ತಾಯಂದಿರ ತಳಮಳ ಹೇಳುವ ಕತೆಯೆ ಬೇರೆ

ಕೆ.ಎಸ್.ರವಿಕುಮಾರ್, ಹಾಸನ

ಹೇವರಿಕೆ ಹುಟ್ಟಿಸುವಂತಹ ಚರಿತ್ರೆಯನ್ನು ತನ್ನ ಬೆನ್ನಿಗಂಟಿಸಿಕೊಂಡಿರುವ ನೆತನ್ಯಾಹುವಿಗೆ ಪ್ಯಾಲೆಸ್ತೈನ್ ಮಂದಿ ಎಂದೆಂದಿಗೂ ಇಸ್ರೇಲ್ ವಿರುದ್ಧ ಹತಾರ ಹಿಡಿಯದಂತೆ ಮಾಡಬೇಕೆಂಬ ಹೆಬ್ಬಯಕೆಯಿದೆ. ಶಾಂತಿ ಸಾಧ್ಯವಾಗುವ ಪ್ರಯತ್ನಗಳು ಆತನ 15 ವರುಷಗಳ ಆಳ್ವಿಕೆಯಲ್ಲಿ ಹಿನ್ನಡೆ ಕಂಡಷ್ಟು ಇಸ್ರೇಲಿನ ಚರಿತ್ರೆಯಲ್ಲಿ ಬೇರೆ ಯಾವಾಗಲೂ ಕಂಡಿಲ್ಲವೆನ್ನಬಹುದು. ತಾಯಂದಿರ 

ಮಂಡ ಕೆಟ್ಟ ಮತಗುರುಡರ ಗಲಾಟೆಯ ನಡುವೆ ಕಿವಿಮಾತಿನ ದನಿ ಯಾರಿಗೂ ಕೇಳುವುದಿಲ್ಲ. ಯುದ್ಧದ ಗದ್ದಲದ ನಡುವೆ ಒಡನಾಡಿಗಳ ಗೆಳೆತನದ ಹಾಡು ಯಾರಿಗೂ ಕೇಳುವುದಿಲ್ಲ. ಬಾಂಬ್ ಸಿಡಿತಗಳ ನಡುವೆ ಮಕ್ಕಳ ಅಳು, ತಾಯಂದಿರ ಬಿಕ್ಕಳಿಕೆ ಯಾರಿಗೂ ಕೇಳುವುದಿಲ್ಲ. ಹಮಾಸ್ ಬಂಡುಕೋರರು ಮತ್ತು ಇಸ್ರೇಲಿನ ದಮನಕಾರಿ ಸೇನೆಯ ನಡುವ ಯುದ್ಧ ಶುರುವಾಗುವ ಮೂರು ದಿನ ಮುಂಚೆ (04.10.2023ರಂದು) ಇಸ್ರೇಲ್ ಮತ್ತು ಪ್ಯಾಲಸ್ತೈನಿನ ಸಾವಿರಾರು ಮಹಿಳೆಯರು ಒಟ್ಟುಗೂಡಿ ಜೆರುಸಲೇಮ್ ಮತ್ತು ಪಶ್ಚಿಮ ದಂಡೆಯ ಪಟ್ಟಣಗಳಲ್ಲಿ ಶಾಂತಿಗಾಗಿ ಮೆರವಣಿಗೆಯನ್ನು ತೆಗೆದರು. ಅವರು ‘Israeli and Palestinian Mothers – Changing Reality’ ಎಂದು ಬರೆದ ಬ್ಯಾನರ್‌ಗಳನ್ನು ಹಿಡಿದು ಒಟ್ಟಿಗೆ ನಡೆದರು. ಹೌದು, ಭೂಮಿಗೆ ಹೊಸ ಜೀವ ತರುವ ತಾಯಂದಿರಿಗೆ ಮಾತ್ರ ‘ಗಂಡಸರ ಯುದ್ಧ ತರುವ ನೋವುಗಳ ಆಳ ತಿಳಿದಿರುವುದು. ಹೆತ್ತ ಮಕ್ಕಳು ಕಣ್ಣೆದುರ ಕಣ್ಮುಚ್ಚಿದರೆ ಅವರ ಅಗಲಿಕೆಯ ನೋವಿನ ಬೇರುಗಳು ಬಸಿರುಗೂಡಿನ ಮೂಲೆಮೂಲೆಯಲ್ಲೆಲ್ಲ ಗಟ್ಟಿಯಾಗಿ ಅಪ್ಪಿಕೊಂಡಿರುತ್ತವೆ ಎಂದು ಅವರಿಗೆ ಮಾತ್ರ ಅರಿವಾಗುವುದು. ಹೆರಲಾಗದ ಗಂಡಸರ ವಿನಾಶಕಾರಿ ಆಟಗಳ ನಡುವೆ ಹೆಣ್ಣು ಮಾತ್ರ ಎಚ್ಚರಿಸಬಲ್ಲಳು.

ಶಾಂತಿಗಾಗಿ ನಡೆದ ಮಹಿಳೆಯರ ಕಳಕಳಿಯನ್ನು ಹುರುದುಂಬಿಸಿ ಮಾತನಾಡಿದ ಅಮೆರಿಕಾದ ಹಂಗಾಮಿ ರಾಯಭಾರಿ. ಸ್ತೆಫಾನಿ… ಹ್ಯಾಲೆಟ್ ‘ಶಾಂತಿಯ ಹುಡುಕಾಟದಲ್ಲಿ ನೀವು ಬರಿಯ ಭಾಗೀದಾರರಲ್ಲ, ದಣಿವಿಲ್ಲದ ಸೇತುವೆ ಕಟ್ಟಲು ದುಡಿಯುತ್ತಿರುವಿರಿ. ಈ ಹೊತ್ತು ಒಟೊಟ್ಟಿಗೆ ನಿಮ್ಮನ್ನು ನೋಡುವಾಗ ಮನಸ್ಸು ತುಂಬಿ ಬಂದಿದೆ. ಒಬ್ಬರನ್ನೊಬ್ಬರು ಅರಿತುಕೊಂಡು ಹೊಂದಿ ಬಾಳುವುದರ ಅಗತ್ಯದ ಕಡೆಗೆ ಹೆಜ್ಜೆ ಹಾಕುತ್ತಿರುವ ನಿಮ್ಮನ್ನು ಉಳಿದವರು ಅನುಸರಿಸುವಂತಾಗ ಬೇಕು’ ಎಂದು ಬೆನ್ನು ತಟ್ಟಿದರು. ಒಟ್ಟಿಗೆ ನಡೆದ ಇಸ್ರೇಲಿನ Women Wage Peace ಮತ್ತು ಪ್ಯಾಲೆಸ್ತೀನಿಯರ Women of the Sun ಸಂಘಟನೆಗಳ ಮಹಿಳಾ ಸದಸ್ಯರನ್ನು ಉದ್ದೇಶಿಸಿ ಹ್ಯಾಲೆಟ್ ಮಾತನಾಡುತ್ತಿದ್ದರು. ಅವರು ‘ಸಮಾಜದ ಹಂತಗಳಲ್ಲೂ ಹೆಣ್ಣು ಬಲಗೊಳಬೇಕು. ಶಾಂತಿಯನ್ನು ಮುಂದುವರೆದು “ಸಮಾಜದ ಎಲ್ಲ ಹಂತಗಳಲ್ಲೂ ಹೆಣ್ಣು ಬಲಗೊಳ್ಳಬೇಕು. ಶಾಂತಿಯನ್ನು ಆಗುಮಾಡುವ ಮಾತುಕತೆಗಳಲ್ಲಿ ಹೆಂಗಸರು ಪಾಲ್ಗೊಳಬೇಕು. ನಮ್ಮ ವಿದೇಶಾಂಗ ನೀತಿಗಳಲ್ಲಿ ಇದೇ ಮುಖ್ಯವಾಗಬೇಕು. ಹೆಣ್ಣುಮಕ್ಕಳಲ್ಲಿ ಶಾಂತಿಯನ್ನು ಸಾಧಿಸುವ ಕಸುವಿದೆ. ನೀವೆಲ್ಲ ನಮಗಾಗಿ, ನಿಮಗಾಗಿ ನನಗಾಗಿ, ನಮ್ಮ ಮಕ್ಕಳಿಗಾಗಿ, ನಮ್ಮೆಲ್ಲರಿಗಾಗಿ ಒಗ್ಗೂಡಿದ್ದೀರಿ. ನಾನು, ನನ್ನ ಸಹೋದ್ಯೋಗಿಗಳು, ರಾಯಭಾರ ಕಚೇರಿಯ ಪ್ರತಿಯೊಬ್ಬರೂ ನಿಮ್ಮೊಂದಿಗಿದ್ದೇವೆ’ ಎಂದರು.

ನಡಿಗೆಯಲ್ಲಿ ಐಗ್ಲೆಂಡ್ ಮತ್ತು ಬೆಲ್ಲಿಯಮ್ಮಿನ ಮಹಿಳಾ ರಾಯಭಾರಿಗಳು ಪಾಲ್ಗೊಂಡಿದ್ದುದು ವಿಶೇಷವಿತ್ತು. ಈ ಎರಡೂ ಸಂಘಟನೆಯ ಮಹಿಳೆಯರು ಇಸ್ರೇಲ್ ಮತ್ತು ಪ್ಯಾಲೆಸ್ಟೈನ್‌ಗಳ ನಡುವೆ ಸಾಧ್ಯವಾಗಬೇಕಿರುವ ಶಾಂತಿಯ ಪ್ರಯತ್ನಗಳಲ್ಲಿ ತಮಗೂ ಒಳಗೊಳಲು ಅವಕಾಶವಿರಬೇಕೆಂದು ಒತ್ತಾಯಿಸಿದ್ದಾರೆ. ಶಾಂತಿ ನೆಮ್ಮದಿಗಳ ಸಮಾಜದ ಕಟ್ಟುವಿಕೆಯಲ್ಲಿ ಅರ್ಧದಷ್ಟಿರುವ ಮಹಿಳೆಯರು ಪಾಲ್ಗೊಳದಿದ್ದರೆ ಹುರುಳೇನಿದೆ? ಯುದ್ಧ ಬೇಕೆನ್ನುವವರೂ ಗಂಡಸರೆ, ಯುದ್ಧಕ್ಕೆ ಪಿತೂರಿ ರೂಪಿಸುವವರೂ ಗಂಡಸರೇ, ಯುದ್ಧಕ್ಕೆ ಬೇಕಾದ ವಾದ ತರ್ಕಗಳನ್ನು ಮುಂದೊಡ್ಡುವವರೂ ಗಂಡಸರೇ, ಯುದ್ಧದ ಹತಾರ ಕಂಡುಹಿಡಿಯುವವರೂ ಗಂಡಸರೇ, ಅವನ್ನು ಬಳಸಿ ಕಲಿಗಳು ನಾವಂದು ಸಡಗರಿಸುವವರೂ ಗಂಡಸರೇ, ಯುದ್ಧದಲ್ಲಿ ಕೊಲ್ಲುವವರೂ ಗಂಡಸರ, ಗೆದ್ದವೆಂದು ಗಹಗಹಿಸುವವರೂ ಗಂಡಸರೇ, ಸೋತರೆ ಅವುಡುಗಚ್ಚುವವರೂ ಗಂಡಸರೇ, ತಮ್ಮೊಳಗಿನ ಕ್ರೌರ್ಯವನ್ನು ತಣಿಸಿಕೊಳ್ಳುವವರೂ ಗಂಡಸರೇ, ಭವಿಷ್ಯದ ಯುದ್ಧಗಳಿಗಾಗಿ ಹಗೆತನವನ್ನು ಮುಂದುವರಿಸಿಕೊಂಡು ಹೋಗುವವರೂ ಗಂಡಸರೇ ಒಂದು ಚಣ ಸಾವುನೋವುಗಳು ಎಲ್ಲರನ್ನು ಎಲ್ಲಿಗೊಯ್ಯಬಹುದು ಎಂದು ಆಲೋಚಿಸಿದರೆ, ಆ ಆಲೋಚನೆಗೆ ಹೆಣ್ಣು ನೀಡುವ ಸರಿಹೊತ್ತಿನ ಎಚ್ಚರಿಕೆಯನ್ನು ಅನುಸರಿಸಿದರೆ ಯುದ್ಧ ಸೈತಾನನಿಗೂ ಬೇಡವಾಗುತ್ತದೆ.

ಶಾಂತಿ ನಡಿಗೆಯಲ್ಲಿ ಪಾಲ್ಗೊಂಡ ಇಸ್ರೇಲಿ ಮಹಿಳೆ ಯೇಲ್ ಅದ್ಮಿ ‘ನಾವಿನ್ನು ಮೌನಕ್ಕೆ ಮೊರೆಹೋಗುವುದಿಲ್ಲ. ಹೊಸ ಹಾದಿಯನ್ನು ಹುಟ್ಟುಹಾಕಲು ಹೊರಟಿದ್ದೇವೆ. ನಮ್ಮ ದನಿಗಳು ಸರ್ಕಾರಗಳಿಗೆ ತಲುಪಲೇಬೇಕಿದೆ. ನಮ್ಮ ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸುವ ದಿಕ್ಕಿನ ಕಡೆ ಮುಖಮಾಡಲು ನಾಯಕರಿಗೆ ಇದೀಗ ಸಮಯ ಬಂದಿದೆ’ ಎನ್ನುತ್ತಾರೆ. ಅತ್ತ ಪ್ಯಾಲೆಸ್ತೈನ್‌ ಕಡೆಯಿಂದ ಬಂದ ರೀಮ್ ಹಜಾಜ್ರ್ ‘ಹೆಚ್ಚೆಚ್ಚು ಮಹಿಳೆಯರು ನಮ್ಮ ಚಳವಳಿಗೆ ಬರುತ್ತಿದ್ದಾರೆ. ತಮ್ಮ ಮಕ್ಕಳನ್ನು ಕಾಪಾಡಿಕೊಳ್ಳುವ ಸಲುವಾಗಿ, ಅವರನ್ನು ಮುಂಬರುವ ಯುದ್ಧಗಳಿಗೆ ಬಲಿ ಕೊಡುವುದನ್ನು ತಪ್ಪಿಸುವ ಸಲುವಾಗಿ ಬರುತ್ತಿದ್ದಾರೆ. ಮೊದಮೊದಲು ನಾವು ಕೆಲವೇ ಮಂದಿ ಈ ಜಂಟಿ ನಡಿಗೆಯಲ್ಲಿ ಪಾಲ್ಗೊಂಡೆವು.

ಇದನ್ನೂ ಓದಿ: ಹಮಾಸ್-ಇಸ್ರೇಲ್ ಯುದ್ಧದ ಹಿನ್ನೆಲೆ ಏನು?

ಈಗ ಗಾಜಾ ಮತ್ತು ಪಶ್ಚಿಮದಂಡೆಯಿಂದ ಸಾವಿರಾರು ಮಹಿಳೆಯರು ಬಂದು ಪಾಲ್ಗೊಳ್ಳುತ್ತಿದ್ದಾರೆ. ನಾವಿನ್ನು ಹಿಂದುಳಿಯುವುದಿಲ್ಲ. ನೆತ್ತರನಾಲೆ ಹರಿಯುವುದು ನಮಗಿನ್ನು ಬೇಕಿಲ್ಲ. ಪ್ಯಾಲೆಸ್ತೈನ್‌ ಮತ್ತು ಇಸ್ರೇಲಿನ ಮಕ್ಕಳ ನೆಮ್ಮುಗೆಯ ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ಒತ್ತಾಯಿಸಿ ನಾವು ಹೊರಟಿದ್ದೇವೆ’ ಎಂದಿದ್ದಾರೆ. ಫಿನ್‌ಲ್ಯಾಂಡಿನ ಸಂಸತ್ ಸದಸ್ಯೆ ಎವಾ ಬಿಯಾದೆತ್ ಈ ನಡಿಗೆಯಲ್ಲಿ ಪಾಲ್ಗೊಳಲೆಂದೆ ಬಂದಿದ್ದು ‘ನಾನು ದಿಟ್ಟ ಇಸ್ರೇಲ್ ಮತ್ತು ಪ್ಯಾಲೆಸ್ತೈನ್‌ ಮಹಿಳೆಯರ ಜೊತೆ ನಿಲ್ಲಲು ಬಯಸುವೆ. ನಮ್ಮ ಪೀಳಿಗೆಯ ಫಿನ್ಲ್ಯಾಂಡ್‌ನಲ್ಲಿ ಯುದ್ಧದ ಹಿಂಸೆಯಿಲ್ಲ. ರಷ್ಯಾ ಉಕ್ರೇನಿನ ಮೇಲೆ ದಾಳಿ ಮಾಡಿದ ಮೇಲೆ ಶಾಂತಿ ಎಷ್ಟು ನಾಜೂಕಿನದು ಅಂತ ಅನಿಸುತ್ತಿದೆ. ತೀರ್ಮಾನ ಕೈಗೊಳ್ಳುವ ಹಂತದಲ್ಲಿ ಮಹಿಳೆಯರಿಗೂ ಪಾಲಿರಬೇಕು’ ಎಂದು ತಮ್ಮ ಕಳಕಳಿಯನ್ನು ತೋರಿದ್ದಾರೆ.

ಕೈಜಾರಿಹೋದ ಗಾಜಿನ ಲೋಟ

2013ರ ಜುಲೈ 29ರಂದು ಅಮೆರಿಕಾದ ಕಾರ್ಯದರ್ಶಿ ಜಾನ್ ಕರ‍್ರಿ ಮುಂದಾಳತ್ವದಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೈನ್‌ಗಳ ನಡುವೆ ಶಾಂತಿ ಒಪ್ಪಂದವೊಂದನ್ನು ಆಗುಮಾಡುವ ನಿಟ್ಟಿನಲ್ಲಿ ಒಂದು ಪ್ರಯತ್ನ ಶುರುವಾಯಿತು. ಹಲವು ಸುತ್ತಿನ ಮಾತುಕತೆಗಳಲ್ಲಿ ಕೊಡುಕೊಳೆಗಳು, ಚೌಕಾಶಿಗಳು, ಒಬ್ಬರಿಗೊಬ್ಬರು ಸಹಕರಿಸುವ ವಿಚಾರಗಳೆಲ್ಲ ಚರ್ಚಿಸಲ್ಪಟ್ಟವು. ಒಂಬತ್ತು ತಿಂಗಳ ಕಾಲ ಸೌಹಾರ್ದಯುತವಾಗಿ ಮಾತುಕತೆಗಳೇನೊ ಜರುಗಿದವು. ಪ್ಯಾಲೆಸ್ತೈನ್‌ ನಾಯಕತ್ವ ಬಯಸಿದ ನಿರ್ದಿಷ್ಟ ಕೈದಿಗಳನ್ನು ಬಿಡುಗಡೆ ಮಾಡಲು ನಿರಾಕರಿಸಿದ್ದು ಮತ್ತು ಯಹೂದಿಗಳಿಗೆ ಪ್ಯಾಲೆಸ್ತೈನ್‌ ನೆಲವನ್ನು ಅತಿಕ್ರಮಿಸಲು ನೆರವಾಗುವ ತೀರ್ಮಾನದಿಂದ ಹಿಂದೆ ಸರಿಯಲು ಇಸ್ರೇಲ್ ತಕ್ಷಣದಿಂದ ಪ್ರಯತ್ನಿಸದೆ ಇರುವ ಮೂಲಕ 2014ರ ಏಪ್ರಿಲ್ 29ರಂದು ಒಪ್ಪಂದ ಒಡೆದುಹೋಯಿತು.

ಈ ಬೆಳವಣಿಗೆಯ ನಡುವೆೆ ಪ್ಯಾಲೆಸ್ತೈನ್‌ ಸರ್ಕಾರವು ಮತೀಯ ಮೂಲಭೂತವಾದಿ ಹಮಾಸ್ ಜೊತೆ ಚರ್ಚೆಗೆ ಹೊರಟಿತು. ಮೊದಲಿನಿಂದಲೂ ಹಮಾಸ್‌ನ್ನು ವಿರೋಧಿಸುತ್ತಿದ್ದ ಇಸ್ರೇಲ್ ಪ್ಯಾಲೆಸ್ತೈನ್‌ ವಿರುದ್ಧ ಆರ್ಥಿಕ ದಿಗ್ಬಂಧನವನ್ನು ಜಾರಿಗೊಳಿಸಿತು. ಒತ್ತರದಿಂದ ಬೆಳೆಯುತ್ತಿದ್ದ ಹಮಾಸ್‌ನ್ನು ಎದುರುಹಾಕಿಕೊಂಡು ಸರ್ಕಾರ ನಡೆಸುವುದು ಪ್ಯಾಲೆಸ್ತೈನ್‌ ನಾಯಕರಿಗೂ ಸಾಧ್ಯವಿರಲಿಲ್ಲ. ಇಲ್ಲಿಂದ ಮುಂದಕ್ಕೆ ಇಸ್ರೇಲ್ ಮತ್ತು ಪ್ಯಾಲೆಸ್ತೈನ್‌ಗಳು ರಾಜಿಯಾಗುವ ದಾರಿಗಳು ತಮ್ಮಷ್ಟಕ್ಕೆ ದಾರಿ ತಪ್ಪಿದವು. ಸಂಘರ್ಷ ಮತ್ತೆ ಮುನ್ನೆಲೆಗೆ ಬಂತು. ಒಟ್ಟಾರೆ ಎರಡೂ ಕಡೆ ತಪ್ಪುಗಳು ಜರುಗಿದ್ದವು.

ಇನ್ನುಮುಂದೆ ಎಲ್ಲ ಬಗೆಯ ಹೋರಾಟ, ಸೆಣೆಸಾಟ, ತಿಕ್ಕಾಟಗಳು ಕೊನೆಗಾಣಬಹುದೇನೊ ಎಂಬ ಬಹು ನಿರೀಕ್ಷೆ ಮತ್ತು ಭರವಸೆಗಳನ್ನು ಮೂಡಿಸಿದ್ದ ಈ ನಿಡುಗಾಲದ ನೇರ ಮಾತುಕತೆ ಸೋತು ಅಂದು ತೀವ್ರ ಬಗೆಯ ಕತ್ತಿಮಸೆತಕ್ಕೆ ಕಾರಣವಾದ ಸನ್ನಿವೇಶ ಇಂದಿನ ಯುದ್ಧದವರೆಗೂ ಬಂದು ನಿಂತಿದೆ. ಇಬ್ಬಣಗಳ ನಡುವೆ ಸಂಶಯ ಅದೆಷ್ಟು ಆಳವಾಗಿ ಬೇರುಬಿಟ್ಟಿದೆಯೆಂದರೆ ಅಮೆರಿಕಾದ ರೊಕ್ಕದಿಂದ ತಯಾರಿಸಿದ ಇಸ್ರೇಲಿನ ಅತ್ಯಾಧುನಿಕ ಮಿಸೈಲು, ಬಾಂಬುಗಳಿಗೂ ಆ ಆಳದವರೆಗೆ ಹೊಕ್ಕಿಹೋಗಲು ಸಾಧ್ಯವಿಲ್ಲವೇನೊ. ಮಾತುಕತೆ ನೆಲಕಚ್ಚುತ್ತಿದ್ದಂತೆ ಇಸ್ರೇಲ್ ದಿನದಿನವೂ ಇನ್ನಷ್ಟು ಮತ್ತಷ್ಟು ಪ್ಯಾಲೆಸ್ತೈನ್‌ ನೆಲವನ್ನು ಅತಿಕ್ರಮಿಸಿ ಬಲವಂತದಿಂದ ನೆಲೆಸಿ ಮನೆಕಟ್ಟಿಕೊಳ್ಳಲು ವಲಸೆಬಂದ ಯಹೂದಿ ಸಂಸಾರಗಳಿಗೆ ಪುಸಲಾಯಿಸಿತು. ಅವರನ್ನು ಬಲವಂತದಿಂದ ಒಕ್ಕಲೆಬ್ಬಿಸಿ ಓಡಿಸಲಾಯಿತು. ಪ್ರತಿ ಹಂತದಲ್ಲೂ ಪ್ಯಾಲೆಸ್ತೈನಿಯರನ್ನು ತನಿಖೆ ಮಾಡುವ ಚೆಕ್ ಪಾಯಿಂಟ್‌ಗಳನ್ನು ತೆರೆದು ಇಸ್ರೇಲಿ ಸೇನೆ ಅವರ ಚಟುವಟಿಕೆಗಳನ್ನು ನಿಯಂತ್ರಿಸತೊಡಗಿತು.

ಪ್ಯಾಲೆಸ್ತೈನಿಯರಿಗೆ ತಮ್ಮ ನೆಲೆಯಲ್ಲೆ ಅತಿಕ್ರಮಣಕಾರರ ತನಿಖೆಗೆ ಒಳಪಡುವಾಗ ಹೇಗೆನಿಸಿರಬಹುದು? ಪ್ರತಿರೋಧ ಬಿರುಸಾದಂತೆ ಪ್ಯಾಲೆಸ್ತೈನಿಯರ ನಿಯಂತ್ರಣಕ್ಕೆ ಅಗತ್ಯವಿರುವ ಸೇನಾಸಿಬ್ಬಂದಿಯನ್ನು ಇಸ್ರೇಲ್ ಹೆಚ್ಚೆಚ್ಚು ನೇಮಕಾತಿ ಮಾಡಿಕೊಳ್ಳತೊಡಗಿತು. ಇಸ್ರೇಲಿ ಕುಟುಂಬಗಳು ತಮ್ಮ ಮನೆಯಿಂದ ಒಬ್ಬೊಬ್ಬ ಗಂಡಸನ್ನಾದರೂ ಸೇನೆಗೆ ಕಳಿಸಿಕೊಡಬೇಕಾದ ಒತ್ತಡಕ್ಕೆ ಸಿಲುಕಿದವು. ಇಸ್ರೇಲ್ ಮತ್ತು ಪ್ಯಾಲೆಸ್ತೈನಿನಲ್ಲಿ ಎಲ್ಲರ ಬದುಕು ದಿನೇದಿನೇ ನವಿರಾಗುತ್ತ ಸಾಗಿ ಮಕ್ಕಳನ್ನೂ ನೋಡಿಕೊಂಡು ಮನೆ ನಿಭಾಯಿಸಬೇಕಿರುವ ಹೆಂಗಸರು ಹೆಚ್ಚೆಚ್ಚು ಮಾನಸಿಕ ಒತ್ತಡಕ್ಕೆ ಒಳಗಾಗಬೇಕಾಯಿತು. ಎರಡೂ ಕಡೆಯ ಕುಟುಂಬಗಳು ‘ಈ ದಿನ ಏನು ಕೆಟ್ಟ ಸುದ್ದಿ ಬಂದೀತೊ’ ಎಂಬ ಆತಂಕದಲ್ಲೆ ದಿನ ತಳ್ಳಬೇಕಿತ್ತು. ಇಸ್ಲಾಮಿಕ್ ಬಂಡುಕೋರರು ಮತ್ತು ಇಸ್ರೇಲಿ ಸೇನೆ ಹೆಚ್ಚುಕಡಿಮೆ ಒಂದೇ ಎನ್ನುವ ಮಟ್ಟಿಗೆ ಹಿಂಸೆಯಲ್ಲಿ ಮಿಂದೆದ್ದವು. ಆ ಹಿಂಸೆಯ ಉತ್ತುಂಗವೇ ಈಗಿನ ಯುದ್ಧ. ಈ ಯುದ್ಧ ಕಡೆಯದೊ ಅಲ್ಲವೊ ಎಂಬುದು ಸದ್ಯ ಯಾರಿಗೂ ಗೊತ್ತಿಲ್ಲ.

ಪ್ಯಾಲೆಸ್ತೈನಿಯರಲ್ಲೆ ಬಹುಮಂದಿ ಹಟಮಾರಿ ಹಮಾಸ್ ಅನ್ನು ಒಪ್ಪಿಲ್ಲ. ಹಾಗೆಯೆ ಇಸ್ರೇಲಿ ಸರ್ಕಾರದ ದಮನ ನೀತಿಗಳನ್ನು ಇಸ್ರೇಲಿನಲ್ಲೆ ಎಲ್ಲರೂ ಬೆಂಬಲಿಸುವುದಿಲ್ಲ. ಎರಡೂ ಕಡೆ ಶಾಂತಿ ಬೇಕೇಬೇಕು ಎನ್ನುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದೂ ಮಹಿಳೆಯರ ಕಾರಣಕ್ಕೆ ಎಂದು ಬಿಡಿಸಿ ಹೇಳಬೇಕಿಲ್ಲ. ಪ್ಯಾಲೆಸ್ತೈನಿಯರಿಗೆ ಹಮಾಸ್ ಹೇಗೆ ಮಗ್ಗುಲು ಮುಳ್ಳೋ ಹಾಗೆ ಇಸ್ರೇಲಿಯನ್ನರಿಗೆ ನೆತನ್ಯಾಹು ಸರ್ಕಾರ ನುಂಗಲಾಗದ ಉಗುಳು. ಹಮಾಸ್‌ಗಳಿಗೆ ಮಹಿಳೆಯರ ಚಳವಳಿ ಬೆಳೆಯುವುದು ಬೇಕಿಲ್ಲ. ಹಾಗೆಯೆ ಇಸ್ರೇಲಿನ ಯಹೂದಿ ಮೂಲಭೂತವಾದಿಗಳಿಗೂ ಬೇಕಿಲ್ಲ. ಸದರಿ ಯುದ್ಧದಲ್ಲಿ ಹಮಾಸ್‌ನ್ನು ಬಗ್ಗುಬಡಿಯಲೇ ಬೇಕು ಎಂದು ನಿರ್ಧರಿಸಿರುವ ನೆತನ್ಯಾಹು ಸರ್ಕಾರ 3 ಲಕ್ಷದಷ್ಟು ಸಿಬ್ಬಂದಿಯಿರುವ ಮೀಸಲು ಪಡೆಯನ್ನು (Reservist) ಯುದ್ಧಕ್ಕೆ ಸಜ್ಜುಗೊಳಿಸಿದೆ. ಅಲ್ಲಿಗೆ 3 ಲಕ್ಷ ಇಸ್ರೇಲಿ ಮನೆಗಳಲ್ಲಿ ಮಹಿಳೆಯರು ನಿದ್ದೆಯಿಲ್ಲದ ದಿನಗಳನ್ನು ಕಳೆಯಬೇಕಿದೆ.

ಇತ್ತ ಹಮಾಸ್ ಸಂಘಟನೆಯನ್ನು ಸೇರಿರುವ ಪ್ಯಾಲೆಸ್ತೈನ್ ಗಂಡಸರ ಮನೆಗಳಲ್ಲೂ ಮಹಿಳೆಯರು ಗೋಡೆಗೆ ಮುಖಮಾಡಿ ಬಿಕ್ಕಳಿಸುತ್ತಿರಲೇಬೇಕು. ಯಾವ ಹೆತ್ತ ತಾಯಿಯೂ ಯುದ್ಧಭೂಮಿಗೆ ಮಕ್ಕಳನ್ನು ಕಳಿಸುವಾಗ ಸಡಗರಿಸುವುದಿಲ್ಲ. ಅವಳೊಳಗಿನ ಬಸಿರುಗೂಡು ಅವಳೊಟ್ಟಿಗೆ ಸದಾ ಮಾತನಾಡುತ್ತಿರುತ್ತದೆ. ಆ ಮಾತುಗಳು ಆಕೆಗೆ ಮಾತ್ರ ಕೇಳುತ್ತಿರುತ್ತದೆ. ಗಂಡಸರ ಯುದ್ಧಗಳಿಗೆ ಗಂಡಸರನ್ನು ಹೆತ್ತುಕೊಡುವುದು ಅಮ್ಮಂದಿರೇ ಹೊರತು ಅಪ್ಪಂದಿರಲ್ಲ. ಗಂಡಸರ ಕೆಚ್ಚು, ಕಲಿತನ, ಗರ್ಜನೆ, ಪೊಳ್ಳು ಘೋಷಣೆ, ಒಣಭಾಷಣಗಳೆಲ್ಲ ಮಹಿಳೆಯರ ಒಳಗಿನ ಬೇಗುದಿಯನ್ನು ತಣಿಸುವುದಿಲ್ಲ. ಹೀಗಾಗಿ ಕಾರಣ ಏನೇ ಇರಲಿ ಪ್ರತೀ ಯುದ್ಧವನ್ನು ಧಿಕ್ಕರಿಸುವ ಹಕ್ಕು ಮಹಿಳೆಯರಿಗಿದ್ದೇ ಇರುತ್ತದೆ.

ಓಸ್ಲೊ ಒಡಂಬಡಿಕೆ

ಬೆಂಜಮಿನ್ ನೆತನ್ಯಾಹು ಸರ್ಕಾರದ ಧೋರಣೆ ಗಮನಿಸಿದರೆ ಅದು ವಿಮೋಚನೆಯ ಹುರುಳೇ ಗೊತ್ತಿಲ್ಲದ ಹಮಾಸ್‌ಗಳನ್ನು ಮಾತ್ರ ತೊಡೆದುಹಾಕಲು ಹೊರಟಂತಿಲ್ಲ. ಅವರನ್ನು ಒಪ್ಪದ ಶಾಂತಿಪ್ರಿಯ ಪ್ಯಾಲೆಸ್ತೈನಿಯರನ್ನೂ ತೊಡೆದುಹಾಕಲು ಹೊರಟಂತಿದೆ. ಈ ನೆತನ್ಯಾಹುವಿನ ಬಗ್ಗೆ ಕೆಲವು ಪ್ಯಾರಾಗಳನು ಬರೆಯದೆ ಹೋದರೆ ಆತ್ಮವಂಚಕತನವಾದೀತು. 1993ರ ಸೆಪ್ಟೆಂಬರ್ 13ರಂದು ನಾರ್ವೆಯ ಓಸ್ಲೊದಲ್ಲಿ ಚಾರಿತ್ರಿಕ ಸಂಘರ್ಷವನ್ನು ಕೊನೆಗಾಣಿಸುವ ಪ್ರಯತ್ನವಾಗಿ ಅಂದಿನ ಇಸ್ರೇಲಿ ಪ್ರಧಾನಿ ಇಟ್ಜಾಕ್ ರಬಿನ್ ಮತ್ತು ಪ್ಯಾಲೆಸ್ತೈನ್ ವಿಮೋಚನಾ ಚಳವಳಿಯ ಯಾಸೆರ್ ಅರಾಫತ್‌ರವರ ನಡುವೆ ಜರುಗಿದ ಮಾತುಕತೆಯ ವೇಳೆ ಅಮೆರಿಕಾದ ಅಧ್ಯಕ್ಷ ಬಿಲ್ ಕ್ಲಿಂಟನ್‌ರವರ ಹಾಜರಾತಿಯಲ್ಲಿ ಒಂದು ಚಾರಿತ್ರಿಕ ಒಡಂಬಡಿಕೆಗೆ ರುಜು ಬಿತ್ತು. ಎರಡೂ ಕಡೆಗಳಿಂದಲೂ ಬಿಗುಮಾನ ತೊರೆದ ಪ್ರಾಮಾಣಿಕ ಹೊಂದಾಣಿಕೆಗಳು ಜರುಗಿದವು.

ಈ ಶಾಂತಿ ಒಡಂಬಡಿಕೆಯು ರಬಿನ್, ಅರಾಫತ್ ಮತ್ತು ಇಸ್ರೇಲಿನ ವಿದೇಶಾಂಗ ಸಚಿವರಾಗಿದ್ದ ಶಿಮೋನ್ ಪೆರೆಸ್‌ರವರಿಗೆ 1994ರ ಶಾಂತಿ ನೊಬೆಲ್ ಪುರಸ್ಕಾರವನ್ನು ಒಟ್ಟಿಗೆ ತಂದುಕೊಟ್ಟಿತು. ಆದರೆ ಆಗ ವಿರೋಧಪಕ್ಷದ ನಾಯಕನಾಗಿದ್ದ ನೆತನ್ಯಾಹುವಿಗೆ ಈ ಒಡಂಬಡಿಕೆ ಒಪ್ಪಿಗೆಯಾಗಲಿಲ್ಲ. ಆತ ರಬಿನ್ ಅವರನ್ನು ‘ನಾಜೀ’ ಮತ್ತು ‘ದೇಶದ್ರೋಹಿ’ ಎಂದು ಜರೆದಿದ್ದ. ಒಡಂಬಡಿಕೆಯನ್ನು ವಿರೋಧಿಸಿ ಒಂದು ರ‍್ಯಾಲಿಯನ್ನು ತೆಗೆದು ಅದರಲ್ಲಿ ರಬಿನ್‌ರವರ ಅಣಕು ಶವಪೆಟ್ಟಿಗೆಯನ್ನು ಒಯ್ಯುವ ಪ್ರಹಸನದಲ್ಲಿ ಭಾಗಿಯಾಗಿದ್ದ. ಆತನಂತೆಯೆ ವಿರೋಧಿ ನಿಲುವು ತಳೆದಿದ್ದ ಬಲಪಂಥೀಯ ಮನೋಭಾವದ ಯಿಗಲ್ ಅಮಿರ್ ಎಂಬ ಯೂನಿವರ್ಸಿಟಿ ಕಾನೂನು ವಿದ್ಯಾರ್ಥಿ 1995ರ ನವೆಂಬರ್ 4ರಂದು ರಬಿನ್ ಅವರಿಗೆ ಗುಂಡುಹಾರಿಸಿ ಕೊಲೆಗೈದ. ಪ್ಯಾಲೆಸ್ತೈನ್  ಜೊತೆ ಗೆಳೆತನ ಬೆಳೆಸುವ ಇಸ್ರೇಲಿ ನಾಯಕರಿಗೆ ಇದೇ ರೀತಿಯ ಕೊನೆ ಖಚಿತ ಎಂಬ ಸಂದೇಶ ಈ ಕೊಲೆಯ ಮೂಲಕ ರವಾನೆಯಾಯಿತು. ನೆತನ್ಯಾಹು ಅಂತಹವರ ರಾಜಕೀಯ ಬೆಳವಣಿಗೆಗೆ ಈ ಸಂದೇಶ ನೀಡಿದವನ ಮನಸ್ಥಿತಿ ಹುಮ್ಮಸ್ಸು ನೀಡಿರಲೇ ಬೇಕು.

1996ರಲ್ಲಿ ಮೊದಲ ಬಾರಿ ಇಸ್ರೇಲಿನ ಪ್ರಧಾನಿಯಾದಾಗಲೆ ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಛೀಮಾರಿಗೊಳಗಾದ ವ್ಯಕ್ತಿ ನೆತನ್ಯಾಹು. 2017ರಲ್ಲಿ ನಾಲ್ಕನೆ ಬಾರಿ ಪ್ರಧಾನಿಯಾದಾಗ Case 1000ಮತ್ತು Case 2000 ಎಂಬುದು ಈತನ ವಿರುದ್ಧ ತನಿಖೆಗೊಳಪಟ್ಟ ಎರಡು ಪ್ರಕರಣಗಳು. ಪೋಲಿಸ್ ತನಿಖೆಯಿಂದ ಈ ಪ್ರಕರಣಗಳಲ್ಲಿ ನಂಬಿಕೆ ದ್ರೋಹ, ವಂಚನೆ ಮತ್ತು ಲಂಚ ಪಡೆದದ್ದು ತಿಳಿದುಬಂತು. 2020ರಲ್ಲಿ ಕಡೆಗೂ ದೋಷಾರೋಪಣೆಗೆ ಒಳಗಾದ ನೆತನ್ಯಾಹು ವಿರುದ್ಧದ ಮೊಕದ್ದಮೆಯ ವಿಚಾರಣೆ ಕೋರ್ಟಿನಲ್ಲಿ ಈಗಲೂ ಜರುಗುತ್ತಿದೆ. ಇಸ್ರೇಲಿನ ಚರಿತ್ರೆಯಲ್ಲಿ ಭ್ರಷ್ಟಾಚಾರದ ಕಳಂಕ ಹೊತ್ತ ಮೊದಲ ಪ್ರಧಾನಿ ಬೆಂಜಮಿನ್ ನೆತನ್ಯಾಹು. ಕಳಂಕವಿದ್ದರೂ ರಾಜಿನಾಮೆ ನೀಡದೆ ಅಧಿಕಾರದಲ್ಲಿ ಮುಂದುವರೆದಿರುವ ಮೊದಲ ಪ್ರಧಾನಿಯೂ ಈತನೆ!

2022ರಲ್ಲಿ ಆರನೇ ಬಾರಿ (ಬಹುತೇಕ ಎಲ್ಲ ಸಾರಿಯೂ ಕಟ್ಟರ್ ಬಲಪಂಥೀಯ ಪಕ್ಷಗಳ ಜೊತೆಗೂಡಿ ಕೂಡಿ ಚೌಚೌ ಸರ್ಕಾರ ರಚಿಸಿದ್ದುದೆ ಈತನ ಸಾಧನೆ) ಪ್ರಧಾನಿಯಾದಾಗ ಈತ ಕೈ ಹಚ್ಚಿದ್ದು ಕಾನೂನಿನ ‘ಸುಧಾರಣೆ’ಗೆ! ತನ್ನ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ ನಡೆಯುತ್ತಿರುವಾಗಲೆ ಸುಪ್ರೀಮ್ ಕೋರ್ಟಿನ ಕೆಲವು ಅಧಿಕಾರಗಳನ್ನು ಮೊಟಕುಗೊಳಿಸುವ ನೆತನ್ಯಾಹು ಸರ್ಕಾರದ ಹೊಸ ಸುಧಾರಣೆಗಳನ್ನು ಇಸ್ರೇಲಿಗಳು ಪ್ರಬಲವಾಗಿ ವಿರೋಧಿಸಿದರು. ತಿಂಗಳುಗಟ್ಟಲೆ ಎಲ್ಲೆಡೆ ಹಗಲು ರಾತ್ರಿ ಎನ್ನದೆ ಪ್ರತಿಭಟನೆಗಳು ಜರುಗಿದವು. ನೆತನ್ಯಾಹು ಸರ್ಕಾರ ಅವುಗಳನ್ನು ಬಲಪ್ರಯೋಗದ ಮೂಲಕ ಹತ್ತಿಕ್ಕಲು ಪ್ರಯತ್ನಿಸಿತು. ಮೊನ್ನೆ ಮೊನ್ನೆ ಯುದ್ಧ ಶುರುವಾಗುವವರೆಗೂ ಪ್ರತಿಭಟನೆಗಳು ನಡೆಯುತ್ತಲೇ ಇದ್ದವು. ಆದರೂ (ಪ್ಯಾಲೆಸ್ತೈನ್ ಭೂತ’ವನ್ನು ಮುಂದೆಮಾಡಿ) ಪಟ್ಟು ಬಿಡದೆ ತಾನು ತರಬೇಕೆಂದ ‘ಸುಧಾರಣೆ’ಯನ್ನು ಈತ ಸಂಸತ್ತಿನಲ್ಲಿ ಜಾರಿಗೊಳಿಸಿಬಿಟ್ಟಿದ್ದಾನೆ.

ಸದ್ಯ ಬಹುಸಂಖ್ಯಾತ ಇಸ್ರೇಲಿಗಳಿಂದ ಉಗಿಸಿಕೊಳ್ಳುತ್ತಿರುವ ಹೊತ್ತಿನಲ್ಲೆ ಹಮಾಸ್ ಸಾರಿದ ಯುದ್ಧ ಒಂದರ್ಥದಲ್ಲಿ ನೆತನ್ಯಾಹುವಿಗೆ ‘ವರ’ವಾಗಿ ಬಂದಂತಿದೆ. ಈಗ ಭ್ರಷ್ಟಾಚಾರದ ಹುಳುಕುಗಳನ್ನು ಮುಚ್ಚಿಕೊಳ್ಳಲು, ಕಳೆದುಹೋಗಿದ್ದ ಜನಪ್ರಿಯತೆಯನ್ನು ಯುದ್ಧದ ಮೂಲಕ ಮರಳಿ ಪಡೆಯಲು ಅವಕಾಶ ದಕ್ಕಿದಂತಾಗಿದೆ. War Hero ಎಂಬ ಬಿರುದು ಪಡೆಯುವುದೇನು ಸಾಮಾನ್ಯವೆ?

ಹೀಗೆ ಹೇವರಿಕೆ ಹುಟ್ಟಿಸುವಂತಹ ಚರಿತ್ರೆಯನ್ನು ತನ್ನ ಬೆನ್ನಿಗಂಟಿಸಿಕೊಂಡಿರುವ ನೆತನ್ಯಾಹುವಿಗೆ ಪ್ಯಾಲೆಸ್ತೈನ್ ಮಂದಿ ಎಂದೆಂದಿಗೂ ಇಸ್ರೇಲ್ ವಿರುದ್ಧ ಹತಾರ ಹಿಡಿಯದಂತೆ ಮಾಡಬೇಕೆಂಬ ಹೆಬ್ಬಯಕೆಯಿದೆ. ಶಾಂತಿ ಸಾಧ್ಯವಾಗುವ ಪ್ರಯತ್ನಗಳು ಆತನ 15 ವರುಷಗಳ ಆಳ್ವಿಕೆಯಲ್ಲಿ ಹಿನ್ನಡೆ ಕಂಡಷ್ಟು ಇಸ್ರೇಲಿನ ಚರಿತ್ರೆಯಲ್ಲಿ ಬೇರೆ ಯಾವಾಗಲೂ ಕಂಡಿಲ್ಲವೆನ್ನಬಹುದು. ಪ್ಯಾಲೆಸ್ತೈನ್ ನೆಲದಲ್ಲಿ ಅಕ್ರಮವಾಗಿ ನುಗ್ಗಿ ಖಾಯಂ ನೆಲೆಸಲು ವಲಸೆ ಬರುವ ಯಹೂದಿಗಳಿಗೆ ನೆತನ್ಯಾಹು ನೀಡಿದಷ್ಟು ನಿಗ್ಗೇಡಿ ಬೆಂಬಲವನ್ನು ಮತ್ತಾವ ಪ್ರಧಾನಿಯೂ ನೀಡಿಲ್ಲವೆನ್ನಬಹುದು. ತಾನು ಇಸ್ರೇಲಿನ ನಾಯಕನಾಗಿರುವಷ್ಟು ಕಾಲ ಪ್ಯಾಲೆಸ್ತೈನ್ ಎಂಬ ಸ್ವತಂತ್ರ ದೇಶ ಇರುವುದು ಸಾಧ್ಯವೇ ಇಲ್ಲ ಎಂದು ನೆತನ್ಯಾಹು ಅಧಿಕೃತವಾಗಿ ಸಾರಿಯೂ ಇದ್ದಾನೆ. ಸತ್ಯ ಹೀಗಿರುವಾಗ ಪ್ಯಾಲೆಸ್ತೈನ್ ಮಹಿಳೆಯರೊಂದಿಗೆ ಕೈಜೋಡಿಸಿರುವ ತನ್ನ ದೇಶದ ಮಹಿಳೆಯರ ಚಳವಳಿಯ ಕುರಿತು ಅಂತಹ ಆಸಕ್ತಿಯೇನೂ ಈ ಮನುಷ್ಯನಿಗಿಲ್ಲ.

Women Wage Peace (WWP)

ಮಹಿಳೆಯರ Women Wage Peace ಸಂಘಟನೆಯು 2014ರಲ್ಲಿ ಇಸ್ರೇಲಿನಲ್ಲಿ ಹುಟ್ಟಿಕೊಂಡಿತು. 2018ರ ಒಳಗಾಗಿ ಇಸ್ರೇಲಿ ಸರ್ಕಾರವು ಪ್ಯಾಲೆಸ್ತೈನ್ ಜೊತೆ ಶಾಂತಿ ಮಾತುಕತೆಗಳ ಮೂಲಕ ಒಂದು ಸ್ಥಿರ ರಾಜಕೀಯ ಹೊಂದಾಣಿಕೆ ಸಾಧಿಸಬೇಕೆಂದು ಒತ್ತಡ ಹೇರುವುದು ಮತ್ತು ಅಂತರರಾಷ್ಟ್ರೀಯ ಸಂಘರ್ಷ ತಡೆಯಲು ಪರಿಹಾರ ಅರಸುವ ಪ್ರಕ್ರಿಯೆಯಲ್ಲಿ ಮಹಿಳೆಯರಿಗೂ ಪಾತ್ರವಿರಬೇಕೆಂದು ವಿಶ್ವಸಂಸ್ಥೆಯು 2000ದ ಅಕ್ಟೋಬರ್ 31ರಲ್ಲಿ ಅಂಗೀಕರಿಸಿದ ಗೊತ್ತುವಳಿ(United Nations Security Council Resolution S/RES/1325 on women, peace, and security)ಯನ್ನು ಜಾರಿಗೊಳಿಸುವಂತೆ ಒತ್ತಾಯಿಸುವುದು ಈ ಸಂಘಟನೆಯ ಬಹುಮುಖ್ಯ ಉದ್ದೇಶಗಳಾಗಿವೆ.

  2015ರಲ್ಲಿ ಇಸ್ರೇಲಿನ ಸಾಮಾನ್ಯ ಚುನಾವಣೆಗಳ ಸಾರಿಕೆಯಾದಾಗ ಪ್ರಚಾರದ ವೇಳೆ ಶಾಂತಿ ಮಾತುಕತೆಗಳ ಅಗತ್ಯವನ್ನು ಮತದಾರರೊಂದಿಗೆ ಅಭ್ಯರ್ಥಿಗಳು ಚರ್ಚಿಸಬೇಕು ಎಂಬ ಒತ್ತಾಯವನ್ನು WWP ಪಾರ್ಲಿಮೆಂಟ್ ಎದುರು ರ‍್ಯಾಲಿ ನಡೆಸಿ ಚುನಾವಣೆಗೆ ಒಂದು ಆಯಾಮವನ್ನು ನೀಡಿತು.
2014ರ ಮಾತುಕತೆಗಳು ಮುರಿದುಬಿದ್ದ ನಂತರ ಇಸ್ರೇಲ್ ಮತ್ತು ಹಮಾಸ್‌ಗಳ ನಡುವೆ ಏಳು ವಾರಗಳವರೆಗೆ ಗಾಜಾಪಟ್ಟಿಯಲ್ಲಿ ಒಂದು ಕಾಳಗ ಜರುಗಿತು. ಇಸ್ರೇಲ್ ತನ್ನ ಕಡೆಯ ಕಾರ್ಯಾಚರಣೆಗೆ Operation Protective Edge ಎಂದು ಹೆಸರು ಕೊಟ್ಟಿತ್ತು. ಈ ಕಾರ್ಯಾಚರಣೆ ಬಹಳ ಭೀಕರವಾಗಿತ್ತು ಎಂಬುದನ್ನು ಇಸ್ರೇಲಿಗಳೇ ಒಪ್ಪುತ್ತಾರೆ. ಇದರ ಮೊದಲ ವರುಷಾಚರಣೆಯನ್ನು ಸರ್ಕಾರ ಹಮ್ಮಿಕೊಳ್ಳಲು ಹೊರಟಾಗ ಯುದ್ಧವನ್ನು ಸಡಗರಿಸುವ ಅದರ ಗಾರುತನಕ್ಕೆ ಎದುರಾಗಿ WWP ಸಂಘಟನೆಯು Operation Protective Fast ಎಂಬ ಹೆಸರಿನ (2015ರ ಜುಲೈ 8ರಿಂದ ಆಗಸ್ಟ್ 26ರವರೆಗೆ) 50 ದಿನಗಳ ಉಪವಾಸ ಸತ್ಯಾಗ್ರಹ ಕಾರ್ಯಕ್ರಮವನ್ನು ಪ್ರಧಾನಿ ನೆತನ್ಯಾಹುವಿನ ಬಂಗಲೆಯೆದುರೆ ಹಮ್ಮಿಕೊಂಡಿತು. ಇದೊಂದು ಹೊಸ ಆಲೋಚನೆಯಾಗಿತ್ತು. ಸುಮಾರು ಮುನ್ನೂರು ಮಂದಿ ಮಹಿಳೆಯರು ಈ ಉಪವಾಸ ಸತ್ಯಾಗ್ರಹದಲ್ಲಿ ಸರದಿಯಂತೆ ಪಾಲ್ಗೊಂಡು ಸರ್ಕಾರ ಶಾಂತಿ ಮಾತುಕತೆಗೆ ಮತ್ತೆ ಮುಂದಾಗಬೇಕು ಎಂದು ಪಟ್ಟುಹಿಡಿದರು.

ಈ ಸತ್ಯಾಗ್ರಹಕ್ಕೆ ಸಾಕಷ್ಟು ಬೆಂಬಲ ಮತ್ತು ಪ್ರಚಾರಗಳು ದೊರೆತವು. ನಾನಿಲ್ಲಿ ನಮ್ಮ ಬಾಪುವನ್ನು ನೆನೆಯುವುದು ತಕ್ಕುದಾಗಬಹುದು. ಬಾಪು 1938ರಷ್ಟು ಹಿಂದೆಯೆ ‘ಇಂಗ್ಲಿಷರು ಇಂಗ್ಲೆಂಡಿಗೆ ಸೇರುವುದಾರೆ, ಫ್ರೆಂಚರು ಫ್ರಾನ್ಸಿಗೆ ಸೇರುವುದಾದರೆ ಪ್ಯಾಲೆಸ್ತೈನಿಯರು ಪ್ಯಾಲೆಸ್ತೈನಿಗೆ ಸೇರುವುದು ಸರಿಯಾಗಿಯೆ ಇದೆ. ಯಹೂದಿಗಳನ್ನು (ಪ್ಯಾಲೆಸ್ತೈನ್) ಅರಬರ ಮೇಲೆ ಹೇರುವುದು ತಕ್ಕುದಲ್ಲ. ಅರಬರ ಸಮ್ಮತಿಯಿಲ್ಲದೆ ಯಹೂದಿಗಳನ್ನು ನೆಲೆಗೊಳಿಸುವುದು ಹೀನವಾದುದು. ಈ ಸಂಬಂಧ ಜರುಗಬಹುದಾದ ತಿಕ್ಕಾಟವನ್ನು ಹಿಂಸೆ ತೊರೆದು ಮಾತುಕತೆಗಳ ಮೂಲಕವೇ ಪರಿಹರಿಸಿಕೊಳ್ಳಬೇಕು’ ಎಂದು ತಮ್ಮ ‘ಹರಿಜನ್’ ಪತ್ರಿಕೆಯಲ್ಲಿ ಬರೆದಿದ್ದರು. ಅವರು ಕಡೆವರೆಗೂ ಇಸ್ರೇಲ್ ಹುಟ್ಟಿದ ರೀತಿಯನ್ನು ಒಪ್ಪಿರಲಿಲ್ಲ. ಹಿಂಸೆ ಈಗ ಪ್ಯಾಲೆಸ್ತೈನ್ ಮತ್ತು ಇಸ್ರೇಲುಗಳನ್ನು ಇಷ್ಟು ದೂರ ತಂದು ನಿಲ್ಲಿಸಿದೆ. ಅಷ್ಟಾದರೂ ಎಲ್ಲರೂ ಎದೆಯಾಳದಿಂದ ಒಪ್ಪುವಂತಹ ಪರಿಹಾರ ಇನ್ನೂ ಕಾಣಿಸಿಲ್ಲ. ಹಿಂಸೆ ತನ್ನ ನೆತ್ತರ ಹಸಿವನ್ನು ಹೊಸ ಹೊಸ ಹಿಂಸೆಯಿಂದಲೇ ತಣಿಸಿಕೊಳ್ಳುತ್ತದೆ. ಉಪವಾಸ ಸತ್ಯಾಗ್ರಹಿಗಳು ಕುಡಿಯುವ ನೀರು ಅದಕ್ಕೆ ರುಚಿಸುವುದಿಲ್ಲ.

ಸರಿ, ಮತ್ತೆ ನಾವು ನಮ್ಮ WWP ಸಂಘಟನೆಗೆ ಬರೋಣ. ಉಪವಾಸ ಸತ್ಯಾಗ್ರಹ ನೆತನ್ಯಾಹುವಿಗೆ ಚುರುಕು ಮುಟ್ಟಿಸಿತು. ಸಂಘಟನೆಯ ನಾಲ್ವರು ಮುಂದಾಳುಗಳನ್ನು ಕರೆಸಿ ಅವರ ಜೊತೆ ಶಾಂತಿ ಮಾತುಕತೆಗಳ ಸ್ವರೂಪ ಹೇಗಿರಬೇಕು ಎಂಬ ಸಲಹೆಯನ್ನು ಸರ್ಕಾರ ಪಡೆಯಿತು. ಮಹಿಳೆಯರನ್ನು ಮಾತುಕತೆಗಳಲ್ಲಿ ಒಳಗೊಳ್ಳುವ ಅಂಶದ ಮೇಲೆ ಸರ್ಕಾರ ಉತ್ತೇಜಕ ನಿಲುವು ತಳೆಯಬೇಕು ಎಂದು ಸತ್ಯಾಗ್ರಹಿಗಳು ಸೂಚಿಸಿದರು (ಮುಂದಿನ ದಿನಗಳಲ್ಲಿ ನೆತನ್ಯಾಹು ಸರ್ಕಾರ ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಮಾಡಲಿಲ್ಲ ಎಂದು ನಾನು ಬಿಡಿಸಿ ಹೇಳಬೇಕೆ).

ನೆತನ್ಯಾಹು ತನ್ನ ದೇಶದ ಶಾಂತಿಪ್ರಿಯ ಮಹಿಳೆಯರ ಅಹವಾಲನ್ನು ಕಡೆಗಣಿಸಿದರೂ ಅತ್ತ ಕಡೆ ಪ್ಯಾಲೆಸ್ತೈನಿನ ಮಹಿಳೆಯರು ನಿಧಾನಕ್ಕೆ WWPಯ ಚಟುವಟಿಕೆಗಳಿಂದ ಹುರುಪು ಪಡೆದು ತಾವೂ ಪಾಲ್ಗೊಳ್ಳಲು ಮುಂದೆ ಬರತೊಡಗಿದರು. 2016ರ ಅಕ್ಟೋಬರ್ 4ರಿಂದ 19ರವರೆಗೆ ಉತ್ತರ ಇಸ್ರೇಲಿನಿಂದ ಜೆರುಸಲೇಮಿನಲ್ಲಿರುವ ನೆತನ್ಯಾಹುವಿನ ಮನೆಯ ತನಕ WWPಯು ಶಾಂತಿ ನಡಿಗೆಯನ್ನು ಏರ್ಪಡಿಸಿತು. 4000ದಷ್ಟು ಮಹಿಳೆಯರಿದ್ದ ಈ ನಡಿಗೆಯಲ್ಲಿ ಪ್ಯಾಲೆಸ್ತೈನ್‌ನಿಂದ ಅರ್ಧದಷ್ಟು ಮಹಿಳೆಯರು ಬಂದು ಪಾಲ್ಗೊಂಡರು. ಮರಳುಗಾಡಿನ ಬಿರುಬಿಸಿಲಿನಲ್ಲೂ ಮಹಿಳೆಯರು ಹಾಡು ಹೇಳುತ್ತ, ನೋವನ್ನು ಹಂಚಿಕೊಳ್ಳುತ್ತ, ಒಬ್ಬರಿಗೊಬ್ಬರು ಸಾಂತ್ವನ ಹೇಳಿಕೊಳ್ಳುತ್ತ ನಡೆದುಬಂದರು. ಯುದ್ಧವಿರದ ಮಕ್ಕಳ ಭವಿಷ್ಯಕ್ಕಾಗಿ ಕನಸು ಕಾಣುತ್ತ ನಡೆದುಬಂದರು. ಗಂಡು ಸೋತ ಕಡೆ ಹೆಣ್ಣು ಹೆಜ್ಜೆಹಾಕಬಲ್ಲಳು ಎಂದು ನಿರೂಪಿಸಲು ನಡೆದುಬಂದರು. ಎರಡೂ ದೇಶಗಳ ಹೆಂಗರುಳಿನ ನೂರಾರು ಗಂಡಸರೂ ಈ ಮಹಿಳೆಯರೊಟ್ಟಿಗೆ ಹೆಜ್ಜೆಹಾಕಿದರು. ಕ್ಲಿಂಟನ್ ಎದುರು ಕೈಕುಲುಕುವ ರಬಿನ್ ಮತ್ತು ಅರಾಫತ್‌ರವರ ಪೋಸ್ಟರ್‌ಗಳನ್ನು ಹಿಡಿದು ಬಂದದ್ದು ಈ ಮೆರವಣಿಗೆಯ ವಿಶೇಷವಾಗಿತ್ತು. ಲೈಬಿರಿಯಾದಲ್ಲಿ ಒಳಕಾಳಗವನ್ನು ಕೊನೆಗೊಳಿಸಲು ಜೀವವನ್ನೆ ಪಣ ಇಟ್ಟಿದ್ದ, ನೊಬೆಲ್ ಶಾಂತಿ ಪುರಸ್ಕಾರ ಪಡೆದಿರುವ ಲೈಮಾ ಬೋವಿ ಅವರು ನಡಿಗೆಯನ್ನು ಉದ್ದೇಶಿಸಿ ಮಾತನಾಡಿದರು.

ಶಾಂತಿ ನಡಿಗೆ ಜಗತ್ತಿನ ಗಮನ ಸೆಳೆಯಿತು. ಈ ಶಾಂತಿ ನಡಿಗೆಯ ಮೇಲೆ ಇಸ್ರೇಲ್ ಮೂಲದ ಕೆನೆಡಾ ಪ್ರಜೆ, ಗಾಯಕಿ ಮತ್ತು ಸಂಗೀತ ಕಾರ್ಯಕರ್ತೆ ಯೇಲ್ ಡೆಕೆಲ್‌ಬಾಮ್ ಸಂಯೋಜಿಸಿದ Prayer of the Mothers ಹಾಡು ಜಗದ ಮೂಲೆಮೂಲೆಯನ್ನು ತಲುಪಿತು. International Peace Anthem ಎಂದೇ ಅದು ಜನಪ್ರಿಯವಾಯಿತು. ಹೀಬ್ರೂ, ಅರೆಬಿಕ್ ಮತ್ತು ಇಂಗ್ಲಿಶಿನಲ್ಲಿ ಬೆರೆಸಿರುವ ಈ ಹಾಡಿನ ವಿಡಿಯೊ ಯೂಟ್ಯೂಬಿನಲ್ಲಿ ಕಾಣಸಿಗುತ್ತದೆ. ಇಲ್ಲಿದೆ ಕೊಂಡಿ, https://youtu.be/YyFM-pWdqrY 14.10.2023ರ ನಡುಹಗಲು ನನ್ನ ಈ ಬರಹ ಕೊನೆಗೊಳ್ಳುವ ಹೊತ್ತಿಗೆ ವಿಡಿಯೊಗೆ 71,39,492 ನೋಡುಹಗಳು ದಾಖಲಾಗಿವೆ.

2016ರ ನಡಿಗೆಯ ಯಶಸ್ಸಿನ ನಂತರ ಮುಂದೆ ಕರೊನಾ ಕಾಲವನ್ನು ಹೊರತುಪಡಿಸಿ ಬಹುತೇಕ ಪ್ರತೀ ವರುಷ ಶಾಂತಿ ನಡಿಗೆಗಳು ಜರುಗತೊಡಗಿದವು. 2021ರಲ್ಲಿ ಶಾಂತಿಪ್ರಿಯ ಪ್ಯಾಲೆಸ್ತೈನ್ ಮಹಿಳೆಯರು ಹುಟ್ಟುಹಾಕಿದ Women of the Sun ಸಂಘಟನೆಯು WWP ಜೊತೆ ಕೈಜೋಡಿಸಿದ ಮೇಲಂತೂ ಮಹಿಳೆಯರ ಪಾಲ್ಗೊಳ್ಳುವಿಕೆಯ ಸಂಖ್ಯೆ ಸರಸರನೆ ಹೆಚ್ಚುತ್ತ ಹೋಯಿತು. Women of the Sun ಸಂಘಟನೆಯ ಚಟುವಟಿಕೆಗಳಿಗೆ ಹಮಾಸ್‌ನಿಂದ ತೀವ್ರ ವಿರೋಧವಿದೆ. ಆದರೂ ಮಹಿಳೆಯರು ಇದರಲ್ಲಿ ಭಾಗಿಯಾಗಲು ಹಿಂಜರಿದಿಲ್ಲ.

ಇದನ್ನೂ ಓದಿ: ಪ್ಯಾಲೆಸ್ಟೈನ್ ‌ಇಸ್ರೇಲ್ ಘರ್ಷಣೆಯನ್ನು ವಸಾಹತುಶಾಹಿ ನೆಲೆಯಲ್ಲಿಯೇ‌ ನೋಡಬೇಕು

ಜೀವ ಒತ್ತೆಯಿಟ್ಟು ಹೆತ್ತ ಮಕ್ಕಳಿಗೆ ಶಾಂತಿ ತುಂಬಿದ ಭವಿಷ್ಯ ಬೇಕೆನ್ನುವ ಮಹಿಳೆಯರಿಂದ ಎಲ್ಲೋ ಒಂದು ಕಡೆ ಹಮಾಸ್ ಮತ್ತು ಇಸ್ರೇಲಿ ಸರ್ಕಾರಗಳು ಬೆಚ್ಚಿರಬಹುದೆ. ಎರಡೂ ಕಡೆ ಬಡಿದಾಟಕ್ಕೆ ಬಂದೂಕು ಹಿಡಿಯಲು ತರುಣರು ಬೇಕಲ್ಲವೆ. ಮಕ್ಕಳ ಉಳಿವಿಗಾಗಿ ತಾಯಂದಿರಿಂದ ಹುರುಪು ಪಡೆಯುತ್ತ ಹೋದರೆ ಬಂಡುಕೋರರೆ ಇಲ್ಲವಾಗುತ್ತಾರೆ. ಮಿಲಿಟರಿ ಬ್ಯಾರಕ್ಕುಗಳು ಕಾದಾಳುಗಳಿಲ್ಲದೆ ಬಿಕೋ ಎನ್ನುತ್ತವೆ ಅಲ್ಲವೆ. ಸದ್ಯದ ಹಮಾಸ್-ಇಸ್ರೇಲ್‌ಗಳ ಕೊಲ್ಲುವಾಟ ಬರಿಯ ಮತೀಯ ಹಗೆತನವಲ್ಲ, ಬರಿಯ ನೆಲದ ಒಡೆತನಕ್ಕಾಗಿ ಹೂಡಿದ ಕಾಳಗವಲ್ಲ, ಬರಿಯ ರಾಜಕೀಯ ಅಧಿಕಾರಕ್ಕಾಗಿ ಹಪಾಹಪಿಸಿದ ಹಣಾಹಣಿಯೂ ಅಲ್ಲ. ಎಲ್ಲ ಬಗೆಯ ಪ್ರಗತಿಪರ, ಹಿಂಸೆಯಿರದ, ಸಂವೇದನಾಶೀಲ ಬದಲಾವಣೆಗಳಿಗೆ ತುಡಿಯುವ, ಸೃಜನಶೀಲತೆಯನ್ನು ಜನಪರಗೊಳಿಸುವ, ಮಾನವೀಯ ಕಳಕಳಿ ಉಳಿಯಬೇಕೆಂದು ಬಯಸುವ ಮನಸ್ಸುಗಳನ್ನು ಹತ್ತಿಕ್ಕುವ ಸಂಚೂ ಆಗಿದೆ. ಜಗತ್ತಿನ ಉಳಿದ ಭಾಗದ ಸಂಘರ್ಷಗಳನ್ನು ಇದೇ ಹಿನ್ನೆಲೆಯಲ್ಲಿ ನೋಡಬೇಕು. ಇಸ್ರೇಲಿ-ಪ್ಯಾಲೆಸ್ತೈನಿ ಮಹಿಳೆಯರ ಹಾದಿಯಲ್ಲಿ ಹೊಸ ಚಳವಳಿಗಳು ಹುಟ್ಟಬೇಕು. ಕಾಲದ ತುರ್ತು ಇದು.

ಹಮಾಸ್ ಮತ್ತು ಇಸ್ರೇಲ್ ಸೇನೆಗಳು ಯುದ್ಧದ ಎಲ್ಲ ಅನ್ಯಾಯ ಮತ್ತು ಕ್ರೌರ್ಯಗಳ ಹೊಣೆಯನ್ನು ಜಂಟಿಯಾಗಿ ಹೊರಬೇಕಿದೆ. ಇವರ ಜಗಳ ಸದ್ಯ ಶಾಂತಿಪ್ರಿಯ ಮಹಿಳೆಯರ ಚಳವಳಿಗೆ ಹಿನ್ನಡೆ ತಂದಿರಬಹುದು. ಆದರೆ ಬರುವ ದಿನಗಳು ಅವರದೇ. ನಾವು ನಿಲ್ಲಬೇಕಾದ್ದು ಯಾವ ಹತಾರವನ್ನು ಹಿಡಿಯದೆ ತಮ್ಮ ಮಕ್ಕಳಿಗೆ ನಗೆ ನಲಿವಿನ ಭವಿಷ್ಯ ಬಯಸುವ ತಾಯಂದಿರ ಜೊತೆಯೆ ಹೊರತು ಆ ಮಕ್ಕಳಿಗೆ ಬೇಕಿಲ್ಲದ ಹಿಂಸೆ ಮತ್ತು ಸೇಡನ್ನು ಪರಿಚಯಿಸುತ್ತಿರುವ ಮತಗುರುಡು ಯುದ್ಧಪಿಪಾಸು ಗಂಡಸರ ಜೊತೆ ಅಲ್ಲ. ಮತಧರ್ಮ, ರಾಜಕಾರಣ, ಅಧಿಕಾರ, ಯುದ್ಧ ಹೀಗೆ ಎಲ್ಲದರ ಗುತ್ತಿಗೆ ಹಿಡಿದಿರುವ ಗಂಡು ನಾಯಕರ ಸಂಖ್ಯೆ ಜಗತ್ತಿನಲ್ಲಿ ಕಡಿಮೆಯಾಗುತ್ತ ಸಾಗಲಿ.

ಕಾಳಗದ ಹತಾರಗಳಿಗೆ ತುಕ್ಕು ಹಿಡಿಯಲಿ. ಹೆತ್ತೊಡಲುಗಳ ದನಿ ಜಗದ ಕಿವಿಗಳನ್ನು ತುಂಬಲಿ.

ವಿಡಿಯೋ ನೋಡಿ: ಪಿಚ್ಚರ್‌ ಪಯಣ : 139 ಚಿತ್ರ: ಒಡಹುಟ್ಟಿದವರು ಭಾಷೆ: ಕನ್ನಡನಿರ್ದೇಶನ : ದೊರೈ – ಭಗವಾನ್ ವಿಶ್ಲೇಷಣೆ : ಭಾವನಾ ಮರಾಠೆ

Donate Janashakthi Media

Leave a Reply

Your email address will not be published. Required fields are marked *