಧ್ಯವಿಲ್ಲ. ಫೆಬ್ರವರಿ 5, 2022 ರಂದು ವಿದ್ಯಾರ್ಥಿಗಳು ನಿಗದಿತ ಸಮವಸ್ತ್ರವನ್ನು ಧರಿಸಬೇಕೆಂಬ ಸರ್ಕಾರದ ಆದೇಶವನ್ನು ನ್ಯಾಯಾಲಯ ಎತ್ತಿಹಿಡಿದಿತ್ತು. ಆದರೆ ಕರ್ನಾಟಕ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

ನಾವು ಪರೀಕ್ಷೆಗೆ ಗೈರುಹಾಜರಾದವರ ಬಗ್ಗೆ ಜಾತಿ ಅಥವಾ ಧರ್ಮದ ಆಧಾರದ ಮೇಲೆ ದತ್ತಾಂಶವನ್ನು ಸಂಗ್ರಹಿಸಿಲ್ಲ. ಯಾವುದೇ ಸಂದರ್ಭದಲ್ಲಿ ಗೈರುಹಾಜರಿಯು ಖಂಡಿತವಾಗಿಯೂ ಹಿಜಾಬ್ ವಿವಾದದೊಂದಿಗೆ ಸಂಪರ್ಕ ಹೊಂದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ತರಗತಿಯೊಳಗೆ ಹಿಜಾಬ್ ನಿಷೇಧವು ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಇದು ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ನೋಂದಣಿಗಳ ಮೇಲೆ ಪರಿಣಾಮ ಬೀರಿದೆ. ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸಲು ಅನುಮತಿಸದ ಕಾರಣ ಪರೀಕ್ಷೆಯನ್ನು ಬರೆಯುವುದನ್ನೆ ಬಿಟ್ಟಿದ್ದರು. ಒಂದರ್ಥದಲ್ಲಿ ಹೇಳುವುದಾದರೆ ವಿದ್ಯಾರ್ಥಿಗಳ ಭವಿಷ್ಯದತ್ತ ಗಮನವಹಿಸಬೇಕಾದ ಸರ್ಕಾರ ಹಿಜಾಬ್‌ ವಿಚಾರಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರುವುದು ಬೇಸರದ ಸಂಗತಿ.


ಪರೀಕ್ಷೆಯ ಸಮಯದಲ್ಲಿ ಹಿಜಾಬ್‌ಅನ್ನು ಅನುಮತಿಸುವ ಪ್ರಶ್ನೆಯೇ ಇಲ್ಲ : 
ಹಿಜಾಬ್ ಕುರಿತ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಪರೀಕ್ಷೆಯ ಸಮಯದಲ್ಲಿ ಹಿಜಾಬ್ ಅನ್ನು ಅನುಮತಿಸುವ ಪ್ರಶ್ನೆಯೇ ಇಲ್ಲ. ಈ ಹಿಜಾಬ್ ಕಾರಣದಿಂದ ಯಾವುದೇ ವಿದ್ಯಾರ್ಥಿಯು ಪರೀಕ್ಷೆಗಳನ್ನು ಬಿಟ್ಟುಬಿಡುತ್ತಾರೆ ಎಂದು ನಾವು ಭಾವಿಸುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ ಸಿ ನಾಗೇಶ್ ಅವರು ತಿಳಿಸಿದ್ದಾರೆ.


ಕಳೆದ ಒಂದು ವಾರದಲ್ಲಿ, ಪರೀಕ್ಷೆಯನ್ನು ಹಿಜಾಬ್ ಧರಿಸಿ ಬರೆಯಲು ಅನುಮತಿ ಕೋರಿ ನಮಗೆ ಎರಡು ವಿನಂತಿಗಳು ಬಂದಿವೆ. ನಾವು ಅವನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದೇವೆ. ನಾವು ಎಲ್ಲಾ ವಿದ್ಯಾರ್ಥಿಗಳಿಗೆ ನಿಯಮಗಳನ್ನು ಅನುಸರಿಸಲು ಸೂಚಿಸಿದ್ದೇವೆ. ಹಿಜಾಬ್ ಕುರಿತು ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶವಿದೆ. ವಿದ್ಯಾರ್ಥಿಗಳು ಮತ್ತು ಕಾಲೇಜುಗಳು ಏಕರೂಪದ ನೀತಿಯನ್ನು ಪಾಲಿಸಬೇಕು. ಎಷ್ಟು ವಿದ್ಯಾರ್ಥಿಗಳು ತಪ್ಪಿಸಿಕೊಂಡಿದ್ದಾರೆ ಎಂಬ ಬಗ್ಗೆ ಇಲಾಖೆಯಿಂದ ಯಾವುದೇ ಮಾಹಿತಿ ಇಲ್ಲ. ಕಳೆದ ವರ್ಷ ನಡೆದ ಪರೀಕ್ಷೆಗಳಲ್ಲಿ ಹಿಜಾಬ್ ಧರಿಸಲು ಅನುಮತಿ ನಿರಾಕರಿಸಲಾಗಿತ್ತು.

– ದಕ್ಷಿಣ ಕನ್ನಡದ ಕಾಲೇಜೊಂದರ ಪ್ರಾಂಶುಪಾಲರು.


ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಯೋಚಿಸಬೇಕಿದ್ದ ಸರಕಾರ ಪದೇ ಪದೇ ಹಿಜಾಬ್‌ ವಿಚಾರವನ್ನು ಮುಂದೆ ಮಾಡಿ ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡುತ್ತಿದೆ. ಕಳೆದೊಂದು ವರಷದಿಂದ ಇದೇ ವಿಚಾರವಾಗಿ ವಿದ್ಯಾರ್ಥಿನಿಯರಿಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ.  ಇವರ ಶೈಕ್ಷಣಿಕ ಭವಿಷ್ಯದ ಬಗ್ಗೆ ಸರಕಾರ ಆಲೋಚನೆಯನ್ನು ಮಾಡಬೇಕು. ಯಾವೊಬ್ಬ ವಿದ್ಯಾರ್ಥಿನಿಯೂ ಪರೀಕ್ಷೆಯಿಂದ ವಂಚಿತರಾಗದಂತೆ ಕ್ರಮ ವಹಿಸಬೇಕು ಎಂದು ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ್‌ ಕಡಗದ್‌ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *