ಜೇವರ್ಗಿ: ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ಕೈಗೊಂಡಿದ್ದರೂ ಈವರೆಗೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಆಲಿಸದ ಹಿನ್ನೆಲೆ ರೈತರು ಗುರುವಾರ ತಹಶೀಲ್ದಾರ್ ಕಚೇರಿ ಎದುರು ತಲೆ ಮೇಲೆ ಕಲ್ಲು ಹೊತ್ತು ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದರು.
ಕೇಂದ್ರ ಸರ್ಕಾರ ನರೇಗಾ ಮಾರ್ಪಡಿಸಿ ರೂಪಿಸಿದ ವಿಬಿ-ಜಿ ರಾಮ್ ಜಿ ಕಾಯ್ದೆಯು ದೇಶದ ಬಡ ಮತ್ತು ಮಧ್ಯಮ ವರ್ಗದ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುತ್ತದೆ. ಕೂಡಲೇ ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : ಬೆಂಗಳೂರಿನಿಂದ ಮಾರಿಕುಪ್ಪಂವರೆಗೆ ಸಂಚರಿಸುತ್ತಿದ್ದ ರೈಲನ್ನು ಪುನರಾರಂಭಿಸಿ: ಪ್ರತಿಭಟನೆ
ಹರನೂರದಿಂದ ರೇವನೂರವರೆಗೂ ಹರವಾಳ ಗ್ರಾಮದಿಂದ ವಿಜಯಪುರ ಮಾರ್ಗದವರೆಗೂ ರಸ್ತೆ ಡಾಂಬರೀಕರಣ ಮಾಡಬೇಕು ಎಂದು ಒತ್ತಾಯಿಸಿದರು. ರೈತರಿಗೆ ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಬೇಕು. ಪರಿಹಾರ ವಿತರಣೆಯಲ್ಲಿ ತಾರತಮ್ಮ ಮಾಡಲಾಗಿದ್ದು, ಪರಿಹಾರ ಸಿಗದೆ ಇರುವ ರೈತರಿಗೆ ಕೂಡಲೇ ಎಕರೆಗೆ 25 ಸಾವಿರ ನೀಡಬೇಕು.
ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಸ್ಥಳಕ್ಕೆ ಆಗಮಿಸಿ, ‘ಪರಿಹಾರ ವಿತರಣೆಯಲ್ಲಿ ಆಗಿರುವ ಸಮಸ್ಯೆ ವಾರದೊಳಗೆ ಇತ್ಯರ್ಥ ಪಡಿಸಿ ಎಲ್ಲಾ ರೈತರಿಗೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಸ್ವಾಮಿನಾಥನ್ ಆಯೋಗದ ವರದಿಯಂತೆ ಬೆಂಬಲ ಬೆಲೆ ನಿಗದಿಪಡಿಸಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.
ನಂತರ ತಾಪಂ ಕಚೇರಿಗೆ ತೆರಳಿ ಇಒ ಅವರ ಕಚೇರಿಯ ಎದುರು ಪ್ರತಿಭಟನೆ ಮುಂದುವರೆಸಿದರು. ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದರು.ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸುಭಾಷ ಹೊಸಮನಿ, ಉಪಾಧ್ಯಕ್ಷ ಮಲ್ಕಪ್ಪ ಹರನೂರ, ಕಾರ್ಯದರ್ಶಿ ರೇವುನಾಯಕ ಜಾಧವ, ಬಸವರಾಜ ನಡುವಿನಕೇರಿ, ಸಿದ್ದಪ್ಪ ಹಂಗರಗಿ, ನಿಂಗಣ್ಣ ಆಡೀನ್, ಶ್ರೀಕಾಂತ ದಾಸರ, ಉಸ್ಮಾನ್ ಅಲಿ ಇನಾಮದಾರ, ಸಕ್ರೆಪ್ಪ ಮ್ಯಾಗೇರಿ, ಭೀಮರಾಯ ದಾಸರ, ಸಿದ್ದಣ್ಣ ಆದವಾನಿ, ರಮೇಶ ಬಂದರವಾಡ, ಗುರಪ್ಪ ಮುಕ್ಕಾ, ರಾಜು ಸಾಥಖೇಡ, ಈರಣ್ಣ ರಾಠೋಡ, ಯಲ್ಲಾಲಿಂಗ ತಳವಾರ, ಬಸವರಾಜ ಹನ್ನೂರ, ಮಹಾಂತೇಶ ನಾಯ್ಕೋಡಿ, ಮಲ್ಲಿಕಾರ್ಜುನ ಹೊಸಮನಿ, ಲಕ್ಷ್ಮಣ ಕವಲ್ದಾರ್, ಬಾಲರಾಜ ಕೋಟೆ ಸೇರಿದಂತೆ ರೈತರು, ಮಹಿಳೆಯರು ಭಾಗವಹಿಸಿದ್ದರು.
ಇದನ್ನೂ ನೋಡಿ : ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳ ಸ್ಥಿತಿಗತಿಯೇನು ಸಚಿವರೇ? Janashakthi Media
