ಮಡಿಕೇರಿ : ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ಹುಳಗಳು ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಹಾಲಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರಂಬಾಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಹೆಜ್ಜೇನು ದಾಳಿಯಿಂದ 22 ವಿದ್ಯಾರ್ಥಿಗಳ ಪೈಕಿ 19 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು, ಓರ್ವ ಅಡಿಗೆ ಸಿಬ್ಬಂದಿಗೆ ಕಚ್ಚಿ ಗಾಯಗೊಳಿಸಿದೆ.ಮಧ್ಯಾಹ್ನದ ಊಟದ ವಿರಾಮದ ನಂತರ ಆವರಣದಲ್ಲಿದ್ದ ವಿದ್ಯಾರ್ಥಿಗಳು ಕೊಠಡಿಗೆ ಆಗಮಿಸುವ ಸಂದರ್ಭದಲ್ಲಿ ಹೆಜ್ಜೇನು ಹುಳಗಳು ದಿಢೀರ್ ದಾಳಿ ನಡೆಸಿವೆ.
ದಾಳಿಯಿಂದ ಭಯ ಭೀತರಾದ ವಿದ್ಯಾರ್ಥಿಗಳು ಕಿರುಚಾಡಿದ್ದಾರೆ. ಅಲ್ಲೇ ಇದ್ದ ಶಿಕ್ಷಕರುಗಳು ತಕ್ಷಣ ಮಕ್ಕಳನ್ನು ಕೊಠಡಿಯಲ್ಲಿ ಕೂಡಿ ಹಾಕಲು ಯತ್ನಿಸಿದ್ದಾರೆ.
ಇದನ್ನು ಓದಿ :-ರೂಪಾಯಿ (₹) ಚಿಹ್ನೆಯನ್ನು ತೆಗೆದುಹಾಕಲು ನಿರ್ಧರಿಸಿದ ತಮಿಳುನಾಡು ಸರ್ಕಾರ
ಶಿಕ್ಷಕಿಯರ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದ್ದಾದರೂ ಮುಖ್ಯ ಶಿಕ್ಷಕಿ ಪದ್ಮ, ಸಹ ಶಿಕ್ಷಕಿ ಪ್ರತಿಮಾ ಎಂಬವರ ಮೇಲೆ ಹೆಜ್ಜೇನು ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದೆ.
ತಕ್ಷಣ ಗ್ರಾಮ ಪಂಚಾಯಿತಿ ಸದಸ್ಯ ಎಂ ಎಸ್ ಪೂವಯ್ಯ ಹಾಗೂ ಅಧ್ಯಕ್ಷ ಪಂದಿಕಂಡ ದಿನೇಶ್ ಎಂಬವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ ತಕ್ಷಣ ಸ್ಥಳಕ್ಕೆ ಆಗಮಿಸಿ ಹೆಜ್ಜೇನು ದಾಳಿಯಿಂದ ಗಾಯಗೊಂಡ ವಿದ್ಯಾರ್ಥಿಗಳು, ಶಿಕ್ಷಕಿಯರನ್ನ ಕಣ್ಣಂಗಾಲ ಉಪ ಆರೋಗ್ಯ ಕೇಂದ್ರಕ್ಕೆ ಪ್ರಥಮ ಚಿಕಿತ್ಸೆಗೆ ದಾಖಲಾಗಿ ಚೇತರಿಸಿಕೊಂಡಿದ್ದಾರೆ.
ಈ ಸಂದರ್ಭ ಆಟೋ ಚಾಲಕರು ಸ್ಥಳೀಯ ನಿವಾಸಿಗಳು ಭೇಟಿ ನೀಡಿದ್ದಾರೆ.ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾಲಾ ಸಮೀಪದಲ್ಲಿ ದೇವರ ಕಾಡು ಅರಣ್ಯ ಪ್ರದೇಶವಿದ್ದು ಆ ವ್ಯಾಪ್ತಿಯಿಂದಲೇ ಬಂದ ಹೆಜ್ಜೇನು ಹುಳಗಳು ದಾಳಿ ಮಾಡಿವೆ. ಕಣ್ಣಂಗಾಲ ಉಪ ಆರೋಗ್ಯ ಕೇಂದ್ರದ ಆಡಳಿತ ವೈದ್ಯಧಿಕಾರಿ ಸಾಗರ್ ಸಕಾಲಕ್ಕೆ ಸ್ಪಂದಿಸಿ ಸೂಕ್ತ ಚಿಕಿತ್ಸೆ ನೀಡಿ ಆರೈಕೆ ನಂತರ ವಿದ್ಯಾರ್ಥಿಗಳು, ಶಿಕ್ಷಕರು ಮನೆಗೆ ಹಿಂತಿರುಗಿದ್ದಾರೆ.