ನವದೆಹಲಿ: ಬುಧವಾರ ಮಧ್ಯಾಹ್ನ ಇಬ್ಬರು ವ್ಯಕ್ತಿಗಳು ಲೋಕಸಭೆ ಸಂದರ್ಶಕರ ಗ್ಯಾಲೆರಿಯಿಂದ ಸದನಕ್ಕೆ ಜಿಗಿದು ಮಾಡಿ ಅಶ್ರುವಾಯು ಎಸೆದಿರುವ ಬಗ್ಗೆ ವರದಿಯಾಗಿದೆ. ಆರೋಪಿಗಳಿಗೆ ಸದನ ಪ್ರವೇಶಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಕಡೆಯಿಂದ ಪಾಸ್ ನೀಡಲಾಗಿತ್ತು ಎಂದು ಆರೋಪಿಸಲಾಗಿದೆ. ಇಬ್ಬರನ್ನೂ ಬಂಧಿಸಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಆರೋಪಿಗಳನ್ನು ಮೈಸೂರು ಮೂಲದ ಸಾಗರ್ ಶರ್ಮಾ ಮತ್ತು ಮನೋರಂಜನ್ ಎಂದು ಗುರುತಿಸಲಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಸಂದರ್ಶಕರ ಗ್ಯಾಲರಿಯಲ್ಲಿ ಕುಳಿತಿದ್ದ ಆರೋಪಿಗಳು ಸದನಕ್ಕೆ ಜಿಗಿದು ಸಂಸದರು ಕುಳಿತುಕೊಳ್ಳುವ ಸೀಟ್‌ಗಳ ಮೇಲೆ ಹತ್ತಿಕೊಂಡು ಮುಂದೆ ಮುಂದೆ ಚಲಿಸಿದ್ದಾರೆ. ಈ ಘಟನೆ ಸಂಸದ್ ಟಿವಿಯಲ್ಲಿ ದಾಖಲಾಗಿದ್ದು, ಅಪರಿಚಿತ ವ್ಯಕ್ತಿ ಸಂಸದರ ಸೀಟುಗಳ ಮಧ್ಯೆ ತೆರಳುತ್ತಿದ್ದಾಗ ಸ್ಪೀಕರ್ ಅವರು ಸದನವನ್ನು ಮುಂದೂಡಿದ್ದಾರೆ. ಇದು ಗಂಭೀರ ಭದ್ರತಾ ಲೋಪ ಎಂದು ಸಂಸದ ಕಾರ್ತಿ ಚಿದಂಬರಂ ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ರೈತರ ಖಾತೆಗೆ 2000 ರೂಪಾಯಿ ಬರ ಪರಿಹಾರ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಘೋಷಣೆ
ಇದೇ ವೇಳೆ ಸಂಸತ್ತಿನ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದ ಮತ್ತೆ ಇಬ್ಬರನ್ನು ಬಂಧಿಸಲಾಗಿದ್ದು, ಅವರನ್ನು ನೀಲಂ (42) ಮತ್ತು ಅಮೋಲ್ ಶಿಂಧೆ (25) ಎಂದು ಗುರುತಿಸಲಾಗಿದೆ. ಒಬ್ಬ ಮಹಿಳೆ ಮತ್ತು ಪುರುಷ ಇದರಲ್ಲಿ ಇದ್ದು ಅವರೊಂದಿಗೆ ಹಳದಿ ಹೊಗೆಯನ್ನು ಹೊರಸೂಸುವ ಕ್ಯಾನ್‌ಗಳು ಇತ್ತು ಎಂದು ವರದಿಯಾಗಿದೆ. ಸದನದ ಒಳಗೆ ಪ್ರವೇಶ ಮಾಡಿದವರ ಕೂಡಾ ಹಳದಿ ಗ್ಯಾಸ್‌ಗಳನ್ನು ಬೀಸಿದ್ದಾರೆ ಹಾಗೂ ಅದರ ಹೊಗೆಯಿಂದ ಮುಖ ಉರಿಯುತ್ತಿತ್ತು ಎಂದು ಅನೇಕ ಸಂಸದರು ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ಬುಧವಾರ ನಡೆದ ಭದ್ರತಾ ಉಲ್ಲಂಘನೆಯು 2001 ರ ಸಂಸತ್ತಿನ ದಾಳಿಯ ವಾರ್ಷಿಕೋತ್ಸವದಂದೇ ಸಂಭವಿದೆ. ಈ ಸಂದರ್ಭದಲ್ಲಿ ಸಶಸ್ತ್ರ ಭಯೋತ್ಪಾದಕರು ಸಂಸತ್ತಿನ ಕಟ್ಟಡಕ್ಕೆ ನುಗ್ಗಿದ್ದರು. ಇದನ್ನು ಗಂಭೀರ ಭದ್ರತಾ ಲೋಪ ಎಂದಿರುವ ಸಂಸದರು ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಭದ್ರತಾ ಲೋಪದ ನಂತರ ಲೋಕಸಭೆಯನ್ನು ಸ್ವಲ್ಪ ಹೊತ್ತು ಮುಂದೂಡಲಾಯಿತು ಮತ್ತು ಸಂಸದರನ್ನು ಹೊರಗೆ ಕಳುಹಿಸಲಾಯಿತು.
ಸಾಗರ್ ಶರ್ಮಾ ಅವರ ಸಂದರ್ಶಕರ ಪಾಸ್ ಅನ್ನು ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೆಸರಿನಲ್ಲಿ ನೀಡಲಾಗಿದೆ ಎಂದು ಇಂಡಿಯಾ ಟುಡೆ ವರದಿ ಹೇಳಿದೆ. ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಬೇಕ ಸಂಸದರು ಲೋಕಸಭೆಯೊಳಗೆ ಗೊಂದಲ ಮತ್ತು ಗಾಬರಿಯ ದೃಶ್ಯಗಳನ್ನು ವಿವರಿಸಿದರು.
ಇದನ್ನೂ ಓದಿ: ಪುಟಾಣಿಗಳ ಶಿಕ್ಷಣಕ್ಕಿಲ್ಲ ಬಲ! 25 ಮಕ್ಕಳಿರುವ ಅಂಗನವಾಡಿಗೆ ಶಿಕ್ಷಕಿಯೂ ಇಲ್ಲ, ಸಹಾಯಕಿಯೂ ಇಲ್ಲ
ಬಿಜೆಪಿ ಸಂಸದ ಖರ್ಗೆನ್ ಮುರ್ಮು ಮಾತನಾಡುತ್ತಿದ್ದಾಗ ಒಬ್ಬ ವ್ಯಕ್ತಿ ಸಂದರ್ಶಕರ ಗ್ಯಾಲರಿಯಿಂದ ಜಿಗಿದ್ದಾನೆ. ತಡೆಗೋಡೆಯಿಂದ ನೇತಾಡಿದ ಆರೋಪಿ ನಂತರ ಸದನಕ್ಕೆ ಜಿಗಿದಿದ್ದಾನೆ. ಇದೇ ವೇಳೆ ಮತ್ತೊಬ್ಬ ವ್ಯಕ್ತಿ ಕೂಡಾ ಅವನನ್ನು ಹಿಂಬಾಲಿಸಿ ಗ್ಯಾಲರಿಯಿಂದ ಜಿಗಿದಿದ್ದಾನೆ. ನಂತರ ಅವರಿಬ್ಬರನ್ನು ಕೆಲವು ಸಂಸದರು ಹಿಡಿಯಲು ಪ್ರಯತ್ನಿಸಿದಾಗ, ಅವರು ಬೆಂಚ್‌ನಿಂದ ಬೆಂಚ್‌ಗೆ ಜಿಗಿಯಲು ಪ್ರಾರಂಭಿಸಿದ್ದಾರೆ. ನಂತರ ತಮ್ಮ ಶೂ ಒಳಗಡೆಯಿಂದ ಏನನ್ನೋ ಹೊರತೆಗೆದು ಅದರಿಂದ ಬಣ್ಣದ ಗ್ಯಾಸ್ ಹೊರಹೊಮ್ಮಿಸಿದ್ದಾರೆ. ಇಬ್ಬರು ವ್ಯಕ್ತಿಗಳನ್ನು ಹತ್ತಿರದ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ಘಟನೆಯನ್ನು ವಿವರಿಸಿದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, “ಇಬ್ಬರು ಯುವಕರು ಇದ್ದಕ್ಕಿದ್ದಂತೆ ಸಂದರ್ಶಕರ ಗ್ಯಾಲರಿಯಿಂದ ಸದನಕ್ಕೆ ಜಿಗಿದಿದ್ದಾರೆ. ಅವರ ಕೈಯಲ್ಲಿ ಡಬ್ಬಿಗಳು ಇದ್ದವು, ಅದು ಹೊಗೆಯನ್ನು ಉಗುಳುತ್ತಿದ್ದವು. ಅವರಲ್ಲಿ ಒಬ್ಬರು ಸ್ಪೀಕರ್ ಕುರ್ಚಿಯತ್ತ ಓಡಲು ಪ್ರಯತ್ನಿಸಿದ್ದು, ಕೆಲವು ಘೋಷಣೆಗಳನ್ನು ಕೂಗಿದ್ದಾರೆ. ಹೊಗೆ ವಿಷಕಾರಿಯಾಗಿರಬಹುದು. ಇದು ಗಂಭೀರ ಭದ್ರತಾ ಲೋಪವಾಗಿದೆ. ವಿಶೇಷವಾಗಿ 2001 ರ ಡಿಸೆಂಬರ್ 13 ರಂದು ಸಂಸತ್ತಿನ ಮೇಲೆ ದಾಳಿ ನಡೆದ ದಿನವಾಗಿದೆ ಇಂದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಧಾನ ಪರಿಷತ್‌ನಲ್ಲಿ ಸಾಲ ಮನ್ನಾಕ್ಕೆ ಬಿಜೆಪಿ ಸದಸ್ಯರ ಆಗ್ರಹ
ತನಿಖೆ ನಡೆಸುವ ಭರವಸೆ ನೀಡಿದ ಸ್ಪೀಕರ್
ಘಟನೆಯ ನಂತರ ಸದನವು ಪುನರಾರಂಭಗೊಂಡಾಗ ಮಾತನಾಡಿದ ಸ್ಪೀಕರ್ ಓಂ ಬಿರ್ಲಾ ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಹೊಗೆಯು “ಸಾಮಾನ್ಯ ರೀತಿಯ” ಹೊಗೆಯಾಗಿದೆ ಎಂದು ಹೇಳಿದ್ದಾರೆ. “ಶೂನ್ಯವೇಳೆಯಲ್ಲಿ ನಡೆದ ಘಟನೆಯ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ದೆಹಲಿ ಪೊಲೀಸರಿಗೂ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಅದು ಕೇವಲ ಹೊಗೆ ಎಂದು ಕಂಡುಬಂದಿದ್ದು, ಹೊಗೆಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ” ಎಂದು ಸ್ಪೀಕರ್ ಹೇಳಿದ್ದಾರೆ.
2016ರ ನವೆಂಬರ್ 25ರಂದು ಇದೇ ರೀತಿಯ ಘಟನೆ ನಡೆದಿತ್ತು. ಸರ್ಕಾರದ ನೋಟು ಅಮಾನ್ಯೀಕರಣ, ಹಳೆಯ 500 ಮತ್ತು 1000 ರೂಪಾಯಿ ನೋಟುಗಳನ್ನು ನಿಷೇಧಿಸಿರುವುದನ್ನು ವಿರೋಧಿಸಿ ವ್ಯಕ್ತಿಯೊಬ್ಬರು ಲೋಕಸಭೆಯ ಸಂದರ್ಶಕರ ಗ್ಯಾಲರಿಯಿಂದ ಸದನಕ್ಕೆ ಜಿಗಿಯಲು ಯತ್ನಿಸಿದ್ದರು.
13 ಡಿಸೆಂಬರ್ 2001 ರಂದು, ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ಸಂಘಟನೆಗಳ ಭಯೋತ್ಪಾದಕರು ಸಂಸತ್ತಿನ ಸಂಕೀರ್ಣದ ಮೇಲೆ ದಾಳಿ ಮಾಡಿ ಒಂಬತ್ತು ಜನರನ್ನು ಕೊಂದಿದ್ದರು.
ವಿಡಿಯೊ ನೋಡಿ: ಲೋಕಸಭಾ ಸದಸ್ಯರ ಕಚೇರಿ ಮುಂದೆ ಪ್ರತಿಭಟನೆ : ಸ್ಕೀಂ ನೌಕರರ ಸಮಾವೇಶದ ನಿರ್ಣಯ