ಮಂಗಳೂರು: ಶಿಥಿಲಾವಸ್ಥೆಗೆ ತಲುಪಿರುವ ನಿರುಪಯೋಗಿ ಸುರತ್ಕಲ್ ಟೋಲ್ ಭೂತ್ ತೆರವುಗೊಳಿಸುವಂತೆ ಹೋರಾಟ ಸಮಿತಿಯು ಆಗ್ರಹಿಸಿದೆ.
ರಸ್ತೆ ಕಾಮಗಾರಿ ನಡೆಯುತ್ತಿರುವ ಸುರತ್ಕಲ್ ಟೋಲ್ ಗೇಟ್‌ಗೆ, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನಿಯೋಗ ಆಗಸ್-31 ಗುರುವಾರ ಭೇಟಿ ಮಾಡಿದೆ. ಏಳು ವರ್ಷಗಳ ಸತತ ಹೋರಾಟದ ತರುವಾಯ 9 ತಿಂಗಳ ಹಿಂದೆ ಮುಚ್ಚಲ್ಪಟ್ಟ ಸುರತ್ಕಲ್ ಟೋಲ್ ಕೇಂದ್ರದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ನಿರುಪಯೋಗಿ ಟೋಲ್ ಬೂತ್ ತೆರವುಗೊಳಿಸದೆ, ಟೋಲ್ ಕೇಂದ್ರವನ್ನು ಕಾಂಕ್ರಿಟೀಕರಣ ಗೊಳಿಸಿ ಅಭಿವೃದ್ದಿಗೊಳಿಸುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಅಸಮಾಧಾನ, ಟೋಲ್ ಸಂಗ್ರಹ ಮತ್ತೆ ಶುರುವಾಗುವ ವದಂತಿ, ಆತಂಕ ವ್ಯಕ್ತವಾಗಿತ್ತು. ಹೋರಾಟ ಸಮಿತಿಗೂ ಈ ಕುರಿತು ಹಲವು ದೂರುಗಳು ಬಂದಿತ್ತು ಎಂದು ನಾಯಕರು ತಿಳಿಸಿದ್ದಾರೆ.
ಇದನ್ನೂ ಓದಿ:ಸುರತ್ಕಲ್ ಟೋಲ್‌ಗೇಟ್ ತೆರವಿಗೆ ಆಗ್ರಹ; ಅಕ್ಟೋಬರ್ 28ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ
ಶಿಥಿಲಾವಸ್ಥೆಗೆ ತಲುಪಿರುವ ನಿರುಪಯೋಗಿ ಟೋಲ್ ಬೂತ್ ತೆರವುಗೊಳಿಸುವಂತೆ ಹೋರಾಟ ಸಮಿತಿಯು ಹಲವು ಬಾರಿ ಒತ್ತಾಯಮಾಡಿತ್ತು. ಆದರೆ ನಾಗರಿಕರ ದೂರು, ಆಗ್ರಹಗಳಿಗೆ ಮನ್ನಣೆ ನೀಡದೆ, ನಿರುಪಯೋಗಿ ಟೋಲ್ ಬೂತ್ ಉಳಿಸಿಕೊಂಡೇ ಟೋಲ್ ಕೇಂದ್ರದ ಸುತ್ತಲ ರಸ್ತೆ ಅಭಿವೃದ್ಧಿ ಕೆಲಸ ನಡೆಸುತ್ತಿರುವ ಹಿನ್ನಲೆಯಲ್ಲಿ ‘ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್’ ನ ಪ್ರಮುಖರ ನಿಯೋಗ ಇಂದು ಸುರತ್ಕಲ್ ಟೋಲ್ ಕೇಂದ್ರಕ್ಕೆ ಭೇಟಿ ನೀಡಿ ಬೆಳವಣಿಗೆಗಳನ್ನು ಪರಿಶೀಲಿಸಿದೆ.
ಅನಗತ್ಯವಾಗಿ ನಿರುಪಯುಕ್ತ ಟೋಲ್ ಬೂತ್ ಉಳಿಸಿಕೊಂಡು ಟೋಲ್ ಕೇಂದ್ರದ ಪರಿಸರದಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಪಡಿಸುತ್ತಿರುವುದು ಜನರ ತೆರಿಗೆಯ ಹಣದ ದುರುಪಯೋಗ. ನಿರುಪಯೋಗಿ ಟೋಲ್ ಬೂತ್ ತೆರವುಗೊಳಿಸದಿರುವುದರಿಂದ,ಮುನ್ಸೂಚನೆ ಇಲ್ಲದೆ ದಿಢೀರ್ ಎದುರಾಗುವ ಟೋಲ್ ಬೂತ್ ನಿಂದ ವಾಹನ ಅವಘಡಗಳು ನಡೆದು, ಪ್ರಾಣಹಾನಿಗಳು ಈಗಾಗಲೆ ಸಂಭವಿಸಿದೆ, ಮತ್ತಷ್ಟು ದುರಂತಗಳು ಸಂಭವಿಸುವ ಮುನ್ನ ಟೋಲ್ ಬೂತ್ ತಕ್ಷಣವೇ ತೆರವುಗೊಳಿಸಬೇಕು ಎಂದು ಹೋರಾಟ ಸಮಿತಿಯ ನಿಯೋಗ ಆಗ್ರಹಪಡಿಸಿತು.
ಏಳು ವರ್ಷಗಳ ಕಾಲ ಜನರ ಸತತ ಹೋರಾಟದಿಂದ ಅಧಿಕೃತವಾಗಿ ಮುಚ್ಚಲ್ಪಟ್ಟಿರುವ ಸುರತ್ಕಲ್ ಟೋಲ್ ಗೇಟ್ ನ ನಿರುಪಯೋಗಿ ಬೂತ್ ಗಳನ್ನು ಒಂಬತ್ತು ತಿಂಗಳು ಕಳೆದರೂ ತೆರವುಗೊಳಿಸದಿರುವುದು ಖಂಡನೀಯ. ಇಷ್ಟು ಸಣ್ಣ ಕೆಲಸವನ್ನೂ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ಮಾಡದಿರುವುದು ಅವರ ಬೇಜವಾಬ್ದಾರಿತನವನ್ನು ಎತ್ತಿತೋರಿಸುತ್ತದೆ. ಸುರತ್ಕಲ್ ಟೋಲ್ ಸುಂಕವನ್ನು ಹೆಜಮಾಡಿ ಟೋಲ್ ಕೇಂದ್ರದಲ್ಲಿ, ಅಥವಾ ಮರಳಿ ಸುರತ್ಕಲ್ ಟೋಲ್ ಕೇಂದ್ರದಲ್ಲೋ ಸಂಗ್ರಹ ಮಾಡುವುದು ಅಸಾಧ್ಯ. ಹೋರಾಟ ಸಮಿತಿ ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ನಂತೂರು, ಸುರತ್ಕಲ್ ಹೆದ್ದಾರಿಯನ್ನು ಟೋಲ್ ಮುಕ್ತ ರಸ್ತೆ ಎಂದು ಘೋಷಿಸಬೇಕು, ಅಪಾಯಕಾರಿಯಾಗಿ ಶಿಥಿಲಾವಸ್ಥೆಯಲ್ಲಿರುವ ಸುರತ್ಕಲ್ ನಿರುಪಯೋಗಿ ಟೋಲ್ ಬೂತ್ ಅನ್ನು ತಕ್ಷಣವೇ ತೆರವುಗೊಳಿಸದಿದ್ದಲ್ಲಿ ಸುರತ್ಕಲ್ ಟೋಲ್ ಬೂತ್ ತೆರವಿಗಾಗಿ ಹೋರಾಟವನ್ನು ಆರಂಭಿಸುವುದಾಗಿ ಮುಖಂಡರು ಎಚ್ಚರಿಸಿದರು.
ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಸಹ ಸಂಚಾಲಕರಾದ ಪುರುಷೋತ್ತಮ ಚಿತ್ರಾಪುರ, ವೈ ರಾಘವೇಂದ್ರ ರಾವ್, ಟಿ ಎನ್ ರಮೇಶ್, ಮಾಜಿ ಕಾರ್ಪೊರೇಟರ್ ಅಯಾಝ್ ಕೃಷ್ಣಾಪುರ, ಡಿವೈಎಫ್ಐ ಸುರತ್ಕಲ್ ಘಟಕದ ಅಧ್ಯಕ್ಷ ಶ್ರೀನಾಥ್ ಕುಲಾಲ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ, ದಲಿತ ಸಂಘರ್ಷ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕ ಶೇಖರ ಹೆಜಮಾಡಿ, ಕುಳಾಯಿ ನಾಗರಿಕ ಸಮಿತಿಯ ಗಂಗಾಧರ ಬಂಜನ್, ವಿವಿಧ ಸಂಘಟನೆಗಳ ಪ್ರಮುಖರಾದ ಹರೀಶ್ ಪೇಜಾವರ, ಆದ್ದು ಕೃಷ್ಣಾಪುರ, ಹೇಮಂತ್ ಪೂಜಾರಿ, ಶ್ರೀಕಾಂತ್ ಸಾಲ್ಯಾನ್, ಸಲೀಂ ಕಾಟಿಪಳ್ಳ, ಶೆರೀಫ್ ಸುರತ್ಕಲ್, ರಶೀದ್ ಮುಕ್ಕ, ಶಾಕಿರ್ ಕೃಷ್ಣಾಪುರ, ಹನೀಫ್ ಇಡ್ಯಾ, ಜಲೀಲ್ ಮತ್ತಿತರರು ಉಪಸ್ಥಿತರಿದ್ದರು.