“ಇದು ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಅಪಾಯ ತರುತ್ತದೆ”
ನವದೆಹಲಿ : ದೇಶದಲ್ಲಿ ಉಪಗ್ರಹ ಆಧಾರಿತ ಅತಿ ವೇಗದ (ಹೈ-ಸ್ಪೀಡ್) ಇಂಟರ್ನೆಟ್ ಸೇವೆಗಳನ್ನು ನೀಡಲು ಜಿಯೋ ಮತ್ತು ಏರ್‌ಟೆಲ್, ಎಲೋನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಜೊತೆ ಒಪ್ಪಂದ ಮಾಡಿಕೊಂಡಿವೆ ಎಂಬ ಇತ್ತೀಚಿನ ವರದಿಗಳು, ಸ್ಪೆಕ್ಟ್ರಮ್(ತರಂಗಾಂತರ) ಹಂಚಿಕೆ ಮತ್ತು ರಾಷ್ಟ್ರೀಯ ಭದ್ರತಾ ಕಾಳಜಿಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ತೀವ್ರ ಆತಂಕ ವ್ಯಕ್ತಪಡಿಸಿದೆ. ಇದನ್ನು ನಿಲ್ಲಿಸಬೇಕು, ಇಲ್ಲವಾದರೆ ಇದು ನಮ್ಮ ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಭದ್ರತೆಯನ್ನು ಪಣಕ್ಕಿಡುತ್ತದೆ ಎಂದು ಅದು ಎಚ್ಚರಿಸಿದೆ.
ಸುಪ್ರೀಂ ಕೋರ್ಟ್ 2ಜಿ ಪ್ರಕರಣದಲ್ಲಿ ಸ್ಪೆಕ್ಟ್ರಮ್ ಒಂದು ವಿರಳ ಸಂಪನ್ಮೂಲವಾಗಿದ್ದು, ಅದನ್ನು ಖಾಸಗಿಯವರಿಗೆ ಮುಕ್ತ, ಪಾರದರ್ಶಕ ಹರಾಜಿನ ಮೂಲಕ ಮಾತ್ರ ಹಂಚಿಕೆ ಮಾಡಬಹುದು ಎಂದು ಹೇಳಿತ್ತು. ಸ್ಪೆಕ್ಟ್ರಮ್ ಹಂಚಿಕೆಗಾಗಿ ಯಾವುದೇ ಖಾಸಗಿ ಒಪ್ಪಂದವು ದೇಶದ ಕಾನೂನಿನ ಉಲ್ಲಂಘನೆಯಾಗುತ್ತದೆ. ಉಪಗ್ರಹ ಸ್ಪೆಕ್ಟ್ರಮ್ ಬಳಕೆಯಲ್ಲಿ ಪ್ರಾಬಲ್ಯ ಹೊಂದಲು ಜಿಯೋ, ಏರ್‌ಟೆಲ್ ಮತ್ತು ಸ್ಟಾರ್‌ಲಿಂಕ್ ಒಂದು ಕೂಟ ರಚಿಸಿಕೊಳ್ಳಲು ಒಂದುಗೂಡಿರುವುದಕ್ಕೆ ಭಾರತದಲ್ಲಿ ಕೋಟ್ಯಂತರ ಟೆಲಿಕಾಂ ಚಂದಾದಾರರು ಬೆಲೆ ತೆರಬೇಕಾಗುತ್ತದೆ ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ
ಇದನ್ನೂ ಓದಿ : ಹೋಳಿಯನ್ನು ಶಾಂತಿಯುತವಾಗಿ ಆಚರಿಸಲು ಅನುವಾಗುವಂತೆ ಕೇಂದ್ರ ಸರಕಾರ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು-ಸಿಪಿಐ(ಎಂ) ಪೊಲಿಟ್‌ಬ್ಯುರೊ
ಇದಲ್ಲದೆ, ಉಪಗ್ರಹ ಸ್ಪೆಕ್ಟ್ರಮ್‌ನ್ನು ರಕ್ಷಣಾ ಮತ್ತು ಇಸ್ರೋ ಕಾರ್ಯಾಚರಣೆಗಳಂತಹ ಆಯಕಟ್ಟಿನ ಬಳಕೆಗಳಿಗೆ ಮಾತ್ರ ಹಂಚಿಕೆ ಮಾಡಬೇಕು. ಇದು ಸ್ಪೆಕ್ಟ್ರಮ್ ಹಂಚಿಕೆಯ ಪ್ರಶ್ನೆ ಮಾತ್ರವಲ್ಲ, ಬಾಹ್ಯಾಕಾಶದಲ್ಲಿ ಒಂದು ದೇಶ ಹೊಂದಿರುವ ಕಕ್ಷೆಯ ಕಿಂಡಿ(ಸ್ಲಾಟ್)ಗಳ ಸಂಖ್ಯೆಯ ಪ್ರಶ್ನೆಯೂ ಆಗಿದೆ. ಕಕ್ಷೆಗಳಲ್ಲಿನ ಪ್ರಮುಖವಾದ ಸ್ಲಾಟ್‍ಗಳನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ನಮ್ಮ ನೈಸರ್ಗಿಕ ಸಂಪನ್ಮೂಲಗಳ ನಕಾಶೆಗಳನ್ನು ತಯಾರಿಸಲು, ಬೆಲೆಬಾಳುವ ವಾಣಿಜ್ಯ ದತ್ತಾಂಶಗಳನ್ನು- ಉದಾಹರಣೆಗೆ ಹವಾಮಾನ, ಬೆಳೆಗಳ ಸ್ಥಿತಿ ಇತ್ಯಾದಿ- ಮತ್ತು ಆಯಕಟ್ಟಿನ ಮಿಲಿಟರಿ/ರಕ್ಷಣಾ ದತ್ತಾಂಶಗಳನ್ನು ಕೂಡ ಸಂಗ್ರಹಿಸಲು, ಅಂತಹ ಉಪಗ್ರಹಗಳು ಅವುಗಳನ್ನು ಬಳಸಲು ಅವಕಾಶ ನೀಡುವುದು, ವಿಶೇಷವಾಗಿ ಇಸ್ರೋ ಮತ್ತು ಇತರ ಭಾರತೀಯ ಸಂಸ್ಥೆಗಳು ಹಾಗೆ ಮಾಡುವ ಸಾಮರ್ಥ್ಯವನ್ನು ಹೊಂದಿರುವಾಗ, ನಮ್ಮ ರಾಷ್ಟ್ರೀಯ ಮತ್ತು ಭದ್ರತಾ ಹಿತಾಸಕ್ತಿಗಳಿಗೆ ವಿರುದ್ಧವಾಗಿರುತ್ತದೆ ಎಂದು ಪೊಲಿಟ್‍ಬ್ಯುರೊ ಹೇಳಿದೆ.
ಇಂತಹ ದೂರಸಂಪರ್ಕ ಸೇವೆಗಳು ದೇಶದ ರಕ್ಷಣೆಗೆ ಸಹ ನಿರ್ಣಾಯಕವಾಗಿವೆ. ಉಕ್ರೇನ್ ಮಿಲಿಟರಿಗೆ ಸ್ಟಾರ್‌ಲಿಂಕ್ ಸೇವೆಗಳನ್ನು ನಿಲ್ಲಿಸುವ ಅಮೆರಿಕದ ಬೆದರಿಕೆ ಝೆಲೆನ್ಸ್ಕಿ ಉಕ್ರೇನ್ ತನ್ನ ನೈಸರ್ಗಿಕ ಸಂಪನ್ಮೂಲಗಳನ್ನು ಹಸ್ತಾಂತರಿಸಬೇಕು ಮತ್ತು ಅಮೆರಿಕದ ಆಶ್ರಯದಲ್ಲಿ ರಷ್ಯಾದೊಂದಿಗೆ ಮಾತುಕತೆ ನಡೆಸಬೇಕು ಎಂಬ ಅಮೆರಿಕದ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಮಾಡಿತು ಎಂದು ಈಗ ಗೊತ್ತಾಗಿದೆ. ಒಂದು ಯುಎಸ್ ಕಂಪನಿಯು ಅತ್ಯಂತ ಆಯಕಟ್ಟಿನ ಉಪಗ್ರಹ ಸ್ಪೆಕ್ಟ್ರಂ ಮತ್ತು ಕಕ್ಷೆಯ ಸ್ಲಾಟ್‍ಗಳನ್ನು ಪಡೆದುಕೊಳ್ಳಲು ಮತ್ತು ಒಂದು ಬಾಹ್ಯಾಕಾಶ ಏಕಸ್ವಾಮ್ಯವನ್ನು ರಚಿಸಿಕೊಳ್ಳಲು ಅವಕಾಶ ನೀಡುವುದು ನಮ್ಮ ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಭದ್ರತೆಯನ್ನು ಪಣಕ್ಕಿಡುತ್ತದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಎಚ್ಚರಿಸಿದೆ.
ಇದನ್ನೂ ನೋಡಿ : ರಾಜ್ಯ ಬಜೆಟ್ 2025 | ಸಾರಿಗೆ ವಲಯಕ್ಕೆ ಸಿಕ್ಕಿದ್ದೆಷ್ಟು – ಕೈ ಬಿಟ್ಟಿದ್ದೆಷ್ಟು