ವಿಜಯಪುರ : ಇಂಡಿ ತಾಲೂಕಿನ ಹಂಜಗಿ ಗ್ರಾಮದಲ್ಲಿ ರೈತ ಹೋರಾಟಗಾರ ಬಿಜಾಪುರದ ಗಾಂಧಿ ಎಂದೇ ಹೆಸರುವಾಸಿಯಾದ ಭೀಮಸಿ ಕಲಾಧಗಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಉದ್ಘಾಟನೆ ಮಾಡಿದ ಹಿರಿಯ ಸಿಐಟಿಯು ನಾಯಕ ವಿಜೆಕೆ ನಾಯರ್ ಅವರು ಭೀಮಸಿ ಕಲಾದಗಿ ರವರ ಜೊತೆಗಿನ ತಮ್ಮ 44 ವರ್ಷಗಳ ಒಡನಾಟವನ್ನು ನೆನಪಿಸಿಕೊಂಡು ,ರೈತರ ಹಾಗೂ ಕಾರ್ಮಿಕರ ಹಿತ ಎರಡೂ ಪರಸ್ಪರ ಬೆಸೆದುಕೊಂಡಿದೆ. ರೈತ-ಕಾರ್ಮಿಕರ ಸಖ್ಯತೆ ಬಲಗೊಂಡಾಗ ಮಾತ್ರವೇ ಸಾಮಾಜಿಕ ಬದಲಾವಣೆಯ ದಾರಿ ತೆರೆಯುತ್ತದೆ. ಜಿಲ್ಲೆಯನ್ನು ಸಂಪೂರ್ಣ ಬರಗಾಲ ಮುಕ್ತ ಹಾಗೂ ಸಂಪೂರ್ಣ ನೀರಾವರಿ ಜಿಲ್ಲೆಯನ್ನಾಗಿ ಮಾಡಲು ಭೀಮಸಿ ಕಲಾದಗಿ ನೇತೃತ್ವದಲ್ಲಿ ನಡೆದ ಹೋರಾಟ ಪ್ರೇರಣೆ ನೀಡಲಿ ಎಂದು ಆಶಿಸಿದರು. ವಿಜಯಪುರ
ಅವಿಭಜಿತ ಬಿಜಾಪುರ ಜಿಲ್ಲೆಯ ರೈತ ಹೋರಾಟಗಾರ ,ನೀರಾವರಿ ಯೋಜನೆಗಳು ಸಾಕಾರಗೊಳ್ಳಲು ಹೋರಾಟದ ಒತ್ತಡದ ಮೂಲಕ ಪ್ರಮುಖ ಕೊಡುಗೆ ನೀಡಿದ್ದ ,ಬರಿಗಾಲ ಭೀಮಸಿ ಹಾಗೂ ಬಿಜಾಪುರದ ಗಾಂಧಿ ಎಂದೇ ಜನ ಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಬಹಳ ದೀರ್ಘ ಕಾಲ ಸೇವೆ ಸಲ್ಲಿಸಿದ್ದ ಕಾಂ.ಭೀಮಸಿ ಕಲಾದಗಿ ರವರ ಪುತ್ಥಳಿ ಆನಾವರಣ ಕಾರ್ಯಕ್ರಮ ನಿನ್ನೆ (28-07-25) ರಂದು ಇಂಡಿ ತಾಲ್ಲೂಕಿನ ಹಂಜಗಿ ಗ್ರಾಮದ ಅವರ ಅಂತಿಮ ಸಂಸ್ಕಾರ ನಡೆದಿದ್ದ ಸ್ಥಳದಲ್ಲಿ ನಡೆಯಿತು.

ಇದನ್ನೂ ಓದಿ : ಧರ್ಮಸ್ಥಳ ಪ್ರಕರಣ: ಮೃತದೇಹಗಳ ಹೂತಿಟ್ಟ ಜಾಗವನ್ನು ತೋರಿಸಿದ ಸಾಕ್ಷಿ ದೂರುದಾರ ವಿಜಯಪುರ
ಜವಳಿ ,ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್ ಪಾಟೀಲ್ ಮಾತನಾಡಿ, ಅವಿಭಜಿತ ಜಿಲ್ಲೆಯ ಅಭಿವೃದ್ದಿಯಲ್ಲಿ, ಜನರ ಹಿತವನ್ನು ರಕ್ಷಿಸುವಲ್ಲಿ ಎನ್ ಕೆ ಉಪಾಧ್ಯಾಯ, ಭೀಮಸಿ ಕಲಾದಗಿ, ಚಂಚಲಕರ್ಲಾ ಯಲಗುಂದಿ,ಮಹಿಂಪಾಷ ಇನಾಂದಾರ್ ಮುಂತಾದವರ ನೇತೃತ್ವದಲ್ಲಿ ನಡೆದ ಹೋರಾಟಗಳು ಹಾಗೂ ಸಂಘರ್ಷಗಳು ಅಪೂರ್ವ ಕೊಡುಗೆ ನೀಡಿವೆ. ಮುಳವಾಡ ಏತ ನೀರಾವರಿ ಸೇರಿದಂತೆ ಹಲವಾರು ನೀರಾವರಿ ಯೋಜನೆಗಳ ಕೀರ್ತಿ ಯಾರಿಗಾದರೂ ಸಲ್ಲಬೇಕಿದ್ದರೆ ಕಮ್ಯುನಿಸ್ಟ್ ರಿಗೆ ಮತ್ತು ಕಮ್ಯುನಿಸ್ಟ್ ಚಳವಳಿಗೆ ಮಾತ್ರ ಎಂದು ಪ್ರತಿಪಾದಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ ಮಾತಾನಾಡಿ, ಅವಿಭಜಿತ ನಗರ ಹಾಗೂ ಪಟ್ಟಣಕ್ಕೆ ಸೀಮಿತವಾಗಿದ್ದ ಕೆಂಬಾವುಟವನ್ನು ಬಿಜಾಪೂರದ ಹಳ್ಳಿ -ಹಳ್ಳಿಗೆ ತಲುಪಿಸಿದ ಕೀರ್ತಿ ಭೀಮಸಿ ಕಲಾದಗಿ ರವರಿಗೆ ಸಲ್ಲುತ್ತದೆ. ಪುತ್ಥಳಿ ಅನಾವರಣಗೊಂಡ ಸ್ಥಳವನ್ನು, ಭೀಮಸಿ ಕಲಾದಗಿ ರವರ ಸಮ ಸಮಾಜದ ಕನಸನ್ನು ಸಾಕಾರಗೊಳಿಸುವ ಸಂಶೋಧನಾ ಹಾಗೂ ಅಧ್ಯಯನ ಕೇಂದ್ರವಾಗಿ ರೂಪಿಸಬೇಕು ಇದಕ್ಕಾಗಿ ಎಲ್ಲಾ ರೀತಿಯ ಬೆಂಬಲ ಹಾಗೂ ಸಹಕಾರವನ್ನು ರಾಜ್ಯ ಸಮಿತಿ ನೀಡುತ್ತದೆ ಎಂದು ತಿಳಿಸಿದರು.
ಭೀಮಸಿ ಕಲಾದಗಿ ರವರ ಕುಟುಂಬ ಹಾಗೂ ಬಂಧು ಮಿತ್ರರು ಹಮ್ಮಿಕೊಂಡಿದ್ದ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೆನಪು-ನಮನ ಕಾರ್ಯಕ್ರಮದಲ್ಲಿ ಶರಣ ಚಿಂತಕ ಶ್ರೀ ಮಹಾಂತೇಶ್ ಬಿರಾದಾರ, ವಕೀಲರಾದ ಶ್ರೀ ಶ್ರೀಧರ್ ಕುಲಕರ್ಣಿ, ವಿವಿಧ ಕ್ಷೇತ್ರದ ಗಣ್ಯರಾದ ರೇವಣಸಿದ್ದೇಶ್ವರ ಏತ ನೀರಾವರಿ ರೈತ ಹೋರಾಟಗಾರರಾದ ಶ್ರೀ ಪಂಚಪ್ಪ ಕಲಬುರಗಿ, ಶ್ರೀ ಮಲ್ಲಿಕಾರ್ಜುನ ಯಂಡಿಗೇರಿ,ಶ್ರೀ ರಿಯಾಜ್ ಪಾರೂಜಿ ,ಶ್ರೀ ಡಿ ಜಿ ಬಿರಾದಾರ, ಶ್ರೀ ಸೋಮನಾಥ ಕಳ್ಳಿಮನಿ, ಅಪ್ಪಾ ಸಾಹೇಬ್ ಯರನಾಳ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಭೀಮರಾಯ ಪೂಜಾರಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ, ಜನವಾದಿ ಮಹಿಳಾ ಸಂಘಟನೆ ನಾಯಕಿ ಸುರೇಖಾ ರಜಾಪೂತ ಮುಂತಾದವರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಇಂಡಿ ತಾಲೂಕಿನ ಜೆಡಿಎಸ್ ಶ್ರೀ ಬಿ ಡಿ ಪಾಟೀಲ್ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳೀಗೆರಾ ಭೀಮಸಿ ಕಲಾದಗಿರವರ ಪತ್ನಿ ಶ್ರೀಮತಿ ಗಂಗಾಬಾಯಿ ಕಲಾದಗಿ ಹಾಗೂ ಮಕ್ಕಳಾದ ವಿಜಯಕುಮಾರ, ಹಣಮಂತ, ಮಾಳಪ್ಪ,ಸುರೇಶ ಹಾಗೂ ಕಲಾದಗಿ ಕುಟುಂಬ ಪರಿವಾರದವರು ಇದ್ದರು.
ಇದನ್ನೂ ನೋಡಿ : ಬಿಹಾರ ಚುನಾವಣೆ: ಹಿಂದುಳಿದ, ಅತಿ ಹಿಂದುಳಿದ ವರ್ಗಗಳ(ಇಬಿಸಿ) ಒಲವು, ನಿಲುವು ಎತ್ತ ಕಡೆ? Janashakthi Media ವಿಜಯಪುರ
