ಬಜೆಟ್‌: ಸರ್ಕಾರದ ಯೋಜನೆಗಳಿಗೆ ಕಟ್ಟಡ ಕಾರ್ಮಿಕರ ನಿಧಿಯ ಬಳಕೆಗೆ ತೀವ್ರ ವಿರೋಧ

ಬೆಂಗಳೂರು: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ 600 ಕೋಟಿ ರೂಪಾಯಿ ವೆಚ್ಚದಲ್ಲಿ GTTC ಕೇಂದ್ರಗಳನ್ನು ಸ್ಥಾಪಿಸಲು ಪ್ರಸ್ತಾಪಿಸಿರುವುದನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ತೀವ್ರವಾಗಿ ವಿರೋಧಿಸುತ್ತದೆ ಎಂದು ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ. ಬಜೆಟ್‌

ತರಬೇತಿ ಕೇಂದ್ರಗಳನ್ನು ಸ್ಥಾಪಿಸುವುದು ರಾಜ್ಯ ಸರ್ಕಾರದ ಕೆಲಸ, ಜೊತೆಗೆ ಈ ತರಬೇತಿ ಕೇಂದ್ರಗಳಲ್ಲಿ ಕೇವಲ ಕಟ್ಟಡ ಕಾರ್ಮಿಕರ ಮಕ್ಕಳು ಮಾತ್ರವಲ್ಲದೆ ಎಲ್ಲರಿಗೂ ಪ್ರವೇಶಾವಕಾಶ ಇದೆ. ಹೀಗಿರುವಾಗ ಕಲ್ಯಾಣ ಮಂಡಳಿಯಿಂದ 600 ಕೋಟಿ ರೂಪಾಯಿ ವೆಚ್ಚ ಮಾಡುವ ನಿರ್ಧಾರವು ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಬಗೆಯುವ ದ್ರೋಹವಾಗಿದೆ ಎಂದರು.

ಇದನ್ನೂ ಓದಿ: ಘೋಷಣೆಗಳ ಭರವಸೆ, ಅನುಷ್ಠಾನದ ಪ್ರಶ್ನೆ? – ಕರ್ನಾಟಕ ಬಜೆಟ್‌ನ ವಿಮರ್ಶೆ

ಹಾಗೆಯೇ ಶ್ರಮಿಕ ವಸತಿ ಶಾಲೆಗಳ ನಿರ್ಮಾಣ ಹಾಗೂ ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ಸ್ಥಾಪಿಸಲು ಉದ್ದೇಶಿರುವ ಕೌಶಲ್ಯ ಅಭಿವೃದ್ಧಿ ಅಕಾಡೆಮಿಗಳನ್ನು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ನಿಧಿಯನ್ನು ಬಳಸಿ ನಿರ್ಮಾಣ ಮಾಡುವ ಬಜೆಟ್ ಪ್ರಸ್ತಾಪವು 1996ರ ಕಟ್ಟಡ ಕಾರ್ಮಿಕರ ಕಾಯ್ದೆಯ ಉದ್ದೇಶವನ್ನು ಬುಡಮೇಲು ಮಾಡುವುದಾಗಿದೆ.

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯು ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಸೇರಿದಂತೆ, ಕಾರ್ಮಿಕರ ಆರೋಗ್ಯ, ಸುರಕ್ಷತೆ ಮತ್ತು ಶಿಕ್ಷಣದ ಅಗತ್ಯತೆಗಳಿಗಾಗಿ ಬಳಸಬೇಕು ಮತ್ತು ಇದನ್ನು ಕಟ್ಟಡ ಕಾರ್ಮಿಕರ ಕಲ್ಯಾಣ ಯೋಜನೆಗಳಿಗೆ ಹೊರತುಪಡಿಸಿ ಇತರೆ ಯಾವುದೇ ಉದ್ದೇಶಗಳಿಗೆ ಬಳಸಬಾರದೆಂದು ಕಾಯ್ದೆ ಹೇಳುತ್ತದೆ ಮತ್ತು ಸುಪ್ರೀಂ ಕೋರ್ಟ್ ಕೂಡ ಇದನ್ನು ಎತ್ತಿ ಹಿಡಿದಿದೆ. ಹೀಗಿರುವಾಗ ರಾಜ್ಯ ಸರ್ಕಾರ ತನ್ನ ಖಜಾನೆಯಿಂದ ಮಾಡಬೇಕಾದ ಯೋಜನೆಗಳನ್ನು ಬಡ ಕಾರ್ಮಿಕರ ನಿಧಿಯನ್ನು ಬಳಸಿ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ರಾಜ್ಯ ಸರ್ಕಾರದ ಈ ಮೂರು ಬಜೆಟ್ ಪ್ರಸ್ತಾಪಗಳನ್ನು ತೀವ್ರವಾಗಿ ವಿರೋಧಿಸುತ್ತದೆ ಮತ್ತು ಇದನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸುತ್ತದೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ತೀವು ಪ್ರತಿಭಟನೆಗಳನ್ನು ನಡೆಸಲು ಎಚ್ಚರಿಸುತ್ತದೆ ಎಂದು ತಿಳಿಸಿದರು.

ಇದನ್ನೂ ನೋಡಿ: “ಸಂಘಟನೆ ಹಕ್ಕಿಗೆ ಕೈ ಹಾಕಿದರೆ ಹೋರಾಟ ತೀವ್ರ: ಮೀನಾಕ್ಷಿ ಸುಂದರಂ ಎಚ್ಚರಿಕೆ” Janashakthi Media

Donate Janashakthi Media

Leave a Reply

Your email address will not be published. Required fields are marked *