ಹುಬ್ಬಳ್ಳಿ: ನಗರದ ಕರ್ನಾಟಕ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯಲ್ಲಿ (ಕೆಎಂಸಿಆರ್‌ಐ) ಪಾರ್ಶ್ವವಾಯು ಹಾಗೂ ತಲೆಗೆ ತೀವ್ರ ಪೆಟ್ಟಾದ ರೋಗಿಗಳ ಚಿಕಿತ್ಸೆ ಹಾಗೂ ಆರೈಕೆಗೆ ರಾಜ್ಯದ ಮೊದಲ “ಸ್ಪೋಕ್” ಕೇಂದ್ರವು ಆರಂಭವಾಗಲಿದೆ. ಮೊದಲ
ರಾಜ್ಯದ ಒಟ್ಟು 7 ಕಡೆ ಇಂತಹ ಕೇಂದ್ರಗಳನ್ನು ಆರಂಭಿಸಲು ರಾಜ್ಯ ಸರಕಾರ ಮುಂದಾಗಿದ್ದು, ಈಗಾಗಲೇ ಬಜೆಟ್‌ನಲ್ಲೂ ಪ್ರಕಟಿಸಿದೆ.
ಸಂಪುಟ ಸಭೆಯಲ್ಲೂ ಅನುಮೋದನೆ ದೊರೆತಿದೆ. ಉತ್ತರ ಕರ್ನಾಟಕದ “ದೊಡ್ಡ ಆಸ್ಪತ್ರೆ’ ಎಂಬ ಖ್ಯಾತಿಯ ಕೆಎಂಸಿಆರ್‌ಐನಲ್ಲಿ ಆರಂಭವಾಗಲಿರುವ ಮೊದಲ ಕೇಂದ್ರವಾಗಿದೆ. ಇದು ಬೆಂಗಳೂರು, ಮೈಸೂರು, ಬೆಳಗಾವಿ, ಮಂಗಳೂರು, ರಾಯಚೂರು ಹಾಗೂ ಮೈಸೂರುಗಳಲ್ಲಿ ಆರಂಭವಾಗಲಿರುವ ಕೇಂದ್ರಗಳಿಗೆ ಮಾದರಿಯಾಗಲಿದೆ.
ಇದನ್ನೂ ಓದಿ: ಉದ್ಯಮಿಯಿಂದ 25 ಲಕ್ಷ ರೂ.ಗಳಿಗೆ 80 ಲಕ್ಷ ರೂ. ಬಡ್ಡಿ ವಸೂಲಿ
12.87 ಕೋಟಿ ರೂ. ನೀಡಲು ಸಮ್ಮತಿ
ಹುಬ್ಬಳ್ಳಿಯ ಕೆಎಂಸಿಆರ್‌ಐನಲ್ಲಿ “ಸ್ಪೋಕ್’ಗಾಗಿ ಅಗತ್ಯ ಕಟ್ಟಡ ಇನ್ನಿತರ ಮೂಲ ಸೌಲಭ್ಯಗಳಿವೆ. ಪಾರ್ಶ್ವವಾಯು ಪೀಡಿತರಿಗೆ ಥಂಬೋಲಿಸಿಸ್ ಥೆರಪಿ ನೀಡಲು ಪೂರಕ ಯಂತ್ರ ಹಾಗೂ ಅದಕ್ಕೆ ಪೂರಕವಾದ ಸಲಕರಣೆಗಳು ಅಗತ್ಯವಾಗಿವೆ. ಇನ್ನು ಈ ಯಂತ್ರೋಪಕರಣಗಳಿಗಾಗಿ 12.87 ಕೋಟಿ ರೂ. ನೀಡಲು ಸರಕಾರ ಈಗಾಗಲೇ ಸಮ್ಮತಿಸಿದೆ.
ಗೋಲ್ಡನ್ ಅವರ್
ಪಾರ್ಶ್ವವಾಯು ಪೀಡಿತರೂ “ಗೋಲ್ಡನ್ ಅವರ್’ ಎನ್ನಲಾಗುವ 3 ತಾಸಿನೊಳಗೆ ಚಿಕಿತ್ಸೆ ಪಡೆದರೆ ಬೇಗ ಗುಣಮುಖರಾಗುವ ಹಾಗೂ ಮಾಮೂಲು ಸ್ಥಿತಿಗೆ ಬರುವ ಸಾಧ್ಯತೆಗಳು ಅಧಿಕವಾಗಿ ರುತ್ತದೆ. ಸ್ವಲ್ಪ ತಡವಾದರೂ ದೇಹದ ಸುಮಾರು 1 ಲಕ್ಷ ಕೋಟಿ ನರಸಮೂಹದಲ್ಲಿ ಸುಮಾರು 19 ಲಕ್ಷದಷ್ಟು ನರಬಳ್ಳಿ ಹಾನಿಗೀಡಾಗುವ ಅಪಾಯವಿದೆ. ಇಂತಹ ಹೊತ್ತಲ್ಲಿ ಈ ಕೇಂದ್ರ ನೆರವಿಗೆ ಬರಲಿದೆ.
ಇನ್ನು ಪಾರ್ಶ್ವವಾಯು ಪೀಡಿತರು ಎಂಟು ತಾಸಿನೊಳಗೆ ಚಿಕಿತ್ಸೆಗೆ ಬಂದರೂ ಅವರಿಗೆ ಥಂಬೋಲಿಸಿಸ್ ಥೆರಪಿ ನೀಡಬೇಕಾಗುತ್ತದೆ. ಅದಕ್ಕೆ ಡಿಎಸ್‌ಎ ಯಂತ್ರ ಅಗತ್ಯವಿದೆ. ಈಗ ಸರಕಾರ ಈ ಯಂತ್ರ ಖರೀದಿಗಾಗಿಯೇ ಹಣ ನೀಡುತ್ತಿದೆ. ಆದರೆ ಥೆರಪಿ ಪಡೆದ ಎಲ್ಲರೂ ಪೂರ್ಣ ಪ್ರಮಾಣದಲ್ಲಿ ವಾಸಿ ಅಥವಾ ಮಾಮೂಲಿಯಂತೆ ಆಗುವ ಸಾಧ್ಯತೆ ಬಗ್ಗೆ ಪಕ್ಕಾ ಹೇಳಲಾಗದು ಎನ್ನುತ್ತಾರೆ ನರರೋಗ ತಜ್ಞರು.
ಪ್ರಾಯೋಗಿಕ ವಾರ್ಡ್
ಕೆಎಂಸಿಆರ್‌ಐನಲ್ಲಿ ನರರೋಗಕ್ಕೆ ಸಂಬಂಧಪಟ್ಟಂತೆ ವಾರದಲ್ಲಿ ಮೂರು ದಿನ ಹೊರ ರೋಗಿಗಳ ತಪಾಸಣೆ ನಡೆಯುತ್ತದೆ. ಪ್ರತಿ ಸೋಮವಾರ 200ಕ್ಕೂ ಅಧಿಕ ಹಾಗೂ ಬುಧವಾರ ಹಾಗೂ ಶ್ರುಕವಾರ 140-160 ಮಂದಿ ಬರುತ್ತಿದ್ದಾರೆ. ಮಾಸಿಕ 90-100ರಷ್ಟು ಒಳರೋಗಿಗಳು ಇರುತ್ತಾರೆ. ಈಗಾಗಲೇ “ಸ್ಪೋಕ್’ಗೆ ಪೂರಕವಾಗಿ 15 ಹಾಸಿಗೆಯ ಪ್ರಾಯೋಗಿಕ ವಾರ್ಡ್ ಆರಂಭಿಸಲಾಗಿದೆ. ಈ ತಿಂಗಳಲ್ಲೇ ಮೂವರು ಪಾರ್ಶ್ವವಾಯು ಪೀಡಿತರು ಮೂರು ತಾಸಿನೊಳಗೆ ಬಂದಿದ್ದು, ಇಬ್ಬರು ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿದ್ದಾರೆ. ಇನ್ನೊಬ್ಬರು ಚೇತರಿಸಿಕೊಳ್ಳುತ್ತಿದ್ದಾರೆ.
ಹಬ್ ಆಗಲಿದೆ ಕೆಎಂಸಿಆರ್‌ಐ
“ಸ್ಪೋಕ್’ ಕೇಂದ್ರ ಆರಂಭವಾಗಲಿರುವ ಕೆಎಂಸಿಆರ್‌ಐ ಮುಂದಿನ ಒಂದೂವರೆ ವರ್ಷದಲ್ಲಿ ಉತ್ತರ ಕರ್ನಾಟಕದ ಆರೇಳು ಜಿಲ್ಲೆಗಳಿಗೆ “ಸ್ಪೋಕ್ ಹಬ್’ ಆಗಿ ಕಾರ್ಯನಿರ್ವಹಿಸಲಿದೆ. ಸುತ್ತಮುತ್ತಲಿನ ಜಿಲ್ಲೆಯಲ್ಲಿ ಯಾರಾದರೂ ಪಾರ್ಶ್ವವಾಯು ಪೀಡಿತರಾದರೆ ತತ್‌ಕ್ಷಣಕ್ಕೆ ಬರುವ ಮಾಹಿತಿ ಆಧರಿಸಿ ಫೋನ್‌ನಲ್ಲಿಯೇ ಅವರಿಗೆ ಸಲಹೆ ನೀಡಲಾಗುತ್ತದೆ. ಸಿಟಿ ಸ್ಕ್ಯಾನ್ ಮಾಡಿಸಿ ಅದರ ವರದಿ ಪರಿಶೀಲನೆ ಹಾಗೂ ಅಗತ್ಯ ಚಿಕಿತ್ಸೆ ಸೂಚಿಸುವ ಜತೆಗೆ ಅಗತ್ಯಬಿದ್ದರೆ ರೋಗಿಯನ್ನು ಕೆಎಂಸಿಆರ್‌ಐಗೆ ತರುವಂತೆ ಸೂಚಿಸಲಾಗುತ್ತದೆ. ಈ ಕೇಂದ್ರ ದಿನದ ಇಪ್ಪತ್ನಾಲ್ಕು ತಾಸೂ ಕಾರ್ಯನಿರ್ವಹಿಸಲಿದೆ.
ನಿಮ್ಹಾನ್ಸ್ ಸಹಯೋಗದಲ್ಲಿ “ಸ್ಪೋಕ್’ ಕೇಂದ್ರವನ್ನು ನಿರ್ವಹಿಸಲಾಗುವುದು. ಕೇಂದ್ರ ನಿರ್ವಹಣೆಗೆ ನರರೋಗ ವೈದ್ಯರು, ಶಸ್ತ್ರಚಿಕಿತ್ಸಕರು, ರೇಡಿಯೋಲಾಜಿಸ್ಟ್, ಬೋಧಕರ ಕಮಿಟಿ ರಚನೆ ಮಾಡಲಾಗಿದೆ. ಒಂದೇ ಕಡೆ ಎಲ್ಲ ನರರೋಗ ಸಂಬಂಧಿ ಚಿಕಿತ್ಸೆ ದೊರೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮೊದಲ “ಸ್ಪೋಕ್’ ಕೇಂದ್ರವನ್ನು ಬಹುತೇಕ ಜುಲೈನಲ್ಲಿ ಉದ್ಘಾಟಿಸುವ ಸಾಧ್ಯತೆಗಳಿವೆ ಎಂದು ಕೆಎಂಸಿಆರ್‌ಐ ನಿರ್ದೇಶಕ ಎಸ್.ಎಫ್.ಕಮ್ಮಾರ ಹೇಳಿದರು.
ಇದನ್ನೂ ನೋಡಿ: ಕೌಶಲ್ಯದ ಹೆಸರಲ್ಲಿ ಕಾರ್ಮಿಕ ಮಂಡಳಿಯ ಹಣ ವ್ಯಯ – ಕಾರ್ಮಿಕ ಸಂಘಟನೆಗಳ ಆಕ್ಷೇಪ
