– ವಸಂತ ಬನ್ನಾಡಿ
೧
ಅಗಾಧವಾದ ಶಕ್ತಿ ಏನೂ ಬೇಕಿಲ್ಲ ಬರೆಯಲು
ಒಂದು ಲೇಖನಿ ಮತ್ತು ಒಂದು ಕಾಗದದ ಚೂರು
ಒಂದಿಷ್ಟು ಕಲ್ಪನೆ
ಆದರೂ ಬರೆಯುವ ಶಕ್ತಿ
ಉಳಿದಿಲ್ಲ ನನ್ನಲಿ ಈಗ
೨
ನಿಬಿಡ ಘಟನೆಗಳು ಜರುಗುತ್ತಲಿವೆ ನನ್ನ ಸುತ್ತ
ಕಲ್ಪನೆಗಿಂತ ಸಾವಿರ ಪಟ್ಟು ಕ್ರೂರ ಘಟನೆಗಳು
ಅಸಾಧಾರಣ ಸನ್ನಿವೇಶವಿದು
ಖಿನ್ನತೆ ನನ್ನನು ಮುತ್ತುವುದು
ನನ್ನ ಕಣ್ಣೀರು ಬತ್ತಿ ಹೋದ ಅಳುವಿನಿಂದ
ನನ್ನ ನಾಲ್ಕು ಸಾಲಿನ ಕವಿತೆಯಿಂದ
ಏನೇನೂ ಬದಲಾಗದು
೩
ನಾಟಕ ಕವಿತೆ ಅಲ್ಲ
ಮೌನವನು ಚಾದರದಂತೆ ಹೊದೆಯಬೇಕು
ನಟರಿಗೆ ಸೂಚಿಸಬೇಕು,
ಮೌನ ಒಂದು ಮಹಾ ಪಾಪ ಎನ್ನುವುದನೂ
ಮೌನದಲೇ ಹೇಗೆ ಹೇಳುವಿರಿ,ಹೇಳಿ ಎಂದು
ಇಡೀ ಜಗತ್ತು ಕೇಳುವಂತೆ ರುದ್ರ ಮೌನದಲಿ!
೪
ಕವಿತೆ ಬರೆವವನು ನಾನು
ನಾಟಕ ಆಡಿಸುವನು
ಹೊಲೋಕಾಸ್ಟ್ ಒಪ್ಪದಿರುವವನು
ಜಿನೋಸೈಡ್ ಒಪ್ಪದಿರುವವನು
ಹಿಟ್ಲರನ ಹೇಸಿ ಠೇಂಕಾರಕೆ ಒಣಗಿಹೋದ
ಯಹೂದಿಗಳ ಪಾಡಿಗೆ ಮರುಗುವವನು
ಯಹೂದಿ ಸೈನಿಕರ ರೂಕ್ಷತೆಗೆ ಬಲಿಯಾಗುತ್ತಿರುವ
ಹಸುಗೂಸುಗಳಿಗಾಗಿ ಮರುಗುತ್ತಿರುವವನು
ಮಕ್ಕಳ ಛಿದ್ರ ದೇಹವನು
ಎರಡೂ ಕೈಗಳಲಿ
ಎತ್ತಿ ಹಿಡಿದಿರುವವನು
ನನ್ನ ಮೈಗೆ ಕತ್ತಲು ಮೆತ್ತಿಕೊಂಡಿದೆ
ರಕ್ತ ನನ್ನ ದೇಹದ ಮೇಲೆ ತೊಟ್ಟಿಕ್ಕುತ್ತಿದೆ
ಇದನ್ನೂ ಓದಿ: ಯುದ್ಧ ವಿರೋಧಿ ಆನ್ ಲೈನ್ ಕವಿಗೋಷ್ಠಿ
೫
ಬಹು ಕಾಲ ಒಬ್ಬಂಟಿ ನಡೆದಿರುವೆ
ಬರೆಯುವ ಶಕ್ತಿ ಉಳಿದಿಲ್ಲ ನನ್ನಲಿ
ಕೂಗುವ ಶಕ್ತಿ ಉಳಿದಿಲ್ಲ ನನ್ನಲಿ
ಇಷ್ಟು ಮಾತ್ರ ಹೇಳಬಲ್ಲೆ,ನನ್ನೆಲ್ಲ ಮೌನವನು ಒಗ್ಗೂಡಿಸಿಕೊಂಡು –
ಹೆಂಗಳೆಯರ ಮೇಲಿನ ಆಕ್ರಮಣ ನಿಲ್ಲಲಿ
ಮಕ್ಕಳಿಗೆ ಗುಂಡಿಕ್ಕುವುದು ಈ ಕ್ಷಣಕ್ಕೇ ನಿಲ್ಲಲಿ
ದಾಳಿ ನಿಲ್ಲಿಸಿ
ದಾಳಿ ನಿಲ್ಲಿಸಿ
ದಾಳಿ ನಿಲ್ಲಿಸಿ
ರಕ್ತದ ಹೊಳೆ ಸ್ತಬ್ಧಗೊಳ್ಳಲಿ
ಸಾವಿರಾರು ಮೈಲುದ್ದದ
ಹೊಳೆವ ಥಳ ಥಳ ಬೆಳಕನು ಹೊದ್ದ
ಸೂರ್ಯಕಾಂತಿ ಹೊಲ ಎದ್ದು ನಿಲ್ಲಲಿ
ವಿಡಿಯೋ ನೋಡಿ: ಪ್ಯಾಲಿಸ್ತೇನ್ ಪರ ಪ್ರತಿಭಟನೆ ಮಾಡುವುದು ಅಪರಾಧವೆ? Janashakthi Media