ರೈತರ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಕಲ್ಲುತೂರಾಟ; 6 ಮಂದಿ ಬಂಧನ

ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ಹತ್ತರಗಿ ಟೋಲ್‌ ನಾಕಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಚೆಗೆ ರೈತರು ಪ್ರತಿಭಟಿಸುತ್ತಿದ್ದಾಗ ಪೊಲೀಸರ ಮೇಲೆ ಕಲ್ಲುತೂರಾಟ ನಡೆದಿದೆ. ಯಮಕನಮರಡಿ ಠಾಣೆ ಪೊಲೀಸರು, ಈ ಪ್ರಕರಣದ ಸಂಬಂಧ ಆರು ಜನರನ್ನು ಬಂಧಿಸಿದ್ದಾರೆ.

ಹುಕ್ಕೇರಿ ತಾಲ್ಲೂಕಿನ ಹೆಬ್ಬಾಳದ ಚನ್ನಗೌಡ ಸಸಾಲಟ್ಟಿ, ಪ್ರಶಾಂತ ಮುಗಳಿ, ವಿನಾಯಕ ಕೋಟಿವಾಲಿ, ಉಳ್ಳಾಗಡ್ಡಿ, ಖಾನಾಪುರದ ಮಲ್ಲಪ್ಪ ಘಟಗಿ, ಕಾಕತಿಯ ಶಿವಪ್ಪ ವಾಣಿ ಮತ್ತ ಬಿದ್ರೆವಾಡಿಯ ಸೋಮನಾಥ ಹಿರೇಮಠ ಬಂಧಿತರು ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಕುಷ್ಟಗಿ ತಾಲೂಕಿನ ಎಲ್ಲಾ ಹಳ್ಳಿಗಳಿಗೆ ಸಮರ್ಪಕವಾಗಿ ಬಸ್ ಬಿಡಲು ಆಗ್ರಹ: ಎಸ್.ಎಫ್.ಐ ಪ್ರತಿಭಟನೆ

‘ಪ್ರತಿ ಟನ್‌ ಕಬ್ಬಿಗೆ ₹3,300 ದರ ನೀಡುವಂತೆ ರೈತರು ಪ್ರತಿಭಟಿಸುತ್ತಿದ್ದರು. ಆಗ ಕೆಲವರು ಪೊಲೀಸರ ಮೇಲೆ ಕಲ್ಲುತೂರಿದರು. ಸಾರಿಗೆ ಸಂಸ್ಥೆಯ ನಾಲ್ಕು ಬಸ್‌, ಪೊಲೀಸ್‌ ಇಲಾಖೆಯ ಎರಡು ಬಸ್‌ ಧ್ವಂಸಗೊಳಿಸಿದರು. ಈ ಘಟನೆಯಲ್ಲಿ 12 ಮಂದಿ ಪೊಲೀಸರು ಗಾಯಗೊಂಡಿದ್ದರು. ಸಿ.ಸಿ.ಟಿ.ವಿ ದೃಶ್ಯಾವಳಿ ಮತ್ತಿತರ ಸಾಕ್ಷ್ಯಗಳ ಮೂಲಕ ತನಿಖೆ ನಡೆಸಿ ಆರು ಮಂದಿ ಬಂಧಿಸಿದ್ದು, ದೊಂಬಿ, ಗುಂಪುಗಲಭೆ, ಮಾರಣಾಂತಿಕ ಹಲ್ಲೆ ಆರೋಪಗಳಡಿ ಪ್ರಕರಣ ದಾಖಲಿಸಿದ್ದೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಇಲ್ಲಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

‘ಈಗ ಬಂಧನಕ್ಕೆ ಒಳಗಾದವರಲ್ಲಿ ರೈತರು, ಕೂಲಿಕಾರ್ಮಿಕರು, ಮಾಜಿ ಸೈನಿಕರು ಇದ್ದಾರೆ. ಇವರು ಕಲ್ಲುತೂರಾಟ ಏಕೆ ಮಾಡಿದರು? ಹೋರಾಟದ ದಿಕ್ಕು ತಪ್ಪಿಸಲು ಒಳಸಂಚು ಏನಾದರೂ ನಡೆದಿತ್ತೇ ಎಂದೂ ವಿವಿಧ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದೇವೆ. ಆರು ಮಂದಿ ಅಷ್ಟೇ ಅಲ್ಲದೆ; ಕಲ್ಲುತೂರಾಟ ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದವರ ಗುರುತು ಪತ್ತೆ ಹಚ್ಚುತ್ತಿದ್ದೇವೆ. ಗಾಯಗೊಂಡ ಪೊಲೀಸರಿಗೆ ಪರಿಹಾರ ನೀಡುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದನ್ನೂ ನೋಡಿ: JNU ವಿದ್ಯಾರ್ಥಿ ಸಂಘದ ಚುನಾವಣೆ | ಎಡ ವಿದ್ಯಾರ್ಥಿ ಒಕ್ಕೂಟ ಕ್ಲೀನ್ ಸ್ವೀಪ್ Janashakthi | #JNUSU |#LeftUnity

Donate Janashakthi Media

Leave a Reply

Your email address will not be published. Required fields are marked *