ಎಸ್​ಟಿಗೆ ಶೇ 7.5ರಷ್ಟು ಮೀಸಲಾತಿ ಸಂಬಂಧ ಮಾ.23ಕ್ಕೆ ಪ್ರತಿಪಕ್ಷ-ಮುಖ್ಯಮಂತ್ರಿಯೊಂದಿಗೆ ಸಭೆ

ಬೆಂಗಳೂರು: ಪರಿಶಿಷ್ಟ ಪಂಗಡ(ಎಸ್‌.ಟಿ.)ದ ಸಮುದಾಯಕ್ಕೆ ಶೇಕಡ 7.5ರಷ್ಟು ಮೀಸಲಾತಿ ಒದಗಿಸಬೇಕು ಹಾಗೂ ನ್ಯಾಯಮೂರ್ತಿ ಹೆಚ್‌.ಎನ್. ನಾಗಮೋಹನ್ ದಾಸ್ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ‌ ಮುಂಬರುವ ಬುಧವಾರ(ಮಾ.23)ದಂದು ಸಭೆ ನಡೆಸಿ ನಿರ್ಧಾರ ಮಾಡುತ್ತೇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ವಿಧಾನಸಭೆಯಲ್ಲಿ ಹೇಳಿದರು.

ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಶಾಸಕರು ವಿಧಾನಸಭೆಯಲ್ಲಿ‌ ನೆನ್ನೆ(ಮಾ.17) ಅಧಿವೇಶನದ ಸಂದರ್ಭದಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಇಂದು (ಮಾ.18) ಸಹ ವಿಧಾನಸಭಾಧ್ಯಕ್ಷರ ಪೀಠದ ಮುಂಭಾಗ ಸದನದ ಬಾವಿಗಿಳಿದು ಕಾಂಗ್ರೆಸ್‌ ಸದಸ್ಯರು ಧರಣಿ ಆರಂಭಿಸಿದರು.

ಈ ಸಂದರ್ಭದಲ್ಲಿ ಸಚಿವ ಜೆ ಸಿ ಮಾಧುಸ್ವಾಮಿ ಸಭೆ ನಡೆಸುವ ಬಗ್ಗೆ ಭರವಸೆ ನೀಡಿದರು. ಬಳಿಕ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ನಿಮ್ಮ ಬೇಡಿಕೆ ಬಗ್ಗೆ ಸರ್ಕಾರ ಇಷ್ಟು ಸಕಾರಾತ್ಮಕವಾಗಿ ಸ್ಪಂದಿಸಿದೆ. ನೀವು ಸದನ ನಡೆಸಲು ಸಹಕಾರ ನೀಡಬೇಕು ಎಂದು ಕೋರಿದರು. ಇದರಿಂದ ತೃಪ್ತರಾದ ಕಾಂಗ್ರೆಸ್ ಸದಸ್ಯರು ತಮ್ಮ ಸ್ಥಾನಗಳಲ್ಲಿ ಆಸೀನರಾದರು. ಸಭಾಧ್ಯಕ್ಷರು ಪ್ರಶ್ನೋತ್ತರ ಕಲಾಪ ಆರಂಭಿಸಿದರು.

ಕಾಂಗ್ರೆಸ್‌ ಸದಸ್ಯರು ಮೀಸಲಾತಿ ಪ್ರಮಾಣವನ್ನು ಶೇಕಡ 3 ರಿಂದ ಶೇ 7.5ಕ್ಕೆ ಹೆಚ್ಚಿಸುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ಹೆಚ್‌.ಎನ್‌. ನಾಗಮೋಹನ್ ದಾಸ್ ವರದಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿದರು.

ನೆನ್ನೆ ನಡೆದ ಧರಣಿ ವೇಳೆಯಲ್ಲಿ ಕಾಂಗ್ರೆಸ್‌ ಶಾಸಕರಾದ ರಘುಮೂರ್ತಿ, ತುಕಾರಾಮ್, ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ ಈ ಬಗ್ಗೆ ಮಾತನಾಡಿ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ಇನ್ನೂ ಜಾರಿಗೊಳಿಸಿಲ್ಲ. ಸರ್ಕಾರ ಬಂದ ತಕ್ಷಣ ಜಾರಿಗೊಳಿಸುವುದಾಗಿ ಹೇಳಿದ್ದೀರಿ. ಆದರೆ ಇನ್ನೂ ಜಾರಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *